Keshav Prasad B Column: ಮೈಕ್ರೊ ಫೈನಾನ್ಸ್ ಬಿಕ್ಕಟ್ಟು: ಜನ ಕಲಿಯಬೇಕಾದ ಪಾಠವೇನು ?
ಮೈಕ್ರೊ ಫೈನಾನ್ಸ್ ಸಾಲದ ಮರುಪಾವತಿಯ ಅವಧಿ ಕೆಲ ತಿಂಗಳುಗಳಿಂದ 3 ವರ್ಷದ ತನಕ ಇರಬ ಹುದು. ಹೆಚ್ಚು ಅವಧಿ ಸಿಗುವುದಿಲ್ಲ. ಸ್ವಸಹಾಯ ಗುಂಪುಗಳಲ್ಲಿ ಮೈಕ್ರೊ ಫೈನಾನ್ಸ್ ಸಾಲ ಪಡೆಯು ವಾಗ ಎಚ್ಚರ ಇರಲಿ. ಇತರರು ಸಾಲ ಕಟ್ಟದಿದ್ದರೂ, ನಿಮಗೆ ಸಮಸ್ಯೆಯಾಗಬಹುದು

ಹಿರಿಯ ಪತ್ರಕರ್ತ ಕೇಶವ ಪ್ರಸಾದ್ ಬಿ. ಅಂಕಣ

ಕರ್ನಾಟಕದಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಗಳು ಜನರಿಗೆ ಕೊಟ್ಟಿರುವ ಸಾಲದ ಒಟ್ಟು ಬಾಕಿ ಮೊತ್ತ 59,367 ಕೋಟಿ ರುಪಾಯಿಗಳಾಗಿದೆ. ಒಟ್ಟು ಖಾತೆಗಳ ಸಂಖ್ಯೆ 1 ಕೋಟಿ 9 ಲಕ್ಷದ 88 ಸಾವಿರದ 332. ರಾಜ್ಯದಲ್ಲಿ 31 ಮೈಕ್ರೊ ಫೈನಾನ್ಸ್ ಕಂಪನಿಗಳಿದ್ದು, ಅವುಗಳಿಗೆ 3090 ಶಾಖೆಗಳಿವೆ. ಇನ್ನು ರಿಜಿಸ್ಟರ್ ಆಗಿರದ ಅನಧಿಕೃತ ಮೈಕ್ರೊ ಫೈನಾನ್ಸ್‌ಗಳೂ ಬಹಳಷ್ಟಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ಸಾಲ ಮರುವಸೂಲಾತಿ ಏಜೆಂಟರ ದೌರ್ಜ್ಯನ್ಯ, ಕಿರುಕುಳಕ್ಕೆ ಬೇಸತ್ತು ನಿಸ್ಸಹಾಯಕ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ, ಮನೆ, ಕುಟುಂಬ, ಊರನ್ನೇ ಬಿಟ್ಟು ಹೋಗುವ ಮನ ಕಲಕುವ ಪ್ರಕರಣಗಳು ಬೆಚ್ಚಿ ಬೀಳಿಸಿವೆ.
ಇದನ್ನೂ ಓದಿ: Keshav Prasad B Column: ರುಪಾಯಿ ಮೌಲ್ಯ ಕುಸಿತದಿಂದ ಭಾರತಕ್ಕೆ ಲಾಭ- ನಷ್ಟವೇನು ?
ಮೈಕ್ರೊ ಫೈನಾನ್ಸ್ ಕಂಪನಿಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ಮರುವಸೂಲಾತಿ ಯನ್ನು ಹೇಗೆ ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶಿಯೂ ಇದೆ. ಹೀಗಿದ್ದರೂ, ಕಿರುಕುಳ ನಿಂತಿಲ್ಲ ಎಂಬುದು ಕಳವಳಕಾರಿ. ಆದ್ದರಿಂದ ಮೈಕ್ರೊ ಫೈನಾನ್ಸ್ ಕಂಪನಿ ಎಂದರೇನು? ಇವುಗಳ ಉದ್ದೇಶವೇನು? ಇಲ್ಲಿ ಸಾಲ ಸುಲಭ ವಾಗಿ ಏಕೆ ಸಿಗುತ್ತದೆ? ಇಕೆ ಬಡ್ಡಿ ದರ ಭಾರಿ ಹೆಚ್ಚಾಗಿರುತ್ತದೆ? ಸಾಲ ಮರುವಸೂಲಾತಿಯಲ್ಲಿ ಕಿರು ಕುಳ ಮಾಡುವುದೇಕೆ? ಮೈಕ್ರೊ ಫೈನಾನ್ಸ್ ಸಾಲ ಪಡೆಯುವುದಕ್ಕೆ ಮುನ್ನ ತಿಳಿದುಕೊಳ್ಳ ಬೇಕಾದ ಸಂಗತಿಗಳೇನು? ಎಂಬಿತ್ಯಾದಿ ಸಂಗತಿಗಳನ್ನು ಸಾಲಗಾರರು ಅರ್ಥ ಮಾಡಿಕೊಳ್ಳಬೇಕು.
ಇಲ್ಲದಿದ್ದರೆ ಸಂಕಷ್ಟ ಕಟ್ಟಿಟ್ಟಬುತ್ತಿ. ಏಕೆಂದರೆ ಭಾರತದಲ್ಲಿ ಮೈಕ್ರೊ ಫೈನಾನ್ಸ್ ಇಂಡಸ್ಟ್ರಿಯ ಗಾತ್ರ ಸಣ್ಣದೇನಲ್ಲ. 2024ರ ಮಾರ್ಚ್ ವೇಳೆಗೆ 3.77 ಲಕ್ಷ ಕೋಟಿ ರುಪಾಯಿ ಮೌಲ್ಯದ ಸಾಲವನ್ನು ವಿತರಿಸಲಾಗಿದೆ. 6.6 ಕೋಟಿ ಸಾಲಗಾರರಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2022ರಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳು ನೀಡುವ ಕಿರುಸಾಲಗಳ ಬಗ್ಗೆ ಮಾರ್ಗದರ್ಶಿಯನ್ನು ಪ್ರಕಟಿಸಿತ್ತು. ಪ್ರಶ್ನೋತ್ತರ ಮಾದರಿಯಲ್ಲಿರುವ ಮುಖ್ಯಾಂಶಗಳನ್ನು ನೋಡೋಣ.
ಮೈಕ್ರೊ ಫೈನಾನ್ಸ್ ಸಾಲ ಪಡೆಯಲು ಕುಟುಂಬದ ಎಲ್ಲರೂ ಕಡ್ಡಾಯವಾಗಿ ಸಾಲಗಾರರಾಗ ಬೇಕೆ? - ಕುಟುಂಬದ ಮಟ್ಟದಲ್ಲಿ ಆದಾಯ ಮತ್ತು ಋಣಭಾರವನ್ನು ಮೌಲ್ಯಮಾಪನ ಮಾಡ ಬೇಕಾದ ಅಗತ್ಯ ಇರುತ್ತದೆ.
ಆದರೆ ಕುಟುಂಬದ ಒಬ್ಬ ಸದಸ್ಯ ಪಡೆಯುವ ಸಾಲಕ್ಕೆ ಇತರ ಸದಸ್ಯರನ್ನೂ ಸಾಲಗಾರರೆಂದು ಪರಿಗಣಿಸಬೇಕಾದ ಅಗತ್ಯ ಇಲ್ಲ. ಮನೆಯಲ್ಲಿ ನಡೆಯುವ ಸಮಾರಂಭಗಳ ಖರ್ಚಿಗೆ, ಗ್ಯಾಜೆಟ್‌ಗಳ ಖರೀದಿಗೆ ಪಡೆಯುವ ಸಾಲವನ್ನು ಮೈಕ್ರೊ ಫೈನಾನ್ಸ್ ಸಾಲ ಎಂದು ಪರಿಗಣಿಸಬಹುದೇ?
- ವಾರ್ಷಿಕ 3 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಅಡಮಾನ ರಹಿತವಾಗಿ ನೀಡುವ ಸಾಲಗಳನ್ನು ಮೈಕ್ರೊ ಫೈನಾನ್ಸ್ ಸಾಲ ಎನ್ನಲಾಗುತ್ತದೆ. ಬ್ಯಾಂಕಿಂಗ್ ಮಾರ್ಗದರ್ಶಿಗಳ ಪ್ರಕಾರ ಮೈಕ್ರೊ ಫೈನಾನ್ಸ್ ಕಂಪನಿಗಳು ತಾವು ನೀಡುವ ಸಾಲಕ್ಕೆ ಬಡ್ಡಿ ದರವನ್ನು ನಿಗದಿ ಪಡಿಸಬಹುದು ಹಾಗೂ ಪರಿಷ್ಕರಿಸಬಹುದು.
ಸಾಲಗಾರರಿಗೆ ಸಾಲ ಮರುವಸೂಲಾತಿ ಸಲುವಾಗಿ ಬೆಳಗ್ಗೆ 9 ಗಂಟೆಗೆ ಮೊದಲು ಹಾಗೂ ಸಂಜೆ 6 ಗಂಟೆಯ ಬಳಿಕ ಕರೆ ಮಾಡಬಹುದೇ?
- ಸಾಲಗಾರರಿಗೆ ಸಾಲ ಮರುವಸೂಲಾತಿಗೆ ಸಂಬಂಧಿಸಿ ಬೆಳಗ್ಗೆ 9 ಗಂಟೆಗೆ ಮೊದಲು ಮತ್ತು ಸಂಜೆ 6 ಗಂಟೆಯ ಬಳಿಕ ಕರೆ ಮಾಡುವಂತಿಲ್ಲ, ಸಂಪರ್ಕಿಸುವಂತಿಲ್ಲ. ಒಂದು ವೇಳೆ ಮಾಡಿದರೆ ಅದು ಬಲವಂತದ ಕ್ರಮ ಎಂದು ಪರಿಗಣನೆಯಾಗುವುದು.
ಮೈಕ್ರೊ ಫೈನಾನ್ಸ್ ಸಾಲ ಪಡೆಯುವಾಗ ಸಾಲಗಾರರು ಗಮನಿಸಬೇಕಾದ ಸಂಗತಿಗಳೇನು?
- ಮೊದಲನೆಯದಾಗಿ ಈ ಸಾಲ ಪಡೆಯುವಾಗ ಎಲ್ಲಿಯೂ ಯಾವುದೇ ಡೆಪಾಸಿಟ್ ಕೊಡಬೇಕಿಲ್ಲ. ಮಾರ್ಜಿನ್ ಬೇಡ, ಅಡಮಾನ ನೀಡಬೇಕಿಲ್ಲ. ಸಾಲದಾತರು ಸಾಲಗಾರರಿಗೆ ಅವರಿಗೆ ತಿಳಿದಿರುವ ಭಾಷೆಯಲ್ಲಿ ಲೋನ್ ಕಾರ್ಡ್ ನೀಡಬೇಕು. ಲೋನ್ ಕಾರ್ಡ್‌ನಲ್ಲಿ ಸಾಲದ ಷರತ್ತುಗಳನ್ನು ಸ್ಪಷ್ಟ ವಾಗಿ ದಾಖಲಿಸಬೇಕು. ಅಹವಾಲುಗಳ ಸಲ್ಲಿಕೆಗೆ ಯಾರನ್ನು ಸಂಪರ್ಕಿಸಬೇಕೆಂಬ ವಿವರ ಇರಬೇಕು. ಇದರಲ್ಲಿರುವ ಶುಲ್ಕಗಳನ್ನು ಮಾತ್ರ ಸಾಲಗಾರ ಕೊಡಬೇಕು. ಸಾಲವನ್ನು ಅವಧಿಗೆ ಮುನ್ನ ಮರು ಪಾವತಿಸಿದರೆ ದಂಡ ಹಾಕುವಂತಿಲ್ಲ.
ಸಾಲಗಾರರು ಬಡ್ಡಿ ದರದ ಬಗ್ಗೆ ತಿಳಿಯುವುದು ಹೇಗೆ?
- ಮೈಕ್ರೊ ಫೈನಾನ್ಸ್ ಸಾಲದ ಬಗ್ಗೆ ಕಂಪನಿಗಳು ಕನಿಷ್ಠ ಬಡ್ಡಿ ದರ, ಸರಾಸರಿ ಬಡ್ಡಿ ದರ ಮತ್ತು ಗರಿಷ್ಠ ಬಡ್ಡಿ ದರ ವಿವರವನ್ನು ಎಲ್ಲರಿಗೂ ಕಾಣಿಸುವಂತೆ ಕಡ್ಡಾಯವಾಗಿ ನೋಟಿಸ್ ಬೋರ್ಡ್ ಅಥವಾ ಫಲಕಗಳಲ್ಲಿ ತಮ್ಮೆಲ್ಲ ಕಚೇರಿಗಳಲ್ಲಿ ಪ್ರದರ್ಶಿಸಬೇಕು. ಕರಪತ್ರಗಳಲ್ಲಿ, ವೆಬ್‌ಸೈಟ್ ಇದ್ದರೆ ಅವುಗಳಲ್ಲಿ ತೋರಿಸಬೇಕು.
ಭಾರತದಲ್ಲಿ ಕಳೆದ 50 ವರ್ಷಗಳಿಂದಲೂ ಮೈಕ್ರೊ ಫೈನಾನ್ಸ್ ವ್ಯವಸ್ಥೆ ಇದೆ. ಸಾಂಪ್ರದಾಯಿಕ ಬ್ಯಾಂಕ್‌ಗಳಲ್ಲಿ ಸಾಲ ಸಿಗದವರಿಗೆ ಕೂಡ ಸಾಲ ವಿತರಿಸುವುದು ಇವುಗಳ ಉದ್ದೇಶ. ಆದರೆ ಇಲ್ಲಿ ಬಡ್ಡಿ ಜಾಸ್ತಿ ಇರುತ್ತದೆ. ಪ್ರತಿಯಾಗಿ ಸುಲಭವಾಗಿ ಸಾಲ ಸಿಗುತ್ತದೆ. ಹೆಚ್ಚಿನ ದಾಖಲಾತಿಗಳ ಅವಶ್ಯಕತೆ ಇರುವುದಿಲ್ಲ. ಹೀಗಿದ್ದರೂ, ಮೈಕ್ರೊ ಫೈನಾನ್ಸ್ ಗಳಲ್ಲಿ ನೋಂದಣಿಯಾಗದ ಕಂಪನಿ ಗಳೂ ಇವೆ. ಇವುಗಳ ಆಟಾಟೋಪವನ್ನು ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ.
ಆರ್‌ಬಿಐ, 2022ರಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಗಳು ವಿಧಿಸುವ ಬಡ್ಡಿ ದರಗಳ ಮೇಲಿನ ಮಿತಿ ಯನ್ನು ರದ್ದುಪಡಿಸಿತು. ಕಂಪನಿಗಳ ನಡುವೆ ಸ್ಪರ್ಧಾತ್ಮಕತೆ ಉಂಟಾಗಿ ಬಡ್ಡಿ ದರ ಇಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಮೈಕ್ರೊ ಫೈನಾನ್ಸ್ ಕಂಪನಿಗಳು ಬಡ್ಡಿ ದರವನ್ನು ಅತಾರ್ಕಿಕವಾಗಿ ಏರಿಸಿದವು.
ಅಲ್ಲಿಯವರೆಗೆ ಎಂಎಫ್ಐಗಳು ತಮಗೆ ತಗಲುವ ಸಾಲದ ವೆಚ್ಚದ ಮೇಲೆ ಶೇ.12ರ ತನಕ ಸೇರಿಸಿ ಬಡ್ಡಿ ನಿಗದಿಪಡಿಸಬಹುದಿತ್ತು. ಉದಾಹರಣೆಗೆ ಫಂಡ್ ಪಡೆಯಲು ಶೇ.10ರಷ್ಟು ವೆಚ್ಚವಾದರೆ ಅದರ ಮೇಲೆ ಶೇ.12ರಷ್ಟು ಸೇರಿಸಬಹುದಿತ್ತು. ಆಗ ಬಡ್ಡಿ ದರ ಗರಿಷ್ಠ ಶೇ.22 ಆಗುತ್ತಿತ್ತು. ಆದರೆ ಆರ್‌ಬಿಐ ಮಿತಿಯನ್ನು ತೆರವುಗೊಳಿಸಿದ ಬಳಿಕ ಕೆಲವು ಮೈಕ್ರೊ ಫೈನಾನ್ಸ್ ಕಂಪನಿಗಳು ಶೇ.45ರ ತನಕ ಬಡ್ಡಿಯನ್ನು ಏರಿಸಿದವು ಎಂದು ವರದಿಯಾಗಿದೆ.
ಹೀಗೆ ಆರ್‌ಬಿಐ ಒಳ್ಳೆಯ ಉದ್ದೇಶಕ್ಕೆ ಮಿತಿ ರದ್ದುಪಡಿಸಿದ್ದರೂ, ಸಾಲಗಾರರಿಗೆ ಕಠೋರವಾಗಿ ಪರಿಣಮಿಸಿದೆ. ಬಹುಶಃ ಆರ್‌ಬಿಐ ಸಾಲಗಾರರ ರಕ್ಷಣೆಗೆ ಬೇರೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅಶಿಸಬಹುದು. ಆದರೆ ಇಂಥ ಸಂಗತಿಗಳನ್ನು ಸಾಲಗಾರರು ಮನನ ಮಾಡಿಕೊಳ್ಳಬೇಕು.
ಹೀಗಾಗಿ ಬಡ ಕುಟುಂಬಗಳ ಸಾಲಗಾರರು, ಮೈಕ್ರೊ ಫೈನಾನ್ಸ್ ಸಾಲ ಪಡೆಯುವಾಗ ಕಲಿತಿರ ಬೇಕಾದ ಪಾಠ ಏನೆಂದರೆ- ಇತರ ಬ್ಯಾಂಕ್‌ಗಳಿಂದ ಇಲ್ಲಿ ಬಡ್ಡಿ ದರ ಅತ್ಯಧಿಕ ಇರುತ್ತದೆ ಎಂಬುದು. ಒಂದು ಕಂತಿನ ಸಾಲ ಮರುಪಾವತಿ ವಿಳಂಬವಾದರೂ ಬಡ್ಡಿ ಜ್ವರದಂತೆ ಬೆಳೆಯುತ್ತದೆ. ಶೇ.18-26ರ ತನಕ ಇಲ್ಲಿ ಸಾಮಾನ್ಯವಾಗಿರುವ ಅಧಿಕ ಬಡ್ಡಿ ದರದ ಬಿಸಿಯನ್ನು ಭರಿಸಬಹುದೇ ಎಂದು ಲೆಕ್ಕಾಚಾರ ಹಾಕಲೇಬೇಕು.
ಮೈಕ್ರೊ ಫೈನಾನ್ಸ್ ಸಾಲದ ಮರುಪಾವತಿಯ ಅವಧಿ ಕೆಲ ತಿಂಗಳುಗಳಿಂದ 3 ವರ್ಷದ ತನಕ ಇರಬಹುದು. ಹೆಚ್ಚು ಅವಧಿ ಸಿಗುವುದಿಲ್ಲ. ಸ್ವಸಹಾಯ ಗುಂಪುಗಳಲ್ಲಿ ಮೈಕ್ರೊ ಫೈನಾನ್ಸ್ ಸಾಲ ಪಡೆಯುವಾಗ ಎಚ್ಚರ ಇರಲಿ. ಇತರರು ಸಾಲ ಕಟ್ಟದಿದ್ದರೂ, ನಿಮಗೆ ಸಮಸ್ಯೆಯಾಗಬಹುದು.
ರಿಜಿಸ್ಟರ್ ಆಗದಿರುವ ಮೈಕ್ರೊ ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆಯದಿರಿ. ಬಡ್ಡಿ ದರಗಳ ವಿವರಗಳನ್ನು ಸಮರ್ಪಕವಾಗಿ ನೀಡದಿದ್ದರೆ, ಅಂಥ ಮೈಕ್ರೊ ಫೈನಾನ್ಸ್ ಸಾಲದ ಸಹವಾಸವೇ ಬೇಡ. ಆಂಧ್ರಪ್ರದೇಶದಲ್ಲಿ 2010ರ ಆಸುಪಾಸಿನಲ್ಲಿ ಮೈಕ್ರೊ ಫೈನಾನ್ಸ್ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಅಲ್ಲಿಯೂ ಸಾಲ ಮರುವಸೂಲಾತಿಯಲ್ಲಿ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊನೆಗೆ ರಾಜ್ಯ ಸರಕಾರವು ಪ್ರತ್ಯೇಕ ಕಾಯಿದೆಯ ಮೂಲಕ ಕಿರು ಹಣಕಾಸು ಸಂಸ್ಥೆಗಳ ವಲಯವನ್ನು ಬಿಗಿಗೊಳಿಸಿತ್ತು.
ಇದೀಗ ಕರ್ನಾಟಕದಲ್ಲಿಯೂ ಹೊಸ ಕಾಯಿದೆ ಜಾರಿಯಾಗಲಿದೆ ಎಂದು ಸರಕಾರ ತಿಳಿಸಿದೆ. ಹಾಗಂತ ಆಂಧ್ರಪ್ರದೇಶದಲ್ಲಿ ಮೈಕ್ರೊ ಫೈನಾನ್ಸ್ ಬಿಕ್ಕಟ್ಟು ಉಪಶಮನವಾಗಿದೆ ಎಂದರ್ಥವಲ್ಲ. ಈಗಲೂ ಕಿರುಕುಳದ ಪ್ರಕರಣಗಳು ವರದಿಯಾಗುತ್ತಿವೆ. ಆದರೆ 2010ರ ಪರಿಸ್ಥಿತಿ ಈಗಿಲ್ಲ ಎನ್ನಬ ಹುದು. ಆದ್ದರಿಂದ ಜನರೇ ಇಂಥ ಸಾಲ ಪಡೆಯುವಾಗ, ಇದರ ಸಾಧಕ-ಬಾಧಕಗಳನ್ನು ಅರಿತು ಕೊಳ್ಳುವುದು ಮುಖ್ಯ.
ರಾಜ್ಯದಲ್ಲಿ ಅನೇಕ ಮಹಿಳಾ ಸ್ವಸಹಾಯ ಗುಂಪುಗಳು ಮೈಕ್ರೊ ಫೈನಾನ್ಸ್ ಸಾಲ ಪಡೆದು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಸ್ವಸಹಾಯ ಗುಂಪುಗಳಲ್ಲಿ ಸಣ್ಣ ಪುಟ್ಟ ಬಿಸಿನೆಸ್‌ಗೆ ಬಂಡವಾಳದ ಸಲುವಾಗಿ ಸಾಲ ಮಾಡುತ್ತಾರೆ. ಕೆಲವು ಮಹಿಳೆಯರು ನಾಲ್ಕಾರು ಸ್ವಸಹಾಯ ಗುಂಪುಗಳಿಂದ ಕೆಲವು ಸಾವಿರ ರುಪಾಯಿಗಳ ಸಾಲ ಮಾಡುತ್ತಾರೆ. ಈ ರೀತಿ ಸಾಲ ಪಡೆದ ಉತ್ತರ ಕರ್ನಾಟಕದ ಮಹಿಳೆ ದೌಲ್ಬೀರ್ ಅವರ ಕರುಣಾಜನಕ ಕಥೆಯನ್ನು ಕೇಳಿದರೆ ಸಂಕಟವಾಗುತ್ತದೆ.
“ಮೂರ್ನಾಲ್ಕು ಸಂಘಗಳಲ್ಲಿ ಒಟ್ಟು ಒಂದು ಲಕ್ಷ ರುಪಾಯಿ ಸಾಲ ಪಡೆದಿದ್ದೆ. ಆದ್ರೆ ಈಗ ನನ್ನ ಪಾಲಿಗೆ ಬಂದಿದ್ದ ಜಮೀನನ್ನು ಮಾರಿದ್ದೇನೆ. ಬಂಗಾರ-ಪಿಂಗಾರ ಎಲ್ಲವನ್ನೂ ಮಾರಿದ್ದೇನೆ. ಈಗ ಉಟ್ಟಿರುವ ಬಟ್ಟೆ ಮಾತ್ರ ಉಳಿದಿದೆ. ಆದ್ರೂ ಸಾಲ ಮುಗಿದಿಲ್ಲ" ಎನ್ನುತ್ತಾರೆ ಅವರು. ಇನ್ನೂ ಕೆಲ ಮಹಿಳೆಯರು ಮೈಮೇಲಿನ ಬಂಗಾರ, ಮಕ್ಕಳ ಕಿವಿಯೋಲೆಯನ್ನೂ ಮಾರಿದ್ದಾರೆ.
ಆದರೂ ಕೆಲವು ಸಾವಿರ ರು.ಗಳ ಸಾಲ ಮುಗಿದಿಲ್ಲ! ಇಂಥ ನೂರಾರು ಕರುಣಾಜನಕ ಕಥೆಗಳು ಸುತ್ತಮುತ್ತ ನಡೆಯುತ್ತಿರುವುದು ದುರಂತ. ಬಡತನದ ನಿರ್ಮೂಲನೆಗಾಗಿ ಇರಬೇಕಿದ್ದ ಮೈಕ್ರೊ ಫೈನಾನ್ಸ್ ಕಂಪನಿಗಳು ಬಡವರನ್ನೇ ಹಿಂಡುತ್ತಿರುವುದು ದುರಂತ.ಕೋವಿಡ್ ಬಿಕ್ಕಟ್ಟಿನ ಬಳಿಕ ಭಾರತದಲ್ಲಿ ಜನ ಸಾಮಾನ್ಯರು ಮೈಕ್ರೊ ಫೈನಾನ್ಸ್ ಕಂಪನಿಗಳಿಂದ ವ್ಯಾಪಕವಾಗಿ ಸಾಲ ತೆಗೆದು ಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಲ ಬಾಕಿ ಇರಿಸಿಕೊಂಡಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಸಕಾಲಕ್ಕೆ ಕಂತುಗಳನ್ನು ಕಟ್ಟಲು ಎಲ್ಲ ಸಾಲಗಾರರಿಂದ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಮೈಕ್ರೊ ಫೈನಾನ್ಸ್ ಸೆಕ್ಟರ್ ಗಣನೀಯ ಸವಾಲುಗಳನ್ನು ಎದುರಿಸುತ್ತಿದೆ. ಹೊಸ ಸಾಲದ ವಿತರಣೆ ಯಲ್ಲಿ ಇಳಿಕೆಯಾಗಿದೆ. ಹಾಗಂತ ಆರ್‌ಬಿಐ ಮಾರ್ಗದರ್ಶಿಯನ್ನೂ ಗಾಳಿಗೆ ತೂರಿ, ಸಾಲ ವಸೂ ಲಾತಿಗಾಗಿ ನಡೆಸುವ ಗೂಂಡಾಗಿರಿಯನ್ನು, ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ?
Microfinance is an idea whose time has come ಎಂದು ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿ ಯಾಗಿದ್ದ ಕೋಫಿ ಅನ್ನಾನ್ ಹೇಳಿದ್ದರು. ಅದು ನಿಜವಾಗಲಿ ಎಂಬುದಷ್ಟೇ ಹಾರೈಕೆ.