ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr M S DurgaPraveen Column: ಉಕ್ರೇನ್‌ ಮತ್ತು ರಷ್ಯಾ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಯೆಂದು ?

ಚರಿತ್ರೆಯನ್ನು ಅವಲೋಕಿಸಿದರೆ ಉಕ್ರೇನ್, ರಷ್ಯಾ ನಡುವಿನ ಶತಮಾನಗಳ ಸಾಂಸ್ಕೃತಿಕ, ರಾಜಕೀಯ ಸಂಬಂಧಗಳೂ, ಭೇದಗಳೂ, ಹಿಂಸೆಯಿಂದ ಕೂಡಿದ ಘಟನಾವಳಿಗಳೂ ಕಂಡು ಬರುತ್ತವೆ. ಉಕ್ರೇನ್ 18-19ನೇ ಶತಮಾನದಲ್ಲಿ ರಷ್ಯಾ ಸಾಮ್ರಾಜ್ಯದ ಭಾಗವಾಯಿತು. ‘ರಷ್ಯನೀಕರಣ’ದ ಫಲವಾಗಿ ಉಕ್ರೇನ್‌ನ ಭಾಷೆ, ಸಂಸ್ಕೃತಿಗಳು ದಮನಕ್ಕೊಳಗಾದವು. ರಷ್ಯಾ ಕ್ರಾಂತಿಯ ನಂತರ 1917-1920ರ ಅಲ್ಪಾವಧಿಯಲ್ಲಿ ಉಕ್ರೇನ್ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು.

ಉಕ್ರೇನ್‌ ಮತ್ತು ರಷ್ಯಾ ನಡುವಿನ ಹಗ್ಗಜಗ್ಗಾಟಕ್ಕೆ ಕೊನೆಯೆಂದು ?

Profile Ashok Nayak Jul 7, 2025 9:07 AM

ಸಂಘರ್ಷವರ್ಷ

ಡಾ.ಎಂ.ಎಸ್.ದುರ್ಗಾಪ್ರವೀಣ

ಎರಡು ದೇಶಗಳ ನಡುವಿನ ಘರ್ಷಣೆಗೆ, ಅದರಲ್ಲೂ ಸಶಸ್ತ್ರ ಸಮರಕ್ಕೆ ಕಾರಣಗಳನ್ನು ಕೇವಲ ವರ್ತಮಾನದಲ್ಲಿ ನೋಡುವಂತಿಲ್ಲ, ಚರಿತ್ರೆಯತ್ತಲೂ ಸಾಗಬೇಕಾಗುತ್ತದೆ. ಇದು ಪ್ರಸ್ತುತ ಭೀಕರ ಯುದ್ಧದಲ್ಲಿ ತೊಡಗಿರುವ ಉಕ್ರೇನ್, ರಷ್ಯಾ ವಿಚಾರದಲ್ಲೂ ನಿಜ. 24 ಫೆಬ್ರವರಿ 2022ರಂದು ಉಕ್ರೇನ್‌ನ ಮೇಲೆ ರಷ್ಯಾ ದೊಡ್ಡ ಪ್ರಮಾಣದಲ್ಲಿ ಸೈನಿಕ ದಾಳಿಯನ್ನು ಪ್ರಾರಂಭಿಸುವುದರೊಂದಿಗೆ ಆ ಎರಡು ದೇಶಗಳ ನಡುವಿನ ಘರ್ಷಣೆ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿತು.

ಇದಕ್ಕೂ ಮೊದಲು 2021ರ ಅಂತ್ಯ 2022ರ ಪ್ರಾರಂಭದ ವೇಳೆಗೆ ರಷ್ಯಾವು ಪ್ರಶಿಕ್ಷಣದ ಹೆಸರಿನಲ್ಲಿ ಕ್ರೇನ್ ಸರಹದ್ದಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಸೇರಿಸಿಬಿಟ್ಟಿತ್ತು. 21 ಫೆಬ್ರವರಿ 2022ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾಷಣವೊಂದರಲ್ಲಿ ಉಕ್ರೇನ್ ಅನ್ನು ಸ್ವತಂತ್ರ ದೇಶವಾಗಿ ಗುರುತಿಸುವುದನ್ನು ತಿರಸ್ಕರಿಸಿದರು.

ಅದು ಸೋವಿಯತ್ ಒಕ್ಕೂಟದ ಸೃಷ್ಟಿಯೆಂದೂ, ಪಶ್ಚಿಮ ದೇಶಗಳು ಉಕ್ರೇನ್ ಅನ್ನು ರಷ್ಯಾದ ವಿರುದ್ಧ ಯುದ್ಧಕ್ಕೆ ಪ್ರಚೋದಿಸುತ್ತಿವೆಯೆಂದೂ ಆರೋಪಿಸಿದರು. ಪೂರ್ವ ಉಕ್ರೇನ್‌ನಲ್ಲಿರುವ ರಷ್ಯಾ ಬೆಂಬಲ ಹೊಂದಿರುವ ಸ್ವಯಂಘೋಷಿತ ಪ್ರಾಂತ್ಯಗಳಾದ ಡೊನೆಟ್ಸ್‌ಕ್, ಲೂಹಾನ್‌ಸ್ಕ್‌ ಗಳನ್ನು ಸ್ವತಂತ್ರ ದೇಶಗಳಾಗಿ ಗುರುತಿಸುವುದಾಗಿ ಅದೇ ಭಾಷಣದಲ್ಲಿ ಪುಟಿನ್ ಪ್ರಕಟಿಸಿದರು.

ಇದನ್ನೂ ಓದಿ: Hari Paraak Column: ಡಿಕ್ಷನರಿ - ಅರ್ಥಶಾಸ್ತ್ರ

ಅದಾಗಿ ಮೂರು ದಿನಗಳ ನಂತರ, ಫೆಬ್ರವರಿ 24ರಂದು ಉಕ್ರೇನ್ ಮೇಲೆ ಪ್ರತ್ಯೇಕ ಸೈನಿಕ ಕಾರ್ಯಾ ಚರಣೆಗೆ ಪುಟಿನ್ ಆದೇಶಿಸಿದರು. ರಷ್ಯಾ ಸೈನ್ಯವು ರಷ್ಯಾ, ಬೆಲಾರಸ್ ಆಕ್ರಮಿತ ಕ್ರಿಮಿಯಾದಿಂದ ಉಕ್ರೇನ್ ಮೇಲೆ ಹಲವು ದಿಕ್ಕುಗಳಿಂದ ದಾಳಿ ನಡೆಸಿತು. ಕೇಪ್, ಖಾರ್ಕಿವ್, ಡಾನ್‌ಬಾಸ್ ಪ್ರಾಂತ್ಯ ಗಳ ಮುಖ್ಯ ಪಟ್ಟಣಗಳನ್ನು ಇದು ಗುರಿಯಾಗಿರಿಸಿಕೊಂಡಿತ್ತು.

ಈ ದಾಳಿಯು 2014ರಿಂದ ನಡೆಯುತ್ತಿರುವ ಘರ್ಷಣೆಯನ್ನು ತೀವ್ರವಾಗಿಸಿತು. ನ್ಯಾಟೋ ಯುರೋಪಿಯನ್ ಒಕ್ಕೂಟದೊಂದಿಗೆ ಉಕ್ರೇನ್ ಸಾಮಿಪ್ಯ ಹೊಂದುವುದನ್ನು ತಡೆಯುವ, ಆ ದೇಶದ ಮೇಲೆ ರಷ್ಯಾ ನಿಯಂತ್ರಣವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಾಪಿಸುವ ಭೂರಾಜಕೀಯ ಉದ್ದೇಶಗಳು ಆ ದಾಳಿಯ ಹಿಂದಿವೆ.

ಉಕ್ರೇನ್‌ನಂಥ ಪುಟ್ಟ ದೇಶವೊಂದು ಬಲಿಷ್ಠ ದೇಶದೊಂದಿಗೆ ಸಂಘರ್ಷಕ್ಕಿಳಿಯುವಲ್ಲಿ (ಅದು ಅಮೆರಿಕ, ಐರೋಪ್ಯ ದೇಶಗಳ ಬೆಂಬಲದೊಂದಿಗೇ ಆಗಿದ್ದರೂ) ಆ ದೇಶದ ಪ್ರಜೆಗಳಿಂದಲಾಗಲೀ, ಮೇಧಾವಿಗಳಿಂದಲಾಗಲೀ ಪ್ರತಿರೋಧವು ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಬಲವಾದ ಕಾರಣಗಳಿವೆ.

ಚರಿತ್ರೆಯನ್ನು ಅವಲೋಕಿಸಿದರೆ ಉಕ್ರೇನ್, ರಷ್ಯಾ ನಡುವಿನ ಶತಮಾನಗಳ ಸಾಂಸ್ಕೃತಿಕ, ರಾಜಕೀಯ ಸಂಬಂಧಗಳೂ, ಭೇದಗಳೂ, ಹಿಂಸೆಯಿಂದ ಕೂಡಿದ ಘಟನಾವಳಿಗಳೂ ಕಂಡು ಬರುತ್ತವೆ. ಉಕ್ರೇನ್ 18-19ನೇ ಶತಮಾನದಲ್ಲಿ ರಷ್ಯಾ ಸಾಮ್ರಾಜ್ಯದ ಭಾಗವಾಯಿತು. ‘ರಷ್ಯನೀ ಕರಣ’ದ ಫಲವಾಗಿ ಉಕ್ರೇನ್‌ನ ಭಾಷೆ, ಸಂಸ್ಕೃತಿಗಳು ದಮನಕ್ಕೊಳಗಾದವು. ರಷ್ಯಾ ಕ್ರಾಂತಿಯ ನಂತರ 1917-1920ರ ಅಲ್ಪಾವಧಿಯಲ್ಲಿ ಉಕ್ರೇನ್ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು.

ಆದರೆ ಬಳಿಕ ಸೋವಿಯತ್ ಒಕ್ಕೂಟದಲ್ಲಿ ಇದನ್ನು ಬಲವಂತವಾಗಿ ಸೇರಿಸಲಾಯಿತು. ಜೋಸೆಫ್ ಸ್ಟಾಲಿನ್ (1924-53) ಕಾಲದಲ್ಲಿ ಉಕ್ರೇನ್ ಮೇಲೆ ಕಠಿಣಕ್ರಮಗಳನ್ನು ಹೇರಲಾಯಿತು. ಜಾರ್ ಚಕ್ರವರ್ತಿಗಳಂತೆ ಸ್ಟಾಲಿನ್ ಕೂಡ ಸದಾ ಉಕ್ರೇನ್ ಅನ್ನು ಸೋವಿಯತ್ ನಿಯಂತ್ರಣದಲ್ಲಿರಿಸಲು, ‘ರಷ್ಯನೀಕರಣ’ವನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದ್ದ. ಉಕ್ರೇನ್‌ನ ಸಂಸ್ಕೃತಿ, ಭಾಷೆ, ಸ್ಥಳೀಯ ಅನನ್ಯತೆಗಳನ್ನು ದಮನಿಸಲಾಯಿತು. ‌

ಹಿಂದಿನಿಂದಲೂ ಉಕ್ರೇನ್‌ನ ಪ್ರಜೆಗಳಲ್ಲಿ ರಾಷ್ಟ್ರೀಯವಾದದ ಚೈತನ್ಯವು ಬಲವಾಗಿದ್ದಿತು. ಈ ವಿಚಾರವನ್ನು ಪುಷ್ಟೀಕರಿಸುತ್ತಾ ಅನ್ನೆ ಆಪಲ್‌ಬಾಮ್ ಎಂಬ ಪೊಲಿಷ್-ಅಮೆರಿಕನ್ ಪತ್ರಕರ್ತೆ, ಚರಿತ್ರೆಕಾರ್ತಿ ತನ್ನ Red Famine: Stalin's War on Ukraine ಎಂಬ ಕೃತಿಯಲ್ಲಿ ಕವಿತೆಯೊಂದನ್ನು ಉಲ್ಲೇಖಿಸುತ್ತಾರೆ: “ನಾನು ಸತ್ತಾಗ / ನನ್ನ ಪ್ರೀತಿಯ ಉಕ್ರೇನ್‌ನಲ್ಲಿ ನನ್ನ ಹೂತುಬಿಡಿ / ಒಂದು ಎತ್ತರದ ಸಮಾಧಿ / ವಿಶಾಲವಾದ ಮಟ್ಟಸ ಭೂಮಿಯಲ್ಲಿ / ಅಲ್ಲಿ ನನ್ನ ಕಂಗಳು ನೋಡಬಲ್ಲವು, ಕಿವಿಗಳು ಕೇಳಬಲ್ಲವು / ವಿಶಾಲವಾದ ಹೊಲಗಳನ್ನು, ಅಪಾರವಾದ ಹಸಿರು ಬಯಲನ್ನು / ಡ್ನೀಪರ್ ನದಿ ದಂಡೆಯನ್ನು / ಘರ್ಜಿಸುವ ಶಕ್ತಿಯುತ ನದಿ ಸದ್ದನ್ನು".

1920ರ ಕೊನೆಯ ವೇಳೆಗೆ ಸ್ಟಾಲಿನ್‌ನ ಸಾಮೂಹಿಕ ಕೃಷಿ ವಿಧಾನವು ಜಾರಿಗೆ ಬಂದಿತು. ರೈತರು ತಮ್ಮ ಸ್ವಂತ ಭೂಮಿಯನ್ನು ಬಿಟ್ಟುಕೊಟ್ಟು ಸೋವಿಯತ್ ನಿಯಂತ್ರಿತ ಸಾಮೂಹಿಕ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಯಿತು. ಇದನ್ನು ವಿರೋಧಿಸಿದ ರೈತರನ್ನು, ಮುಖ್ಯವಾಗಿ ಕುಲಕ್ ಎಂದು ಕರೆಯಲಾಗುತ್ತಿದ್ದ ಸಂಪದ್ಭರಿತ ರೈತರನ್ನು ವರ್ಗಶತ್ರುಗಳಾಗಿ ಚಿತ್ರಿಸಿ, ಅವರ ಭೂಸಂಪ ತ್ತನ್ನು ಸ್ವಾಧೀನ ಮಾಡಿಕೊಳ್ಳಲಾಯಿತು.

ಸಾವಿರಾರು ರೈತರನ್ನು ಸೈಬೀರಿಯಾಕ್ಕೆ ಕಳಿಸಲಾಯಿತು. ಮೇಧಾವಿಗಳು, ಸಾಹಿತಿಗಳು, ಸಾಮೂಹಿಕ ಕೃಷಿ ಕ್ಷೇತ್ರವನ್ನು ವಿರೋಧಿಸಿದ ರಾಜಕೀಯ ನಾಯಕರನ್ನು ವಿರೋಧಿಗಳೆಂದು ಗುರುತಿಸಿ ಬಂಧಿಸ ಲಾಯಿತು. ಹಲವಾರು ಜನರನ್ನು ಹತ್ಯೆಗೈಯಲಾಯಿತು. ಸೋವಿಯತ್ ಒಕ್ಕೂಟದವರ ‘ಕಾರ್ಮಿಕೀ ಕರಣ’ಕ್ಕೆ ನಿಧಿ ಸಂಗ್ರಹಿಸಲು ಉಕ್ರೇನ್‌ನಿಂದಲೇ ಅಪಾರ ಪ್ರಮಾಣದ ಧಾನ್ಯವನ್ನು ಶೇಖರಿಸ ಲಾಯಿತು.

ಇದರಿಂದಾಗಿ ಸ್ಥಳೀಯ ರೈತರಿಗೆ ಆಹಾರ ಕೊರತೆ ಉಂಟಾಯಿತು. 1932-33ರ ವೇಳೆಗೆ ಸ್ಟಾಲಿನ್ ಪದ್ಧತಿಯ ಫಲಿತವಾಗಿ ಉಕ್ರೇನ್‌ನಲ್ಲಿ Holodomor ಎಂಬ ಭೀಕರವಾದ ಕೃತಕ ಕ್ಷಾಮ ಉಂಟಾ ಯಿತು. ಹೊಲೊಡೊಮೊರ್ ಎಂಬ ಪದಕ್ಕೆ ಉಕ್ರೇನ್ ಭಾಷೆಯಲ್ಲಿ ಹಸಿವಿನಿಂದ ಸಾವು ( Death by hunger) ಎಂಬ ಅರ್ಥವಿದೆ. ಈ ಮಹಾಕ್ಷಾಮದಲ್ಲಿ ಸುಮಾರು 35 ರಿಂದ 50 ಲಕ್ಷ ಪ್ರಜೆಗಳು ಪ್ರಾಣ ಕಳೆದುಕೊಂಡರು.

ಇದು ಸಹಜವಾದ ವಿಪತ್ತಾಗಿರದೇ ಜೋಸೆಫ್ ಸ್ಟಾಲಿನ್ ನೇತೃತ್ವದ ಸೋವಿಯತ್ ಪರಿಪಾಲಕರ ನೀತಿಗಳ ಫಲಿತವಾಗಿ ಸೃಷ್ಟಿಯಾದ ವಿಪತ್ತು ಎಂದು ಚರಿತ್ರೆ ಗುರುತಿಸಿದೆ. ಇದನ್ನು ಕೆಲವು ಚರಿತ್ರೆ ಕಾರರು genocide ಎಂದೂ ಕರೆದದ್ದಿದೆ. ಸ್ಟಾಲಿನ್ ತಂದ ಸಾಮೂಹಿಕ ಕೃಷಿ ವಿಧಾನ ದಿಂದಾಗಿ ಉತ್ಪತ್ತಿ ಕಡಿಮೆಯಾದಾಗ್ಯೂ ಸೋವಿಯತ್ ಅಧಿಕಾರಿಗಳು ಇನ್ನೂ ಹೆಚ್ಚಿನ ಪ್ರಮಾಣದ ಧಾನ್ಯ ಶೇಖರಣೆಯ ಗುರಿಯನ್ನು ನೀಡಿದರು. ಇದನ್ನು ಪೂರ್ಣಗೊಳಿಸಲಾಗದ ಗ್ರಾಮಗಳಿಂದ ಧಾನ್ಯ ವನ್ನೆಲ್ಲಾ ಬಲವಂತವಾಗಿ ವಶಪಡಿಸಿಕೊಂಡರು.

ರೈತರಿಗೆ ಆಹಾರವಿಲ್ಲದಂತೆ ಮಾಡಿಬಿಟ್ಟರು. ಉಕ್ರೇನ್‌ನ ಗ್ರಾಮಗಳನ್ನು ಕಪ್ಪುಪಟ್ಟಿ (Blacklist)ಗೆ ಸೇರಿಸಿ ಆಹಾರ ಸರಬರಾಜನ್ನು ನಿಷೇಧಿಸಿದರು. ಈ ಕ್ಷಾಮವು ಉಕ್ರೇನ್‌ನ ರಾಷ್ಟ್ರೀಯತೆಯನ್ನು ದಮನಿಸಲು, ಸೋವಿಯತ್ ನಿಯಂತ್ರಣವನ್ನು ಬಲಪಡಿಸಲು ಉದ್ದೇಶಪೂರ್ವಕವಾಗಿ ಬಳಕೆ ಯಾಯಿತು ಎಂದು ಚರಿತ್ರೆಕಾರರು ಅಭಿಪ್ರಾಯಪಡುತ್ತಾರೆ. ಈ ಕ್ಷಾಮದಿಂದಾಗಿ ಗ್ರಾಮಗಳು ಖಾಲಿಯಾದವು.

ಸಾವಿರಾರು ಕುಟುಂಬಗಳು ಹಸಿವಿನಿಂದ ಸಾವನ್ನಪ್ಪಿದವು. ಉಕ್ರೇನ್ ಸಮಾಜದ ಮೇಲೆ ಈ ಕ್ಷಾಮ ದೀರ್ಘಕಾಲೀನ ಪ್ರಭಾವ ಬೀರಿತು. ಉಕ್ರೇನ್‌ನಲ್ಲಿ ರಷ್ಯಾದ ಮೇಲೆ ದ್ವೇಷವೂ, ರಾಷ್ಟ್ರೀಯ ಚೈತನ್ಯ ವೂ ಬಲಗೊಂಡಿತು. ಕ್ಷಾಮದಿಂದಾಗಿ ಆಹಾರ ದೊರಕದೇ ಕೆಲವು ಉಕ್ರೇನ್ ಪ್ರಜೆಗಳು ಬದುಕಲು ನರಮಾಂಸಭಕ್ಷಣೆಗೆ (cannibalism) ಇಳಿದರು. ಹಸಿವಿನಿಂದ ಹುಚ್ಚರಾದ ವ್ಯಕ್ತಿಗಳ ಕಥನಗಳನ್ನೂ, ಹಸಿವಿನಿಂದ ಶವಗಳನ್ನು ತಿಂದ ಸಂದರ್ಭಗಳನ್ನೂ ಸೋವಿಯತ್ ಪೊಲೀಸ್ ಆರ್ಕೈವ್ಸ್ ದಾಖ ಲಿಸಿವೆ.

ಕೆಲವರು ತಮ್ಮ ಸ್ವಂತ ಮಕ್ಕಳನ್ನೇ ತಿಂದ ಸಂದರ್ಭಗಳೂ ಇವೆ! ತಮ್ಮನ್ನು ತಿಂದುಬಿಡುತ್ತಾರೆಂದು ಮಕ್ಕಳು ತಂದೆ ತಾಯಂದಿರನ್ನು ಬಿಟ್ಟು ಓಡಿಹೋದ ಘಟನೆಗಳು ಹಲವಿವೆ. ರಾಬರ್ಟ್ ಕಾಂಕ್ವೆಸ್ಟ್‌ರ The Harvest of Sorrow: Soviet Collectivization and the Terror-Famine, ಈ ಹಿಂದೆ ಉಲ್ಲೇಖಿಸ ಲಾದ ಅನ್ನೆ ಆಪಲ್‌ಬಾಮ್‌ರ Red Famine: Stalin's War on Ukraine ಕೃತಿಗಳಲ್ಲಿ ಈ ಕೃತಕ ಕ್ಷಾಮದ ವಿಪುಲ ವಿವರಗಳಿವೆ.

1991ರಲ್ಲಿ ಸೋವಿಯತ್ ಒಕ್ಕೂಟವು ಛಿದ್ರವಾದ ಬಳಿಕ ಉಕ್ರೇನ್ ಮತ್ತೆ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು. ಆದರೆ ರಷ್ಯಾದೊಂದಿಗಿನ ಸಂಬಂಧಗಳಲ್ಲಿ ಉದ್ವಿಗ್ನತೆ ಹಾಗೇ ಮುಂದುವರಿಯುತ್ತಾ ಬಂದಿತು. ಸರಹದ್ದು, ಇಂಧನ ಇತ್ಯಾದಿ ವಿವಾದಗಳು ಪರಿಹಾರವಾಗದೇ ಹಾಗೇ ಉಳಿದುಹೋದವು. ಈ ನಡುವೆ ರಷ್ಯಾವು 24 ಫೆಬ್ರವರಿ 2022ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿಗೆ ತೊಡಗಿತು. ಈ ಯುದ್ಧದಲ್ಲಿ ಇದುವರೆಗೆ ಲಕ್ಷಾಂತರ ಪ್ರಜೆಗಳು ಮರಣ ಹೊಂದಿದ್ದಾರೆ. ಎಷ್ಟೋ ಲಕ್ಷ ಜನ ನಿರಾಶ್ರಿತರಾಗಿದ್ದಾರೆ.

ಸಂಪೂರ್ಣ ನಗರಗಳೇ ಧ್ವಂಸವಾಗಿಹೋಗಿವೆ. ರಷ್ಯಾ ಪಶ್ಚಿಮದ ದೇಶಗಳನ್ನು ದೂಷಿಸುತ್ತಿದೆ. ಉಕ್ರೇನ್, ಐರೋಪ್ಯ ಒಕ್ಕೂಟ/ನ್ಯಾಟೋದೊಂದಿಗಿನ ತನ್ನ ಸಂಬಂಧವನ್ನು ಮುಂದುವರಿಸುತ್ತಿದೆ. ಚಾರಿತ್ರಿಕ ದೃಷ್ಟಿಕೋನದಿಂದ ಪರಿಶೀಲಿಸಿದರೆ ಈ ಯುದ್ಧವೊಂದು ಆಳವಾದ ಸಮಸ್ಯೆ. ಸೋವಿ ಯತ್ ಯುಗದ ಬಳಿಕ ರೂಪುಗೊಳ್ಳುವ ರಾಜಕೀಯ ವ್ಯವಸ್ಥೆ ಹೇಗಿರಬೇಕು, ಸಮಾಜವು ಹೇಗೆ ರೂಪುಗೊಳ್ಳಬೇಕು ಎಂಬ ಅಂಶಗಳ ಮೇಲೆ ನಡೆಯುತ್ತಿರುವ ಹೋರಾಟವಿದು.

ಶೀತಲ ಸಮರದ ನಂತರದ ಕಾಲಘಟ್ಟದಲ್ಲಿ ಏರ್ಪಟ್ಟ ‘ಏಕಧ್ರುವ ಪ್ರಪಂಚ ವ್ಯವಸ್ಥೆ’ಗೆ ಪುಟಿನ್ ಒಡ್ಡಿದ ಸವಾಲಿನ ಭಾಗವೇ ಈ ಯುದ್ಧ. ಹಾಗಾಗಿ ಈ ಘರ್ಷಣೆಗೆ ಪರಿಹಾರವು ಕೇವಲ ಉಕ್ರೇನ್ ಪ್ರಾಂತೀಯ ಸ್ಥಾಯಿಯಲ್ಲಿ ಸಾಧ್ಯವಾಗದು. ಅಂತಾರಾಷ್ಟ್ರೀಯ ಮಟ್ಟದ ವಿಶಾಲವಾದ ಭಿತ್ತಿಯಲ್ಲಿ ಮಾತ್ರವೇ ಇದಕ್ಕೆ ಪರಿಹಾರ ಸಾಧ್ಯವಾಗುತ್ತದೆ.

ಉಕ್ರೇನ್‌ನಲ್ಲಿ ಶಾಂತಿ ನೆಲೆಸುವುದು ಎನ್ನುವುದು ಪ್ರಪಂಚ ಮಟ್ಟದಲ್ಲಿ ಚರ್ಚೆಗೊಳಗಾಗಬೇಕಾದ ಅಂಶವಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಉಕ್ರೇನ್ ದೇಶವು ‘ನ್ಯಾಟೋ’ದ ಸದಸ್ಯ ರಾಷ್ಟ್ರವಾದರೆ ಅನಿವಾರ್ಯವಾಗಿ ಅದು ರಷ್ಯಾಕ್ಕೆ ಮಗ್ಗುಲಮುಳ್ಳಾಗಿ ಪರಿಣಮಿಸುತ್ತದೆ ಎಂಬುದು ವಾಸ್ತವ. ಅಂಥ ಪರಿಸ್ಥಿತಿಯನ್ನು ನಿವಾರಿಸಿಕೊಳ್ಳುವುದು ರಷ್ಯಾಕ್ಕೆ ಅತ್ಯಂತ ಅಗತ್ಯ.

ಅಮೆರಿಕದೊಂದಿಗೆ ಐರೋಪ್ಯ ರಾಷ್ಟ್ರಗಳೆಲ್ಲವೂ ರಷ್ಯಾಕ್ಕೆ ವಿರೋಧವಾಗಿಯೇ ಇವೆ. ಸೋವಿಯತ್ ಒಕ್ಕೂಟ ಕಾಲದ ರಷ್ಯಾದ ಚಾರಿತ್ರಿಕ ತಪ್ಪುಗಳು ಅದನ್ನು ಇಂದಿಗೂ ಬೇಟೆಯಾಡುತ್ತಿವೆ. ಐರೋಪ್ಯ ದೇಶಗಳ ಅವಕಾಶ ವಾದದೊಂದಿಗೆ, ರಷ್ಯಾದ ಚಾರಿತ್ರಿಕ ಪ್ರಮಾದಗಳೂ ಉಕ್ರೇನ್‌ಗೆ ಶಕ್ತಿಯನ್ನು ನೀಡುತ್ತಿವೆ. ಜರ್ಮನ್ ತತ್ವಶಾಸ್ತ್ರಜ್ಞ ನೀಷೆಯ When you look long into an abyss, the abyss also looks into you ಎಂಬ ಮಾತಿನಂತೆ, ಅವಕಾಶವಾದಿ ಶಕ್ತಿಗಳಿಂದ ಬರುತ್ತಿರುವ ಸಹಾಯ ದೊಂದಿಗೆ ಉಕ್ರೇನ್ ನಿಲ್ಲಬಲ್ಲುದೇ?

(ತೆಲುಗುಮೂಲ: ಪ್ರೊ. ಬಿ.ತಿರುಪತಿ ರಾವ್)

(ಲೇಖಕರು ಪ್ರಾಧ್ಯಾಪಕರು ಮತ್ತು ಭಾಷಾಂತರ

ಅಧ್ಯಯನಕಾರರು)