Wednesday, 11th December 2024

ಚುರ‍್ರೆನ್ನುವ ಕರುಳು, ಚುರುಕು ಮೆದುಳು

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ದಾರಿದ್ರ್ಯ ನಿರ್ಮೂಲನಗೊಳಿಸಲು ಬೇಕಾದ್ದು ಬಡತನವನ್ನು ನೋಡಿಚುರ್ ಎನ್ನುವ ಕರುಳು. ಮರುಕ್ಷಣವೇ ಸಮಸ್ಯೆಗೆ ಪರಿಹಾರ ಒದಗಿಸಲು ಮೆದುಳು ಚುರುಕು ಗೊಳ್ಳಬೇಕು. ಕರುಳು ಕಿತ್ತುಬರುವಂತೆ ಅಳುವುದರಿಂದ ಬಡತನ ಹೋಗಲಾಗಿಸುವುದು ಸಾಧ್ಯವಿಲ್ಲ.

ಬಾಬಾ ಅಣು ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದು ಸರಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮದ್ರಾಸಿನಲ್ಲಿ ತಮ್ಮದೇ ಉದ್ಯಮ ಸ್ಥಾಪಿಸಿದ್ದ ವಿಜಯ ಕುಮಾರ್ ನನ್ನ ಮೊದಲ ಪತ್ರಿಕೋದ್ಯಮ- ಪೂರ್ವ ಬಾಸ್. ನನ್ನನ್ನು ಬಹಳ ಸ್ನೇಹದಿಂದ ಕಾಣುತ್ತಿದ್ದರು. ನನ್ನ ಕೆಲಸದ ಬಗ್ಗೆ ಅವರೆಂದೂ ಪ್ರಶ್ನಿಸಿದ್ದೇ ಇಲ್ಲ. ಕಳೆದ ಶತಮಾನದ ಕೊನೆಯಲ್ಲಿ ಅಸ್ತಂಗತರಾದ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಯವರನ್ನು ನನಗೆ ಪರಿಚಯಿಸಿದ್ದು ಅವರೇ. ಎಲ್ಲರೂ ಕಡುಭ್ರಷ್ಟರೇ ಎಂದು ನಂಬಿದ್ದ ಅವರಿಗೆ ಜೆಕೆ ಬಗ್ಗೆ ಅಭಿಮಾನವಿತ್ತು.

ತಿರುವಾನ್ಮಿಯೂರ್ನ ನಮ್ಮ ಕಚೇರಿಯಿಂದ ಅಷ್ಟೇನು ದೂರವಿಲ್ಲದ ಬೆಸೆಂಟ್ ನಗರದಲ್ಲಿ ಒಮ್ಮೆ ಏರ್ಪಡಿಸಿದ್ದ ಜೆಕೆ ಅವರ ಉಪನ್ಯಾಸಕ್ಕೆ ಕರೆದೊಯ್ದರು. ತಮ್ಮ ತೊಂಭತ್ತನೇ ವಯಸ್ಸಿನಲ್ಲಿ ನಿಧನರಾದ ಜೆಕೆ ಬದುಕಿದ್ದರೆ ಮೊನ್ನೆ ಮೇ ೧೧ಕ್ಕೆ ೧೨೭ ವರ್ಷ. ಸ್ನೇಹಿತನೊಬ್ಬ ನಾನಿನ್ನೂ ನೋಡಿರದ ತನ್ನ ಉಪನ್ಯಾಸಕಿಯ ಬುದ್ಧಿಮತ್ತೆಯ ಬಗ್ಗೆ ಒಮ್ಮೆ ಹೇಳಿದ್ದನ್ನು ಕೇಳಿಯೇ ನಾನಾಕೆಯಲ್ಲಿ ಅನುರಕ್ತನಾಗಿz. ಆಕೆಯನ್ನು ಭೇಟಿಯಾಗಲು ತವಕಿಸಿದ್ದೆ. ನಮ್ಮ ಮೊದಲ ಭೇಟಿ ಮುಗಿದು ಚಿqsಛಿ ಹೇಳುವ ಸಂದರ್ಭದಲ್ಲಿ ಆಕೆ ಹಠಾತ್ತಾಗಿ (ಇಂಗ್ಲಿಷ್) ಲೇಖಕನೊಬ್ಬನ ಜನಪ್ರಿಯ ಪುಸ್ತಕವನ್ನು ಓದಿದ್ದೀಯಾ ಎಂದು ಪ್ರಶ್ನಿಸಿದಳು. ನೀವು ಒಂದು ಮಟ್ಟದ ಗಣ್ಯತೆಗೆ ಭಾಜನರಾಗ ಬೇಕಿದ್ದಲ್ಲಿ ಆಯಾ ಕಾಲದ ಹೆಸರುವಾಸಿ ಲೇಖಕರನ್ನು ಓದಿಕೊಂಡಿರಲೇಬೇಕೆಂಬ ಸಾಮಾಜಿಕ ಒತ್ತಡ ಒಂದು ಸೀಮಿತ ವರ್ಗದಲ್ಲಿ ಲಾಗಾಯ್ತಿನಿಂದಲೂ ಇದೆ.

ಅಂಥ ಒತ್ತಡವನ್ನು ನನ್ನ ಮೇಲೆ ಹೇರುವುದಕ್ಕಿಂತ ಹೆಚ್ಚಾಗಿ ಆಕೆ ತಾನು ಆ ಮೇಲ್ವರ್ಗದ ಖಾಯಂ ಸದಸ್ಯೆ ಎಂದು ಜಾಹೀರುಗೊಳಿಸುವ ಪ್ರಯತ್ನದಂತೆ ಆಕೆಯ ಪ್ರಶ್ನೆ ತೋರಿತು. ನಾನು ಓದಿಲ್ಲವೆಂದೆ. ಆ ವರ್ಗಕ್ಕೆ ನಾನು ಸೇರಿಲ್ಲವೆಂದು ತಿಳಿಪಡಿಸುವ ಭರದಲ್ಲಿ ನನ್ನದೇ ಸಮಾನಾಂತರದ ಮತ್ತೊಂದು (ಉಚ್ಚ) ವರ್ಗವನ್ನು ನಿರ್ಮಿಸಿ ವಿಜೃಂಭಿಸುವ ಉತ್ಸಾಹದ ಗುಂಡಿಯೊಳಕ್ಕೆ ಬೀಳದ ಜಾಗ್ರತೆ ಅದಾಗದೇ ಮೂಡಿತ್ತು. ಆ ಪ್ರಶ್ನೆಯಂತೂ ನಾವಿಬ್ಬರೂ ಜತೆಯಾಗಿ ಕ್ರಮಿಸಬಹು ದೆಂದುಕೊಂಡಿದ್ದ ಉದ್ದನೆಯ ರಸ್ತೆಯಲ್ಲಿ ಕ್ಲಾಸ್ ಒನ್ ಗುತ್ತಿಗೆದಾರ ಹಾಕಬಲ್ಲ ಉಬ್ಬಿನಂತೆ ಅಡ್ಡಬಂದಿತ್ತು. ಅಂಥದ್ದೇ ಒತ್ತಡಕ್ಕೆ ಜೆಕೆ ಉಪನ್ಯಾಸದ ಕೇಳುಗರು ತಮ್ಮನ್ನು ತಾವು ಸಿಲುಕಿಸಿಕೊಂಡಂತೆ ಕಂಡುಬಂದಿತು. ಅದು ಒಂದೇ ದಿನದ ಉಪನ್ಯಾಸವಾಗಿರದೆ ಮಾಲಿಕೆಯಾಗಿತ್ತು.

ಆಫೀಸ್‌ನಲ್ಲಿ ಚಹಾ ಹೀರುತ್ತಿದ್ದ ನನ್ನನ್ನು ಬಾಸ್ ಹಿಂದಿನ ಸಂಜೆಯ ಭಾಷಣದ ಬಗ್ಗೆ ಕೇಳಿದರು. ಸ್ಪೂರ್ತಿದಾಯಕವಾಗಿತ್ತು ಎನ್ನುತ್ತಾ ಇನ್ನು ಮುಂದೆ ಅರ್ಥಹೀನ ವಾಗಿ ಬದುಕುವುದಿಲ್ಲ ಎಂದುತ್ತರಿಸಿದೆ. ಒಂದೇ ದಿನಕ್ಕೆ ನನ್ನಲ್ಲುಂಟಾದ(?) ಪರಿವರ್ತನೆಗೆ ಚಕಿತರಾದ ಅವರು ಇಂದೂ ಬರುತ್ತೀಯಾ? ಕೇಳಿದರು. ಇದೀಗ ಉತ್ತರಿಸಿದೆನಲ್ಲ ನಿರರ್ಥಕವಾದ ಯಾವುದೇ ಕೆಲಸವನ್ನು ಮಾಡುವುದಿಲ್ಲ ನಗುತ್ತಾ ಹೇಳಿದೆ. ನನ್ನ ಸಹೋದ್ಯೋಗಿಗಳ ಜತೆಗೆ ವಿಜಯ ಕುಮಾರ್ ಕೂಡ ನಕ್ಕರು. ತರಲೆ ಮಾಡದೆ, ಮುಚ್ಕೊಂಡು ಜೆಕೆ ಉಪನ್ಯಾಸಕ್ಕೆ ಹೋಗಿದ್ದರೆ ಲಾಭವಾಗುತ್ತಿದ್ದುದು ನನಗೇ ಅಂತ ತಡವಾಗಿ ಜ್ಞಾನೋದಯ ವಾಯಿತು! ಆದರೆ, ಅಂದು ಸಭೆಯಲ್ಲಿ ಆವೃತವಾಗಿದ್ದ ದಟ್ಟ ಕೃತಕತೆ ನನ್ನನ್ನು ಮತ್ತೊಂದು ಉಪನ್ಯಾಸದಿಂದ ದೂರವಿಟ್ಟಿತ್ತು.

ಜೆಕೆ, ತಮ್ಮ ಶ್ರೋತೃಗಳಲ್ಲಿ ಸ್ವಂತಿಕೆಯನ್ನು ತುಂಬುವ ಪ್ರಯತ್ನದಲ್ಲಿ, ಮತ್ತೆ ಮತ್ತೆ Don’t be second hand human beings ಎಂದು ಎಚ್ಚರಿಸುತ್ತಿದ್ದರು. ಬಹುಶಃ, ಆ ಮಾತೇ ನನ್ನನ್ನು ಸ್ವಂತಿಕೆ ಬೆಳೆಸಿಕೊಳ್ಳಲು ಪ್ರೇರೇಪಿಸಿತೋ ಅಥವಾ ಸ್ವಂತಿಕೆ ಬೆಳೆಸಿಕೊಳ್ಳಲು ಜೆಕೆ ಉಪನ್ಯಾಸದಿಂದ ದೂರವಿರಬೇಕೆಂಬ ಜಾಗೃತಿ ಮೂಡಿಸಿತೋ ಕಾಣೆ. ಆದರೆ, ಜೆಕೆ ಒಂದು ದೈತ್ಯ ದಿವ್ಯಶಕ್ತಿ ಎಂಬುದು ನಿರ್ವಿವಾದ. ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದಾಗಲೇ ನಾನು ಪತ್ರಿಕಾ ರಂಗಕ್ಕೆ ಕಾಲಿಟ್ಟಾಗಿತ್ತು. ಉದ್ಯಮದ ಹುಳುಕುಗಳು ಆಗಲೇ ಕಣ್ಣಿಗೆ ಬಿದ್ದಿದ್ದವು. ರಂಗದಿಂದ ಹೊರಬೀಳುವ ಸಲುವಾಗಿ ಜೆಕೆ ಸಂಸ್ಥಾಪಿಸಿದ ಕನಕಪುರ ರಸ್ತೆಯಲ್ಲಿನ ವ್ಯಾಲಿ ಶಾಲೆಗೆ ಸೇರುವ ಉಮೇದಿತ್ತು.

ವ್ಯಾಸಂಗದ ನಂತರ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ, ಶೀಘ್ರದಲ್ಲಿ ಬೇಸತ್ತು ಅಮೆರಿಕಕ್ಕೆ ವಲಸೆ ಹೋದ ನನ್ನ ಸಹಪಾಠಿ ರಮೇಶ್ ಆಗ ಅಲ್ಲಿ ಭೂಗೋಳ ಶಾಸ್ತ್ರ ವನ್ನು ಬೋಧಿಸುತ್ತಿದ್ದ. ನಾನು ವ್ಯಾಲಿ ಶಾಲೆ ಸೇರಬಯಸುವುದಕ್ಕೆ ಅವನ ಪ್ರೇರೇಪಣೆಯೂ ಇತ್ತು. ನಾನು ಬಯಸಿದ ವಿಷಯವನ್ನು ಬೋಧಿಸಲು ಅವಕಾಶ
ಸಿಗಲಿಲ್ಲ, ಪತ್ರಿಕೋದ್ಯಮದಲ್ಲಿ ಮುಂದುವರೆದೆ. Anti&climax ಅಂದರೆ ಕೆಡುಗೊನೆ. ಅದರಿಂದುಂಟಾಗುವ ರಸಭಂಗವನ್ನು bathos ಎನ್ನುತ್ತಾರೆ. Bathos ದುಂಟಾಗುವ ರಸಭಂಗ ಅನುದ್ದೇಶಿತವಾಗಿರುತ್ತದೆ. ಆದರೆ, ಈಗ ನಾನು ಜೆಕೆಯಿಂದ ದಢಕ್ಕನೆ ಪತ್ರಿಕೋದ್ಯಮಿ ಲಂಕೇಶರತ್ತ ವಿಷಯವನ್ನು ತಿರುಗಿಸುತ್ತಿರು ವುದು ಉದ್ದೇಶಪೂರ್ವಕವಾಗಿಯೇ. ಸಂಪತ್ತನ್ನು ಯಾವ ರೀತಿ ಜೆಕೆ ತಿರಸ್ಕರಿಸಿದರೆಂದು ಹೇಳಿದೆ.

ಸುದ್ದಿ ಮತ್ತು ಹಣವೆರಡನ್ನೂ ಸಂಪಾದಿಸಿದ್ದ ಲಂಕೇಶ್ ನಂತರ ಅವರ ಸ್ವತ್ತಿಗಾಗಿ ಯಾವ ರೀತಿ ಬಡಿದಾಟಗಳಾಯಿತೆಂಬುದನ್ನು ನಿಮ್ಮಲ್ಲಿ ಕೆಲವರಾದರೂ
ಬಲ್ಲಿರಿ. ಲಂಕೇಶ್ ಮೇಷ್ಟ್ರು ನೈಜ ಸಮಾಜವಾದಿಯೇ ಆಗಿದ್ದಿದ್ದರೆ ಇದೂ ಒಂದು ಕೆಡುಗೊನೆಯೇ. ನನ್ನ ಬಾಸ್ ವಿಜಯ ಕುಮಾರ್ ಹೇಗೆ ಎಲ್ಲರೂ ಭ್ರಷ್ಟರೇ
ಎನ್ನುತ್ತಿದ್ದರೋ ಹಾಗೆ ಲಂಕೇಶ್ ಸಹಾ ಮನುಷ್ಯನ ನೀಚತನವನ್ನು ಉಖಿಸುತ್ತಲೇ ಇದ್ದರು. ಸಮಾಜವಾದದ ಪೊಳ್ಳುತನದ ಹಿಂದೆ ಅದೇ ನೀಚತನ ಕೆಲಸ ಮಾಡುತ್ತದೆಂದು ಅವರಿಗೆ ತಿಳಿದಿರಲೂ ಸಾಕು. ಹಾಗಿದ್ದೂ ಅದೇ ವಾದವನ್ನು ಬೆಂಬಲಿಸಿ ಸಮಾಜವಾದವನ್ನು ಕಂದಾಚಾರವನ್ನಾಗಿಸಿದರೇ ಲಂಕೇಶ್? ಸಮಾಜ ವಾದದ ಪೊಳ್ಳುತನದ ಕುರಿತಂತೆ ಅಮೆರಿಕದ ಅರ್ಥಶಾಸ್ತ್ರ ಪ್ರಾಧ್ಯಾಪಕರೊಬ್ಬರು ತನ್ನ ವಿದ್ಯಾರ್ಥಿಗಳ ಮೇಲೆ ನಡೆಸಿದ ಪ್ರಯೋಗದ ಬಗ್ಗೆ ನೀವು ವಾಟ್ಸಪ್ ನಲ್ಲಾದರೂ ಓದಿರುವ ಸಾಧ್ಯತೆಯಿದೆ.

ಅದರ ಪ್ರಕಾರ, ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳನ್ನು ಸಮನಾಗಿ ಹಂಚಿ ಅವರಿಗೆ ಗ್ರೇಡ್ ನೀಡುವುದು. ಪ್ರಯೋಗಾರ್ಥ ವಾಗಿ ನಡೆಸಿದ ಮೊದಲ ಪರೀಕ್ಷೆಯಲ್ಲಿ ಎಲ್ಲರಿಗೂ ಬಿ ಗ್ರೇಡ್ ಸಿಗುತ್ತದೆ. ಓದದೇ ಬಿ ಗ್ರೇಡ್ ಗಳಿಸಿದವರಿಗೆ ಇದು ಖುಷಿ ಕೊಡುತ್ತದೆ. ಓದಿಯೂ ಬಿ ಗ್ರೇಡ್ ದಕ್ಕಿದ್ದಕ್ಕೆ ಪ್ರತಿಭಾಶಾಲಿಗಳು ಹತಾಶರಾಗುತ್ತಾರೆ. ಮುಂದಿನೆರಡು ಪರೀಕ್ಷೆಗಳ ನಂತರ ಎಲ್ಲರಿಗೂ ಎ- ಗ್ರೇಡ್ ಸಿಗುತ್ತದೆ. ಓದುವ ಹಂಬಲ ಮೊದಲಿನವರಿಗೆ ಮುಂಚೆಯೇ ಇಲ್ಲ. ತಮ್ಮ ಶ್ರಮದ ಫಲವನ್ನು ಓದದವರೂ ಪುಕ್ಕಟೆಯಾಗಿ ಪಡೆದದ್ದರಿಂದ ನಿರಾಶೆಗೊಂಡ ಮತ್ತೊಂದು ಗುಂಪಿನವರಿಗೆ ಓದುವ ಹುಮ್ಮಸ್ಸೇ ಕ್ಷೀಣಿಸುತ್ತದೆ. ಕೊನೆಗೆ, ಪ್ರೊಫೆಸರ್ ಎಲ್ಲರನ್ನೂ ಅನುತ್ತೀರ್ಣಗೊಳಿಸಿ ಸಮಾಜವಾದದ ಕೆಡುಕನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುತ್ತಾರೆ.

ಇದು ಮೊದಲು ಇಂಟನೆಟ್‌ನಲ್ಲಿ ಬಿತ್ತರಗೊಂಡದ್ದು ೧೩ ವರ್ಷಗಳ ಹಿಂದೆ. ಆದರೆ, ಅಂಥ ಪ್ರಕರಣ ನಡೆದೇ ಇಲ್ಲವೆಂದೂ ಅದು ಕಾಲ್ಪನಿಕವೆಂದೂ ತದ ನಂತರ ದಲ್ಲಿ ತಿಳಿದುಬಂದಿತಾದರೂ ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡುತ್ತಲೇ ಇರುತ್ತದೆ. ಸಮಾಜವಾದ ಪೊಳ್ಳು, ಅದನ್ನು ಸಾಬೀತು ಮಾಡುವಲ್ಲಿ ನಡೆದ ಪ್ರಯೋಗವೇ ಸುಳ್ಳು. ದಾರಿದ್ರ್ಯವನ್ನು ನಿರ್ಮೂಲನಗೊಳಿಸಲು ಮೊಟ್ಟ ಮೊದಲು ಬೇಕಾದದ್ದು ಬಡತನವನ್ನು ನೋಡಿ ಚುರ್ ಎನ್ನುವ ಕರುಳು. ಮರುಕ್ಷಣವೇ ಸಮಸ್ಯೆಗೆ ಪರಿಹಾರ ಒದಗಿಸಲು ಮೆದುಳು ಚುರುಕುಗೊಳ್ಳಬೇಕು. ಬಡತನವನ್ನು ಕಂಡು ಕರುಳು ಕಿತ್ತುಬರುವಂತೆ ಅಳುವುದರಿಂದ, ಮರುಗುವುದರಿಂದ ಬಡತನ ಹೋಗಲಾಗಿಸುವುದಿಲ್ಲ.

ಒಳ್ಳೆಯ ಸಾಹಿತ್ಯ ರಚಿಸಲು ಮನಸ್ಸು-ಬುದ್ಧಿಗಳೆರಡೂ ಹೇಗೆ ಅವಶ್ಯಕವೋ, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲೂ ಅವೆರಡರ ಜತೆಗೆ ಪರಿಶ್ರಮ ಮತ್ತು ನಿಸ್ವಾರ್ಥತೆ ಬೇಕು. ಅರ್ಥಶಾಸದ ಗಂಧ- ಗಾಳಿಗಳಿಲ್ಲದವರೂ ಸಮಾಜವಾದಕ್ಕೆ ಜೋತುಬಿದ್ದಾಗ ಅದು ಕಂದಾಚಾರವಾಗಿ ಕೊನೆಗೊಳ್ಳುತ್ತದೆ. ಎಲ್ಲ ಕಂದಾ ಚಾರಗಳಂತೆ ಸಮಾಜವಾದವೂ ಕಂಟಕಕಾರಿ. ಕಂದಾಚಾರವಿರುವೆಡೆ ಬುದ್ಧಿಗೆ ಜಾಗವಿಲ್ಲ. ಬುದ್ಧಿ ಪಲಾಯನ ಮಾಡಿದರೆ ಕ್ರಿಯಾಶೀಲತೆ ಎಲ್ಲಿಂದ ಬಂದೀತು? ಸೀಮಿತ ವಲಯವೊಂದರಲ್ಲಿ ಸ್ವೀಕೃತವಾಗಬೇಕಾದರೆ, ಆಯ್ದ ಲೇಖಕರ/ಪುಸ್ತಕಗಳ ಹೆಸರನ್ನು ಉದುರಿಸಲೇ ಬೇಕಾದಂತೆ, ನಾಡಿನ ಮುಂಚೂಣಿ ವಾರಪತ್ರಿಕೆ ಪ್ರತಿಪಾದಿಸುತ್ತಿದ್ದ ಸಮಾಜವಾದಿ ಸಮವಸವನ್ನು ಅಂದಿನ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿಯೂ ಕಡ್ಡಾಯವಾಗಿ ತೊಟ್ಟರೇ ಎಂಬ ಗುಮಾನಿ ಆಧಾರ ರಹಿತವಲ್ಲ.

ಸೀನಿಯರ್ ಬೊಮ್ಮಾಯಿಯ ಸಮಾಜವಾದಿ ಪರಿಸರದಲ್ಲಿ ಬೆಳೆದ ಮರಿ ಬೊಮ್ಮಾಯಿ ದುರ್ಬಲ ವರ್ಗಕ್ಕೆ ಉಚಿತ ವಿದ್ಯುತ್ ಘೋಷಿಸಿದ್ದಾರೆ. ಅಕ್ಕಿ ವಿತರಿಸಿ ಗ್ರಾಮೀಣ ಅರ್ಥವ್ಯವಸ್ಥೆಗೆ ಮರಣಶಾಸನ ಬರೆದ ಸಮಕಾಲೀನ ಸಮಾಜವಾದಿಗಿಂತ ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾರೆ. ಗ್ರಾಮವಾಸ್ತವ್ಯಕ್ಕೆ ಟೆಂಟ್ ಹಾಕುವುದೆಂದೋ! ಅಲ್ಲಿ ಹೊಡೆದು ಇಲ್ಲಿ ಹಂಚುವ ಈ ಮಾದರಿ ಕ್ರಿಯಾಶೀಲತೆಯ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ. It can at best
be described as Veerappan Model of Development!

ಅಂದ ಹಾಗೆ, ನಾನು ವ್ಯಾಲಿ ಶಾಲೆಯ ದಿಕ್ಕಿನಲ್ಲಿ ಮೊದಲು ಹೋಗಿದ್ದು ಅದು ಆರಂಭವಾದ ವರ್ಷದ (೧೯೭೮). ನಮ್ಮ ಕ್ಯಾಂಪ್ ನಡೆದದ್ದು ಅದರ ನೆರೆಯಲ್ಲಿದ್ದ ವಸಂತಪುರದಲ್ಲಿ. ಎರಡು ಮೂರು ದಿನ ಗ್ರಾಮವನ್ನೆಲ್ಲ ಸ್ವಚ್ಛಗೊಳಿಸಿದ್ದೆವು. ಮರುದಿನ, ಬೆಳಿಗ್ಗೆ ಪರಿವೀಕ್ಷಣೆಗಾಗಿ ನಾವೊಂದಿಬ್ಬರು ಹೋದೆವು. ಎಲ್ಲಿ, ಇವತ್ತು ಕ್ಲೀನ್ ಮಾಡ್ಲಿಕ್ಕೆ ಬರ್ಲಿಲ್ಲ? ಅಂತ ಬೀಡಿ ಸೇದುತ್ತಿದ್ದ ಸ್ಥಳೀಯ ಮುಖಂಡನ ವಿಚಾರಣೆಗೆ ಗುರಿಯಾಗಬೇಕಾದ ಸೌಭಾಗ್ಯ ನಮ್ಮದು. ನಿರರ್ಥಕ ಕ್ರಿಯೆಗಳನ್ನು ನಿಲ್ಲಿಸುತ್ತೇನೆಂದು ನನ್ನ ಬಾಸ್‌ಗೆ ಹೇಳಿದ ತರುವಾಯ ನಾನು ನುಡಿದಂತೆ ನಡೆಯಲಾಗಲಿಲ್ಲ. ಹಲವರ್ಷ ಲಂಕೇಶ್ ಪತ್ರಿಕೆಯನ್ನು ಓದುತ್ತಿದ್ದೆ. ನನ್ನ ಜನ್ಮ
ಸಹಜ ಶ್ರೇಷ್ಠತೆಯ ವ್ಯಸನದಿಂದ ಹೊರಬರದಿರಲು ಜಾಣ ಜಾಣೆಯರಿಗಷ್ಟೆ ಮೀಸಲಾದ ಲಂಕೇಶ್ ಪತ್ರಿಕೆ ಅಡ್ಡಬಂದಿತೇ? ಅಥವಾ, ಅದನ್ನು ಓದಲು ನಿಲ್ಲಿಸಿದ ದಿನವೇ ನಾನು ಜಾಣನೆಂಬ ಅರ್ಹತೆಯನ್ನು ಕಳೆದುಕೊಂಡು ಅದನ್ನು ಸಾಬೀತುಗೊಳಿಸಲೆಂಬಂತೆ ಈ ಲೇಖನವನ್ನು ಬರೆದೆನೇ?