Vishweshwar Bhat Column: ಬೆನ್ನೆಟ್-ಕೋಲಮನ್ ಯಾರು ?
ಬ್ರಿಟಿಷರಿಗೆ ಭಾರತದಲ್ಲಿ ತಮ್ಮ ಪರವಾಗಿ ಬರೆಯುವ ಪತ್ರಿಕೆಗಳ ಅಗತ್ಯವಿತ್ತು. ಹೀಗಾಗಿ ಬೆನ್ನೆಟ್ ಮತ್ತು ಕೋಲಮನ್‌ಗೆ ಉದ್ಯಮಿಗಳ ಮೂಲಕ ಹಣ ನೀಡಿ ಪತ್ರಿಕೆ ಖರೀದಿಸಲು ಬ್ರಿಟಿಷ್ ಆಡಳಿತ ಪರೋಕ್ಷ ಸಹಾಯ ಮಾಡಿತು. ಇವರಿಬ್ಬರ ನೇತೃತ್ವದಲ್ಲಿ ಪತ್ರಿಕೆ ಸರ್ವಾಂಗೀಣ ಪ್ರಗತಿಯನ್ನು ಕಂಡಿತು.
ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಭಾರತದ ಅತಿ ಹೆಚ್ಚು ಪ್ರಸಾರ ಹೊಂದಿದ ಇಂಗ್ಲಿಷ್ ದೈನಿಕ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಟೈಮ್ಸ್ ಆಫ್ ಇಂಡಿಯಾ’ ಬೆನೆಟ್, ಕೋಲಮನ್ ಅಂಡ್ ಕಂಪನಿ ಲಿಮಿಟೆಡ್ (ಬಿಸಿಸಿಎಲ್) ಎಂಬ ಸಂಸ್ಥೆಗೆ ಒಳಪಟ್ಟಿದೆಯೆಂಬುದು ಅನೇಕರಿಗೆ ಗೊತ್ತಿರಬಹುದು. ಈ ಬೆನ್ನೆಟ್ ಮತ್ತು ಕೋಲಮನ್ ಯಾರು? ಅವರಿಗೂ ಈ ಪತ್ರಿಕೆಗೂ ಏನು ಸಂಬಂಧ? 1838ರ ನವೆಂಬರ್‌ನಲ್ಲಿ ‘ಮುಂಬೈ ಟೈಮ್ಸ್ ಅಂಡ್ ಜರ್ನಲ್ ಕಾಮರ್ಸ್’ ಎಂಬ ಪತ್ರಿಕೆ ಆರಂಭವಾಯಿತು.
ಅದಾದ ಎರಡು ವರ್ಷಗಳ ಬಳಿಕ, ಈ ಹೆಸರನ್ನು ‘ಟೈಮ್ಸ್ ಆಫ್ ಇಂಡಿಯಾ’ ಎಂದು ಬದಲಿಸ ಲಾಯಿತು. ಆಗ ಅದು ದಿನಪತ್ರಿಕೆ ಆಗಿರಲಿಲ್ಲ. ಅದು ವಾರದಲ್ಲಿ ಎರಡು ದಿನ ಮಾತ್ರ ಪ್ರಕಟವಾಗು ತ್ತಿತ್ತು. 1850 ರಲ್ಲಿ ಅದು ದಿನಪತ್ರಿಕೆಯಾಗಿ ಪರಿವರ್ತಿತವಾಯಿತು. ಆ ದಿನಗಳಲ್ಲಿ ರಾಬರ್ಟ್ ನೈಟ್ ಎಂಬುವವರು ‘ಬಾಂಬೆ ಟೈಮ್ಸ್ ಅಂಡ್ ಸ್ಟ್ಯಾಂಡರ್ಡ್’ ಪತ್ರಿಕೆಯ ಸಂಪಾದಕರಾಗಿದ್ದರು. ಅವ ರನ್ನು ‘ಟೈಮ್ಸ್ ಆಫ್ ಇಂಡಿಯಾ’ದ ಮೊದಲ ಸಂಪಾದಕರಾಗಿ ನೇಮಿಸಲಾಯಿತು.
ಇದನ್ನೂ ಓದಿ: Vishweshwar Bhat Column: ವಿಚಿತ್ರ ಕಾನೂನುಗಳು
ಅವರು ಆ ಪತ್ರಿಕೆಗೆ ರಾಷ್ಟ್ರೀಯ ಸ್ವರೂಪವನ್ನು ನೀಡಿದರು. ಈ ಮಧ್ಯೆ ಪತ್ರಿಕೆಯ ಆಡಳಿತ ಮಂಡಳಿಯಲ್ಲಿ ಹಲವು ಬದಲಾವಣೆಗಳಾದವು. ಐದು ವರ್ಷ ಪೂರೈಸುವುದರೊಳಗೆ ಮಾಲೀಕತ್ವ ಬದಲಾಗುತ್ತಿತ್ತು. ನಂತರ 1892ರಲ್ಲಿ ಇಂಗ್ಲಿಷ್ ಪತ್ರಕರ್ತರಾದ ಥಾಮಸ್ ಜೆವೆಲ್ ಬೆನ್ನೆಟ್ ಮತ್ತು ಫ್ರಾಂಕ್ ಮೋರಿಸ್ ಕೋಲಮನ್, ಈ ಪತ್ರಿಕೆಯನ್ನು ಖರೀದಿಸಿದರು.
ಆಗ ಬ್ರಿಟಿಷರಿಗೆ ಭಾರತದಲ್ಲಿ ತಮ್ಮ ಪರವಾಗಿ ಬರೆಯುವ ಪತ್ರಿಕೆಗಳ ಅಗತ್ಯವಿತ್ತು. ಹೀಗಾಗಿ ಬೆನ್ನೆಟ್ ಮತ್ತು ಕೋಲಮನ್‌ಗೆ ಉದ್ಯಮಿಗಳ ಮೂಲಕ ಹಣ ನೀಡಿ ಪತ್ರಿಕೆ ಖರೀದಿಸಲು ಬ್ರಿಟಿಷ್ ಆಡಳಿತ ಪರೋಕ್ಷ ಸಹಾಯ ಮಾಡಿತು. ಇವರಿಬ್ಬರ ನೇತೃತ್ವದಲ್ಲಿ ಪತ್ರಿಕೆ ಸರ್ವಾಂಗೀಣ ಪ್ರಗತಿ ಯನ್ನು ಕಂಡಿತು. ಇವರಿಬ್ಬರೂ ಪತ್ರಕರ್ತರಾಗಿ ಮತ್ತು ಬೇರೆ ಪತ್ರಿಕೆಗಳಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದರು. ಇವರಿಬ್ಬರೂ ಸೇರಿ ಬೆನ್ನೆಟ್, ಕೋಲಮನ್ ಅಂಡ್ ಕಂಪನಿ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
ಆ ದಿನಗಳಲ್ಲಿ ಎಂಟು ನೂರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. 1915ರಲ್ಲಿ ಲಂಡನ್ ಗೆ ಹೋಗು ವಾಗ, ಹಡಗು ಮುಳುಗಿ ಕೋಲಮನ್ ಅಸು ನೀಗಿದರು. ಅಷ್ಟೊತ್ತಿಗೆ ಪತ್ರಿಕೆ ಸದೃಢವಾಗಿತ್ತು. ಭಾರತ ದಲ್ಲಿ ಸ್ವಾತಂತ್ರ್ಯ ಚಳವಳಿ ಶಿಖರಕ್ಕೇರಿದ ದಿನಗಳವು. ಬ್ರಿಟಿಷರು ಭಾರತ ಬಿಟ್ಟು ತೊಲಗುವುದು ಅನಿವಾರ್ಯವಾಗಿತ್ತು. ಚಳವಳಿಯ ಕಾವು ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳು ತ್ತಿತ್ತು.
ಆಗ ಪತ್ರಿಕೆ ಆಡಳಿತ ಮಂಡಳಿ ಹೊಸ ನೇತೃತ್ವವನ್ನು ಎದುರು ನೋಡುತ್ತಿತ್ತು. ಆಗ ಮುಂದೆ ಬಂದವರು ಉದ್ಯಮಿ ರಾಮಕೃಷ್ಣ ದಾಲ್ಮಿಯಾ. ಇದಕ್ಕೆ ಗಾಂಧೀಜಿಯವರ ಒತ್ತಾಸೆಯಿತ್ತು. ಅವರೇ ಪತ್ರಿಕೆ ಖರೀದಿಸುವಂತೆ ದಾಲ್ಮಿಯಾ ಅವರನ್ನು ಪ್ರಚೋದಿಸಿದರು. 1946 ರಲ್ಲಿ ಅವರು ಆ ಪತ್ರಿಕಾ ಒಡೆತನದ ಸಂಸ್ಥೆಯನ್ನು ಖರೀದಿಸಿದರು. ಆ ದಿನಗಳಲ್ಲಿ ಅವರು ನೀಡಿದ ಹಣ ಎರಡು ಕೋಟಿ ರುಪಾಯಿ. ಹಾಗೆ ನೋಡಿದರೆ, ದಾಲ್ಮಿಯಾ ಅವರೇ ಟೈಮ್ಸ್ ಆಫ್ ಇಂಡಿಯಾದ ಮೊದಲ ಭಾರತೀಯ ಮಾಲೀಕರು.
ಆ ದಿನಗಳಲ್ಲಿ ಪತ್ರಿಕೆಯ ಸಂಪಾದಕರೂ ಬ್ರಿಟಿಷರೇ ಆಗಿರುತ್ತಿದ್ದರು. ಆ ಪತ್ರಿಕೆಯ ಕೊನೆಯ ಇಬ್ಬರು ಬ್ರಿಟಿಷ್ ಸಂಪಾದಕರು ಸ್ಕಾಟ್ಲ್ಯಾಂಡ್ ಮೂಲದವರು ಎಂಬುದು ಗಮನಾರ್ಹ. ಸ್ವಾತಂತ್ರ್ಯ ಚಳವಳಿ ಮತ್ತು ಎರಡನೇ ಮಹಾಯುದ್ಧದಂಥ ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ ಸಂಪಾದಕ ರಾಗಿದ್ದವರು ಫ್ರಾನ್ಸಿಸ್ ಲೋ. ಅವರು ಸುಮಾರು ಹದಿನಾರು ವರ್ಷಗಳ (1932-1948) ವರೆಗೆ ಸಂಪಾದಕರಾಗಿದ್ದರು.
ಅವರ ನಂತರ ಇವೊರ್ ಜೆಹು ಎನ್ನುವವರು ಸಂಪಾದಕರಾದರು. ಸ್ವಾತಂತ್ರ್ಯ ಪ್ರಾಪ್ತವಾದ ಬಳಿಕ ಪತ್ರಿಕೆಯ ಸಂಪಾದಕೀಯ ನಿಲುವಿನಲ್ಲಿ ಗಣನೀಯ ಬದಲಾವಣೆ ಗಳಾದವು. ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ, ಇಂದಿಗೂ ಆ ಪತ್ರಿಕೆಯ ಒಡೆತನದ ಹೆಸರು ಮಾತ್ರ ಬದಲಾಗಿಲ್ಲ. ಇಂದಿಗೂ ಬೆನ್ನೆಟ್ ಮತ್ತು ಕೋಲಮನ್ ಹೆಸರಿನದೇ ಕೋಲುಗಾರಿಕೆ!