ಬನಹಟ್ಟಿ ನನ್ನೂರು

ಬನಹಟ್ಟಿ ನನ್ನೂರು

image-dc5e2fa4-bc3c-44f2-b5a5-9420524ebb84.jpg
Profile Vishwavani News June 19, 2022
image-22dcb4ae-3fab-45eb-b90f-3fa432900d5c.jpg
ಸತ್ಯಮೇವ ಜಯತೆ (ಭಾಗ ೧) ಕರ್ನಾಟಕ ಕಂಡ ಧೀಮಂತ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರು ತಮ್ಮ ಆತ್ಮಕಥೆಯನ್ನು ಬರೆಯುತ್ತಿದ್ದಾರೆ! ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯವರಾದ ಶಂಕರ್ ಬಿದರಿಯವರು ಅಪ್ಪಟ ಗ್ರಾಮೀಣ ಕುಟುಂಬದಿಂದ ಬಂದವರು. ಪರಿಶ್ರಮದಿಂದ ವಿದ್ಯಾಭ್ಯಾಸ ಮುಗಿಸಿ, ಐಪಿಎಸ್ ಸೇವೆಯಲ್ಲಿ ತೊಡಗಿಸಿಕೊಂಡು, ವಿವಿಧ ರಾಜ್ಯಗಳಲ್ಲಿ ನಾನಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ನಮ್ಮ ರಾಜ್ಯದ ದಕ್ಷಿಣ ತುದಿಯಲ್ಲಿ ಜನರನ್ನು ಕೊಲೆ ಮಾಡುತ್ತಾ, ದಂತಚೋರ ಎಂದೇ ಹೆಸರಾಗಿದ್ದ ವೀರಪ್ಪನ್‌ನನ್ನು ಮಟ್ಟಹಾಕುವಲ್ಲಿ ಬಿದರಿಯವರ ಕೊಡುಗೆ ದೊಡ್ಡದು. ತಮ್ಮ ಯಶಸ್ವಿ ವೃತ್ತಿಯಿಂದ ನಿವೃತ್ತರಾಗಿರುವ ಬಿದರಿಯವರು, ತಮ್ಮ ಬದುಕಿನ ವಿಶಾಲ ಅನುಭವ ಗಳ ಹರಹನ್ನು ಅಕ್ಷರ ರೂಪದಲ್ಲಿ ಮೂಡಿಸುತ್ತಿದ್ದಾರೆ. ವಿಶಿಷ್ಟ ಸೇವೆಯನ್ನು ನೀಡಿ, ಸರಕಾರದಿಂದ ನಾನಾ ರೀತಿಯ ಗೌರವಗಳಿಗೆ ಭಾಜನರಾಗಿರುವ ಬಿದರಿಯವರ ಆತ್ಮಕಥೆಯನ್ನು ‘ವಿಶ್ವವಾಣಿ’ಯ ಓದುಗರಿಗೆ ಪ್ರಸ್ತುತಪಡಿಸಲು ನಮಗೆ ಹೆಮ್ಮೆ ಎನಿಸುತ್ತಿದೆ. ಪ್ರತಿದಿನ ಅವರ ಆತ್ಮಕಥೆಯು ಧಾರಾವಾಹಿಯ ರೂಪದಲ್ಲಿ ವಿಶ್ವವಾಣಿಯಲ್ಲಿ ಪ್ರಕಟವಾಗಲಿದೆ. ಊರು ಎಂದರೆ ಬರೀ ಊರಲ್ಲ ಅದು; ತಾಯಿ ಬೇರು. ಬನಹಟ್ಟಿ ಎಂದರೆ ಈಗಲೂ ಮನಸ್ಸು ತಂಪಾಗುತ್ತದೆ. ಆ ನದಿ, ಹೊಲ, ಆ ಮಣ್ಣಿನ ದಾರಿ ಕಣ್ಮುಂದೆ ಕಟ್ಟುತ್ತವೆ. ಬಾಲ್ಯದ ಗೆಳೆಯರೆಲ್ಲ ಅದೇ ಮಾಸಿದ ಅಂಗಿ-ಚಡ್ಡಿಗಳಲ್ಲಿ ಮುಂದೆ ಬಂದು ನಿಂತು ಕಚಗುಳಿ ಇಡುತ್ತಾರೆ. ನನ್ನವ್ವ-ಅಪ್ಪ, ತಮ್ಮಂದಿರು-ತಂಗಿಯರು ಕೂಗಿ ಕರೆದಂತೆ ಭಾಸವಾಗುತ್ತದೆ. ಆ ಊರಿನ ದಾರಿಯಲ್ಲಿ ಇಂದಿಗೂ ತಾಯಿ ಬೇರಿನ ತಂಪಿದೆ. ಹೆಜ್ಜೆ-ಹೆಜ್ಜೆಗೂ ಎದುರು ಬಂದು ಆಲಂಗಿಸಿಕೊಂಡು ಮುದ್ದುಗರೆ ಯುವ ಮುತ್ತಿನಂಥ ನೆನಪುಗಳಿವೆ. ನನ್ನ ಜೀವನಗಾಥೆಯ ಆರಂಭ; ಅದು ನನ್ನೂರಿನಿಂದಲೇ ಆರಂಭ. ನಮ್ಮ ಊರಿನಿಂದ ಅನತಿ ದೂರದಲ್ಲೇ ತಾಯಿ ಕೃಷ್ಣೆ ಮೈದುಂಬಿ ಹರಿಯುತ್ತಿದ್ದಳು. ಕೃಷ್ಣಾನದಿಯಿಂದ ಕೇವಲ 3 ಕಿಲೊಮೀಟರ್ ಅಂತರದಲ್ಲಿ, ಜಮಖಂಡಿಯಿಂದ ಪಶ್ಚಿಮಕ್ಕೆ 19 ಕಿಲೊಮೀಟರ್ ದೂರದಲ್ಲಿ ತೊನೆಯುವುದೇ ನನ್ನೂರು ಬನಹಟ್ಟಿ. ಎಲ್ಲೆಲ್ಲೂ ಹಸಿರು, ಗಿಡಮರಗಳ ಸಾಲು, ನೀರಾವರಿ ಇಲ್ಲದೆಯೂ ಹೊಲಗಳಲ್ಲಿ ಹಚ್ಚಹಸುರಿನ ಪೇರು. ಬನಹಟ್ಟಿಯನ್ನು ಒಂದು ಗ್ರಾಮ ಅನ್ನುವುದೊ, ಊರು ಅನ್ನುವುದೊ ಗೊತ್ತಿಲ್ಲ. ನನ್ನ ಪಾಲಿಗಂತೂ ಅದೇ ಪ್ರಪಂಚವಾಗಿತ್ತು. ಹಳ್ಳಿಯಲ್ಲೇ ಇದ್ದ ಜನರು ವಿಜಯಪುರ ಹಾಗೂ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಗಳಾದ ಬಳಿಕ ಬನಹಟ್ಟಿ ಬಾಗಲಕೋಟೆ ಜಿಲ್ಲೆಗೆ ಸೇರಿತು. ನೀರಾವರಿ ಬರುವುದಕ್ಕೆ ಮುಂಚಿನಿಂದಲೂ ನಮ್ಮೂರಿನಲ್ಲಿ ನೇಕಾರಿಕೆ ಮತ್ತು ಒಕ್ಕಲುತನವೇ ಜೀವನಾಧಾರ. ನೇಕಾರಿಕೆ ಅಂದರೆ ನೇಕಾರರು ಮಾತ್ರ ಮಾಡುವ ಉದ್ಯೋಗವಾಗಿರಲಿಲ್ಲ. ಜಾತಿ ಬೇಧವಿಲ್ಲದೇ ಎಲ್ಲರೂ ನೇಕಾರಿಕೆಯಲ್ಲಿ ತೊಡಗಿದ್ದ ಕಾಲವದು. ಮನೆ ಮನೆಗಳಲ್ಲಿ ಅತ್ಯಂತ ಪ್ರೀತಿಯಿಂದ ನೇಕಾರಿಕೆ ಮಾಡುತ್ತಿದ್ದರು. ಅದನ್ನು ಬಿಟ್ಟರೆ ವ್ಯಾಪಾರ ಮಾಡುತ್ತಿದ್ದ ಒಂದಷ್ಟು ಕುಟುಂಬಗಳೂ ಇದ್ದವು. ಉದ್ಯೋಗ ಪರ್ವ ಆಗಿನ್ನೂ ಆರಂಭವಾಗಿರಲಿಲ್ಲ. ಹೀಗಾಗಿ ಉದ್ಯೋಗದ ಬೆನ್ನು ಹತ್ತಿ ಪಟ್ಟಣ ಸೇರುವವರ ಸಂಖ್ಯೆ ಬಹಳೇ ಕಡಿಮೆ ಇತ್ತು. ಅವರು ಮಾಡುತ್ತಿದ್ದ ವೃತ್ತಿಯ ಆಧಾರದ ಮೇಲೆ ಆಯಾ ಟುಂಬಗಳಿಗೆ ಅಡ್ಡ ಹೆಸರುಗಳು ಬಂದಿದ್ದವು. ಹಳ್ಳಿಯ ಪ್ರದೇಶ ಗಳನ್ನು ಜಾತಿಯಾಧಾರದ ಮೇಲೆ ವಿಂಗಡಿಸಲಾಗಿತ್ತು. ಅಂದರೆ ಮೇಲಿನ ಓಣಿಯವರೆಲ್ಲ ಮೇಲ್ಜಾತಿಯವರು, ಕೆಳ ಜಾತಿಯವರು ಹೆಚ್ಚಾಗಿ ಊರಿನ ಅಂಚಿನಲ್ಲಿ ವಾಸಿಸೋರು. 1970ಕ್ಕೂ ಮುಂಚೆ ಇಲ್ಲಿನ ಬೇಸಾಯ ಮಳೆನೀರು ಮತ್ತು ಬಾವಿಯನ್ನೇ ಅವಲಂಬಿಸಿತ್ತು. ನೈಋತ್ಯ ಮಾನ್ಸುನ್ ಮಳೆಯೇ ಕೃಷಿಗೆ ಆಧಾರ. ಅಲ್ಲದೇ ಒಣ ಬೇಸಾಯಕ್ಕೂ ಈ ಭೂಮಿ ಒಗ್ಗಿಕೊಂಡಿತ್ತು. ಕಬ್ಬು, ಹತ್ತಿ, ಗೋವಿನ ಜೋಳ, ಗೋಧಿ, ನೆಲಗಡಲೆ ಪ್ರಮುಖ ಬೆಳೆಗಳಾಗಿದ್ದವು. ಸಿಹಿನೀರಿನ ಬಾವಿಗಳೂ ಸಾಕಷ್ಟಿದ್ದವು. ಉಪಜೀವನಕ್ಕೆ ಆ ಬಾವಿಗಳಿಂದ ನೀರು ಸೇದಿ ತರುವುದು ಜನರ ಮುಖ್ಯ ಕೆಲಸವಾಗಿತ್ತು. 1969ರ ಆಸುಪಾಸು, ಅಂದರೆ ಬೆಳಗಾವಿ ಜಿಲ್ಲೆಯ ಹಿಡಕಲ್-ಘಟಪ್ರಭಾ ಆಣೆಕಟ್ಟು ಕಟ್ಟಿದ ನಂತರ ನಮ್ಮೂರಲ್ಲೂ ನೀರಾವರಿ ಸೌಲಭ್ಯ ಬಂತು. ಅದರ ಎಡದಂಡೆ ಕಾಲುವೆಯಿಂದ ವರ್ಷದಲ್ಲಿ ಹತ್ತು ತಿಂಗಳು ನೀರಾವರಿ ಸೌಲಭ್ಯ ಸಿಗುತ್ತದೆ. ಬಾವಿಗಳಿಂದ ಪಂಪ್ ಸೆಟ್ ವ್ಯವಸ್ಥೆಯೂ ಆಯಿತು. ನೇಕಾರಿಕೆಯಲ್ಲಿ ಮುಂದಿದ್ದ ಮಂದಿ ಅತ್ತ ನೀರಿನ ಸೌಲಭ್ಯ ಹೆಚ್ಚಿ, ಕೃಷಿಬದುಕು ಹಸನಾಗುತ್ತಿದ್ದಂತೆ, ಜನ ಇತ್ತ ನೇಕಾರಿಕೆಯಲ್ಲೂ ಹೊಸ ಹೊಸ ಮಾರ್ಗಗಳನ್ನು ಕಂಡು ಕೊಂಡರು. ಮೊದಲು ಕೈಯಿಂದಲೇ ನೇಕಾರಿಕೆ ಮಾಡಲಾಗುತ್ತಿತ್ತು. ನಂತರ ಸ್ವಯಂ ಚಾಲಿತ ಯಂತ್ರಗಳು ಬಂದವು. ಅನಂತರ ವಿದ್ಯುತ್ ಚಾಲಿತ ಯಂತ್ರಗಳ ಭರಾಟೆ ಶುರುವಾಯಿತು. ಯಂತ್ರಗಳು ಬಂದಂತೆ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಿತು. ಮಾರುಕಟ್ಟೆಯೂ ವಿಶಾಲವಾಯಿತು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಪ್ರಮುಖ ಮಾರುಕಟ್ಟೆಗಳಾದವು. ಇದನ್ನು ಹೊರತು ಪಡಿಸಿಯೂ ಇಲ್ಲಿ ನೇಯ್ದ ಅತ್ಯುತ್ತಮ ಗುಣಮಟ್ಟದ ಸೀರೆಗಳು ಅನೇಕ ಕಡೆ ರಫ್ತಾಗುತ್ತಿದ್ದವು. ಶೈಕ್ಷಣಿಕ ಕ್ಷೇತ್ರದಲ್ಲೂ ನಮ್ಮೂರು ಹಿಂದೆ ಬಿದ್ದಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರುವ ಹತ್ತು ವರ್ಷ ಮುಂಚೆಯೇ ನಮ್ಮಲ್ಲಿ ಶಿಕ್ಷಣ ಸಂಸ್ಥೆ ಉದಯವಾಗಿತ್ತು. ಚಿಕ್ಕೋಡಿ ತಮ್ಮಣ್ಣಪ್ಪ ಅಂತ ಕನ್ನಡ ಹೋರಾಟಗಾರರೊಬ್ಬರಿದ್ದರು. ಕನ್ನಡ ಪರ ಕೆಲಸ ಮಾಡುವುದರಲ್ಲಿ ಅವರದು ಎತ್ತಿದ ಕೈ. ಅವರ ಪ್ರಯತ್ನದ ಫಲವಾಗಿ ನಮ್ಮೂರಲ್ಲೂ ಒಂದು ಮಾಧ್ಯಮಿಕ ಶಾಲೆ ತೆರೆಯಿತು. ಬೇರೆ ಊರಿಗೆ ಹೋಗಿ ಕಲಿಯಲಾಗದ ಹೆಣ್ಣುಮಕ್ಕಳು ಕನಿಷ್ಠ 10ನೇ ತರಗತಿವರೆಗಾದರೂ ಇಲ್ಲಿ ಓದುವಂತಾಯಿತು. ಈ ಸೌಲಭ್ಯದಿಂದ ನಮ್ಮೂರಿನ ಸಾಕ್ಷರತೆಯ ಮಟ್ಟವೂ ಹೆಚ್ಚಿತು. 1948ಕ್ಕೂ ಮುಂಚೆ ನಮ್ಮ ಊರು ಜಮಖಂಡಿ ಪಟವರ್ಧನ ಸಂಸ್ಥಾನಕ್ಕೆ ಸೇರಿತ್ತು. 1956ಕ್ಕೂ ಮೊದಲು ವಿಜಯಪುರ, ಧಾರವಾಡ, ಬೆಳಗಾವಿ ಹಾಗೂ ಕಾರವಾರ ಮುಂಬೈ ಪ್ರಾಂತ್ಯ ದಲ್ಲಿದ್ದವು. ಬನಹಟ್ಟಿಯು ವಿಜಯ ಪುರ ಜಿಲ್ಲೆಗೆ ಆದ್ದರಿಂದ ಅದೂ ಸಹ ಮುಂಬೈ ಪ್ರಾಂತ್ಯಕ್ಕೆ ಒಳಪಡುತ್ತಿತ್ತು. ಹೀಗಾಗಿ ನಮ್ಮ ಭಾಗದಲ್ಲಿ ಆಗೆಲ್ಲ ಮರಾಠಿ ಆಡಳಿತವೇ ಇತ್ತು. ಆದರೂ ಕನ್ನಡಿಗರು ಹಾಗೂ ಕನ್ನಡಕ್ಕೇನೂ ತೊಂದರೆ ಇರಲಿಲ್ಲ. ಕನ್ನಡ ಶಾಲೆಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದವು. ಊರಿಗೊಂದು ಸರಕಾರಿ ಆಸ್ಪತ್ರೆಯಿತ್ತು. ಸಿಬ್ಬಂದಿ ಕಡಿಮೆ ಇದ್ದರೂ ಸೇವಾ ಮನೋ ಭಾವ ಇತ್ತು. ಆಸ್ಪತ್ರೆ-ಔಷಧಿಗಳ ಖರ್ಚೂ ಕಡಿಮೆ. ಸಣ್ಣ-ಪುಟ್ಟ ಕಾಯಿಲೆಕಸಾಲೆಗಳಿಗೆ ಜನ ಇದನ್ನೇ ಅವಲಂಬಿಸಿದ್ದರು. ಏನಾದರೂ ದೊಡ್ಡ ಆರೋಗ್ಯ ಸಮಸ್ಯೆ ಎದುರಾದರೆ ಮೀರಜ್‌ಗೆ ಹೋಗಬೇಕಿತ್ತು. ಅಲ್ಲಿಂದ ೮೦ ಕಿಲೊಮೀಟರ್ ದೂರವಿದೆ ಮೀರಜ್. ಆಗ ಇದು ಬಹುದೊಡ್ಡ ಅಂತರ ಎನಿಸುತ್ತಿತ್ತು. ಶ್ರೀಮಂತರು ಮಾತ್ರ ಮೀರಜ್ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಬಡವರಿಗೆ ಒಂದು ವೇಳೆ ಅಲ್ಲಿ ಹೋಗಿ ತೋರಿಸಿ ಕೊಳ್ಳಬೇಕಾದ ಸ್ಥಿತಿ ಬಂದಲ್ಲಿ, ಬಹಳೇ ತ್ರಾಸದಾಯಕವಾಗುತ್ತಿತ್ತು. ನಮ್ಮೂರಿನ ಮುಖ್ಯ ದೇವರು ಕಾಡಸಿದ್ದೇಶ್ವರ. ಅದಲ್ಲದೇ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಮಹಾದೇವ ದೇವಾಲಯ, ಗಣೇಶನ ಗುಡಿ, ಶ್ರೀ ಶಂಕರಲಿಂಗ ಗುಡಿ, ಹನುಮಾನ ಗುಡಿ ಹೀಗೆ ಸುಮಾರು ೧೦ ಗುಡಿಗಳಿದ್ದವು. ಬನಹಟ್ಟಿಯಲ್ಲಿ ಪ್ರತಿ ವರ್ಷವು ಭಾದ್ರಪದ ಮಾಸದಲ್ಲಿ ಕಾಡಸಿದ್ದೇಶ್ವರ ದೇವರ ತೇರನ್ನು ಬಹು ವಿಜೃಂಭಣೆಯಿಂದ ಪಟಾಕಿಗಳನ್ನು ಹಾರಿಸುತ್ತ ಏಳೆಯಲಾಗುತ್ತದೆ. ವೀರಭದ್ರ ದೇವರ ಗುಡಿ ಕಿಚ್ಚು ಹಾಯುವುದು ಮತ್ತು ಹನುಮಾನ ಗುಡಿ ಓಕಳಿ ಆಡಲು ಹೆಸರುವಾಸಿಯಾಗಿದ್ದವು. ಹುಡುಗರಾಗಿದ್ದ ನಮಗೆಲ್ಲಾ ಆ ಓಕುಳಿಯಾಟ, ಕಿಚ್ಚು ಹಾಯುವುದನ್ನು ನೋಡುವುದು, ಜಾತ್ರೆಗಳೆಲ್ಲ ರೋಮಾಂಚನ ಹುಟ್ಟಿಸುತ್ತಿದ್ದವು. ಜಾತ್ರೆ ಬರುವ ತಿಂಗಳ ಮುಂಚೆಯೇ ನಮ್ಮ ಮನಸ್ಸುಗಳು ಜಾತ್ರೆಯ ಸಡಗರಕ್ಕೆ ಸಿದ್ಧಗೊಳ್ಳುತ್ತಿದ್ದವು. ಭಾವಕ್ಯತೆಯ ಸಂಕೇತ ಜಾತ್ರೆಯ ಸಮಯದಲ್ಲಿ ನಮ್ಮೂರಲ್ಲಿ ಕುಸ್ತಿ ಪಂದ್ಯ ನಡೆಯುತ್ತಿತ್ತು. ಅದನ್ನು ನೋಡುವುದೇ ಒಂದು ರೀತಿಯ ಪುಳಕ. ಸಾಂಗ್ಲಿ, ಕೊಲ್ಲಾಪುರ, ತಾಸಗಾಂವಿಯಿಂದ ದೊಡ್ಡ ದೊಡ್ಡ ಪೈಲ್ವಾನರು ಕುಸ್ತಿಯಾಡಲು ಇಲ್ಲಿಗೆ ಬರುತ್ತಿದ್ದರು. ಇದೇ ಸಮಯದಲ್ಲಿ ನಾಟಕ-ಬಯಲಾಟಗಳ ಸುಗ್ಗಿಯೂ ಏರ್ಪಡುತ್ತಿತ್ತು. ಕೆಲವು ನಾಟಕಗಳು, ಕೆಲವು ಪಾತ್ರಗಳು ಇಂದಿಗೂ ನನಗೆ ನೆನಪಿವೆ. ಜಮಖಂಡಿಯ ಅಪ್ಪಾಲಾಲ್ ಎನ್ನುವವರು ‘ಶ್ರೀ ಕಷ್ಣ ಪಾರಿಜಾತ’ ಬಯಲಾಟಕ್ಕೆ ಹೆಸರಾಗಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಅಪ್ಪಾಲಾಲ್ ಶ್ರೀಕೃಷ್ಣನ ಪೋಷಾಕಿನಲ್ಲಿ ಬಂದು ನಿಂತರೆ ನೋಡುವವರೆಲ್ಲಾ ಕೈಮುಗಿಯುತ್ತಿದ್ದರು. ವರ್ಷಕ್ಕೊಮ್ಮೆ ಅವರ ಕಂಪನಿ ನಮ್ಮೂರಲ್ಲಿ ಕ್ಯಾಂಪ್ ಹಾಕುತ್ತಿತ್ತು. ರಾತ್ರಿ ಹತ್ತಕ್ಕೆ ಆರಂಭವಾಗುತ್ತಿದ್ದ ಆಟ ಬೆಳಿಗ್ಗೆ ೬ಕ್ಕೆಲ್ಲಾ ಮುಗಿಯುತ್ತಿತ್ತು. ರಾತ್ರಿ ಇಡೀ ನಿದ್ದೆಯನ್ನು ತಡೆಯುವುದು ಹರಸಾಹಸ. ಒಮ್ಮೊಮ್ಮೆ ಆಟ ಆರಂಭವಾಗುತ್ತಿದ್ದಂತೆ ನಿದ್ರೆ ಆವರಿಸಿ ಬಿಡೋದು. ಬೆಳಿಗ್ಗೆದ್ದರೆ ತೀರದ ಹಳಹಳಿ. ಮತ್ತೆ ಆಟ ನೋಡಲು ವರ್ಷ ಕಾಯಬೇಕಿತ್ತು. ಎಷ್ಟು ಬಾರಿ ನೋಡಿದರೂ ಪ್ರತಿ ವರ್ಷ ಮತ್ತೂ ಅದೇ ಉತ್ಸಾಹ ಮೈದುಂಬುತ್ತಿತ್ತು. ವೇದಿಕೆಯ ಮೇಲೆ ಆನೆ ಪಕ್ಕದ ರಬಕವಿಗೆ ಗುಬ್ಬಿ ಕಂಪನಿ, ಹಿರಣ್ಣಯ್ಯ ಮಿತ್ರ ಮಂಡಲಿಗಳು ಕ್ಯಾಂಪ್ ಹಾಕುತ್ತಿದ್ದವು. “ಕುರುಕ್ಷೇತ್ರ" ನಾಟಕದಲ್ಲಿ ಜೀವಂತ ಆನೆ, ಕುದುರೆ ಬರುತ್ತಿದ್ದವು. ನಮ್ಮ ಪಾಲಿಗೆ ಅದೊಂದು ಬಹುದೊಡ್ಡ ಅಚ್ಚರಿ. ನಮ್ಮೂರು ಶಿಕ್ಷಣಕ್ಕೂ ಮುಂದಿತ್ತು, ದುಡಿಮೆಗೂ ಮುಂದಿತ್ತು. ಕಲೆ-ಸಾಂಸ್ಕೃತಿಕ ಅಭಿರುಚಿಗಳಲ್ಲೂ ಎತ್ತಿದ ಕೈ. ಹಾಗೆಯೇ ಧಾರ್ಮಿಕ ಪ್ರಜ್ಞೆ ಜೋರಾಗಿದ್ದ ಊರು ನನ್ನದು. ಜನರಿಗೆ ದೈವಭಕ್ತಿ ಹೆಚ್ಚು. ಆಗಸ್ಟ್ ತಿಂಗಳು ಬಂತೆಂದರೆ ಸಾಕು. ಊರೆಲ್ಲಾ ಶ್ರಾವಣದ ಕಳೆ ತುಂಬುತ್ತಿತ್ತು. ಎಲ್ಲ ಮನೆಗಳಲ್ಲೂ ಪೂಜೆ. ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ... ದಿನಕ್ಕೊಂದು ವಿಶೇಷ. ಮನೆಗಳಲ್ಲೂ, ಗುಡಿಗಳಲ್ಲೂ ಸಂಭ್ರಮ. ಊರಿನಲ್ಲಿ ದಿನಕ್ಕೊಂದು ಪ್ರವಚನ ಇದ್ದುದೇ. ಅಮ್ಮ ಪ್ರವಚನ ತಪ್ಪಿಸಿಕೊಳ್ಳುತ್ತಿರಲಿಲ್ಲ. ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದಳು. ತಿಂಗಳ ಪೂರ್ತಿ ಊರಲ್ಲಿ ಪ್ರವಚನ ನಡೆಯುತ್ತಿತ್ತು. ನಾನೂ ತಾಯಿಯ ಜೊತೆ ಹೋಗಿ, ಪ್ರವಚನ ಕೇಳುತ್ತಿದ್ದೆ. ಮಕ್ಕಳಿಗೆ ಹಾಲು, ಮಜ್ಜಿಗೆ ಕೊಡುತ್ತಿದ್ದರು. ಹುರುಳಿ ಅಂಬಲಿ ಇನ್ನೊಂದು ರುಚಿಕಟ್ಟಾದ ಪೇಯ. ಹುರುಳಿಯನ್ನು ಹುರಿದು, ಪುಡಿ ಮಾಡಿ, ಅದಕ್ಕೆ ಬೆಲ್ಲ ಸೇರಿಸಿ ಅದರಿಂದ ಎರಡು ಮೂರು ದಿನಗಳಿಗೊಮ್ಮೆ ಅಂಬಲಿ ಮಾಡಿ ಗಂಗಳದಲ್ಲಿ ಹಾಕಿ ಕೊಡುತ್ತಿದ್ದರು. ಅಂಬಲಿ ಅಭ್ಯಾಸ ಇರುವ ಆ ಊರಿನವರು ಯಾರಾದರೂ ಚಹಾ ಕುಡಿಯುವ ಚಟಕ್ಕೆ ಬಿದ್ದುದನ್ನು ಕಂಡರೆ ಸಣ್ಣ ದನಿಯಲ್ಲಿ, ‘ಅವರು ಚಾ ಕುಡೀತಾರೆ’ ಎಂದು ವ್ಯಂಗ್ಯವಾಡುತ್ತಿದ್ದರು. ಗಣೇಶನ ಹಬ್ಬ, ದೀಪಾವಳಿ, ಪಂಚಮಿ ಸೇರಿದಂತೆ ಎಲ್ಲಾ ಹಬ್ಬಗಳನ್ನೂ ಎಲ್ಲಾ ಜಾತಿ-ಧರ್ಮ ದವರೂ ಸೇರಿ ಆಚರಿಸುತ್ತಿದ್ದರು. ದೀಪಾವಳಿ ಎಂದರೆ ಮೈಮನವೆಲ್ಲಾ ಅರಳುತ್ತಿತ್ತು. ಸಂಜೆ ಅತ್ತ ಸೂರ್ಯ ಕೆಂಪೇರುತ್ತಿದ್ದಂತೆ ಇತ್ತ ಪಟಾಕಿ ಸಂಭ್ರಮ ಮೊಳಗುತ್ತಿತ್ತು. ಭಾದ್ರಪದದಲ್ಲಿ ಗಣೇಶನ ಉತ್ಸವದ ಸಡಗರ ಮತ್ತೊಂದೆಡೆ. ಕನಿಷ್ಠ ಐದು ದಿನ ಸಾರ್ವಜನಿಕ ಗಣೇಶ ಇಡುತ್ತಿದ್ದರು. ನಾಡಿನ ಹಿರಿಯ ಸಂಗೀತಗಾರರು ಬಂದು ನಮ್ಮೂರಿನಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದರು. ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜ ಗುರು... ಅವರನ್ನೆಲ್ಲ ನಾವು ಪ್ರತ್ಯಕ್ಷ ಕಂಡಿದ್ದು ಆಗಲೇ ಅವರ ಸಂಗೀತವೇನೂ ಅರ್ಥವಾಗುತ್ತಿರಲಿಲ್ಲ. ಆದರೂ ಅವರು ನಮ್ಮೂರಿಗೆ ಬಂದಿದ್ದಾರೆ, ನಾವು ಅವರನ್ನು ಕಣ್ಣಾರೆ ಕಂಡಿದ್ದೇವೆ ಎನ್ನುವುದೇ ನಮಗೆ ಹೆಮ್ಮೆ. ಅಂಥವರ ಗಾನಸುಧೆಯನ್ನು ಒಂದೆಡೆ ಕುಳಿತು ಆಲಿಸುವುದೇ ಒಂದು ಭಾಗ್ಯವಾಗಿತ್ತು. ‘ಆ.....’ ಅನ್ನುವುದನ್ನೇ ಕೇಳುತ್ತ ಕೇಳುತ್ತ ಹಾಗೇ ನಿದ್ರೆಗೆ ಜಾರುತ್ತಿದ್ದುದೂ ಇತ್ತು. ದಸರಾ ವೈಭವ ಅಂದರೆ ನಮ್ಮಲ್ಲಿ ಬನ್ನಿ ಹಬ್ಬ ಅಂತಲೇ ಪರಿಚಿತ. ಅದೂ ಅಷ್ಟೇ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಹೋಳಿ ಹಬ್ಬಕ್ಕಂತೂ ಅದರದೇ ಆದ ವೈಶಿಷ್ಟ್ಯವಿತ್ತು. ಬಣ್ಣ ಆಡಿ ದಣಿದು ಕೃಷ್ಣಾ ನದಿಯಲ್ಲಿ ಜಿಗಿಯುತ್ತಿದ್ದೆವು. ಸುತ್ತಮುತ್ತಲಿನ ಊರುಗಳ ಹುಡುಗರೆಲ್ಲಾ ಹೀಗೆ ಬಣ್ಣ ಆಡಿ ನದಿಗೆ ಜಿಗಿದರೆ ಏನಾಗಬಾರದು! ತಿಳಿ ನೀರೆಲ್ಲಾ ಸಂಜೆಯ ಹೊತ್ತಿಗೆ ಕೆಂಪು, ಹಸಿರು ಬಣ್ಣಗಳಿಂದ ವಿಚಿತ್ರವಾಗಿ ಹರಿಯುತ್ತಿತ್ತು. ಊರಲ್ಲಿ ಎರಡು ದೈವಮಂಡಳಿದ್ದವು- ಸೋಮವಾರಪೇಟೆ ಮತ್ತು ಮಂಗಳವಾರ ಪೇಟೆ. ಪ್ರತಿ ಮಂಗಳವಾರ ಸಂತೆ ನಡೆಯುತ್ತಿತ್ತು. ಸುತ್ತ ಮುತ್ತಲಿನ ಊರುಗಳಿಂದ ಕೃಷಿ ಉತ್ಪನ್ನಗಳನ್ನು, ದನಕರುಗಳನ್ನು, ಕಾಳು-ಕಡಿ-ಕಾಯಿಪಲ್ಲೆಯನ್ನು ಅಲ್ಲಿಗೆ ತಂದು ಮಾರುತ್ತಿದ್ದರು. ಎರಡು ಸಿನಿಮಾ ಥಿಯೇಟರ್‌ಗಳು ಇದ್ದವು. ಅಮ್ಮನೊಂದಿಗೆ ‘ಭೂ ಕೈಲಾಸ’ ಸಿನಿಮಾ ನೋಡಲು ಹೋದ ನೆನಪು ಇಂದಿಗೂ ಮನದಾಳದಲ್ಲಿ ಅಚ್ಚಳಿಯದೇ ಉಳಿದಿದೆ. 1952ರಲ್ಲಿ ಬನಹಟ್ಟಿ ಮತ್ತು ರಬಕವಿ ಪುರಸಭೆಗಳು ಒಂದು ಪುರಸಭೆಯಾಗಿ ವಿಲೀನಗೊಂಡವು. ಸ್ವಾತಂತ್ರ್ಯಾನಂತರ ನಾಲ್ಕೂ ಊರು ಗಳು ಕೂಡಿ ಒಂದು ನಗರಸಭೆಯಾಯಿತು. ಬನಹಟ್ಟಿ, ರಬಕವಿ, ರಾಮಪುರ ಮತ್ತು ಹೊಸೂರು ಊರುಗಳನ್ನು ಒಳಗೊಂಡ ಒಂದು ಪುರಸಭೆಯಾಗಿದೆ. ನಮ್ಮೂರಲ್ಲೂ ಜಾತಿ ಪದ್ಧತಿ ಇತ್ತು. ಆದರೆ ಮೇಲ್ಜಾತಿ ಕೆಳಜಾತಿಯವರ ನಡುವೆ ಕಂದಕಗಳಿರಲಿಲ್ಲ. ಮನಸು ಗಳು ನಿರ್ಮಲವಾಗಿದ್ದ ಕಾಲ. ನಾನು ಬನಹಟ್ಟಿಯನ್ನು ಕಂಡಿದ್ದು 1954ರ ನಂತರ. ಬನಹಟ್ಟಿ ನನ್ನ ಭಾವಕೋಶದೊಳಗೆ ಇಳಿಯಲು ಆರಂಭಿಸಿದ್ದು 1957ರ ನಂತರ. ಸುಮಾರು ಆರೂವರೆ ದಶಕಗಳೇ ಕಳೆದು ಹೋದುವು. ಆ ಬನಹಟ್ಟಿಯೂ ಹಾಗೇ ಉಳಿದಿಲ್ಲ, ಈ ಬದುಕೂ ಕೂಡ. ನಮ್ಮಿಬ್ಬರ ನಡುವಿನ ಬಾಂಧವ್ಯ ಮಾತ್ರ ಹಾಗೇ ಉಳಿದಿದೆ. ದಿನದಿಂದ ದಿನಕ್ಕೆ ಗಟ್ಟಿಗೊಳ್ಳುತ್ತ ಸಾಗಿದೆ. (ಮುಂದುವರಿಯುವುದು) ಪ್ರತಿಕ್ರಿಯಿಸಿ : viramapost@gmail.com
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ