ಬಯಲಾಟಕ್ಕೆ ಹೋಗುವ ಸಡಗರ !

ಬಯಲಾಟಕ್ಕೆ ಹೋಗುವ ಸಡಗರ !

image-484da720-9ba5-4a9d-8d46-6c1e5a642c5c.jpg
Profile Vishwavani News December 11, 2022
image-6deddd4c-4ab9-4817-bd8e-0ca0dd66c685.jpg
ಪೂರ್ಣಿಮಾ ಕಮಲಶಿಲೆ ಹಳ್ಳಿ ಹಕ್ಕಿ ರಾತ್ರಿ ಎಂಟು ಗಂಟೆಗೆ ಎಲ್ಲರೂ ಬಡಾಮನೆ ಅಂಗಳದಲ್ಲಿ ಸೇರಿ, ಅಲ್ಲಿಂದ ಹಿರಿಯರಿಬ್ಬರು ದೊಂದಿ ಹಿಡಿದು ಮುಂದೆ ಸಾಗಿದರೆ, ಮಕ್ಕಳ ಸೈನ್ಯ ನಡುವೆ, ಮತ್ತಿರುವ ಹಿರಿಯರು ಹಿಂದೆ ದೊಂದಿ ಹಿಡಿದು ಬರುತ್ತಿದ್ದರು. ಇದೊಂದು ರೀತಿಯ ನಿಶೆಗೆ ಪಂಜಿನ ಮೆರವಣಿಗೆ. ನಮಗೆಲ್ಲ ಭಯಮಿಶ್ರಿತ ಕುತೂಹಲದ ನಡಿಗೆ. ಕಾಡು ಹರಟೆ, ನಗು, ಕಾಡುಪ್ರಾಣಿಗಳು ಹತ್ತಿರ ಸುಳಿಯದಂತೆ ಕೂಗುತ್ತಾ ಬಯಲಾಟ ನಡೆಯುವ ವಠಾರಕ್ಕೆ ತಲುಪುವುದೇ ಒಂದು ಸಂಭ್ರಮ ನಮಗೆಲ್ಲ. ಊರಲ್ಲಿ ಎಲ್ಲೂ ಯಕ್ಷಗಾನದ ಚಂಡೆಯ ಸದ್ದು ಕೇಳಲಾರಂಭಿಸಿದೆ. ಚಂಡೆಯ ನಾದ ಕೇಳಿದೊಡನೆ ಬಾಲ್ಯದಲ್ಲಿ ನಾವು ನೋಡುತ್ತಿದ್ದ ಯಕ್ಷಗಾನದ ನೆನಪಿನ ಸುರುಳಿಯೊಂದು ಎಳೆಎಳೆಯಾಗಿ ತೆರೆದುಕೊಳ್ಳುತ್ತದೆ. ನಮ್ಮೂರಿನ ಗ್ರಾಮ ದೇವತೆ ಸೌಡದ ದುರ್ಗಾಪರಮೇಶ್ವರಿ ದೇಗುಲ. ಊರವರ ಬಾಯಲ್ಲಿ ಇದು ಅಮ್ಮನವರ ಮನೆ. ಈ ಅಮ್ಮನವರ ಮನೆ ವಠಾರದ ಬಯಲಿನಲ್ಲಿ ವರ್ಷಕ್ಕೆ ಮೂರು ಅಥವಾ ನಾಲ್ಕು ಯಕ್ಷಗಾನವಾಗುತ್ತಿತ್ತು. ಹಾಲಾಡಿ ಮೇಳ, ಕಮಲಶಿಲೆ ಮೇಳ, ಬಗ್ವಾಡಿಮೇಳ, ಗೋಳಿಗರಡಿ ಮೇಳ ದವರು ಊರಿನ ಮನೆಮನೆಗೆ ತೆರಳಿ ವರಾಡ(ವಂತಿಗೆ) ಸಂಗ್ರಹಿಸಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದರು. ವರಾಡ ಸಂಗ್ರಹಿಸಲು ಬಂದವರು ಕೊಟ್ಟಷ್ಟು ಹಣ, ಪಡಿಯಕ್ಕಿ ಸಾಮಾಗ್ರಿ ಪಡೆದು, ‘ರಾತ್ರಿ ಯಕ್ಷ ಗಾನಕ್ಕೆ ಬನ್ನಿ’ ಎಂದು ಆಹ್ವಾನಿಸಿ ತೆರಳುತ್ತಿದ್ದರು. ನಾವು ಶಾಲೆಯಿಂದ ಮನೆಗೆ ಮರಳಿದ ತಕ್ಷಣ ಅಮ್ಮ ನಮಗೆ ಇವತ್ತು ಯಕ್ಷಗಾನವಿದೆ ಎಂದು ತಿಳಿಸುತ್ತಿದ್ದರು. ಒಂದು ವೇಳೆ ಅಮ್ಮನಿಗೆ ಮರೆತು ಹೋದರೂ ನಾವು ದನ ಮೇಯಿಸಲು ಹೋದಾಗ ಅಲ್ಲಿ ಯಾರಾದರೂ ಇವತ್ ಆಂಟ ಇತ್ ಹೋಪ ಅಕಾ ಎನ್ನುತ್ತಿದ್ದರು. ಕೆಲವೊಮ್ಮೆ ಬೆಳಿಗ್ಗೆ ಶಾಲೆಗೆ ಹೋಗುವಾಗಲೇ ಸೌಡದಿಂದ ಶಾಲೆಗೆ ಬರುತ್ತಿದ್ದ ಸಹಪಯಣಿಗರಾದ ಸಾವಿತ್ರಿ, ಮಮತ, ಸ್ವಾತಿ, ಶಶಿರೇಖಾ, ಕಾಂಚನ, ನೇತ್ರಾವತಿ, ಶೃಂಗೇರಿ, ಮಹೇಶ ಇವರೆಲ್ಲ ‘ಇವತ್ತು ಅಮ್ನರ್ ಮನೆಯಲ್ಲಿ ಆಟ ಇತ್ ಬನ್ನಿ’ ಎನ್ನುತ್ತಿದ್ದರು. ನನ್ನ ಸಹಪಾಠಿ ಸೌಡದ ಉದಯ ಐತಾಳರಿಗೆ ಯಕ್ಷಗಾನ ವೆಂದರೆ ಪಂಚಪ್ರಾಣ. ‘ಇಂದು ಸೌಡದಲ್ಲಿ ಒಂದೇ ಒಂದು ಆಟ, ನೀವೆಲ್ಲ ಮನೆಮಂದಿಯೊಂದಿಗೆ ಬಂದು ಚಂದಗಾಣಿಸ ಬೇಕು. ಬಾಲಗೋಪಾಲನ ವೇಷದಲ್ಲಿ ರಾರಾಜಿಸಲಿರುವ ಪುಟ್ಟ ಬಾಲಕರು, ಅಬ್ಬರದಲ್ಲಿ ಆರ್ಭಟಿಸುವ ರಾಕ್ಷಸರು, ರಾಜಾಧಿರಾಜ ಕುತ್ತುಂಬ್ರಿ ಬೀಜ ಎಂದು ನಕ್ಕುನಗಿಸುವ ಹಾಸ್ಯಗಾರರಿಂದ ಒಂದೇ ಒಂದು ಆಟ ನೋಡಲು ಮರೆಯದಿರಿ, ನಾಳೆ ಕಥೆ ಕೇಳದಿರಿ’ ಎಂದೆ ಐತಾಳರು ಅವರದೇ ಶೈಲಿಯಲ್ಲಿ ಡೈಲಾಗ್ ಹೇಳುತ್ತಾ ಸಾಗಿದರೆ, ‘ನಾವೆಲ್ಲ ಸ್ತ್ರೀ ವೇಷಕ್ಕೇ ಸ್ತ್ರೀಯರೇ ಬರುತ್ತಾರಾ? ರಾಕ್ಷಸನ ವೇಷಕ್ಕೇ ರಕ್ಕಸರು ಬರುತ್ತಾರಾ?’ ಎಂದೆ ಹೇಳಿ ಐತಾಳರ ಕಾಲೆಳೆಯುತ್ತಿದ್ದೆವು. ಕರೆಂಟ್ ಇರದ ದಿನಗಳವು. ಮನೆಯಲ್ಲಿ ಒಂದೊಂದು ಬ್ಯಾಟರಿ ಇರುತ್ತಿತ್ತು. ಯಕ್ಷಗಾನಕ್ಕೆ ಹೋಗಲು ಅದನ್ನು ಹಿರಿಯರಿಂದ ಕೇಳಿ ಪಡೆಯುವ ಧೈರ್ಯ ಸಾಲದು. ಅಲ್ಲದೇ ಮನೆಯಲ್ಲಿ ಅಮ್ಮನ ಹೊರತು ಉಳಿದವರಿಗೆ ನಮ್ಮನ್ನು ಯಕ್ಷಗಾನಕ್ಕೆ ಕಳುಹಿಸುವ ಮನಸ್ಸೂ ಇರಲಿಲ್ಲ. ‘ಯಕ್ಷಗಾನ ನೋಡಿದರೆ ಪಾಪ ಬರ್ತದೆ ಮಕ್ಕಳೇ. ಅಲ್ಲಿಗ್ ಹೋಯ್ ನಿದ್ರೆ ಬಿಟ್ ಎಲ್ಲರ ಸಂಕ್ತೆ ಕೂಕಂಡ್ ಯಕ್ಷಗಾನ ಕಂಡ್ಕಂಡ್ ಬರ್ದಿರ್ ಆತಿಲ್ಯಾ? ಬೆಳಿಗ್ಗೆ ಮನೆಯೊಳಗೆ ಬರ್ಕಾರೆ ಮಿಂದ್ಕಂಡ್ ಬರ್ಕ್ ಗೊತ್ತಾಯ್ತಾ?’ ಎಂದು ಅಮ್ಮಮ್ಮ ಗೌಜಿ ಹೊಡೆಯುತ್ತಿದ್ದರು. ಯಕ್ಷಗಾನವಿದೆ ಎಂದು ತಿಳಿದ ದಿನ ಮೊದಲು ಮಾಡುವ ಕೆಲಸವೆಂದರೆ ಮನೆ ಕೆಲಸದಾಳು ಮಂಜುವಿನ ಬಳಿ ಒಂದು ಸೂಡಿ (ಪಂಜು) ತಯಾರಿಸಿಡಲು ಹೇಳುವುದು. ನಮ್ಮ ಮನೆಯಿಂದ ಅರ್ಧಮೈಲು ದೂರ. ಆದರೆ ನಮ್ಮ ಗ್ಯಾಂಗ್ ಕಟ್ಟಿ ಕೊಂಡು ಕೊಂಕಣ ಸುತ್ತಿ ಮೈಲಾರಕ್ಕೆ ಹೋದರೆ, ಸೌಡಕ್ಕೆ ಒಂದು ಮೈಲಿ ದೂರವಾಗುತ್ತಿತ್ತು. ರಾತ್ರಿ ದಾರಿಗೆ ಬೆಳಕಿನ ವ್ಯವಸ್ಥೆಗೆ ಚಾಂಪರ್ಕೆ, ತೆಂಗಿನ ಓಲಿ, ಒಣಗಿಸಿಟ್ಟ ಕಬ್ಬಿನ ಜೊಗಟಿ ಇವುಗಳನ್ನೆಲ್ಲ ಸೇರಿಸಿ ಉದ್ದನೆಯ ಸೂಡಿ ಮಾಡಿಡುತ್ತಿದ್ದರು. ಸೂಡಿ ಮಾಡಲು ಸಮಯಾಭಾವವಾದರೆ ಪಪ್ಪಳೆ (ಪಪ್ಪಾಯಿ) ಮರದ ಎಲೆಯನ್ನು ದಂಟಿನ ಸಮೇತ ಕೊಯ್ದು, ಅದರ ಎಲೆಯ ಭಾಗವನ್ನು ತೆಗೆದು, ಆ ಟೊಳ್ಳಾದ ಉದ್ದ ದಂಟಿನ ಒಳಗೆ ಸೀಮೆ ಎಣ್ಣೆ ಸುರಿದು, ಹತ್ತಿ ಬಟ್ಟೆಯ ಉದ್ದದ ತುಂಡೊಂದನ್ನು ಅದರೊಳಗೆ ತುರುಕಿಸಿದರೆ ರಾತ್ರಿಯ ಪಯಣಕ್ಕೆ ಬೆಳಕಿನ ವ್ಯವಸ್ಥೆ ಆಗುತ್ತಿತ್ತು. ಜಡ್ಡಿನ ಬೈಲಿನ ಗುಲಾಬಿ, ಅಕ್ಕಯ್ಯ, ಸುಮತಿ, ರಾಗಿಮಕ್ಕಿಯ ಜ್ಯೋತಿ, ಜಲಜ, ಮೇಲ್ಮಕ್ಕಿಯ ರೋಹಿಣಿ, ಬಾಬಿ, ಇವರೆಲ್ಲರ ಜೊತೆ ಬಡಾಮನೆಯ ಪ್ರಭಾವತಿಯಕ್ಕ, ಶೋಭಾ ಸ್ವಾತಿ, ಮೂಡಲಮಕ್ಕಿಯ ನಾವಿಷ್ಟು ಮಕ್ಕಳು ರಾತ್ರಿ ಎಂಟು ಗಂಟೆಗೆ ಬಡಾ ಮನೆಯ ಅಂಗಳದಲ್ಲಿ ಜಮಾಯಿಸಬೇಕು. ಅಲ್ಲಿಂದ ಎಲ್ಲರೂ ಒಟ್ಟಾಗಿ ಗಂದ್ರಾಡಿ ಗುಡ್ಡೆಯ ಮೇಲಿನ ಕಾಲುದಾರಿ ಸವೆಸಿ, ಗುತ್ತಿಯಮ್ಮನ ಮನೆ ಕಗ್ಗಾನು ಕಾಂತಾರ ದಾಟಿ, ಗಾಡಿಪಯ್ಟಿನ ರಸ್ತೆಯಲ್ಲಿ ಮಾರುದೂರ ಸಾಗಿ ಸೌಡದ ಅಮ್ಮನವರ ಮನೆ ವಠಾರ ಸೇರುವ ಯೋಜನೆ ಹಾಕುತ್ತಿದ್ದೆವು. ದನ ಹಟ್ಟಿಗೆ ಎಬ್ಬಿದೊಡನೆ ಕೈಕಾಲು ತೊಳೆದು ಆ ದಿನದ ಭಜನೆ, ಊಟ, ಶಾಲೆ ಕೆಲಸ ಎಲ್ಲಾ ಬೇಗ ಬೇಗ ಮುಗಿಸಿಕೊಂಡು, ರೇಡಿಯೋದಲ್ಲಿ ರಾತ್ರಿ ಏಳು ಮೂವತ್ತೈದರ ವಾರ್ತೆ ಬಿತ್ತರಗೊಂಡ ತಕ್ಷಣ ಸೂಡಿಗೆ ಬೆಂಕಿ ಹೊತ್ತಿಸಿಕೊಂಡು ಬಯಲಿನ ಕಡೆಗೆ ಓಡುತ್ತಿzವು. ಕೂ.. ಕೂಯ್ ಹೊಡೆದು ಎಲ್ಲರೂ ಹೊರಟ ಕುರಿತು ಖಾತ್ರಿ ಪಡಿಸಿಕೊಳ್ಳುವ ವಿಧಾನವದು. ಹೀಗೆ ರಾತ್ರಿ ಎಂಟು ಗಂಟೆಗೆ ಎಲ್ಲರೂ ಬಡಾಮನೆ ಅಂಗಳದಲ್ಲಿ ಸೇರಿ, ಅಲ್ಲಿಂದ ಹಿರಿಯರಿಬ್ಬರು ದೊಂದಿ ಹಿಡಿದು ಮುಂದೆ ಸಾಗಿದರೆ, ಮಕ್ಕಳ ಸೈನ್ಯ ನಡುವೆ, ಮತ್ತಿರುವ ಹಿರಿಯರು ಹಿಂದೆ ದೊಂದಿ ಹಿಡಿದು ಬರುತ್ತಿದ್ದರು. ಇದೊಂದು ರೀತಿಯ ನಿಶೆಗೆ ಪಂಜಿನ ಮೆರವಣಿಗೆ. ನಮಗೆಲ್ಲ ಭಯಮಿಶ್ರಿತ ಕುತೂಹಲದ ನಡಿಗೆ. ಕಾಡು ಹರಟೆ, ನಗು, ಕಾಡುಪ್ರಾಣಿಗಳು ಹತ್ತಿರ ಸುಳಿಯ ದಂತೆ ಕೂಗುತ್ತಾ ಅಮ್ಮನವರ ಮನೆಯ ವಠಾರಕ್ಕೆ ತಲುಪುವುದೇ ಒಂದು ಸಂಭ್ರಮ ನಮಗೆಲ್ಲ. ಈ ಕೊಡಿ ತಿಂಗಳು, ಧನಿನ್ ತಿಂಗಳ ( ನವೆಂಬರ್ ,ಡಿಸೆಂಬರ್) ಚಳಿಯಲ್ಲಿ ಆಟ ನೋಡುವುದು ಅಷ್ಟು ಸುಲಭದ ಕೆಲಸವಲ್ಲ. ರಾತ್ರಿ ಬೆಳಗಾಗುವವರೆಗೆ ನಿz ಬಿಟ್ಟು ಆಟ ನೋಡುವಾಗ, ತಿನ್ನಲು ಏನಾದರೂ ಕುರುಕಲು ತಿಂಡಿ ಬೇಕನಿಸುತ್ತಿತ್ತು. ಆದರೆ ಕುರುಕಲು ತಿಂಡಿ ಆಗೆಲ್ಲ ಎಲ್ಲಿತ್ತು? ಹುರಿದ ನೆಲಗಡಲೆ, ಹುರಿದಿಟ್ಟ ಹುಣಸೇ ಬೀಜ, ಹಸಿ ಗೆಣಸಿನ ಹಪ್ಪಳ, ಮಾವಿನ ಹಣ್ಣಿನ ಹಂಚಟ್ಟು, ಒಣಗಿಸಿಟ್ಟ ಗೆಣಸಿನ ಹೋಳು ಇವನ್ನೆಲ್ಲ ಪ್ಯಾಕ್ ಮಾಡಿಕೊಂಡು ಯಕ್ಷಗಾನ ನೋಡಲು ಹೋದರೆ, ಹಿರಿಯ ಹೆಂಗಸರು ನಶ್ಯದ ಡಬ್ಬ, ಎಲೆ ಅಡಿಕೆ ಚೀಲದೊಂದಿಗೆ ಬರುತ್ತಿದ್ದರು. ಇನ್ನು ಯಕ್ಷಗಾನ ಬಯಲಾಟದಲ್ಲಿ ಬಟಾಬಯಲಿನ ಕುಳಿತು ಯಕ್ಷಗಾನ ನೋಡಬೇಕಿತ್ತು. ಹನಿ ಎರಗುವ ಚಳಿ ಕುಟ್ಟುವ ದಿನಗಳಲ್ಲಿ ಕುಳಿತುಕೊಂಡು ಯಕ್ಷಗಾನ ವೀಕ್ಷಿಸಲು ಕುರ್ಚಿ, ಮಂಚ, ಬೆಂಚುಗಳು ಇರುತ್ತಿರಲಿಲ್ಲ. ಎಲ್ಲರೂ ಅವರವರ ಮನೆಯಿಂದ ಕುಳಿತುಕೊಳ್ಳಲು ಗೋಣಿ ಚೀಲ, ತೆಂಗಿನ ಮಡ್ಲ್, ಹೊದ್ದು ಕೊಳ್ಳಲು, ಕಂಬಳಿ, ಹೊದಿಕೆಯನ್ನು ಕೊಂಡೊ ಯ್ಯುತ್ತಿದ್ದೆವು. ಯಾವ ಮೇಳದ ಯಕ್ಷಗಾನವೇ ಆಗಿರಲಿ ವೀಕ್ಷಿಸಲು ಹೋದ ತಕ್ಷಣ ಮೊದಲು ಚೌಕಿಯೊಳಗೆ ಹೋಗಿ ಗಣಪತಿಗೆ ನಮಸ್ಕರಿಸಿ, ಪ್ರಸಾದ ಸ್ವೀಕರಿಸಿ ಬಂದು ರಂಗಸ್ಥಳದ ಎದುರು ಕುಳಿತುಕೊಳ್ಳುತ್ತಿದ್ದ ಬಾಲ್ಯವದು. ಚೌಕಿಯೊಳಗೆಲ್ಲ ಗ್ಯಾಸ್ ಲೈಟ್‌ನ ಬೆಳಕು, ಬಗೆಬಗೆಯ ವೇಷಧಾರಿಗಳನ್ನು ನೋಡುವಾಗ ಬೆರಗು, ಆನಂದವಾಗುತ್ತಿತ್ತು. ರಂಗಸ್ಥಳದಿಂದ ಅಲ್ಪ ದೂರದಲ್ಲಿ ಒಂದು ಬೆಂಚಿನ ಮೇಲೆ ಚಿಮಣಿ ಬೆಳಕಿನಲ್ಲಿ ಬಠಾಣಿ, ಸೇಂಗಾ ಬಜೆಯ ಪ್ಯಾಕೇಟು, ಅಕ್ರೂಟು, ಕೇಜಿಕಲ್‌ನಂತಹ ಚಾಕಲೇಟು ತುಂಬಿದ ಎರಡು ಭರಣಿಗಳು ರಾರಾಜಿಸುತ್ತಿದ್ದವು. ಪಕ್ಕದಲ್ಲಿ ಸೀಮೆ ಎಣ್ಣೆಯ ಸ್ವೌವ್ ಹೊತ್ತಿಸುತ್ತಾ ಚಹಾ ತಯಾರಿಸಿಕೊಡುವ ಚಾ ಮಂಚ ಕೂಡ ಇರುತ್ತಿತ್ತು. ಬಾಲಗೋಪಾಲ ಕುಣಿಯುವಷ್ಟರಲ್ಲಿ ನಮಗೆ ಅಮ್ಮ ಕೊಟ್ಟು ಕಳುಹಿಸುತ್ತಿದ್ದ ಐದು ಹತ್ತು ಪೈಸೆಯಲ್ಲಿ ಅಕ್ರೂಟ್,ಕೇಜಿ ಕಲ್ ಚಾಕ್ಲೇಟ್ ಕೊಂಡು, ತಿಂದು ಮುಗಿಸುತ್ತಿದ್ದೆವು. ಭಾಗವತರು ‘ಪೇಳುವೆನೀ ಕಥಾಮೃತವ’ ಎಂದು ಹಾಡಿ ಅಬ್ಬರಿಸುವಾಗಲೇ ಕಣ್ಣೆವೆಗಳು ಪ್ರೀತಿಸಿ ಪ್ರೀತಿಸಿ ಮುದ್ದಾಡುತ್ತಿದ್ದವು. ನಮ್  ಸಮವಯಸ್ಕ ಜೊತೆಗಾರರು, ಶಾಲಾ ನಡಿಗೆಯ ಜೊತೆಗಾರರು ಆಟದ ಗರದಲ್ಲಿ ಒಟ್ಟಾಗಿ ಕೂರುತ್ತಿದ್ದೆವು. ಕೆಲವರು ಶಯನೋತ್ಸವಕ್ಕೆ ಅಣಿಯಾಗುತ್ತಿದ್ದರು! ನಾನಂತೂ ಹಾಸ್ಯಗಾರ ಮತ್ತು ರಕ್ಕಸನ ವೇಷ ಬರುವವರೆಗೆ ಕಣ್ಣಿಗೆ ಬೆಂಕಿಕಡ್ಡಿ ಸಿಕ್ಕಿಸಿಕೊಂಡು ಯಕ್ಷಗಾನ ನೋಡುತ್ತಾ, ರಂಗಸ್ಥಳದ ಎದುರೇ ಮುದುಡಿ ಮಲಗಿಬಿಡುತ್ತಿದ್ದೆ. ಕೆಲವೊಮ್ಮೆ ರಕ್ಕಸ ಬಂದು ಎಬ್ಬಿಸಿ ನನ್ನ ನಿದ್ರಾಭಂಗ ಮಾಡಿದ್ದೂ, ನಾನು ಅ ನಿದ್ದೆಗಣ್ಣಲ್ಲಿ ಕಿಟಾರನೆ ಕಿರುಚಿದ್ದು, ಸಭಿಕರೆಲ್ಲ ಈ ದೃಶ್ಯ ನೋಡಿ ಗೊಳ್ ಎಂದು ನಗುತ್ತಿದ್ದ ದೃಶ್ಯವೂ ನೆನಪಿದೆ. ಒಮ್ಮೊಮ್ಮೆ ನಮ್ಮ ಜೊತೆ ಬಂದ ಹಿರಿಯ ಮಹಿಳೆಯರು, ‘ಇಗಾ ಮಗಾ ಒಂಚೂರ್ ನಶ್ಯ (ಪುಡಿ) ಸೇದ್ ಕಾಣ್, ನಿದ್ರಿ ಬತ್ತಿ, ಇಗಾ ಒಂದ್ ವೀಳ್ಯ ಹಾಕ್, ನಿದ್ರಿ ಹಾರಿ ಹೋತ್’ ಎಂದು ಉಪಚರಿಸುತ್ತಾ, ಕಣ್ಣೆವೆ ಇಕ್ಕದೇ ಬೆಳಗಿನವರೆಗೂ ಯಕ್ಷಗಾನ ಸವಿಯು ತ್ತಿದ್ದರು. ನಾನಂತೂ ಒಂಬತ್ತು ಗಂಟೆ ರಾತ್ರಿಯಿಂದ ಹತ್ತು ಗಂಟೆ ರಾತ್ರಿಯವರೆಗೆ ಮಾತ್ರ ಯಕ್ಷಗಾನ ವೀಕ್ಷಿಸಿ, ನಂತರ ಆ ಬಯಲಿನ ನಿದ್ರಿಸಿ, ಆಟ ಮುಗಿದೊಡನೆ ಹಾಸಿ ಹೊದ್ದ ಬಟ್ಟೆಗಳ ಗಂಟುಮೂಟೆ ಕಟ್ಟಿಕೊಂಡು, ಕೆದರಿದ ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತಾ ಜೊತೆಗಾರರೊಂದಿಗೆ ಮನೆಗೆ ಮರಳುತ್ತಿದ್ದೆ. ಆಟ ಕಂಡ ಮರುದಿನ ಶಾಲೆಗೆ ಚಕ್ಕರ್ ಹೊಡೆದು ಮಲಗಿ ದರೂ ಕಿವಿಯೊಳಗೆ ಗುಯ್ಗುಡುವ ಚಂಡೆ ಪೆಟ್ಟಿನ ಅಬ್ಬರ!
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ