ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akash Deep: ನನ್ನ ಪ್ರದರ್ಶನ ಕಂಡು ಕ್ಯಾನ್ಸರ್‌ ಪೀಡಿತ ಅಕ್ಕ ಸಂತೋಷಪಡುತ್ತಾರೆ; ಆಕಾಶ್ ದೀಪ್‌ ಭಾವುಕ

ಕಷ್ಟದ ಪರಿಸ್ಥಿತಿಯಲ್ಲಿಯೂ ತಾವು ಕ್ರಿಕೆಟಿಗನಾಗುವ ಕನಸು ಕಮರಲು ಬಿಡಲಿಲ್ಲ. ಇದೀಗ ಭಾರತ ತಂಡದಲ್ಲಿಯೂ ಆಕಾಶ್ ಅವರ ನಿಖರ ದಾಳಿ ಆರಂಭವಾಗಿದೆ. ಇದರೊಂದಿಗೆ ಭಾರತದ ವೇಗದ ಬೌಲರ್‌ಗಳಾದ ಬುಮ್ರಾ, ಸಿರಾಜ್, ಶಮಿ, ಪ್ರಸಿದ್ಧ ಕೃಷ್ಣ ಮತ್ತಿತರರ ಸಾಲಿಗೆ ಮತ್ತೊಬ್ಬ ಪ್ರತಿಭಾವಂತನ ಸೇರ್ಪಡೆಯಾದಂತಾಗಿದೆ.

ಶ್ರೇಷ್ಠ ಪ್ರದರ್ಶನವನ್ನು ಕ್ಯಾನ್ಸರ್‌ ಪೀಡಿತ ಅಕ್ಕನಿಗೆ ಅರ್ಪಿಸಿದ ಆಕಾಶ್

Profile Abhilash BC Jul 7, 2025 11:04 AM

ಬೆಂಗಳೂರು: ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದಿರುವ 28ರ ಹರೆಯದ ಆಕಾಶ್‌ ದೀಪ್‌(Akash Deep) ಅವರು ಇಂಗ್ಲೆಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌(IND vs ENG 2nd Test) ಪಂದ್ಯದಲ್ಲಿ ಆಕಾಶ್ ಅಕ್ಷರಶಃ ಬೆಂಕಿಯ ಚೆಂಡುಗಳ ಮೂಲಕ ಆಂಗ್ಲರ ವಿಕೆಟ್‌ ಉರುಳಿಸಿದರು. ಸ್ವಿಂಗ್ ಎಸೆತಗಳ ಮೂಲಕ ವೈಭವ ಮೆರೆದರು. ಅವರ ಈ ಅಮೋಘ ಬೌಲಿಂಗ್‌ ಸಾಹಸದಿಂದ ಭಾರತ ತಂಡ ಎಜ್‌ಬಾಸ್ಟನ್‌(Edgbaston) ಅಂಗಳದಲ್ಲಿ ಐತಿಹಾಸಿಕ ಟೆಸ್ಟ್‌ ಗೆಲುವು ಸಾಧಿಸಿತು. ನೋವು –ನಲಿವು ಕಂಡ ಆಕಾಶ್ ಅವರು ಪಂದ್ಯದ ಮುಕ್ತಾಯದ ಬಳಿಕ ತಮ್ಮ ಈ ಪ್ರದರ್ಶನವನ್ನು ಕ್ಯಾನ್ಸರ್‌ ಪೀಡಿತ ಸಹೋದರಿಗೆ ಅರ್ಪಿಸುತ್ತೇನೆ ಎಂದಾಗ ಸಹ ಆಟಗಾರರು ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್‌ ಅಭಿಮಾನಗಳ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದವು.

"ನಾನು ಇದನ್ನು ಯಾರಿಗೂ ಹೇಳಿಲ್ಲ. ನನ್ನ ಅಕ್ಕ ಕಳೆದ ಎರಡು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರು ಈಗ ಚೇತರಿಕೆ ಕಾಣುತ್ತಿದಾರೆ. ನನ್ನ ಪ್ರದರ್ಶನ ನೋಡಿ ಅಕ್ಕ ಅತ್ಯಂತ ಸಂತೋಷಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಈ ಪಂದ್ಯವನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ. ಅವರ ಮುಖದಲ್ಲಿ ನಗುವನ್ನು ನೋಡಲು ನಾನು ಬಯಸಿದ್ದೆ" ಎಂದು ಪಂದ್ಯದ ನಂತರ ಆಕಾಶ್ ಹೇಳಿದರು.



2024ರಲ್ಲಿ ರಾಂಚಿಯಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅಂದಿನ ಕೋಚ್‌ ಆಗಿದ್ದ ಕೋಚ್‌ ರಾಹುಲ್ ದ್ರಾವಿಡ್‌ ಅವರಿಂದ ‘ಟೆಸ್ಟ್ ಕ್ಯಾಪ್‌’ ಪಡೆದ ಆಕಾಶ್ ದೀಪ್‌ ಮೊದಲ ಅವಧಿಯಲ್ಲೇ ಮೂರು ವಿಕೆಟ್‌ ಪಡೆದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು.

ಐತಿಹಾಸಿಕ ನಗರವಾದ ಸಸಾರಾಮ್‌ (ಬಿಹಾರದ ರೋತಾಸ್ ಜಿಲ್ಲೆ) ನಿಂದ ಹೊರಹೊಮ್ಮಿದ ಟೆಸ್ಟ್ ಕ್ರಿಕೆಟಿಗ ಆಕಾಶ್ ಅವರು ಬೆಳೆದ ಹಾದಿ ಸುಲಭವೇನೂ ಆಗಿರಲಿಲ್ಲ. ಕ್ರಿಕೆಟ್ ಆಡಲು ನಿರ್ಧರಿಸಿದ್ದ ಆಕಾಶ್‌ ಅವರು ತಂದೆ, ತಾಯಿಯ ವಿರೋಧ ಎದುರಿಸಬೇಕಾಯಿತು. ಅಕ್ಕಪಕ್ಕದ ಕುಟುಂಬಗಳು ಮತ್ತು ಸಂಬಂಧಿಕರು ತಮ್ಮ ಮಕ್ಕಳು ಆಕಾಶ್ ಜೊತೆ ಬೆರೆಯದಂತೆ ನೋಡಿಕೊಂಡರು.

ಇದನ್ನೂ ಓದಿ IND vs ENG: 10 ವಿಕೆಟ್‌ ಕಿತ್ತು ಇಂಗ್ಲೆಂಡ್‌ನಲ್ಲಿ ದಾಖಲೆ ಬರೆದ ಆಕಾಶ್‌ದೀಪ್‌

2010ರ ಸುಮಾರಿಗೆ 14 ವರ್ಷದವರಾಗಿದ್ದ ಆಕಾಶ್ ತಮ್ಮ ಊರು ಬಿಟ್ಟು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಹೋದರು. ಅಲ್ಲಿ ತಮ್ಮ ಕ್ರಿಕೆಟ್‌ ಕನಸುಗಳನ್ನು ನನಸು ಮಾಡಲು ಪಣತೊಟ್ಟರು. ಅಲ್ಲಿದ್ದ ಚಿಕ್ಕಪ್ಪನ ಬೆಂಬಲ ದೊರೆಯಿತು. ಆಕಾಶ್‌ನನ್ನು ಅಕಾಡೆಮಿಯೊಂದಕ್ಕೆ ಸೇರಿಸಿದರು.

ಕ್ರಿಕೆಟ್‌ ಭವಿಷ್ಯ ಅರಸಿ ಕೋಲ್ಕತ್ತಕ್ಕೆ ಹೋದ ಅವರನ್ನು ಮೂರು ಕ್ಲಬ್‌ಗಳು ತಿರಸ್ಕರಿಸಿದ್ದವು. ಆದರೆ ಇವುಗಳಲ್ಲಿ ಒಂದು ಕ್ಲಬ್‌– ಯುನೈಟೆಡ್‌ ಸಿಸಿ ಅವರಿಗೆ ನಂತರ ಅವಕಾಶ ನೀಡಿತು. ಮೊದಲ (2017–18) ಋತುವಿನಲ್ಲೇ 42 ವಿಕೆಟ್‌ ಪಡೆದಿದ್ದರು. ಸಿ.ಕೆ.ನಾಯ್ಡು ಟ್ರೋಫಿಯಲ್ಲಿ ಬಂಗಾಳ ತಂಡಕ್ಕೆ ಆಯ್ಕೆಯಾದರು. ಆ ವರ್ಷ ತಂಡ ಚಾಂಪಿಯನ್ ಆಯಿತು. ಐಪಿಎಲ್‌ನಲ್ಲಿ ಮೊದಲು ರಾಜಸ್ಥಾನ ತಂಡದ ನೆಟ್‌ ಬೌಲರ್ ಆಗಿದ್ದ ಆಕಾಶ್‌, ನಂತರ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಆರ್‌ಸಿಬಿ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತ ತಂಡಕ್ಕೂ ಪದಾರ್ಪಣೆ ಮಾಡಿದರು.

ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿಯೇ ಆಕಾಶ್ ಅವರ ತಂದೆ ನಿಧನರಾದರು. ಇದರಿಂದಾಗಿ ಕುಟುಂಬವು ಆರ್ಥಿಕ ಸಂಕಷ್ಟಕ್ಕೀಡಾಯಿತು. ಇದಾಗಿ ಸ್ವಲ್ಪ ಸಮಯವಾಗಿತ್ತು. ಆಕಾಶ್ ಅವರ ಅಣ್ಣ ಸಾವಿಗೀಡಾದರು. ‘ಒಂದೇ ವರ್ಷದಲ್ಲಿ ತಂದೆ ಮತ್ತು ಸಹೋದರನನ್ನು ಕಳೆದುಕೊಂಡ ಆಕಾಶ್ ಈ ಹಂತದಲ್ಲಿ ಕ್ರಿಕೆಟ್‌ನಿಂದ ದೂರವುಳಿಯಬೇಕಾಯಿತು. ತನ್ನ ಇಬ್ಬರು ತಂಗಿಯರ ಪೋಷಣೆಗಾಗಿ ಶ್ರಮಿಸಬೇಕಾಯಿತು.

ಇದೀಗ ಸಹೋರಿ ಕೂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆದರೆ ಈ ಕಷ್ಟದ ಪರಿಸ್ಥಿತಿಯಲ್ಲಿಯೂ ತಾವು ಕ್ರಿಕೆಟಿಗನಾಗುವ ಕನಸು ಕಮರಲು ಬಿಡಲಿಲ್ಲ. ಇದೀಗ ಭಾರತ ತಂಡದಲ್ಲಿಯೂ ಆಕಾಶ್ ಅವರ ನಿಖರ ದಾಳಿ ಆರಂಭವಾಗಿದೆ. ಇದರೊಂದಿಗೆ ಭಾರತದ ವೇಗದ ಬೌಲರ್‌ಗಳಾದ ಬುಮ್ರಾ, ಸಿರಾಜ್, ಶಮಿ, ಪ್ರಸಿದ್ಧ ಕೃಷ್ಣ ಮತ್ತಿತರರ ಸಾಲಿಗೆ ಮತ್ತೊಬ್ಬ ಪ್ರತಿಭಾವಂತನ ಸೇರ್ಪಡೆಯಾದಂತಾಗಿದೆ.