ನಟ-ನಟಿಯರಿಂದ ಹೋರಾಟಕ್ಕೆ ಬೆಂಬಲ
ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ
ವಿಶೇಷ ವರದಿ: ವೆಂಕಟೇಶ್ ಆರ್.ದಾಸ್ ಬೆಂಗಳೂರು
ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಕೆರಳಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಕನ್ನಡ ಹೋರಾಟಗಾರರ ಮೇಲಿನ ಪ್ರಕರಣ ಕೈಬಿಡಬೇಕು ಎಂದು ಒತ್ತಾಯಪಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯಲ್ಲಿ ಮಹಾ ಮೇಳಾವ್ ನಡೆಸುತ್ತಿದ್ದ ಎಂಇಎಸ್ ಕಾರ್ಯಕರ್ತರಿಗೆ ಕನ್ನಡ ಹೋರಾಟಗಾರರು ಮಸಿ ಬಳಿಯುವ ಮೂಲಕ ಪ್ರತಿಭಟಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕನ್ನಡ ಹೋರಾಟಗಾರರ ಮೇಲೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಕೆರಳಿದ ಕನ್ನಡಪರ ಹೋರಾಟಗಾರರು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಈ ಪ್ರಕರಣದ ನಂತರ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟಕ್ಕೆ ಬೆಂಕಿಯಿಟ್ಟಿರುವ ವಿಡಿಯೋ ವೈರಲ್ ಆಗಿದೆ. ಶಿವಸೇನೆ ಕಾರ್ಯಕರ್ತರ ಈ ಪುಂಡಾಟವನ್ನು ಖಂಡಿಸಿರುವ ಕನ್ನಡ ಪರ ಹೋರಾಟಗಾರರು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳು ವಂತೆ ಒತ್ತಾಯಿಸಿದ್ದಾರೆ. ಸರಕಾರ ಕನ್ನಡ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ನಟಿಯರ ಬೆಂಬಲ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದ ಕ್ರಮವನ್ನು ಖಂಡಿಸಿ ನಟ ಜಗ್ಗೇಶ್ ಅವರು ಮೊದಲ ಬಾರಿಗೆ ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ನಟ ಶಿವರಾಜ್ ಕುಮಾರ್ ಅವರು ಕನ್ನಡ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದರ್ಶನ್, ನಟಿ ಮೇಘನಾ ಗಾಂವ್ಕರ್ ಸೇರಿದಂತೆ ಅನೇಕರು ಕನ್ನಡ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿ, ಕನ್ನಡ ಭಾವುಟ ಕನ್ನಡಿಗರ ಭಾವನೆಗಳ ಸಂಕೇತ ವಾಗಿದ್ದು, ಇದನ್ನು ಕೆರಳಿಸುವ ಉದ್ಧಟತನ ಬೇಡ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ಟ್ವಿಟರ್ನಲ್ಲಿ ಟ್ರೆಂಡ್: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಪ್ರಕರಣ ಹಾಗೂ ಕನ್ನಡ ಹೋರಾಟಗಾರರ ಮೇಲೆ ಪ್ರರಕಣ ದಾಖಲಿಸಿರುವುದಕ್ಕೆ ಸಂಬಂಧಿ ಸಿದಂತೆ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಕನ್ನಡ ಹೋರಾಟಗಾರರು, ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ನಟ ಜಗ್ಗೇಶ್ ಟ್ವೀಟ್ ಮಾಡಿ, ಕನ್ನಡ ಬಾವುಟ ಅಪಮಾನಿಸಿದವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯ ಹಾಗು ಕನ್ನಡಪರ ಈ ವಿಷಯಕ್ಕೆ ಹೋರಾಟ ಮಾಡಿದ ಕನ್ನಡ ಸೈನಿಕರ ದಯಮಾಡಿ ಬಿಡುಗಡೆಗೊಳಿಸಿ ಎಂದು ಸಿಎಂ ಮತ್ತು ಗೃಹಸಚಿವರಿಗೆ ಮನವಿ ಮಾಡಿದ್ದಾರೆ.
ಜತೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂದು ಉಲ್ಲೇಖಿಸಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ನಮ್ಮ ನಾಡಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ, ಜೈ ಕರ್ನಾಟಕ ಎಂದು ಟ್ವೀಟ್ ಮಾಡುತ್ತಿದ್ದಂತೆ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ನಟ ದರ್ಶನ್, ಮೇಘನಾ ಗಾಂವ್ಕರ್ ಸೇರಿದಂತೆ ಅನೇಕರು ಧ್ವನಿಗೂಡಿಸಿದ್ದಾರೆ.
***
ಕನ್ನಡಿಗರೆಲ್ಲರ ಅಧಿಕೃತ ಬೆಂಬಲದ ಠಸ್ಸೆ ಬಿದ್ದಿರುವ ಕನ್ನಡ ಬಾವುಟ ನಮ್ಮ ಘನತೆ, ಗೌರವ ಮತ್ತು ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡುವ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿ ದುರುಳರನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮಕೈಗೊಳ್ಳಿ.
– ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ