Shashidhara Halady Column: ಮಗಾ ನೀನು ಆಡು, ನಿನ್ನ ಆಪ್ಪ ಹೋತ !
ಉಡುಪಿ ಜಿಲ್ಲೆಯ ಅವಿಭಜಿತ ಕುಂದಾಪುರ ತಾಲೂಕಿಗೆ ಮತ್ತು ಅದರ ಸರಹದ್ದಿನ ಪ್ರದೇಶ ಗಳಿಗೆ ಮಾತ್ರ ಸೀಮಿತವಾಗಿರುವ ಕುಂದಾಪ್ರ ಕನ್ನಡವು, ಬಹು ದೀರ್ಘಕಾಲದ ಅವಧಿಯಲ್ಲಿ, ಹೊರ ಭಾಷಾ ಪ್ರಭಾವಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳದೇ ಉಳಿದು ಬಂದಿರುವುದು ಸಹ ವಿಶೇಷ. ದಕ್ಷಿಣ ದಿಕ್ಕಿನಲ್ಲಿ ಕಲ್ಯಾಣಪುರ ಹೊಳೆ ಮತ್ತು ಉತ್ತರ ದಿಕ್ಕಿ ನಲ್ಲಿ ಬೈಂದೂರು ಗಡಿ, ಪೂರ್ವ ದಿಕ್ಕಿನಲ್ಲಿ ಸಹ್ಯಾದ್ರಿ ಶ್ರೇಣಿ- ಈ ಕಿರುಪ್ರದೇಶದಲ್ಲಿ ಬಳಕೆ ಯಲ್ಲಿರುವ ಕುಂದಾಪ್ರ ಕನ್ನಡದ ಪದಗಳನ್ನು, ನುಡಿಗಟ್ಟುಗಳನ್ನು ಈ ನಿಘಂಟಿನಲ್ಲಿ ಅಡಕಗೊಳಿಸಲಾಗಿದೆ

ಮುಖ್ಯ ಉಪಸಂಪಾದಕ, ಅಂಕಣಕಾರ ಶಶಿಧರ ಹಾಲಾಡಿ

ಶಶಾಂಕಣ
ಕನ್ನಡ ಭಾಷೆಗೆ ಹನ್ನೆರಡು ಅರ್ಥ’ ಎಂಬ ಒಂದು ನುಡಿಗಟ್ಟು ಇದೆ. ಇದನ್ನು ಬಳಸು ವವರು ಕುಂದಾಪುರ ಪ್ರದೇಶದ ಜನರು. ‘ಕುಂದಾಪ್ರ ಕನ್ನಡ, ಕುಂದಗನ್ನಡ, ಕೋಟ ಕನ್ನಡ’ ಎಂದೆಲ್ಲಾ ಕರೆಸಿಕೊಳ್ಳುವ ಈ ಭಾಷಾ ಪ್ರಭೇದದಲ್ಲಿ ಹಳೆಗನ್ನಡದ ಪದಗಳು, ಬಳಕೆಗಳು ಇಂದೂ ಉಳಿದುಕೊಂಡುಬಂದಿವೆ ಎಂದು ಭಾಷಾತಜ್ಞರು ಗುರುತಿಸಿದ್ದಾರೆ. ‘ಮಗಾ ನೀನು ಆಡು, ನಿನ್ನ ಅಪ್ಪ ಹೋತ’ ಎಂಬ ಒಂದು ವಾಕ್ಯವನ್ನು ಸುಸಂಬದ್ಧವಾಗಿ, ಯಾವುದೇ ವ್ಯಂಗ್ಯವಿಲ್ಲದೇ ಕುಂದಾಪ್ರ ಕನ್ನಡದಲ್ಲಿ ಬಳಸಬಹುದು! ನಿಜ! ಇಲ್ಲಿ ‘ಹೋತ’ ಎಂದರೆ ‘ಹ್ವಾತ’ ಅಥವಾ ಹೋಗುತ್ತಾನೆ ಎಂದರ್ಥ. ವ್ಯಂಗ್ಯವಿಲ್ಲದೇ ಅರ್ಥೈಸಿದರೆ, ‘ಮಗೂ ನೀನು ಆಡಿಕೊಂಡಿರು, ನಿನ್ನಪ್ಪ ಅಲ್ಲಿ ಹೋಗುತ್ತಿದ್ದಾನೆ’ ಎಂಬರ್ಥ.
ಇದನ್ನೂ ಓದಿ: Shashidhara Halady Column: ಹೆಬ್ಬಲಸು: ಹೆಸರು ಮಾತ್ರ ಹಿರಿದು, ಗಾತ್ರದಲ್ಲಿ ಕಿರಿದು !
ಇದನ್ನೇ ‘ಅಪ್ಪ ಹೋತ, ಮಗ ಆಡು’ ಎಂದು ತಮಾಷೆಯಾಗಿಯೂ ಬಳಸುವುದುಂಟು. ಕರ್ನಾಟಕದ ಇತರ ಭಾಗಗಳ ಕನ್ನಡಕ್ಕೆ ಹೋಲಿಸಿದರೆ, ಇಂಥ ಹಲವು ವಿಶಿಷ್ಟ, ಅನನ್ಯ, ವಿಚಿತ್ರ ಎನ್ನಬಹುದಾದ ಭಾಷಾಪ್ರಯೋಗ, ಪದ, ನುಡಿಗಟ್ಟುಗಳನ್ನು ಒಳಗೊಂಡ ಭಾಷೆ ಕುಂದಾಪ್ರ ಕನ್ನಡ. ಕರಾವಳಿಯ ಈ ವಿಶಿಷ್ಟ ಕನ್ನಡದ ಪದಗಳನ್ನೇ ಒಳಗೊಂಡ ‘ಕುಂದಾ ಪ್ರ ಕನ್ನಡ ನಿಘಂಟು’ ಪ್ರಕಟಗೊಂಡಿದ್ದು, ಅದರ ಎರಡನೆಯ ಮುದ್ರಣ ಈಗ ಹೊರ ಬಂದಿದೆ!
ಈ ನಿಘಂಟಿನ ಪ್ರಧಾನ ಸಂಪಾದಕರು, ಖ್ಯಾತ ವ್ಯಂಗ್ಯಚಿತ್ರಕಾರರಾದ ಪಂಜು ಗಂಗೊಳ್ಳಿ ಯವರು. ಒಂದು ನಿಘಂಟು ತ್ವರಿತವಾಗಿ ಎರಡನೆಯ ಮುದ್ರಣ ಕಂಡಿರುವುದು ಒಂದು ದಾಖಲೆಯೇ ಸರಿ! (ಮೊದಲ ಮುದ್ರಣ 2021). ನಮ್ಮ ರಾಜ್ಯದ ಕರಾವಳಿಯ ಪುಟ್ಟ ಭೂ ಪ್ರದೇಶದ ಭಾಷಾ ಪ್ರಭೇದದ ಕುರಿತು ರಚಿತಗೊಂಡ ಈ ನಿಘಂಟು, ಸುಂದರವಾದ ಮುದ್ರಣ ಮತ್ತು ವಿನ್ಯಾಸದೊಂದಿಗೆ ಎರಡನೆಯ ಮುದ್ರಣ ಕಂಡಿರುವುದು ಅದರ ಯಶ ಸ್ಸನ್ನು ತೋರುತ್ತದೆ.

ಉಡುಪಿ ಜಿಲ್ಲೆಯ ಅವಿಭಜಿತ ಕುಂದಾಪುರ ತಾಲೂಕಿಗೆ ಮತ್ತು ಅದರ ಸರಹದ್ದಿನ ಪ್ರದೇಶ ಗಳಿಗೆ ಮಾತ್ರ ಸೀಮಿತವಾಗಿರುವ ಕುಂದಾಪ್ರ ಕನ್ನಡವು, ಬಹು ದೀರ್ಘಕಾಲದ ಅವಧಿ ಯಲ್ಲಿ, ಹೊರಭಾಷಾ ಪ್ರಭಾವಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳದೇ ಉಳಿದು ಬಂದಿರು ವುದು ಸಹ ವಿಶೇಷ. ದಕ್ಷಿಣ ದಿಕ್ಕಿನಲ್ಲಿ ಕಲ್ಯಾಣಪುರ ಹೊಳೆ ಮತ್ತು ಉತ್ತರ ದಿಕ್ಕಿ ನಲ್ಲಿ ಬೈಂದೂರು ಗಡಿ, ಪೂರ್ವ ದಿಕ್ಕಿನಲ್ಲಿ ಸಹ್ಯಾದ್ರಿ ಶ್ರೇಣಿ- ಈ ಕಿರುಪ್ರದೇಶದಲ್ಲಿ ಬಳಕೆಯಲ್ಲಿ ರುವ ಕುಂದಾಪ್ರ ಕನ್ನಡದ ಪದಗಳನ್ನು, ನುಡಿಗಟ್ಟುಗಳನ್ನು ಈ ನಿಘಂಟಿನಲ್ಲಿ ಅಡಕ ಗೊಳಿಸಲಾಗಿದೆ.
ಈ ಭಾಷಾಪ್ರಭೇದದಲ್ಲಿ ಇಂದಿಗೂ ಬಳಕೆಯಲ್ಲಿರುವ ಹಲವು ಪದಗಳನ್ನು ಗಮನಿಸಲು, ಅಧ್ಯಯನ ಮಾಡಲು, ಇತರ ಪ್ರದೇಶದವರು ಕುತೂಹಲದಿಂದ ಓದಲು ಈ ನಿಘಂಟಿನ ಬಳಕೆ ಬಹುವಾಗಿ ಉಪಯೋಗಕ್ಕೆ ಬರುತ್ತದೆ. ಇದರ ಪ್ರಧಾನ ಸಂಪಾದಕರಾದ ಪಂಜು ಗಂಗೊಳ್ಳಿ ಮತ್ತು ಸಂಪಾದಕರಾದ ಎ.ಪೂಜಾರಿ ಮತ್ತು ರಾಮಚಂದ್ರ ಉಪ್ಪುಂದ ಅವರು ಅಪಾರ ಪರಿಶ್ರಮದಿಂದ ಈ ನಿಘಂಟನ್ನು ತಯಾರಿಸಿದ್ದಾರೆಂದು ಪುಟ ಪುಟಗಳೂ ಸಾರಿ ಹೇಳುತ್ತವೆ.
ಸುಮಾರು 700 ಪುಟಗಳ ಈ ಅಪರೂಪದ ನಿಘಂಟಿನ ಪ್ರಕಟಣೆಗೆ ಕುಂದಾಪುರ ಸಮೀಪದ ತಲ್ಲೂರಿನ ‘ತಲ್ಲೂರು ಫ್ಯಾಮಿಲಿ ಟ್ರಸ್ಟ್ ’ನ ‘ಹಿಗ್ಗು ಅರಿವಿನ ಮಾಲೆಯ ದತ್ತಿ’ಯ ಸಹ ಕಾರವೂ ದೊರಕಿದೆ. ಸುಮಾರು 2 ದಶಕಗಳ ಹಿಂದಿನಿಂದಲೂ ಈ ನಿಘಂಟಿಗಾಗಿ ಕೆಲಸ ಮಾಡುತ್ತಿದ್ದೆ ಎಂದು ಸಂಪಾದಕರು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇಂಥದೊಂದು ನಿಘಂಟಿನ ಅವಶ್ಯಕತೆ ಏನು ಎಂಬುದರ ಬಗ್ಗೆ ಸಂಪಾದಕರಿಗೆ ಖಚಿತತೆ ಇದೆ.
“ವಿಶ್ವದಾದ್ಯಂತ ಭಾಷೆಗಳು ಶೀಘ್ರ ಗತಿಯಲ್ಲಿ ನಾಶವಾಗುತ್ತಿವೆ. ಕುಂದಾಪ್ರ ಕನ್ನಡದಂಥ ಚಿಕ್ಕ ಪುಟ್ಟ ಪ್ರಾದೇಶಿಕ ಉಪಭಾಷೆಗಳಂತೂ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿವೆ. ಅಂಥದರಲ್ಲಿ, ಇಷ್ಟು ಹಣ, ಸಮಯ, ಶಕ್ತಿ ವ್ಯಯ ಮಾಡಿ ಇಂಥ ಒಂದು ನಿಘಂಟನ್ನು ರಚಿಸುವುದರಲ್ಲಿ ಏನು ಅರ್ಥವಿದೆ ಎಂದು ಹಲವರು ಕೇಳಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಅವರ ಪ್ರಶ್ನೆಯಲ್ಲಿ ಅರ್ಥವಿಲ್ಲದಿಲ್ಲ. ಈ ಕೆಲಸದ ಹಿಂದಿನ ನಮ್ಮ ಉದ್ದೇಶ ಇಷ್ಟೇ- ಎಷ್ಟು ಸಾಧ್ಯವೋ ಅಷ್ಟು ಕುಂದಾಪ್ರ ಕನ್ನಡದ ಶಬ್ದ, ನುಡಿಗಟ್ಟು, ಹಾಡು, ಒಗಟು ಮೊದಲಾದವುಗಳನ್ನು ಒಂದೆಡೆ ಕಲೆಹಾಕಿ ಇಡುವುದು. ಇದು ಜನರ ದೈನಂದಿನ ಕೆಲಸಕ್ಕೆ ಬಾರದಿದ್ದರೂ, ಕೊನೆ ಪಕ್ಷ ಕುಂದಾಪ್ರ ಕನ್ನಡದ ಶ್ರೀಮಂತಿಕೆಯ ದ್ಯೋತಕವಾಗಿ, ಗ್ರಂಥಾಲಯಗಳ ಕಪಾಟುಗಳಲ್ಲಿ ಸುರಕ್ಷಿತವಾಗಿಡಬಹುದು" ಎಂದು ಪಂಜುಗಂಗೊಳ್ಳಿಯವರು ಸಂಪಾದಕರ ಮಾತಿನಲ್ಲಿ ಹೇಳಿದ್ದಾರೆ.
ಕುಂದಾಪ್ರ ಕನ್ನಡದ ವಿಶೇಷ ಪದಗಳು ಹಲವು; ಅವುಗಳಲ್ಲಿ ಕೆಲವನ್ನು ಮಾತ್ರ ಗಮನಿಸಿ ದರೆ, ಆ ಭಾಷಾ ವೈವಿಧ್ಯದ ಕುರಿತು ಹೊಸಬರಿಗೆ ಅಚ್ಚರಿಯಾದೀತು! ಈ ನಿಘಂಟಿನಲ್ಲಿ ಹಲವು ಪದಗಳ ಅರ್ಥಗಳನ್ನು ನೀಡಿರುವ ಪರಿ ಗಮನ ಸೆಳೆಯುತ್ತದೆ. ಕೆಲವು ಪದಗಳಿಗೆ ಸರಳ ಅರ್ಥ; ಕೆಲವು ಅರ್ಥಗಳು ಅನನ್ಯ, ತೀರಾ ಇದೊಂದು ಪ್ರದೇಶದಲ್ಲಿ ಮಾತ್ರ ಅರ್ಥೈಸಬಹುದಾಂಥವುಗಳು. ಇಲ್ಲಿ ಹಲವು ಪದಗಳಿಗೆ, ಸಂದರ್ಭ ಮತ್ತು ಬಳಕೆಯ ಸಹಿತವಾದ ವಿವರವಾದ ಅರ್ಥ ನೀಡಿರುವುದು ಸಹ ವಿಶೇಷ ಎನಿಸಿದೆ.
ಕುಂದಾಪುರ ಪ್ರದೇಶದಲ್ಲಿ ಮಾತ್ರ ಬಳಕೆಯಾಗುವ ಸಸ್ಯಗಳ ಹೆಸರುಗಳನ್ನು, ಪ್ರಾಣಿಗಳ ಹೆಸರುಗಳನ್ನು ನೀಡಿ, ಅವುಗಳ ವಿಶೇಷತೆಗಳನ್ನು ಸಹ ವಿವರಿಸಿರುವುದು ಗಮನ ಸೆಳೆಯು ತ್ತದೆ. ಇಲ್ಲಿನ ಕೆಲವು ಉದಾಹರಣೆಗಳನ್ನು ಗಮನಿಸೋಣ.
ನಪ್ಪಳಿ= ಕೆಲಸ ಕಾರ್ಯ ಮಾಡದೆ ಅಲೆಮಾರಿಯಾಗಿ ತಿರುಗು. ಪಡ್ಚ= ಮುಗಿಯುವುದು, ನೆಗೆದು ಬೀಳುವುದು. ಹರ್ಬ್= ಕೆಲಸ, ಉದ್ಯೋಗ. ಜಿಗ= ಜೇನುನೊಣ. ಜಿರಾಪತಿ= ಜಡಿಮಳೆ. ತೊಡು= ತಿನ್ನುವ ಆಸೆ. ಬಟ್ಲ್ ಚಂದಳ್ಕ= ದೊಡ್ಡ ಗಾತ್ರದ ಎಲೆಗಳುಳ್ಳ ಒಂದು ಮರ. ಹರ್ಗ= ಉಡಗಳಲ್ಲಿ ಒಂದು ಪ್ರಭೇದ. ಇದು ಗಾತ್ರದಲ್ಲಿ ಸಾಮಾನ್ಯ ಉಡಕ್ಕಿಂತ ಬಹಳ ದೊಡ್ಡದಾಗಿರುತ್ತದೆ.
ಕದಿ= ಒಂದು ರೀತಿಯ ಪಟಾಕಿ. ಬಿಜಲ್ದಿ= ಸೂಲಗಿತ್ತಿ. ಬಿಜ್ಕತ್ತಿ= ಬಾಣಂತಿಯರು ಭೂತ ಪ್ರೇತಾದಿ ದುಷ್ಟಶಕ್ತಿಗಳಿಂದ ರಕ್ಷಣೆಗಾಗಿ ಹಾಗೂ ನಂಜಿನಂಥ ಸಮಸ್ಯೆಗಳು ಉಲ್ಬಣಗೊಳ್ಳ ದಂತೆ ಸೊಂಟದಲ್ಲಿ ಮೈಗೆ ತಾಕುವಂತೆ ಸಿಕ್ಕಿಸಿಕೊಳ್ಳುವ ಕಿರುಗೆಜ್ಜೆಗಳನ್ನು ಹೊಂದಿರುವ ಉಕ್ಕಿನ ಕಿರುಗತ್ತಿ. ಈ ಪುಸ್ತಕದಲ್ಲಿ ಕುಂದಾಪ್ರ ಕನ್ನಡ ಪದಗಳ ಅರ್ಥದ ಜತೆಯಲ್ಲೇ, 1700 ನುಡಿಗಟ್ಟುಗಳ ಪ್ರತ್ಯೇಕ ವಿಭಾಗವಿದೆ.
ಈ ವಿಭಾಗವು ಒಟ್ಟು 180 ಪುಟಗಳನ್ನು ವ್ಯಾಪಿಸಿದ್ದು, ಪ್ರತಿ ನುಡಿಗಟ್ಟಿನ ಅರ್ಥ ನೀಡಿರುವ ವಿಧಾನ ಗಮನ ಸೆಳೆಯುತ್ತದೆ. ಈ ವಿಭಾಗದಲ್ಲಿ ಕಂಡುಬರುವ ನುಡಿಗಟ್ಟುಗಳು ಬಹಳ ಕುತೂಹಲಕಾರಿ ಎನಿಸಿದ್ದು, ಅವುಗಳಲ್ಲಿ ಕೆಲವನ್ನು ಪೂರ್ತಿಯಾಗಿ ಅರ್ಥೈಸಿಕೊಳ್ಳಲು ಕುಂದಾಪುರ ಸರಹದ್ದಿನ ಜೀವನ ಮತ್ತು ಸಂಸ್ಕೃತಿಯ ಪರಿಚಯ ಅಗತ್ಯ.
ಕುಂದಾಪುರ ತಾಲೂಕಿನಲ್ಲಿ ಕಡಲೂ ಇದೆ, ವಿಸ್ತಾರವಾದ ಬೀಚ್ ಇದೆ, ಹಲವು ಸಣ್ಣ ದೊಡ್ಡ ನದಿಗಳಿವೆ, ಜಲಪಾತಗಳಿವೆ, ಮುರಕಲ್ಲು ಮಾತ್ರ ಇರುವ ಮರಳುಗಾಡಿನಂಥ ಬೆಟ್ಟಗಳಿವೆ, ಕೃಷಿಭೂಮಿಯಿದೆ, ಈ ಪ್ರದೇಶದ ಒಳನಾಡಿನಲ್ಲಿ ಹದವಾದ ಕಾಡಿದೆ, ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ದಟ್ಟವಾದ ಅರಣ್ಯವಿದೆ, ಆ ಅರಣ್ಯಗಳಲ್ಲಿ ನಾನಾ ರೀತಿಯ ಜೀವಜಂತುಗಳಿವೆ, ಸಸ್ಯ ವೈವಿಧ್ಯಗಳಿವೆ.
ಇವೆಲ್ಲವುಗಳ ಪರಿಚಯವಿದ್ದಾಗ ಮಾತ್ರ, ಇಲ್ಲಿ ಬಳಕೆಯಾಗುತ್ತಿರುವ ನುಡಿಗಟ್ಟುಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಬಳಕೆಯಲ್ಲಿರುವ ತುಸು ವಿಶಿಷ್ಟ ಎನಿಸುವ ಕೆಲವು ನುಡಿಗಟ್ಟುಗಳನ್ನು ಗಮನಿಸಿದಾಗ, ಇದು ವೇದ್ಯವಾದೀತು. ಅಂಥ ನುಡಿಗಟ್ಟುಗಳಿಗೆ, ಈ ನಿಘಂಟಿನ ಸಂಪಾದಕರು ನೀಡಿರುವ ವ್ಯಾಖ್ಯಾನವನ್ನು ಗಮನಿಸುವುದು ಒಂದು ಉತ್ತಮ ಓದು ಎನಿಸಬಲ್ಲದು.
‘ಕ್ವಾಣನ್ ನಂಬಿ ಹೊಳೆ ದಾಂಟುಕಾಗ’ (ಕೋಣನನ್ನು ನಂಬಿ ಹೊಳೆ ದಾಟಬಾರದು): ‘ಕೋಣನಿಗೆ ನೀರಿನಲ್ಲಿ ಮುಳುಗುವುದೆಂದರೆ ಬಲು ಸಂತೋಷ. ಇಂಥ ಕೋಣನ ಮೇಲೆ ಕುಳಿತು ಯಾರಾದರೂ ಹೊಳೆ ದಾಟಲು ಹೋದರೆ, ನೀರು ಪಾಲಾಗುವುದು ನಿಶ್ಚಿತ. ಭರವಸೆ ಇಲ್ಲದವರ ಮೇಲೆ ನಂಬಿಕೆಯಿಟ್ಟರೆ, ಕೇಡು ತಪ್ಪಿದ್ದಲ್ಲ ಎಂದು ಎಚ್ಚರಿಸುವ ನುಡಿಗಟ್ಟು’ (ಇಲ್ಲಿ ಮತ್ತೊಂದು ವಿಶೇಷವನ್ನೂ ಗಮನಿಸಬಹುದು. ಕುಂದಾಪುರ ಪ್ರದೇಶದಲ್ಲಿ ಹೊಳೆಗಳು ಅಧಿಕ, ಜತೆಯಲ್ಲೇ ಕೋಣಗಳನ್ನು ಸಾಕುವುದೂ ಹೆಚ್ಚು. ಗದ್ದೆ ಉಳುಮೆ ಮಾಡಲು, ಕಂಬಳಕ್ಕಾಗಿ ಕೋಣಗಳನ್ನು ಸಾಕುವ ಪದ್ಧತಿ ಇಲ್ಲಿದೆ. ಇವೆರಡೂ ವಾಸ್ತವಗಳು ಈ ನುಡಿಗಟ್ಟಿನಲ್ಲಿ ಅಡಗಿವೆ).
‘ಕೊಂದ್ ಪಾಪ ತಿಂದ್ ಪರಿಹಾರ’: ಆಹಾರದ ಸಲುವಾಗಿ ಪ್ರಾಣಿಯನ್ನು ಕೊಂದರೆ ಪಾಪ ತಟ್ಟದು ಅಥವಾ ಕೊಂದ ಪ್ರಾಣಿಯನ್ನು ತಿಂದರೆ ಕೊಂದ ಪಾಪ ಪರಿಹಾರವಾದಂತೆ ಎಂಬ ನಂಬಿಕೆಯ ಮಾತು (ಇದು ಆ ಪ್ರದೇಶದ ಬೇಟೆ ಸಂಸ್ಕೃತಿಯನ್ನು ಬಿಂಬಿಸುತ್ತದೆ; ಜತೆಗೆ, ಆಹಾರದ ಉದ್ದೇಶಕ್ಕೆ ಅಲ್ಲದೆ, ಬೇರೆ ಉದ್ದೇಶಕ್ಕೆ ಪ್ರಾಣಿಗಳನ್ನು ಕೊಲ್ಲಬಾರದು ಎಂಬ ಧ್ವನಿಯೂ ಇಲ್ಲಿ ವ್ಯಕ್ತವಾಗಿದೆ).
‘ಬಂದ್ ಮೀನ್ ಇದ್ದದ ಮೀನಿನ ಓಡ್ಸ್ತಂಬ್ರ್’: ‘ಬಂದ ಮೀನು ಇದ್ದ ಮೀನನ್ನು ಓಡಿಸಿ ತಂತೆ’. ಹೊಸದಾಗಿ ಬಂದ ಮೀನು ಮೊದಲೇ ಇದ್ದ ಮೀನನ್ನು ಓಡಿಸಿ ತಾನು ಠಿಕಾಣಿ ಹೂಡಿದಂತೆ. ‘ಮಗ ಮದಿ ಆಪುರೊರಿಗ್ ಮಗ, ಮಗ್ಳ್ ಕಡಿವರಿಗೂ ಮಗ್ಳ್’: ‘ಮಗ ಮದುವೆ ಆಗುವವರೆಗೆ ಮಗ, ಮಗಳು ಕಡೆಯವರೆಗೂ ಮಗಳು’. ಹೆಣ್ಣು ಸಂತಾನದ ಮಹತ್ವವನ್ನು ಸಾರುವ ನುಡಿಗಟ್ಟು.
‘ವಂಡಾರ್ ಕಂಬ್ಳ, ಬಸ್ರೂರ್ ಜಪ್ಪಳ, ಕೋಟೇಶ್ವರ್ ಕೊಡೀ ಹಬ್ಬು ಮೂರ್ ಕಂಡ್ರೆ ಮೋಚ’: ‘ವಂಡಾರು ಕಂಬಳ, ಬಸ್ರೂರು ಜಪ್ಪಳ, ಕೊಟೇಶ್ವರ ಕೊಡೀ ಹಬ್ಬ ಈ ಮೂರೂ ಕಂಡರೆ ಮೋಕ್ಷ’. ವಂಡಾರಿನ ಕಂಬಳ, ಬಸ್ರೂರಿನ ಓಕುಳಿ ಹಬ್ಬ ಮತ್ತು ಕೋಟೇಶ್ವರದ ಕೊಡಿ ಹಬ್ಬದ ಮಹತ್ವ ಮತ್ತು ವಿಜೃಂಭಣೆಯನ್ನು ಸಾರುವ ನುಡಿಗಟ್ಟು.
‘ವಂಡಾರಿಗೆ ಹ್ವಾಪು ದಾರಿ ಯಾವ್ದ್ ಕೇಂಡ್ರೆ ನನ್ನ ಎತ್ತ್ ಅಂಡಾರ್ ಸೊಪ್ಪ್ಪ್ ತಿಂತಿಲ್ಲ ಅಂದ್ ನಂಬ್ರ್’: ‘ವಂಡಾರಿಗೆ ಹೋಗುವ ದಾರಿ ಯಾವುದು ಅಂತ ಕೇಳಿದರೆ ನನ್ನ ಎತ್ತು ಅಂಡಾರ್ ಸೊಪ್ಪು ತಿನ್ನುವುದಿಲ್ಲ ಅಂತ ಅಂದನಂತೆ’. ಕೇಳಿದ್ದಕ್ಕೆ ಸರಿಯಾದ ಉತ್ತರ ಹೇಳುವ ಬದಲು ಅಸಂಗತ ಅಥವಾ ಅಸಂಬದ್ಧವಾದ ಉತ್ತರ ಹೇಳುವುದು.
‘ಸಿವಾಳ ಕೊಟ್ಕ ಕುತ್ಗಿ ಕೊಯ್ಯೊರ್’: ‘ಸಿಯಾಳ ಕೊಟ್ಟು ಕುತ್ತಿಗೆ ಕುಯ್ಯುವವರು’. ಈ ನುಡಿ ಗಟ್ಟಿನ ಹಿಂದೆ ಸ್ವಾರಸ್ಯಕರವಾದ ಒಂದು ಪ್ರಸಂಗವಿದೆ. ಹನೆಮರ ಹತ್ತಿ, ಕಳ್ಳು ತೆಗೆದು, ಕುದಿಸಿ, ಓಲೆಬೆಲ್ಲ ಮಾಡುವ ಮೂರ್ತೆದಾರನೊಬ್ಬ, ಒಬ್ಬನ ಹತ್ತಿರ ಸ್ವಲ್ಪ ಸಾಲ ಮಾಡಿದ್ದ. ಬಹಳ ಸಮಯ ಕಳೆದರೂ ಮೂರ್ತೆದಾರ ಸಾಲ ಹಿಂದಿರುಗಿಸುವ ಲಕ್ಷಣ ಕಾಣದಾದಾಗ, ಅವನು ಸಾಲ ವಸೂಲಿಗಾಗಿ ಮೂರ್ತೆದಾರನ ಬಳಿ ಬರತೊಗಿದ.
ಪ್ರತಿ ಬಾರಿ ಅವನು ಬಂದಾಗ, ಮೂರ್ತೆದಾರ ತಿನ್ನಲು ಓಲೆಬೆಲ್ಲ, ಕುಡಿಯಲು ಸಿಯಾಳ ಕೊಟ್ಟು, ಏನಾದರೊಂದು ನೆಪ ಹೇಳಿ ಅವನನ್ನು ಬರಿಗೈಲಿ ಸಾಗಹಾಕುತ್ತಿದ್ದ. ಇದೇ ಕ್ರಮ ಹಲವು ದಿನಗಳ ತನಕ ನಡೆದಾಗ, ಅವನು ಸಿಟ್ಟಾಗಿ, ಒಂದು ದಿನ ಮೂರ್ತೆದಾರನಲ್ಲಿಗೆ ಬಂದು ಈವತ್ತು ಸಾಲ ಹಿಂದಿರುಗಿಸಲೇಬೇಕೆಂದು ಪಟ್ಟು ಹಿಡಿದನು.
ಮೂರ್ತೆದಾರನು ಅದಕ್ಕುತ್ತರವಾಗಿ, “ನಾನು ನಿನಗೆ ಕೊಡಬೇಕಾದ ಸಾಲವನ್ನು ಹಿಂದಿರು ಗಿಸಿಯಾಗಿದೆ. ನೀನು ಪ್ರತಿ ಬಾರಿ ಬಂದಾಗ ತಿಂದ ಬೆಲ್ಲ ಹಾಗೂ ಕುಡಿದ ಸಿಯಾಳಕ್ಕೆ ಅದು ವಜಾ ಆಗಿದೆ" ಅಂದನು. ಅಲ್ಲದೆ, ಅವನು ಕುಡಿದ ಸಿಯಾಳಗಳ ಖಾಲಿ ಬುರುಡೆ ಹಾಗೂ ತಿಂದ ಓಲೆಬೆಲ್ಲಗಳ ಓಲೆಯುಂಗುರಗಳನ್ನೆಲ್ಲ ಮೂರ್ತೆದಾರನು ಕೆರೆಯಲ್ಲಿ ಹಾಕಿ ಸಂಗ್ರಹಿಸಿದ್ದು, ಅವುಗಳನ್ನೆಲ್ಲ ಲೆಕ್ಕ ಹಾಕಿದಾಗ, ಅವನೇ ಮೂರ್ತೆದಾರನಿಗೆ ಹಣ ಕೊಡಬೇಕಾಯಿತು! (ಪುಟ 665).
ಇಂಥ ಹಲವು ವಿಶಿಷ್ಟ ನುಡಿಗಟ್ಟುಗಳ ಮಾಹಿತಿ, ವಿವರ, ಅವುಗಳ ಬಳಕೆಯ ಹಿಂದಿನ ಐತಿಹ್ಯ ಎಲ್ಲವನ್ನೂ ಈ ಪುಸ್ತಕದಲ್ಲಿ ಸಂಗ್ರಹಿಸಿರುವ ಪರಿ ಅನನ್ಯ. ಕರ್ನಾಟಕದ ಇತರ ಭಾಗದ ಜನರಿಗೆ ಇವುಗಳನ್ನು ಅರ್ಥಮಾಡಿಕೊಳ್ಳಲು ತುಸು ಕಷ್ಟವಾದೀತು ಎಂಬುದು ಸಹಜ ಅಭಿಪ್ರಾಯ.
ಅದರಲ್ಲಿ ತಥ್ಯವೂ ಇದೆ. ಉದಾಹರಣೆಗೆ, ಮೇಲೆ ನೀಡಿರುವ ಕೊನೆಯ ನುಡಿಗಟ್ಟಿನ ಅರ್ಥ ದಲ್ಲಿ ಕೆಲವು ಪದಗಳ ಬಳಕೆಯು ಹೊಸದು ಎನಿಸಬಹುದು. ‘ಮೂರ್ತೆದಾರ’ ಎಂದರೆ ಕಳ್ಳು ಸಂಗ್ರಹಿಸಿ, ಮಾರಿ, ವ್ಯಾಪಾರ ಮಾಡುವವನು. ‘ಓಲೆಬೆಲ್ಲ’ ಎಂದರೆ ಕಳ್ಳಿನಿಂದ ತಯಾರಿಸುವ ಬೆಲ್ಲ. ‘ಸಿಯಾಳ’ ಎಂದರೆ ಎಳನೀರು. ‘ಹನೆ ಮರ’ ಅಂದರೆ ತಾಳೆ ಮರ. ಈ ಒಂದು ನುಡಿಗಟ್ಟನ್ನು ಬಗೆಯುತ್ತಾ ಹೋದರೆ, ಇನ್ನೂ ಒಂದಿಷ್ಟು ಅರ್ಥಗಳನ್ನು ಹುಡು ಕಲು ಸಾಧ್ಯ ಮತ್ತು ಇದು ಕುಂದಾಪುರ ಪ್ರದೇಶದ ಜನಜೀವನವನ್ನು ಸಹ ವಿವರಿಸುತ್ತದೆ!
ಇಂಥ ಹಲವು ನುಡಿಗಟ್ಟುಗಳು, ಅರ್ಥ ಸಹಿತ ‘ಕುಂದಾಪ್ರ ಕನ್ನಡ ನಿಘಂಟು’ವಿನಲ್ಲಿ ಅಡಕಗೊಂಡಿದ್ದು, ಈ ನಿಘಂಟಿನ ಮೌಲ್ಯವನ್ನು ವೃದ್ಧಿಸಿವೆ. ಇಂಥದೊಂದು ಅಪರೂ ಪದ ನಿಘಂಟು ಎರಡನೆಯ ಮುದ್ರಣ ಕಂಡಿರುವ ಈ ಸಮಯದಲ್ಲಿ, ಅದರ ಸಂಪಾದಕರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆ ಸಲ್ಲಲೇಬೇಕು.