Rishab Shetty: ಡಿವೈನ್ ಸ್ಟಾರ್ಗೆ 42ನೇ ಜನ್ಮದಿನದ ಸಂಭ್ರಮ- ರಿಷಬ್ ಶೆಟ್ಟಿ ಸಿನಿ ಜರ್ನಿ ಹೇಗಿತ್ತು?
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾದಲ್ಲಿ ಗುರುತಿಸಿಕೊಂಡ ನಟ ರಿಷಬ್ ಶೆಟ್ಟಿ ಅವರು ಅಭಿನಯ, ನಿರ್ದೇಶನದ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧರಾಗಿದ್ದಾರೆ. ಹೀರೊ, ಬೆಲ್ ಬಾಟಂ ಇತ್ಯಾದಿ ಸಿನಿಮಾ ಮೂಲಕ ನಾಯಕನಾಗಿ ಅಭಿನಯಿಸಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರು ಇಂದು 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಹಿನ್ನೆಲೆ ಇಲ್ಲದೆಯೂ ನಟನೆ ಮತ್ತು ನಿರ್ದೇಶನ ಎರಡರಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ. ಅವರ ಜೀವನ ಇತರರಿಗೆ ಸ್ಫೂರ್ತಿದಾಯಕವಾಗಿದ್ದು ಕೆಲ ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿದೆ.



ರಿಷಭ್ ಶೆಟ್ಟಿ ಅವರು 1983ರಲ್ಲಿ ಜುಲೈ 7 ರಂದು ಕುಂದಾಪುರದ ಕೆರಾಡಿ ಎಂಬ ಗ್ರಾಮದಲ್ಲಿ ಜನಿಸಿದರು. ಭಾಸ್ಕರ್ ಶೆಟ್ಟಿ ಹಾಗೂ ರತ್ನಾವತಿ ಶೆಟ್ಟಿ ದಂಪತಿಯ ಮುದ್ದು ಮಗನಾದ ರಿಷಭ್ ಶೆಟ್ಟಿ ಚಿಕ್ಕ ವಯಸ್ಸಿನಿಂದಲೂ ಬಹಳ ಚೂಟಿ. ಬಾಲ್ಯದಿಂದಲೂ ಸಿನಿಮಾ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು ಕುಂದಾಪುರ ಮೂಲದವರಾದ ನಟ ಕಾಶಿನಾಥ್ ಹಾಗೂ ಉಪೇಂದ್ರ ಅವರಿಂದ ಪ್ರೇರಣೆ ದೊರೆತು ಸಿನಿಮಾ ಕ್ಷೇತ್ರಕ್ಕೆ ಬರಬೇಕೆಂಬ ಕನಸ್ಸು ಕಟ್ಟಿಕೊಂಡಿದ್ದರು.

ಹೈಸ್ಕೂಲ್ ಹಾಗೂ ಕಾಲೇಜು ಶಿಕ್ಷಣ ಮುಗಿದ ಬಳಿಕ ಬೆಂಗಳೂರಿನಲ್ಲಿ ಉದ್ಯೋಗ ಅರಸಿ ಬಂದಿದ್ದರಂತೆ. ಬೆಂಗಳೂರಿನ ಸರಕಾರಿ ಚಲನಚಿತ್ರ ಮತ್ತು ಟಿವಿ ವಿಶ್ವವಿದ್ಯಾನಿಲಯದಲ್ಲಿ ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾ ಮಾಡಿದರು. ಈ ಸಮಯದಲ್ಲಿ ಜೀವನ ಸಾಗಿಸಲು ಆದಾಯಕ್ಕಾಗಿ ಮನೆ ಮನೆಗೆ ಕುಡಿಯುವ ನೀರಿನ ಬಾಟಲಿ ಸಪ್ಲೈ ಮಾಡುತ್ತಿದ್ದರಂತೆ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಕೆಲವರ ಪರಿಚಯವಾಗಿ ಅಲ್ಲಿಂದ ಅವರು ಸಿನಿ ಕ್ಷೇತ್ರಕ್ಕೆ ಕಾಲಿಟ್ಟದ್ದಾರೆ.

2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಅಭಿನಯದ ರಿಕ್ಕಿ ಎಂಬ ಸಿನಿಮಾವನ್ನು ಮೊದಲ ಬಾರಿಗೆ ನಟ ರಿಷಭ್ ಶೆಟ್ಟಿ ನಿರ್ದೇಶನ ಮಾಡಿದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಷ್ಟು ಯಶಸ್ಸು ಕಾಣಲಿಲ್ಲವಾದರೂ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು..

2016ರ ಡಿಸೆಂಬರ್ ನಲ್ಲಿ ಮತ್ತೆ ರಿಷಭ್ ಶೆಟ್ಟಿ ಅವರ ಜೊತೆಗೆ ಕಿರಿಕ್ ಪಾರ್ಟಿ ಸಿನಿಮಾ ಮಾಡುತ್ತಾರೆ. ಇದೇ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ನ್ಯಾಶನಲ್ ಕ್ರಶ್ ಪಟ್ಟವನ್ನು ಕೂಡ ಪಡೆಯುತ್ತಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಾಖಲೆ ಮಾಡುತ್ತದೆ. ಈ ಮೂಲಕ ರಿಷಭ್ ಶೆಟ್ಟಿ ಹಾಗೂ ನಟ ರಕ್ಷಿತ್ ಶೆಟ್ಟಿ ಅವರಿಗೆ ಕಿರಿಕ್ ಪಾರ್ಟಿ ಸಿನಿಮಾ ಹೊಸ ಭವಿಷ್ಯ ನೀಡುತ್ತದೆ.

ಬಳಿಕ 2018ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನಿರ್ದೇಶನ ಮಾಡಿದರು. ಕಾಸರಗೋಡು ಶಿಕ್ಷಣದಲ್ಲಿ ಕನ್ನಡದ ಅವಶ್ಯಕತೆ ಸಾರುವ ಈ ಸಿನಿಮಾ ಸೂಪರ್ ಹಿಟ್ ಕೂಡ ಆಯಿತು. ಈ ಸಿನಿಮಾದ ವಿಭಿನ್ನ ಕಥೆ ಮತ್ತು ಅದನ್ನು ತೆರೆ ಮೇಲೆ ತಂದ ರೀತಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಕೂಡ ಈ ಚಿತ್ರಕ್ಕೆ ಲಭಿಸಿದೆ.

2010ರಲ್ಲಿ ನಮ್ ಏರಿಯಾದಲ್ಲಿ ಒಂದಿನ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ. 2013 ರಲ್ಲಿ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ 2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶಿಸಿದ ಉಳಿದವರು ಕಂಡಂತೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. 2019ರಲ್ಲಿ ಬೆಲ್ ಬಾಟಮ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ನಂತರ 2021ರಲ್ಲಿ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಅಭಿನಯಿಸಿ ಪ್ರಸಿದ್ಧಿ ಪಡೆದರು.

2022ರಲ್ಲಿ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿತ್ತು. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿದ ಈ ಸಿನಿಮಾ ಬೇರೆ ಭಾಷೆಯಲ್ಲಿ ಕೂಡ ಡಬ್ ಆಗಲ್ಪಟ್ಟಿತು. ಕಿರಿಕ್ ಪಾರ್ಟಿ ಸಿನಿಮಾಕ್ಕೆ ಅತ್ಯುತ್ತಮ ನಿರ್ದೇಶಕ- 64ನೇ ಫಿಲ್ಮ್ ಫೇರ್ ಪ್ರಶಸ್ತಿ, ಸರ್ಕಾರಿ ಹಿ ಪ್ರಾ. ಶಾಲೆ ಕಾಸರಗೋಡು ಸಿನಿಮಾಕ್ಕೆ ಅತ್ತ್ಯುತ್ತಮ ಮಕ್ಕಳ ಚಿತ್ರದ ಕೆಟಗರಿ ಯಲ್ಲಿ 66ನೇ ರಾಷ್ಟ್ರ ಪ್ರಶಸ್ತಿ, ಕಾಂತಾರ ಸಿನಿಮಾದ ಅದ್ಭುತ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ-70ನೇ ರಾಷ್ಟ್ರ ಪ್ರಶಸ್ತಿ ಲಭಿಸಿದೆ.

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಫ್ಯಾಶನ್ ಡಿಸೈನರ್ ಆಗಿದ್ದು ಕಾಂತಾರ ಸಿನಿಮಾದ ಪಾತ್ರಗಳ ವಸ್ತ್ರ ವಿನ್ಯಾಸವನ್ನು ಇವರೇ ಮಾಡಿದ್ದಾರೆ. ಸದ್ಯ ನಟ ರಿಷಭ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಜೈ ಹನುಮಾನ್ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಆಂಜನೇಯನ ಪಾತ್ರದಲ್ಲಿ ರಿಷಭ್ ಫಸ್ಟ್ ಲುಕ್ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಇದರ ಬೆನ್ನಲ್ಲೇ ರಿಷಭ್ ಛತ್ರಪತಿ ಶಿವಾಜಿ ಸಿನಿಮಾ ಕೂಡ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ಈ ವರ್ಷದಿಂದಲೇ ಬ್ಯಾಕ್ ಟು ಬ್ಯಾಕ್ ಸಿನಿಮಾ ತೆರೆ ಕಾಣುವ ನಿರೀಕ್ಷೆ ಕೂಡ ಇದೆ.