ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gali Anjaneya Temple: ಗಾಳಿ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆ ಒಡೆತನಕ್ಕೆ, 5 ವರ್ಷದ ಬಳಿಕ ಮರಳಿಸುತ್ತೇವೆ ಎಂದ ಸಚಿವರು

Gali Anjaneya Temple: ದೇಗುಲ ಸುಪರ್ದಿಗೆ ವಿರೋಧಿಸಿ ಸಭೆಗೆ ತೀರ್ಮಾನಿಸಲಾಗಿದ್ದು, ದೇಗುಲದ ಆಡಳಿತ ಮಂಡಳಿಯಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾನೂನು ಹೋರಾಟಕ್ಕೆ ಸ್ಥಳೀಯ ಭಕ್ತರು ಕೂಡ ಸಾತ್ ನೀಡಿದ್ದಾರೆ. ಸೋಮವಾರ ಸರ್ಕಾರದ ವಿರುದ್ಧ ಬೃಹತ್ ಸಭೆ ನಡೆಸಲು ದೇಗುಲದ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ.

ಗಾಳಿ ಆಂಜನೇಯ ದೇವಸ್ಥಾನ ಮುಜರಾಯಿ ಇಲಾಖೆ ಒಡೆತನಕ್ಕೆ

ಗಾಳಿ ಆಂಜನೇಯ ದೇವಸ್ಥಾನ

ಹರೀಶ್‌ ಕೇರ ಹರೀಶ್‌ ಕೇರ Jul 12, 2025 3:04 PM

ಬೆಂಗಳೂರು: ಬೆಂಗಳೂರಿನ (Bengaluru) ಮೈಸೂರು ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು (Gali Anjaneya Temple) ಮುಜರಾಯಿ ಇಲಾಖೆ (Muzrai Department) ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯಿಂದ ಇಂದು (ಜು.12) ದೇಗುಲದ ಖಜಾನೆಯನ್ನು ಸೀಜ್ ಮಾಡಲಾಗಿದೆ. ಈಗಾಗಲೇ ದೇಗುಲದಲ್ಲಿ ಸರ್ಕಾರಿ ಸಿಬ್ಬಂದಿ ಕಾರ್ಯನಿರ್ವಹಣೆ ಕೂಡ ಆರಂಭವಾಗಿದೆ. ಆದರೆ ದೇಗುಲದ ಆಡಳಿತ ಮಂಡಳಿ, ಸ್ಥಳೀಯರು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಅಧಿಕಾರಿಗಳು ದೇವಾಲಯದ ಲಾಕರ್‌ಗೆ ನೋಟಿಸ್ ಅಂಟಿಸಿ ಬಂದ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಖಜಾನೆ, ಲಾಕರ್ ತೆರೆಯುವಂತಿಲ್ಲ. ವಿರೋಧದ ನಡುವೆಯೂ ಗಾಳಿ ಆಂಜನೇಯ ಸ್ವಾಮಿ ದೇಗುಲ ಈ ಮೂಲಕ ಅಧಿಕೃತವಾಗಿ ಮುಜರಾಯಿ ಇಲಾಖೆಯ ಸುಪರ್ದಿಗೆ ಬಂದಂತಾಗಿದೆ. ದೇಗುಲ ಸುಪರ್ದಿಗೆ ವಿರೋಧಿಸಿ ಸಭೆಗೆ ತೀರ್ಮಾನಿಸಲಾಗಿದ್ದು, ದೇಗುಲದ ಆಡಳಿತ ಮಂಡಳಿಯಿಂದ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾನೂನು ಹೋರಾಟಕ್ಕೆ ಸ್ಥಳೀಯ ಭಕ್ತರು ಕೂಡ ಸಾತ್ ನೀಡಿದ್ದಾರೆ. ಸೋಮವಾರ ಸರ್ಕಾರದ ವಿರುದ್ಧ ಬೃಹತ್ ಸಭೆ ನಡೆಸಲು ದೇಗುಲದ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿದೆ.

5 ವರ್ಷದ ಬಳಿಕ ಮರಳಿಸುತ್ತೇವೆ: ರಾಮಲಿಂಗಾರೆಡ್ಡಿ

ಈ ಕ್ರಮ ತಾತ್ಕಾಲಿಕ. 5 ವರ್ಷದ ನಂತರ ದೇಗುಲವನ್ನು ಟ್ರಸ್ಟ್‌ಗೆ ವಾಪಸ್ ಕೊಡುತ್ತೇವೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಹಣದ ದುರುಪಯೋಗ ಆಗಿದೆ. ಹೀಗಾಗಿ ಈ ಕ್ರಮ. 5 ವರ್ಷದ ಬಳಿಕ ದೇಗುಲವನ್ನು ಮಂಡಳಿಗೆ ವಾಪಸ್ ಕೊಡುತ್ತೇವೆ. ಮುಜರಾಯಿ ಇಲಾಖೆ ಸಲ್ಲಿಸಿದ ವರದಿಯಲ್ಲಿ ಹಣಕಾಸಿನ ಲೆಕ್ಕವಿಲ್ಲ. ಯಾವುದೇ ದೇವಸ್ಥಾನದಲ್ಲಿ ಹಣಕಾಸಿನ ದುರುಪಯೋಗ ಆದರೆ ಅದನ್ನು ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಸರ್ಕಾರಕ್ಕಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಸುಮಾರು 10 ದೇವಾಲಯಗಳನ್ನು ವಶಕ್ಕೆ ಪಡೆದುಕೊಂಡಿತ್ತು ಎಂದು ಹೇಳಿದರು.

ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ದೇವಾಲಯದಲ್ಲಿ ಆಡಳಿತ ನಿರ್ವಹಣೆ ಸರಿ ಇಲ್ಲ ಎಂಬುದನ್ನು ತೋರಿಸಿತ್ತು.

ಈ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್‌ 42 ಮತ್ತು 43ರ ಅನ್ವಯ ಸರ್ಕಾರದ ವಶಕ್ಕೆ ಪಡೆಯಲು ಸ್ಪಷ್ಟ ಅಭಿಪ್ರಾಯದ ವರದಿ ನೀಡುವಂತೆ ಧಾರ್ಮಿಕ ದತ್ತಿ ಆಯುಕ್ತರು ಜಿಲ್ಲಾಧಿಕಾರಿಗೆ 2024ರ ಅಕ್ಟೋಬರ್‌ನಲ್ಲಿ ಸೂಚಿಸಿದ್ದರು. ಗುರುವಾರ ಮುಜರಾಯಿ ಇಲಾಖೆಯು ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇಗುಲವನ್ನು ತನ್ನ ವಶಕ್ಕೆ ಪಡೆದುಕೊಂಡು ಆದೇಶ ಹೊರಡಿಸಿತ್ತು.

ಮುಜರಾಯಿ ಇಲಾಖೆ ರಾಜ್ಯ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸು ಮಾಡಿತ್ತು. ಇದನ್ನು ಒಪ್ಪಿದ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಅಂತ ಘೋಷಣೆ ಮಾಡಿತ್ತು. ಈ ಆದೇಶದ ಬೆನ್ನಲ್ಲೇ ದೇವಸ್ಥಾನದ ಟ್ರಸ್ಟಿಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ದೇವಸ್ಥಾನವನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಂಡಿದ್ದು ಸರಿಯಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ 12 ಗಂಟೆಗೆ ತುರ್ತು ಸಭೆ ಕರೆದಿತ್ತು. ಸಭೆ ಬಳಿಕ ನಾವು ಕಾನೂನು ಹೋರಾಟ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.

ಲಕ್ಷಾಂತರ ರೂಪಾಯಿ ಆದಾಯ ಇರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ. ಪ್ರತಿವರ್ಷವೂ ಉಳಿತಾಯವಿಲ್ಲದಂತೆ ವೆಚ್ಚ ಮಾಡಲಾಗುತ್ತಿದೆ. ಇದರಿಂದ ದೇವಸ್ಥಾನದ ಹಣವು ದುರುಪಯೋಗವಾಗುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಅಲ್ಲದೇ ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ 25 ವರ್ಷಗಳಿಂದ ಯಾವುದೇ ದಾಖಲೆಗಳನ್ನು ಇಟ್ಟಿರಲಿಲ್ಲ.

ಇದನ್ನೂ ಓದಿ: TTD: ತಿರುಮಲ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ: ಟಿಟಿಡಿ ಆಡಳಿತದ ವಿರುದ್ಧ ಭೂಮನ ಕರುಣಾಕರ್ ರೆಡ್ಡಿ ಆಕ್ರೋಶ