Dr N Someshwara Column: ಯೋಜಿತ ಸಿ-ಸೆಕ್ಷನ್ ಮಾಡದಿರುವುದೇ ನಮಗಿರುವ ಏಕೈಕ ದಾರಿ
‘ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹುಟ್ಟಿದ ಮಕ್ಕಳಿಗೆ ಬಾಲ್ಯದ ರಕ್ತಾರ್ಬುದ ಅಥವಾ ಚೈಲ್ಡ್ಹುಡ್ ಲ್ಯೂಕೀಮಿಯ ಬರುವ ಸಾಧ್ಯತೆಯು ಹೆಚ್ಚಿರುತ್ತದೆ’ ಎನ್ನುವುದು ಈ ಲೇಖನದ ಒಂದು ಸಾಲಿನ ಸಾರಾಂಶ. ಈ ಸಂಶೋಧನೆಯು ವಿಶ್ವವಿಖ್ಯಾತ ಕರೋಲಿನ್ಸ್ಕ್ ಸಂಸ್ಥೆಯಲ್ಲಿ ನಡೆದಿದೆ. ಇದರ ನೇತೃತ್ವ ವನ್ನು ಕ್ರಿಸ್ಟಿನ-ಇವ್ಮಾರ್ಫಿಯ ಕಂಪಿತ್ಸಿ ಹಾಗೂ ತಂಡದವರು ನಿರ್ವಹಿಸಿದ್ದಾರೆ.


ಕಿವಿಮಾತು
ಈ ಭೂಮಿಯ ಮೇಲಿರುವ ಅತ್ಯಂತ ಕಠಿಣವಾದ ಕೆಲಸವೆಂದರೆ ‘ಪಾಲಕತ್ವ’ ಅಥವಾ ‘ಪೇರೆಂ ಟಿಂಗ್’. ತಮ್ಮ ಮಕ್ಕಳಿಗೆ ಸಂಬಂಧಿಸಿದ ಹಾಗೆ, ಪ್ರತಿಯೊಂದನ್ನು ಯೋಚಿಸಿ, ಯೋಜಿತ ರೂಪದಲ್ಲಿ ಜಾರಿಗೆ ತರಬೇಕಾದ ಗುರುತರವಾದ ಜವಾಬ್ದಾರಿ ಹೆತ್ತವರಿಗೆ ಇರುತ್ತದೆ.
ಅವರು ಒಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡರೆ, ಅದರ ಫಲವನ್ನು ಆ ಮಗುವು ತನ್ನ ಜೀವಮಾನ ಪೂರ್ಣ ಅನುಭವಿಸಬೇಕಾದ ದುರ್ಭರ ಸ್ಥಿತಿಯು ಬರುವ ಸಾಧ್ಯತೆ ಇರುತ್ತದೆ. ಕೆಲವ ರಿಗೆ ಈ ನನ್ನ ಮಾತು ಸ್ವಲ್ಪ ಉತ್ಪ್ರೇಕ್ಷೆಯಿಂದ ಕೂಡಿದೆ ಎಂದು ಅನಿಸಬಹುದು. ಆದರೆ ‘ವಾಸ್ತವವು ವಿಭಿನ್ನವಾಗಿರಲು ಸಾಧ್ಯ’ ಎನ್ನುವ ಸಂಶೋಧಕರ ಹಿತನುಡಿಯ ಕಡೆಗೆ ಒಮ್ಮೆ ಕಿವಿಗೊಡುವುದು ಒಳ್ಳೆಯದು.
ಇದು ವೈದ್ಯರಿಗೂ, ಪಾಲಕರಿಗೂ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲು ನೆರವಾಗಬಹುದು. ಜುಲೈ 4, 2025ರಂದು, ವಿಶ್ವದ ಪ್ರಸಿದ್ಧ ‘ಇಂಟನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್’ ವೈಜ್ಞಾನಿಕ ನಿಯತಕಾಲಿಕದಲ್ಲಿ ಒಂದು ಸಂಶೋಧನಾ ಲೇಖನವು ಪ್ರಕಟವಾಗಿದೆ. ಈ ಸಂಶೋಧನೆಯು ಸ್ವೀಡನ್ ದೇಶದಲ್ಲಿ ನಡೆದಿದೆ.
‘ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹುಟ್ಟಿದ ಮಕ್ಕಳಿಗೆ ಬಾಲ್ಯದ ರಕ್ತಾರ್ಬುದ ಅಥವಾ ಚೈಲ್ಡ್ ಹುಡ್ ಲ್ಯೂಕೀಮಿಯ ಬರುವ ಸಾಧ್ಯತೆಯು ಹೆಚ್ಚಿರುತ್ತದೆ’ ಎನ್ನುವುದು ಈ ಲೇಖನದ ಒಂದು ಸಾಲಿನ ಸಾರಾಂಶ. ಈ ಸಂಶೋಧನೆಯು ವಿಶ್ವವಿಖ್ಯಾತ ಕರೋಲಿನ್ಸ್ಕ್ ಸಂಸ್ಥೆಯಲ್ಲಿ ನಡೆದಿದೆ. ಇದರ ನೇತೃತ್ವವನ್ನು ಕ್ರಿಸ್ಟಿನ-ಇವ್ಮಾರ್ಫಿಯ ಕಂಪಿತ್ಸಿ ಹಾಗೂ ತಂಡದವರು ನಿರ್ವಹಿಸಿದ್ದಾರೆ. ಈ ಸಂಶೋಧನಾ ಪ್ರಬಂಧವನ್ನು ಮಂಡಿಸಲು ಅವರು 25 ಲಕ್ಷ ಮಕ್ಕಳನ್ನು ಅಧ್ಯಯನ ಮಾಡಿದ್ದಾರೆ ಎನ್ನುವುದು ಗಮನೀಯ ವಿಚಾರ.
ಇದನ್ನೂ ಓದಿ: Dr N Someswara Column: ಭೂಲೋಕದ ದೇವತೆಗಳೋ, ಯಮನ ಸೋದರರೋ ?
ಎರಡು ವಿಧಾನ: ಶಿಶುಗಳ ಪ್ರಸವವು ಎರಡು ರೀತಿಯಲ್ಲಿ ನಡೆಯುತ್ತದೆ. ಮೊದಲನೆಯದು ‘ಯೋನಿದ್ವಾರ ಪ್ರಸವ’ ಅಥವಾ ‘ವೈಜೈನಲ್ ಡೆಲಿವರಿ’. ಇದು ನೈಸರ್ಗಿಕ ಪ್ರಸವ ವಿಧಾನವಾಗಿದೆ. ಎರಡನೆಯದು ‘ಉದರಛೇದನ ಪ್ರಸವ’ ಅಥವಾ ‘ಸಿಸೇರಿಯನ್ ಸೆಕ್ಷನ್’ ಇಲ್ಲವೇ ‘ಸಿ-ಸೆಕ್ಷನ್ ಪ್ರಸವ’. ಇದು ಮಾನವ ರೂಪಿಸಿದ ಕೃತಕ ಪ್ರಸವ ವಿಧಾನ. ತಾಯಿ ಅಥವಾ ಮಗುವಿನ ಜೀವಕ್ಕೆ ಅಪಾಯ ವಿದೆ ಎನ್ನುವ ಸಂದರ್ಭಗಳಲ್ಲಿ, ಸಹಜ ಪ್ರಸವಕ್ಕೆ ಅನುವು ಮಾಡಿಕೊಡದೆ, ತಾಯಿಯ ಉದರ ವನ್ನು ಛೇದಿಸಿ, ಮಗುವನ್ನು ಹೊರತೆಗೆಯುವ ವಿಧಾನ.
ಈ ವಿಧಾನದ ಮೂಲಕ ಪ್ರಸವವನ್ನು ನಡೆಸಿದಾಗ, ತಾಯಿ ಮತ್ತು ಮಗುವಿನ ಆರೋಗ್ಯ ಸುರಕ್ಷಿತ ವಾಗಿರುತ್ತವೆ ಎನ್ನುವುದು ಬಹಳ ಮುಖ್ಯ ವಿಚಾರ. ಸಿ-ಸೆಕ್ಷನ್ ಮಾಡದೆ, ಯೋನಿದ್ವಾರ ಪ್ರಸವಕ್ಕೆ ಅವಕಾಶವನ್ನು ಮಾಡಿಕೊಟ್ಟರೆ ತಾಯಿ ಸಾಯಬಹುದು ಅಥವಾ ಮಗುವು ಸಾಯಬಹುದು ಇಲ್ಲವೇ ಇಬ್ಬರೂ ಸಾಯಬಹುದು. ಇಂಥ ಸಂದರ್ಭಗಳಲ್ಲಿ ಸಿ-ಸೆಕ್ಷನ್ ಎನ್ನುವ ಶಸ್ತ್ರಚಿಕಿತ್ಸೆ ‘ಜೀವರಕ್ಷಕ’ ಚಿಕಿತ್ಸೆ ಎನ್ನುವುದರಲ್ಲಿ ಅನುಮಾನವಿಲ್ಲ.
ಅಸಹಜ: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ, ಒಟ್ಟು ಪ್ರಸವಗಳಲ್ಲಿ ಶೇ.10-15ರಷ್ಟು ಪ್ರಸವಗಳನ್ನು ಸಿ-ಸೆಕ್ಷನ್ ಮೂಲಕ ನಡೆಸುವ ಸಾಧ್ಯತೆ ಇರುತ್ತದೆ. ಇದುವೇ ಸಹಜ ಪ್ರಮಾಣದ ಸಿ-ಸೆಕ್ಷನ್ ಎಂದಿದೆ. 2016ರಲ್ಲಿ ಭಾರತದಲ್ಲಿ ನಡೆದ ಸಿ-ಸೆಕ್ಷನ್ ಪ್ರಮಾಣವು ಶೇ.17.2ರಷ್ಟು ಇತ್ತು. 2021ರಲ್ಲಿ ಈ ಪ್ರಮಾಣವು ಶೇ.21.5ಕ್ಕೆ ಏರಿದೆ. ಅಂದರೆ ವರ್ಷಕ್ಕೆ ಸರಿಸುಮಾರು 25 ದಶಲಕ್ಷ ಪ್ರಸವ ಗಳು ನಡೆದರೆ, ಅವುಗಳಲ್ಲಿ 5.4 ದಶಲಕ್ಷ ಮಕ್ಕಳು ಸಿ-ಸೆಕ್ಷನ್ ಮೂಲಕ ಜನಿಸುತ್ತವೆ ಎಂದಾಯಿತು.
ಇದು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಟ್ಟಾರೆ ಸಂಖ್ಯೆ. ಕೇವಲ ಖಾಸಗಿ ಆಸ್ಪತ್ರೆಗಳನ್ನು ಗಮನಿಸುವುದಾದರೆ ಅಲ್ಲಿ ಶೇ.47ರಷ್ಟು ಪ್ರಸವಗಳು ಸಿ-ಸೆಕ್ಷನ್ ಮೂಲಕವೇ ನಡೆಯುತ್ತವೆ. ಅದರಲ್ಲೂ ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಶೇ.60ಕ್ಕಿಂತಲೂ ಹೆಚ್ಚು ಪ್ರಸವಗಳು ಸಿ-ಸೆಕ್ಷನ್ ಮೂಲಕವೇ ನಡೆಯುತ್ತವೆ ಎನ್ನುವುದು ಕಳವಳಕಾರಿ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಮೇಲ್ಕಂಡ ಲೇಖನದ ಅಂತಿಮ ಸಾರಾಂಶವು ಜನಸಾಮಾನ್ಯರನ್ನು ಭಯಭೀತ ರನ್ನಾಗಿಸಿದೆ. ಹಾಗಾಗಿ ಈ ವಿಷಯದ ಮುಖ್ಯಾಂಶಗಳನ್ನು ಸರಳವಾಗಿ ಗ್ರಹಿಸಲು ಪ್ರಯತ್ನಿಸೋಣ. ಬಾಲ್ಯದ ರಕ್ತಾರ್ಬುದ: ಸಂಶೋಧನಾ ಪ್ರಬಂಧದ ತಿರುಳನ್ನು ಗ್ರಹಿಸುವ ಮೊದಲು ಮಕ್ಕಳ ಬಾಲ್ಯ ದಲ್ಲಿ ಬರುವಂಥ ರಕ್ತಾರ್ಬುದ ಅಥವಾ ಚೈಲ್ಡ್ಹುಡ್ ಲ್ಯುಕೀಮಿಯದ ಬಗ್ಗೆ ಒಂದಷ್ಟು ಪರಿಚಯವನ್ನು ಮಾಡಿಕೊಳ್ಳೋಣ.
ಲ್ಯುಕೀಮಿಯ ಎಂದರೆ ಅಸ್ಥಿಮಜ್ಜೆ ಮತ್ತು ರಕ್ತಕ್ಕೆ ಸಂಬಂಧಿಸಿದ ಕ್ಯಾನ್ಸರ್. ನಮ್ಮ ಅಸ್ಥಿಮಜ್ಜೆ ಎನ್ನುವುದು ಒಂದು ಕಾರ್ಖಾನೆಯಂತೆ! ಇಲ್ಲಿ ಕೆಂಗಣಗಳು, (ಕೆಂಪು ರಕ್ತಕಣಗಳು, ರೆಡ್ ಬ್ಲಡ್ ಕಾರ್ಪಸಲ್ಸ್), ಬಿಳ್ಕಣಗಳು (ಬಿಳಿ ರಕ್ತ ಕಣಗಳು, ವೈಟ್ ಬ್ಲಡ್ ಕಾರ್ಪಸಲ್ಸ್), ಕಿರುಬಿಲ್ಲೆ (ಪ್ಲೇಟ್ಲೆಟ್) ಇತ್ಯಾದಿಗಳ ಉತ್ಪಾದನೆಯು ನಾವು ಹುಟ್ಟುವ ಮೊದಲೇ ಆರಂಭವಾಗಿ ನಾವು ಸಾಯುವ ಕೊನೆಯ ಕ್ಷಣದ ವರೆಗೆ ಮುಂದುವರಿಯುತ್ತದೆ.
ಕೆಂಗಣಗಳು ಶ್ವಾಸಕೋಶದಲ್ಲಿರುವ ಆಕ್ಸಿಜನ್ ಅನ್ನು, ನಮ್ಮ ದೇಹದ ಪ್ರತಿಯೊಂದು ಜೀವಕೋಶ ಗಳಿಗೆ ವಿತರಿಸುತ್ತದೆ. ಬಿಳ್ಕಣಗಳು ‘ಮಾನವ ದೇಹದ ಮಿಲಿಟರಿ ಪಡೆ’ಯ ಅಥವಾ ಇಮ್ಯೂನ್ ಸಿಸ್ಟಮ್ಮಿನ ಪ್ರಮುಖ ಘಟಕ. ನಮ್ಮ ದೇಹವನ್ನು ಸೋಂಕು ರೋಗಗಳಿಂದ, ಭಯೋತ್ಪಾದನೆ ಗಳಿಂದ ರಕ್ಷಿಸುತ್ತದೆ. ಕಿರುಬಿಲ್ಲೆಗಳು ಸಕಾಲದಲ್ಲಿ ರಕ್ತಹೆಪ್ಪುಗಟ್ಟಲು ನೆರವಾಗುತ್ತವೆ.
ರಕ್ತಾರ್ಬುದವು ಸಂಭವಿಸಿದಾಗ, ಅಸ್ಥಿಮಜ್ಜೆಯ ಕಾರ್ಖಾನೆಯಲ್ಲಿ ಈ ಕಣಗಳ ಉತ್ಪಾದನೆಯು ಅಲ್ಲೋಲಕಲ್ಲೋಲವಾಗುತ್ತದೆ. ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಬಿಳ್ಕಣಗಳನ್ನು ಉತ್ಪಾದಿಸುವ ಬದಲು, ನಮ್ಮ ದೇಹವನ್ನೇ ಸರ್ವನಾಶ ಮಾಡುವಷ್ಟು ಅತಿಯಾದ ಪ್ರಮಾಣದಲ್ಲಿ ಬಿಳ್ಕಣಗಳು ಉತ್ಪಾದನೆ ಯಾಗುತ್ತವೆ. ಅದರಲ್ಲೂ ವಯಸ್ಕ ಕಣಗಳ ಬದಲು ಎಳೇ ಬಿಳ್ಕಣಗಳೇ (ಲಿಂಫೋ ಬ್ಲಾಸ್ಟ್) ಉತ್ಪಾದನೆಯಾಗುವುದು ಹೆಚ್ಚು. ಈ ಎಳೇ ಕಣಗಳಿಗೆ, ಮಾನವ ದೇಹದ ಮಿಲಿಟರಿ ಪಡೆಯ ಕೆಲಸ ಕಾರ್ಯಗಳನ್ನು ಕರಾರುವಾಕ್ಕಾಗಿ ನಿರ್ವಹಿಸುವ ಸಾಮರ್ಥ್ಯ ಇರುವುದಿಲ್ಲ. ಅವುಗಳ ಸಂಖ್ಯೆಯೇ ವಿಪರೀತವಾಗಿರುವ ಕಾರಣ, ಅವು ಇರುವ ವಯಸ್ಕ ಬಿಳ್ಕಣಗಳಿಗೆ ಸಹಜ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಯನ್ನು ಉಂಟುಮಾಡುತ್ತವೆ.
ಇದು ನಾನಾ ರೀತಿಯ ಅನಾರೋಗ್ಯಗಳಿಗೆ ಎಡೆ ಮಾಡಿಕೊಡುತ್ತದೆ. ಬಾಲ್ಯದಲ್ಲಿ ಬರುವ ಸರ್ವೇ ಸಾಮಾನ್ಯ ರಕ್ತಾರ್ಬುದವನ್ನು ‘ತೀವ್ರಸ್ವರೂಪದ ಎಳೇ ಬಿಳ್ಕಣಗಳ ರಕ್ತಾರ್ಬುದ’ ಅಥವಾ ‘ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೀಮಿಯ’ ಇಲ್ಲವೇ ‘ಎಎಲ್ಎಲ್’ ಎಂದು ಸಂಕ್ಷಿಪ್ತವಾಗಿ ಸೂಚಿಸುವ ಪದ್ಧತಿಯಿದೆ.
ಇದು ಹಲವು ನಮೂನೆಯ ರಕ್ತಾರ್ಬುದಕ್ಕೆ ನೀಡಿರುವ ಒಂದು ಸಮಷ್ಟಿ ಹೆಸರು. ಇದರಲ್ಲಿ ಒಂದು ಪ್ರಭೇದವಿದೆ. ಅದನ್ನು ‘ಬಿ-ಸೆಲ್ ಪ್ರಿಕರ್ಸರ್-ಎಎಲ್ಎಲ್’ ಅಥವಾ ಸಂಕ್ಷಿಪ್ತವಾಗಿ ‘ಬಿ-ಎಎಲ್ ಎಲ್’ ಎಂದು ಕರೆಯುವರು. ಈ ಪ್ರಭೇದವು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತದೆ. ಎಎಲ್ಎಲ್, ಅತ್ಯಂತ ತ್ವರಿತವಾಗಿ ಅಭಿವರ್ಧನೆಯಾಗುವ ಕ್ಯಾನ್ಸರ್. ಆದರೆ, ಇದು ಎಳೆಯ ಕಂದಮ್ಮಗಳನ್ನು ಅಕಾಲದಲ್ಲಿ ಕೊಲ್ಲದಂತೆ ತಡೆಗಟ್ಟುವ ಅತ್ಯುತ್ತಮ ಔಷಧಗಳು ಮಾರುಕಟ್ಟೆಯಲ್ಲಿ ಇಂದು ದೊರೆಯುತ್ತಿವೆ.
ಪ್ರಸವ ವಿಧಾನ: ಬಾಲ್ಯದ ರಕ್ತಾರ್ಬುದ ವಿವರಣೆಯನ್ನು ಓದಿದ ಮೇಲೆ, ಪ್ರಸವ ವಿಧಾನಕ್ಕೂ ಹಾಗೂ ರಕ್ತಾರ್ಬುದ ಕಂಡುಬರುವುದಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಎಂದು ಅನಿಸಬಹುದು. ಇದು ಸಹಜ. ಶಿಶುವು ತಾಯಿಯ ಒಡಲಿನಲ್ಲಿ ಸ್ವಸ್ಥವಾಗಿ ಮಲಗಿರುತ್ತದೆ. ಮಗುವಿನ ಎಲ್ಲ ಅಗತ್ಯಗಳನ್ನು ತಾಯಿಯ ಶರೀರವೇ ನೋಡಿಕೊಳ್ಳುತ್ತಿರುತ್ತದೆ. ಶಿಶುವು ಇಂಥ ಸುರಕ್ಷಿತ ಪರಿಸರವನ್ನು ಬಿಟ್ಟು, ಸ್ವತಂತ್ರವಾಗಿ ತನ್ನ ಬದುಕನ್ನು ಆರಂಭಿಸಲು ತಾಯ ಒಡಲಿನಿಂದ ಹೊರಬರುತ್ತದೆ. ಆಗ ಈ ಜಗತ್ತು ಒಡ್ಡುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಬದುಕಬೇಕಾಗುತ್ತದೆ.
ಅಂಥ ಸವಾಲುಗಳನ್ನು ಎದುರಿಸಲು ಶಿಶುವಿನ ‘ಮಿಲಿಟರಿ ಪಡೆ’ ಅಥವಾ ‘ಇಮ್ಯೂನ್ ಸಿಸ್ಟಮ್’ ಸರ್ವಶಕ್ತವಾಗಿರಬೇಕು. ಮಿಲಿಟರಿ ಪಡೆಯ ಅಂಥ ಶಕ್ತಿಯು ಬೆಳೆಯಲು ಮಗುವಿನ ಜನನ ಮಾರ್ಗ ವು ಕಾರಣವಾಗುತ್ತದೆ ಎನ್ನುವ ವಿಚಾರವು ಆಶ್ಚರ್ಯಕರವಾಗಿದೆ.
ನೈರ್ಮಲ್ಯ ಪರಿಕಲ್ಪನೆ: ವಿಜ್ಞಾನಿಗಳು ‘ನೈರ್ಮಲ್ಯ ಪರಿಕಲ್ಪನೆ’ ಅಥವಾ ‘ಹೈಜೀನ್ ಹೈಪಾಥೆಸಿಸ್’ ಎಂಬುದನ್ನು ಮಂಡಿಸಿದ್ದಾರೆ. ಈ ಪರಿಕಲ್ಪನೆಯ ಅನ್ವಯ, ಕೆಲವು ಬ್ಯಾಕ್ಟೀರಿಯ ಹಾಗೂ ವೈರಸ್ಸು ಗಳು, ನಮ್ಮ ದೇಹದ ಮಿಲಿಟರಿ ಪಡೆಗೆ ವೈರಿಗಳನ್ನು ನಿಗ್ರಹಿಸುವುದು ಹೇಗೆ ಎನ್ನುವುದರ ಬಗ್ಗೆ ‘ತರಬೇತಿ’ಯನ್ನು ನೀಡುತ್ತವೆ. ಶಿಶುವಿನ ಮಿಲಿಟರಿ ಪಡೆಯು ಈ ಆರಂಭಿಕ ತರಬೇತಿಯನ್ನು ಪಡೆಯದಿದ್ದರೆ, ಅದು ಸಶಕ್ತವಾಗಿ ಬೆಳೆಯುವ ಸಾಧ್ಯತೆ ಕಡಿಮೆಯಿರುತ್ತದೆ. ಅಂಥ ಶಿಶುವಿಗೆ ಭವಿಷ್ಯದಲ್ಲಿ ಹಲವು ಕಾಯಿಲೆಗಳು ಬರಬಹುದು. ಅವುಗಳಲ್ಲಿ ಅಲರ್ಜಿ, ಅಸ್ತಮ, ನಮೂನೆ-1 ಮಧುಮೇಹ ಹಾಗೂ ಕೆಲವು ರೀತಿಯ ಕ್ಯಾನ್ಸರುಗಳು ಮುಖ್ಯವಾದವು.
ಯೋನಿ ಪ್ರಸವ ಮತ್ತು ಉದರ ಛೇದನ ಪ್ರಸವ: ಒಂದು ಮಗುವು ಯೋನಿದ್ವಾರದ ಮೂಲಕ ಜನಿಸಿದರೆ, ತಾಯಿಯ ಯೋನಿದ್ವಾರದಲ್ಲಿರುವ ಉಪಯುಕ್ತ ಬ್ಯಾಕ್ಟೀರಿಯಗಳು ಶಿಶುವಿನ ಉದರ ವನ್ನು ಸೇರುತ್ತವೆ. ಈ ಬ್ಯಾಕ್ಟೀರಿಯಗಳು ಶಿಶುವಿನ ಮಿಲಿಟರಿ ಪಡೆಗೆ ಅಗತ್ಯ ತರಬೇತಿಯನ್ನು ನೀಡಿ, ಅದನ್ನು ಸಶಕ್ತಗೊಳಿಸುತ್ತವೆ. ಮಗುವು ಯೋನಿಯ ಬದಲು ಉದರ ಛೇದನದ ಮೂಲಕ ಹುಟ್ಟಿ ದರೆ, ಆ ಮಗುವು ತಾಯಿಯ ಯೋನಿದ್ವಾರ ಬ್ಯಾಕ್ಟೀರಿಯಗಳ ಸಂಪರ್ಕಕ್ಕೆ ಬರುವುದಿಲ್ಲ.
ಬದಲಿಗೆ ಶಿಶುವು ಮೊದಲ ಬಾರಿಗೆ ಅತ್ತಾಗ, ಆಸ್ಪತ್ರೆಯ ಪ್ರಸವ ಕೊಠಡಿಯಲ್ಲಿರುವ ಬ್ಯಾಕ್ಟೀರಿಯ ಗಳು ಮಗುವಿನ ಶರೀರವನ್ನು ಸೇರುತ್ತವೆ. ಇವು ಎಂಥ ಬ್ಯಾಕ್ಟೀರಿಯಗಳು, ಇವು ತರಬೇತಿಯನ್ನು ಮಿಲಿಟರಿ ಪಡೆಗೆ ನೀಡುತ್ತವೆಯೇ ಎನ್ನುವುದರ ಬಗ್ಗೆ ಯಾವ ಭರವಸೆಯನ್ನೂ ನೀಡಲಾಗದು. ಹಾಗಾಗಿ ಅವು ಮಿಲಿಟರಿ ಪಡೆಗೆ ಅಗತ್ಯ ತರಬೇತಿಯನ್ನು ನೀಡಲು ವಿಫಲವಾಗುತ್ತವೆ.
ಒತ್ತಡ ಹಾರ್ಮೋನುಗಳು: ಪ್ರಸವ ಎಂದರೆ ಮರುಹುಟ್ಟು ಎಂಬ ನಂಬಿಕೆಯಿದೆ. ಕೆಲವು ತಾಯಂದಿರು ಪ್ರಸವದ ನೋವನ್ನು ಸಹಿಸಲು ಸಿದ್ಧವಿರುವುದಿಲ್ಲ. ಇನ್ನು ಕೆಲವು ತಾಯಂದಿರು ಮೌಢ್ಯದ ಪ್ರತೀಕವಾಗಿರುತ್ತಾರೆ. ಅವರಿಗೆ ಶಿಶುವು ಇಂಥ ತಿಥಿ, ಇಂಥ ನಕ್ಷತ್ರ, ಇಂತಿಷ್ಟೇ ಹೊತ್ತಿಗೆ ಹುಟ್ಟಬೇಕು ಎಂದು ಶಿಶುವಿನ ‘ಹಣೆಬರಹ’ವನ್ನು ಬರೆಯಲು ಮುಂದಾಗಿರುತ್ತಾರೆ.
ಅದರಂತೆಯೇ ಉದರ ಛೇದನ ಪ್ರಸವವನ್ನು ಮಾಡಿಸಿಕೊಂಡು ಮಗುವನ್ನು ‘ಹೆರು’ತ್ತಾರೆ. ಆದರೆ ವಿಜ್ಞಾನವು ಭಿನ್ನ ವಿಚಾರವನ್ನು ಮಂಡಿಸುತ್ತದೆ. ಯೋನಿ ಪ್ರಸವ ಎನ್ನುವುದು, ತಾಯಿಗೆ ಮಾತ್ರ ವಲ್ಲ, ಶಿಶುವಿಗೂ ಬಹುದೊಡ್ಡ ಸವಾಲಾಗಿರುತ್ತದೆ. ತಾಯಿ ಮತ್ತು ಶಿಶು ಇಬ್ಬರೂ ಅಪಾರ ಒತ್ತಡ ದಲ್ಲಿರುತ್ತಾರೆ. ತಾಯಿಗೆ ಸುರಕ್ಷಿತವಾಗಿ ಹೆರುವ ಆತಂಕವಾದರೆ, ಶಿಶುವಿಗೆ (ತಾಯಿಯನ್ನು ಕೊಲ್ಲದೇ) ಆರೋಗ್ಯಕರವಾಗಿ ಹೊರಜಗತ್ತಿಗೆ ಬರುವ ತುಡಿತವಿರುತ್ತದೆ. ಹಾಗಾಗಿ ತಾಯಿ ಮತ್ತು ಶಿಶು ಇಬ್ಬರೂ ಅತೀವ ಒತ್ತಡದಲ್ಲಿರುತ್ತಾರೆ. ಒತ್ತಡ ಹಾರ್ಮೋನುಗಳು (ಸ್ಟ್ರೆಸ್ ಹಾರ್ಮೋನ್ಸ್) ತಾಯಿ ಮತ್ತು ಶಿಶುವಿನ ಒಡಲುಗಳಲ್ಲಿ ಸಕ್ರಿಯವಾಗಿರುತ್ತವೆ. ಈ ಒತ್ತಡ ಹಾರ್ಮೋನುಗಳು ಶಿಶುವಿನ ಮಿಲಿಟರಿ ಪಡೆಯನ್ನು ಪರಿಪಕ್ವಗೊಳಿಸುತ್ತವೆ. ಉದರ ಛೇದನದ ಮೂಲಕ ಹುಟ್ಟುವ ಮಗುವಿಗೆ, ಈ ಒತ್ತಡ ಹಾರ್ಮೋನುಗಳು ಹೇಳುವ ಪಾಠವನ್ನು ಕಲಿಯುವ ಅವಕಾಶವಿರುವುದಿಲ್ಲ.
ಅದು ಅಗತ್ಯ ತರಬೇತಿಯಿಂದ ವಂಚಿತವಾಗಿರುತ್ತದೆ. ಹಾಗಾಗಿ ಅವುಗಳ ಮಿಲಿಟರಿ ಪಡೆಯು ಅಪಕ್ವವಾಗಿರುತ್ತದೆ ಎನ್ನಬಹುದು. ಸಿ-ಸೆಕ್ಷನ್ ಮೂಲಕ ಹುಟ್ಟುವ ಮಕ್ಕಳಲ್ಲಿ ರಕ್ತಾರ್ಬುದ ಕಂಡುಬರುವ ಸಾಧ್ಯತೆಯು ಹೆಚ್ಚಿರುತ್ತದೆ ಎನ್ನುವ ವಿಷಯವು ಹೊಸದೇನಲ್ಲ. ಈ ಹಿಂದೆಯೂ ಸಂಶೋಧಕರಿಗೆ ಗೊತ್ತಿತ್ತು. ಆದರೆ ಹಲವು ಸಂಶೋಧಕರು ಮಂಡಿಸಿದ ಫಲಿತಾಂಶಗಳು ಭಿನ್ನ ವಾಗಿದ್ದವು. ಹಾಗಾಗಿ ಸಂಶೋಧಕರಲ್ಲಿ ಏಕಾಭಿಪ್ರಾಯವಿರಲಿಲ್ಲ.
ಇವರೆಲ್ಲರೂ ಸಣ್ಣ ಪುಟ್ಟ ಪ್ರಮಾಣದಲ್ಲಿ ಮಾತ್ರ ಸಿ-ಸೆಕ್ಷನ್ ಮಕ್ಕಳ ಅಧ್ಯಯನವನ್ನು ಮಾಡಿದ್ದರು. ಆದರೆ ಈಗ ಸ್ವೀಡಿಶ್ ಅಧ್ಯಯನದಲ್ಲಿ ಒಟ್ಟು 25 ಲಕ್ಷ ಮಕ್ಕಳನ್ನು ಅಧ್ಯಯನ ಮಾಡಿ, ಸಿ-ಸೆಕ್ಷನ್ ಮೂಲಕ ಜನಿಸಿದ ಮಕ್ಕಳಲ್ಲಿ ಬಾಲ್ಯ ರಕ್ತಾರ್ಬುದವು ಕಂಡುಬರುವ ಸಾಧ್ಯತೆ ಹೆಚ್ಚಿದೆ ಎನ್ನುವು ದನ್ನು ನಿರೂಪಿಸಿರುವಾಗ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಕಾಲವು ಈಗ ಬಂದಿದೆ ಎನ್ನಬಹುದು.
ಹಾಗಾಗಿ ಸ್ವೀಡಿಶ್ ಅಧ್ಯಯನದ ಮುಖ್ಯಾಂಶಗಳನ್ನು ಈಗ ಪರಿಗಣಿಸೋಣ. ಅಧ್ಯಯನ ಸಾಮಗ್ರಿ: ಸ್ವೀಡನ್ ದೇಶವು ತನ್ನ ಪ್ರಜೆಗಳ ಬಗ್ಗೆ ಹಾಗೂ ಅವರ ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದೆ. ಈ ಮಾಹಿತಿಯು ಪ್ರಸ್ತುತ ಅಧ್ಯಯನಕ್ಕೆ ಮೂಲವಾಗಿದೆ. ಆ ಮಾಹಿತಿಯ ಮುಖ್ಯಾಂಶ ಗಳನ್ನು ಗಮನಿಸೋಣ.
25 ಲಕ್ಷ ಮಕ್ಕಳು: ಸ್ವೀಡನ್ ದೇಶದಲ್ಲಿ 1582-89ರ ನಡುವೆ ಹುಟ್ಟಿದ ಹಾಗೂ 1999-2014ರವರೆಗೆ ಹುಟ್ಟಿದ 25 ಲಕ್ಷ ಶಿಶುಗಳ ಮಾಹಿತಿಯನ್ನು ಈ ಅಧ್ಯಯನದಲ್ಲಿ ಬಳಸಿಕೊಂಡಿದ್ದಾರೆ. ಹಾಗಾಗಿ ಈ ಅಧ್ಯಯನವು ನಂಬಲರ್ಹವಾದದ್ದು ಎನ್ನುವ ತೀರ್ಮಾನಕ್ಕೆ ಬರಬಹುದು.
ಜನನ ವಿವರಗಳು: ಶಿಶುವಿನ ಜನನವು ಹೇಗಾಯಿತು ಎನ್ನುವುದರ ಬಗ್ಗೆ ಸಮಗ್ರ ಮಾಹಿತಿಯಿದೆ. ಶಿಶು ಜನನವು ಮೂರು ರೀತಿಯಲ್ಲಿ ಆಗಬಹುದು. ಮೊದಲನೆಯದು ನೈಸರ್ಗಿಕ ಯೋನಿ ದ್ವಾರ ಜನನ. ಎರಡನೆಯದು ಸಹಜ ಪ್ರಸವಕ್ಕೆ ಆಣಿಯಾಗಿದ್ದ ತಾಯಿಯಲ್ಲಿ, ಸಹಜ ಪ್ರಸವದ ಕೆಲವು ಹಂತಗಳು ನಡೆದಿದ್ದು, ಹಠಾತ್ತನೇ ಅನಿರೀಕ್ಷಿತ ಅವಘಡಗಳು ಸಂಭವಿಸಿದಾಗ, ತಾಯಿ ಮತ್ತು ಶಿಶುವಿನ ಜೀವವನ್ನು ಉಳಿಸಲು ‘ತುರ್ತು ಉದರ ಛೇದನ ಪ್ರಸವ’ ಅಥವಾ ಎಮರ್ಜೆನ್ಸಿ ಸಿ-ಸೆಕ್ಷನ್ ಮೂಲಕ ಜನನ. ಮೂರನೆಯದು ‘ಯೋಜಿತ ಉದರ ಛೇದನ’ ಜನನ ಅಥವಾ ‘ಪ್ಲಾನ್ಡ್ ಸಿ-ಸೆಕ್ಷನ್ ಬರ್ಥ್ಸ್’. ‘ಎಮರ್ಜೆನ್ಸಿ’ ಸಿ-ಸೆಕ್ಷನ್ ಮತ್ತು ‘ಪ್ಲಾನ್ಡ್’ ಸಿ-ಸೆಕ್ಷನ್ ಜನನಗಳ ನಡುವೆ ಗಮನೀಯ ಹಾಗೂ ಗಣನೀಯ ವ್ಯತ್ಯಾಸ ಇರುವುದನ್ನು ಈ ಬೃಹತ್ ಅಧ್ಯಯನವು ಬೆಳಕಿಗೆ ತಂದಿದೆ.
ರಕ್ತಾರ್ಬುದ ರೋಗನಿಧಾನ: ಸಂಶೋಧಕರು ಜನನ ಮಾಹಿತಿಯನ್ನು, ಸ್ವೀಡನ್ನಿನ ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟರ್ ಜತೆಯಲ್ಲಿ ಹೋಲಿಸಿದರು. ಮುಖ್ಯವಾಗಿ 20 ವರ್ಷಗಳ ಒಳಗೆ ಎಎಲ್ಎಲ್ಗೆ ತುತ್ತಾಗಿರುವ ಮಕ್ಕಳ ಪಟ್ಟಿಯನ್ನು ಮಾಡಿದರು.
ಇತರೆ ಮುಖ್ಯಾಂಶಗಳು: ಉದರ ಛೇದನದ ಮೂಲಕ ಯೋಜಿತ ಪ್ರಸವವನ್ನು ಮಾಡಿಸಿಕೊಂಡ ತಾಯಂದಿರ ಆರೋಗ್ಯ ಸಮಸ್ಯೆಗಳನ್ನೂ ಪರಿಗಣಿಸಿದ್ದರು. ಉದಾಹರಣೆಗೆ ತಾಯಿಗೆ ಮಧುಮೇಹ ವಿದ್ದಿರಬಹುದು ಇಲ್ಲವೇ ‘ಜನನ ವೈಪರೀತ್ಯಗಳು’ ಅಥವಾ ‘ಬರ್ಥ್ ಡಿಫೆಕ್ಟ್ಸ್’ ಇದ್ದಿರಬಹುದು. ಇಂಥ ವೈಯುಕ್ತಿಕ ವಿಲಕ್ಷಣಗಳನ್ನೆಲ್ಲ ಪರಿಗಣಿಸಿಯೇ ಈ ಅಧ್ಯಯನವನ್ನು ಪೂರ್ಣಗೊಳಿಸಿಯೇ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದರು.
ಫಲಿತಾಂಶದ ಮುಖ್ಯಾಂಶಗಳು: ಸಂಶೋಧಕರು ತಮ್ಮ ಬಳಿ ಇದ್ದ 25 ಲಕ್ಷ ಶಿಶುಗಳ ಮಾಹಿತಿ ಯನ್ನೆಲ್ಲ ಸಂಗ್ರಹಿಸಿ, ಅಂತಿಮ ತೀರ್ಮಾನಕ್ಕೆ ಬರುವುದು ಹೇಳಿದಷ್ಟು ಸುಲಭದ ಕೆಲಸವಾಗಿರ ಲಿಲ್ಲ. ಆದರೂ ಅವರು ಮಾಡಿದರು. ಅವರ ಅಧ್ಯಯನದ ಮುಖ್ಯಾಂಶಗಳು ಈ ಕೆಳಕಂಡಂತಿವೆ.
ಯೋಜಿತ ಉದರ ಛೇದನ ಜನನ ಮತ್ತು ಎಎಲ್ಎಲ್ ಸಂಭವ ಸಾಧ್ಯತೆ: ಯೋನಿದ್ವಾರ ಜನಿತ ಮಕ್ಕಳಿಗಿಂತ, ಉದರ ಛೇದನದ ಮೂಲಕ ಹುಟ್ಟಿದ ಮಕ್ಕಳಲ್ಲಿ ಎಎಲ್ಎಲ್ ಸಂಭವ ಸಾಧ್ಯತೆಯು ಶೇ.21ರಷ್ಟು ಅಧಿಕವಾಗಿರುತ್ತದೆ.
ಬಿ-ಸೆಲ್ ಪ್ರಿಕರ್ಸರ್ ಎಎಲ್ಎಲ್: ಇದು ಉದರ ಛೇದನ ಜನಿತ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆಯು ಶೇ.29ರಷ್ಟು ಹೆಚ್ಚಿರುತ್ತದೆ.
ತುರ್ತು ಉದರ ಛೇದನ ಜನನ: ಯೋನಿದ್ವಾರ ಜನಿತ ಶಿಶುಗಳಿಗೂ ಹಾಗೂ ತುರ್ತು ಉದರ ಛೇದನಕ್ಕೆ ಒಳಗಾದ ಶಿಶುಗಳಲ್ಲಿ ಎಎಲ್ಎಲ್ ಮತ್ತು ಬಿ-ಸೆಲ್ ಪ್ರಿಕರ್ಸರ್ ಎಎಲ್ಎಲ್ ಕಂಡು ಬರುವ ಸಾಧ್ಯತೆಯಲ್ಲಿ ಅಂಥ ವ್ಯತ್ಯಾಸವೇನಿರಲಿಲ್ಲ.
ಐದು ವರ್ಷದ ಮಕ್ಕಳು: ಯೋಜಿತ ಗರ್ಭಾಶಯ ಛೇದನ ಜನಿತ ಮಕ್ಕಳಲ್ಲಿ ರಕ್ತಾರ್ಬುದವು, ಮಕ್ಕಳಿಗೆ 5 ವರ್ಷಗಳಾಗುವ ಮೊದಲೇ ಸಂಭವಿಸಿತ್ತು. ಇದು ಎಎಲ್ಎಲ್ ಹೆಚ್ಚಿಗೆ ಕಂಡುಬರುವ ವಯಸ್ಸೇ ಆಗಿದೆ.
ಅತ್ಯಲ್ಪ ಸಂಭವ ಸಾಧ್ಯತೆ: ಬಾಲ್ಯದ ರಕ್ತಾರ್ಬುದ ಸಂಭವ ಸಾಧ್ಯತೆಯು ಅತ್ಯಲ್ಪ ಎನ್ನುವ ಮಾಹಿತಿಯನ್ನು ನಾವು ನೆನಪಿನಲ್ಲಿ ಇಡಬೇಕು. ಸ್ವೀಡನ್ ದೇಶದಲ್ಲಿ ಪ್ರತಿವರ್ಷ ಸರಿಸುಮಾರು 50-70 ಬಿ-ಸೆಲ್ ಪ್ರಿಕರ್ಸರ್ ಎಎಲ್ಎಲ್ ಕಂಡುಬರುತ್ತದೆ.
ಯೋಜಿತ ಉದರ ಛೇದನ ಜನನವು, ಈಗ ಹೇಗೆ ನಡೆಯುತ್ತಿದೆಯೋ ಹಾಗೆಯೇ ಮುಂದುವರಿದರೆ, ಈ ಸಂಖ್ಯೆಯು ಎಷ್ಟು ಹೆಚ್ಚಬಹುದು ಎಂದು ಪ್ರಶ್ನೆಯನ್ನು ಕೇಳಿದರೆ ಬಹುಶಃ ‘ಒಂದು ಹೆಚ್ಚುವರಿ ಕೇಸ್ ಆಗುತ್ತದೆ’ ಎನ್ನಬಹುದು. ಅಷ್ಟೇ!
ಪಾಲಕರಿಗೆ ಕಿವಿಮಾತು: ಈ ವೈದ್ಯಕೀಯ ವಿಷಯಗಳೇ ಹಾಗೆ! ಸಂಶೋಧಕರಿಗೆ ಹಾಗೂ ವೈದ್ಯರಿಗೆ ಬಹಳ ಮುಖ್ಯವೆನಿಸುವ ವಿಚಾರಗಳು ಶ್ರೀಸಾಮಾನ್ಯರನ್ನು ಕಂಗಾಲಾಗಿಸಬಹುದು. ಇದೂ ಅಂಥ ಒಂದು ವಿಷಯವೇ! ಹಾಗಾಗಿ ಈ ಸಂಶೋಧನೆಯು ನೀಡಿರುವ ಫಲಿತಾಂಶವನ್ನು ನಮ್ಮ ಪಾಲಕರು ಹೇಗೆ ಸ್ವೀಕರಿಸಬೇಕು ಎಂಬುದರ ಬಗ್ಗೆ ಸ್ಪಷ್ಟ ತಿಳಿವು ಇರಬೇಕು.
ರಕ್ತಾರ್ಬುದ ಅಪರೂಪ: ಸಂಶೋಧಕರು ಈಗಾಗಲೇ ತಿಳಿಸಿರುವ ಹಾಗೆ ಬಾಲ್ಯದ ರಕ್ತಾರ್ಬುದ ವೆನ್ನುವ ಕಾಯಿಲೆಯೇ ಅಪರೂಪವಾದದ್ದು. ಇವುಗಳ ಸಾಧ್ಯತೆಯು ತಲಾ ಶೇ.21 ಹಾಗೂ ಶೇ.29ರಷ್ಟು ಎನ್ನುವ ಅಂಕಿಗಳು ನಮ್ಮನ್ನು ಕಂಗಾಲಾಗಿಸುತ್ತವೆ. ಆದರೆ ಹೆದರಬೇಕಾಗಿಲ್ಲ. ನಮ್ಮ ಮಗುವಿಗೆ ಇಲ್ಲವೇ ನಿಮ್ಮ ಮಗುವಿಗೆ ಈ ಕಾಯಿಲೆ ಬರುವ ಸಾಧ್ಯತೆಯು ತೀರಾ ತೀರಾ ಕಡಿಮೆ.
ಈ ಸಂಶೋಧನೆಯು ‘ನಮೂನೆ-1 ಮಧುಮೇಹ’ ಅಥವಾ ‘ಟೈಪ್-1 ಡಯಾಬಿಟಿಸ್’ ಬರುವ ಸಾಧ್ಯತೆಯು ಸರಿಸುಮಾರು ಶೇ.20ರಷ್ಟು ಹೆಚ್ಚುತ್ತದೆ ಎಂದಿದೆ. ಹಾಗೆಯೇ ಅಸ್ತಮ, ಅಲರ್ಜಿ ಹಾಗೂ ಆಹಾರ ಅಲರ್ಜಿಗಳು ಕಂಡುಬರುವ ಸಾಧ್ಯತೆಯು ಶೇ.20-35ರಷ್ಟು ಹೆಚ್ಚು ಎನ್ನುತ್ತದೆ.
ಜೀವ ರಕ್ಷಕ: ಈ ಲೇಖನವನ್ನು ಓದಿ ಸಿ-ಸೆಕ್ಷನ್ ಬಗ್ಗೆ ನಕಾರಾತ್ಮಕ ಭಾವವನ್ನು ತಳೆಯಬೇಕಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೇ “ಶೇ.10-15ರಷ್ಟು ಪ್ರಕರಣಗಳಲ್ಲಿ ಸಿ-ಸೆಕ್ಷನ್ ಬೇಕಾಗುತ್ತದೆ, ಅದು ತಾಯಿ-ಮಗುವಿನ ಪ್ರಾಣವನ್ನು ಉಳಿಸುತ್ತದೆ" ಎಂದಿದೆ. ಈ ಹಿನ್ನೆಲೆಯಲ್ಲಿ ಪಾಲಕರಿಗೆ ಈ ಅಂತಿಮ ಮಾರ್ಗದರ್ಶನವನ್ನು ನೀಡೋಣ:- ಯಾವಾಗಲೂ ಯೋನಿದ್ವಾರ ಪ್ರಸವವನ್ನೇ ಮಾಡಿಸಿ ಎಂದು ನಾವು ವೈದ್ಯರಿಗೆ ವಿನಂತಿಯನ್ನು ಸಲ್ಲಿಸೋಣ.
- ತುರ್ತು ಸಂದರ್ಭಗಳಲ್ಲಿ ಉದರ ಛೇದನ ಪ್ರಸವಗಳಿಗೆ ಅನುಮತಿಯನ್ನು ನೀಡೋಣ. ತುರ್ತು ಉದರ ಛೇದನ ಪ್ರಸಂಗಗಳಲ್ಲಿ ಎಎಲ್ಎಲ್ ಬರುವ ಸಾಧ್ಯತೆಯು ತೀರಾ ತೀರಾ ಅತ್ಯಲ್ಪ ಎನ್ನುವುದನ್ನು ನೆನಪಿಡೋಣ.
- ಯೋಜಿತ ಉದರ ಛೇದನ ಪ್ರಸವಗಳಿಗೆ ಅನುಮತಿಯನ್ನು ನಿರಾಕರಿಸೋಣ. ಇಂಥ ಮಕ್ಕಳಲ್ಲಿ ಎಎಲ್ಎಲ್ ಕಂಡುಬರುವ ಸಾಧ್ಯತೆಯು ಹೆಚ್ಚಿರುತ್ತದೆ.
? ಸಾರಾಂಶ: ಈ ಸಂಶೋಧನೆಯು ಮತ್ತಷ್ಟು ಕಾಲ ಮುಂದುವರಿಯಬೇಕಾಗಿದೆ. ಈ ಫಲಿತಾಂಶವು ಸ್ವೀಡನ್ ದೇಶಕ್ಕೆ ಮಾತ್ರ ಸಂಬಂಧಪಟ್ಟಿದ್ದು. ನಮ್ಮ ದೇಶದಲ್ಲೂ ಇಂಥ ಒಂದು ಅಧ್ಯಯನ-ಸಂಶೋಧನೆ ನಡೆಯಬೇಕಿದ್ದು, ಭಾರತೀಯರಿಗೆ ಒಂದು ಮಾರ್ಗದರ್ಶನದ ಅಗತ್ಯವಿದೆ ಎನ್ನುವು ದನ್ನು ನೆನಪಿನಲ್ಲಿಡೋಣ. ಅಲ್ಲಿಯವರೆಗೆ, ಯೋಜಿತ ಸಿ-ಸೆಕ್ಷನ್ ಮಾಡದಿರುವುದೇ ನಮಗಿರುವ ಏಕೈಕ ದಾರಿ.