ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಪೊಲೀಸರು, ವೈದ್ಯರು, ಆಶಾ ಕಾರ್ಯಕರ್ತೆ ಯಂತೆ ಕರೋನಾ ವಿರುದ್ಧ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿರುವ ವೀರ ಸೈನಿಕರಿವರು. ಸದಾ ಜೀವ ಕೈಯಲ್ಲಿ ಹಿಡಿದು ಕರೋನಾ ಸೋಂಕಿತರನ್ನು ಒಂದೆಡೆಯೆಂದ ಇನ್ನೊಂದೆಡೆಗೆ ಸಾಗಿಸುವ 108 ಚಾಲಕರಿವರು.
ಕರೋನಾ ಅಬ್ಬರ ಪ್ರಾರಂಭವಾದ ದಿನದಿಂದ ಇಂದಿನವರೆಗೆ ಕ್ವಾರಂಟೈನ್ ಇದ್ದವರನ್ನು ಹುಡುಕಿ ಆಸ್ಪತ್ರೆಗೆ ಕರೆತರುವುದು, ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಪಾಸಿಟಿವ್ ಇರುವ ರೋಗಿಗಳನ್ನು ಶಿಫ್ಟ್ ಮಾಡೋ ಸೇನಾನಿಗಳಿವರು.
ಸಮಾಜಕ್ಕಾಗಿ ತಮ್ಮನ್ನು ತೊಡಗಿಸಿಕೊಂಡು ಭಯ, ಆತಂಕ, ಸಮಸ್ಯೆ, ಧೈರ್ಯ, ಕಾಳಜಿ ಎಲ್ಲವನ್ನೂ ಮರೆತು ಸೇವೆ ನಡೆಸುತ್ತಿದ್ದಾರೆ.
ಮಾರ್ಚ್ 13ರಿಂದ 24 ಗಂಟೆಗಳ ಡ್ಯೂಟಿ ಮಾಡುತ್ತಿದ್ದಾರೆ 108 ಸಿಬ್ಬಂದಿ. ನಾಲ್ಕು ದಿನಗಳಿಗೆ ಒಮ್ಮೆ ವೀಕ್ ಆಪ್ ದೊರೆಯುತ್ತದೆ. ಅಲ್ಲಿಯವರೆಗೂ ಬಿಡುವಿಲ್ಲದ ಕೆಲಸ ಇವರದ್ದು. ಈ 108 ಆಂಬ್ಯುಲೆನ್ಸ್ ಗಳಲ್ಲೂ ವಿಶೇಷ ಈ ವಾಹನ. ರಾಜ್ಯದಲ್ಲಿ ಇದುವರಗೆ ಅತಿ ಹೆಚ್ಚು ಕೋವಿದ್ 19 ಸೋಂಕಿತ-ಶಂಕಿತರನ್ನು ಶಿಫ್ಟ್ ಮಾಡಿರುವ 108 ಆಂಬ್ಯುಲೆನ್ಸ್ ಇದಾಗಿದೆ.
KA51 G 5249 ಸಂಖ್ಯೆಯ ವೆಂಟಿಲೇಟರ್ ಇರುವ ಈ ಆಂಬ್ಯುಲೆನ್ಸ್ ನಲ್ಲಿ ಅನೇಕ ಕ್ರಿಟಿಕಲ್ ರೋಗಿಗಳು ಪ್ರಯಾಣಿಸಿದ್ದಾರೆ.
ಮಾರ್ಚ್ 13 ರಿಂದ ಇಂದಿನವರಗೆ 125 ಸೋಂಕಿತ-ಶಂಕಿತರನ್ನು ಶಿಫ್ಟ್ ಮಾಡಲಾಗಿದೆ.
ಇಎಂಟಿ ಮಂಜುನಾಥ್, ಪೈಲಟ್ ಸಿದ್ದೇಶ್ ಒಳಗೊಂಡ ತಂಡಕ್ಕೆ ದಿನಕ್ಕೆ ಎರಡು ಬಾರಿ ಸಂಸ್ಥೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಆಂಬ್ಯುಲೆನ್ಸ್ ಸಿಬ್ಬಂಧಿ ವ್ಯಥೆ ನಿಜಕ್ಕೂ ಹೇಳ ತೀರದು. ಡ್ಯೂಟಿಗೆ ಹಾಜರಾಗಿ ಪಿಪಿಇ ಕಿಟ್ ಧರಿಸಿದಾಗ ಅನೇಕ ಬಾರಿ ಏಳೆಂಟು ಗಂಟೆಗಳವರಗೆ ತೆರೆಯುವಂತಿರುವುದಿಲ್ಲ.ಯಾಕೆಂದರೆ ವೆಂಟಿಲೇಟರ್ ಮೇಲೆ ಇರುವ ರೋಗಿಯನ್ನು ಶಿಫ್ಟ್ ಮಾಡಲು ಅಷ್ಟು ಸಮಯ ಬೇಕಾಗುತ್ತೆ.
ಆ ಸಮಯದಲ್ಲಿ ಊಟ-ತಿಂಡಿ-ನೀರು-ಮೂತ್ರ ವಿಸರ್ಜನೆ ಯಾವುದಕ್ಕೂ ಅವಕಾಶವಿಲ್ಲರುವುದಿಲ್ಲ. ಇಷ್ಟೆಲ್ಲಾ ಆದ ಮೇಲೂ ಸೋಂಕು ತಮಗೂ ತಗಲಬಹುದು ಎನ್ನುವ ಭಯ ಇವರಲ್ಲಿ ಪ್ರತೀ ಕ್ಷಣ ಇದ್ದೇ ಇರುತ್ತದೆ. ಅನೇಕ ರೋಗಿಗಳು ಮನೆಯೊಳಗೆ ಬಚ್ಚಿಟ್ಟುಕೊಂಡು ಸಮಸ್ಯೆ ತಂದೊಡ್ಡುತ್ತಾರೆ. ಹಲವರು ಇವರಿಗೆ ಬಾಯಿಗೆ ಬಂದಂತೆ ಬೈತಾರೆ. ಆಂಬ್ಯುಲೆನ್ಸ್ ಒಳಗೆ ಎಲ್ಲೆಂದರಲ್ಲಿ ಮುಟ್ಟಿರುತ್ತಾರೆ. ಫ್ಯೂಮಿಗೇಶನ್ ಮಾಡಿದ್ದರೂ ಅಪಾಯ 100% ಹೋಗಿರುವುದರ ಬಗ್ಗೆ ಖಚಿತವಿಲ್ಲ. ಆದರೂ ಎಲ್ಲರೂ ಕೊರೊನಾ ಪಿಡುಗಿಂದ ಬಚಾವಾದರೆ ಸಾಕು ಎಂಬ ಭಯದಲ್ಲಿರುತ್ತಾರೆ. ನಾಲ್ಕು ದಿನಗಳು ನಿರಂತರವಾಗಿ ಆಸ್ಪತ್ರೆ-ರೋಗಿಗಳ ಜತೆಗೆ ಓಡಾಟ ಇರುತ್ತದೆ.
…………….
ಪಿಪಿಇ ಕಿಟ್- ಫ್ಯೂಮಿಗೇಶನ್ ಕಡ್ಡಾಯ
ಪ್ರತಿಯೊಬ್ಬ ರೋಗಿಯನ್ನು ಕರೆತರುವಾಗಲೂ ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಬೇಕು. ಒಮ್ಮೆ ಒಬ್ಬ ಸೋಂಕಿತ/ಶಂಕಿತನನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರ ಪಿಪಿಇ ಕಿಟ್ ಡಿಸ್ಪೋಸ್ ಮಾಡಿ, ಆಂಬ್ಯುಲೆನ್ಸ್ ಗೂ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ದಿನಕ್ಕೆ ಕನಿಷ್ಠ 7 ಪ್ರಕರಣಗಳಾದರೂ ಇದ್ದೇ ಇರುತ್ತದೆ. ಆರಂಭದಲ್ಲಿ ದಿನಕ್ಕೆ 12-14 ಪ್ರಕರಣಗಳು ಇದ್ದಿದ್ದೂ ಇದೆ. ಪ್ರತೀ ಬಾರಿಯೂ ಪಿಪಿಇ ಕಿಟ್- ಫ್ಯೂಮಿಗೇಶನ್ ಕಡ್ಡಾಯವಾಗಿರುತ್ತದೆ. ಆರಂಭದಲ್ಲಿ ರೋಗಿಗಳನ್ನು ಕರೆದೊಯ್ಯುವಾಗ ಆತಂಕಪಡುತ್ತಿದ್ದ ಸಿಬ್ಬಂಧಿ, ಹಿರಿಯ ಅಧಿಕಾರಿಗಳ ಮಾತುಗಳಿಂದ ಧೈರ್ಯ, ಈಗ ಅಭ್ಯಾಸವಾಗಿದೆ ಎನ್ನುತ್ತಾರೆ 108 ಚಾಲಕ-ತಂತ್ರಜ್ಞರು.