Sunday, 22nd September 2024

IPL 2025: ಚೆನ್ನೈ ತಂಡ ರಿಟೈನ್‌ ಮಾಡುವ ಆಟಗಾರರ ಪಟ್ಟಿ ಬಿಡುಗಡೆ

IPL 2025

ಚೆನ್ನೈ: ಐಪಿಎಲ್​ 18ನೇ ಆವೃತ್ತಿಯ(IPL 2025) ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್​ 3 ಅಥವಾ 4ನೇ ವಾರದಲ್ಲಿ ನಡೆಯಲಿದೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ಎಲ್ಲ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಖರೀದಿಸುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲು ಆರಂಭಿಸಿದೆ. 5 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 5 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಆಟಗಾರರು ಯಾರೆಂಬ ಕುತೂಹಲ ಅಭಿಮಾನಿಗಳಿಗೆ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ.

ರೇಸ್ಪೋರ್ಟ್ಜ್ ಎನ್ನುವ ವೆಬ್‌ಸೈಟ್‌ ವರದಿ ಮಾಡಿದ ಪ್ರಕಾರ ಚೆನ್ನೈ ತಂಡ ಹಾಲಿ ನಾಯಕ ಋತುರಾಜ್‌ ಗಾಯಕ್ವಾಡ್‌, ರವೀಂದ್ರ ಜಡೇಜಾ, ಶಿವಂ ದುಬೆ, ಮಥೀಶ ಪತಿರಾನ ಮತ್ತು ಎಂಎಸ್ ಧೋನಿ ಉಳಿಸಿಕೊಳ್ಳಲು ನಿರ್ಧರಿಸಿದ ಆಟಗಾರರು ಎಂದು ತಿಳಿದುಬಂದಿದೆ. ಒಂದೊಮ್ಮೆ ಬಿಸಿಸಿಐ ಕೇವಲ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳುವ ಅವಕಾಶ ಮಾತ್ರ ನೀಡಿದರೆ ಆಗ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎನ್ನುವ ಕುತೂಹಲ ಇರಲಿದೆ. 5 ಆಟಗಾರರ ರೀಟೈನ್‌ಗೆ ಅವಕಾಶ ಸಿಕ್ಕರೆ ಚಿಂತೆಯಿಲ್ಲ.

ಇದನ್ನೂ ಓದಿ IPL 2025: ರಾಜಸ್ಥಾನ್‌ ರಾಯಲ್ಸ್‌ಗೆ ರಾಥೋರ್ ಬ್ಯಾಟಿಂಗ್‌ ಕೋಚ್‌

ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಧೋನಿ ಅವರು ಈ ಬಾರಿಯೂ ಐಪಿಎಲ್‌ ಆಡುವ ಸಲುವಾಗಿ ಬಿಸಿಸಿಐ(BCCI) ಕನಿಷ್ಠ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ವಿಭಾಗದಲ್ಲಿ ಇರಿಸುವ ನಿಯಮವನ್ನು ಮರಳಿ ತರಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಧೋನಿ ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಅನ್‌ಕ್ಯಾಪ್ಡ್ ಆಟಗಾರನಿಗೆ ಫ್ರಾಂಚೈಸಿ ಕೇವಲ 4 ಕೋಟಿ ರೂ. ನೀಡಲಿದೆ. ಈ ನಿಯಮ ಜಾರಿಗೆ ಬಂದರೆ ಧೋನಿ ಇದೇ ಮೊತ್ತದಲ್ಲಿ ಚೆನ್ನೈಗಾಗಿ ಆಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇದೇ ಮೊತ್ತಕ್ಕೆ ಚೆನ್ನೈ ತಂಡ ಧೋನಿಯನ್ನು ಮತ್ತೆ ರೀಟೈನ್​ ಮಾಡಿಕೊಳ್ಳಬಹುದು.

ವಿದೇಶದಲ್ಲಿ ಮೆಗಾ ಹರಾಜು

ಈ ಬಾರಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶಿ ನೆಲದಲ್ಲಿ ಆಯೋಜಿಸುವ ಯೋಜನೆಯನ್ನೂ ಬಿಸಿಸಿಐ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೊದಲ ಬಾರಿಗೆ ಹರಾಜು ಪ್ರಕ್ರಿಯೆ ವಿದೇಶಿ ನೆಲದಲ್ಲಿ ಅಂದರೆ ದುಬೈನಲ್ಲಿ ನಡೆದಿತ್ತು. ಈ ಸಲವೂ ಮಧ್ಯಪ್ರಾಚ್ಯ ದೇಶದಲ್ಲೇ ಹರಾಜು ನಡೆಸಲು ಬಿಸಿಸಿಐ ಮುಂದಾಗಿದೆ. ಗಲ್ಫ್​ ನಗರಗಳಾದ ದೋಹಾ, ಮಸ್ಕತ್​ ಅಥವಾ ಅಬುಧಾಬಿಯಲ್ಲಿ ನಡೆಸುವ ಸಾಧ್ಯತೆ ಹೆಚ್ಚಿದೆ.