ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಶರಣಾಗತಿ
ಕೇರಳಕ್ಕೆ ಶಿಫ್ಟ್ ಆಗಿದ್ದ ಅಳಿದು, ಉಳಿದವರು
ವಿಶೇಷ ವರದಿ: ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ
ತಮಿಳುನಾಡಿನಲ್ಲಿ ಭಾನುವಾರ ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಅಲಿಯಾಸ್ ಸಂಧ್ಯಾ ಶರಣಾಗುವುದರೊಂದಿಗೆ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಬಹುತೇಕ ಯುಗಾಂತ್ಯವಾಗಿದೆ.
೨೦೧೨ರಲ್ಲಿ ೬೦ ರಷ್ಟಿದ್ದ ನಕ್ಸಲ್ರ ಸಂಖ್ಯೆ ೨೦೧೯ರ ಹೊತ್ತಿಗೆ ಐದಕ್ಕೆ ಇಳಿದಿತ್ತು. ಆನಂತರದಲ್ಲಿ ಅದು ನಾಲ್ಕಕ್ಕೆ ಸೀಮಿತಗೊಂಡು ನಕ್ಸಲ್ ಚಳವಳಿ ರಾಜ್ಯದಲ್ಲಿ ಜೀವಂತವಾಗಿಲ್ಲ ಎಂಬುದನ್ನು ಸಾಬೀತು ಪಡಿಸು ವಂತೆ ಕಣ್ಮರೆ ಯಾಗುತ್ತಾ ಬಂತು. ಮಲೆನಾಡಿನ ವ್ಯಾಪ್ತಿಗೆ ಬರುವ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಸೇರಿದಂತೆ ಅದರ ಸೆರಗಿನ ಜಿಲ್ಲೆಗಳಲ್ಲಿ ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ನಕ್ಸಲ್ ಚಳವಳಿಯ ಸದ್ದು ಅದರ ಉನ್ನತ ನಾಯಕರ ಶರಣಾಗತಿಯೊಂದಿಗೆ ಮಂಕಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಕ್ಸ್ಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಕೇರಳ ಪೋಲಿಸರಿಗೆ ಶರಣಾಗತರಾಗಿದ್ದರು. ಅನಂತರದಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ನಿಂತೇ ಹೋಯಿತು ಎಂಬಂತಹ ಮಾತುಗಳು ಕೇಳಿ ಬರುತ್ತಿದ್ದವು. ಇದರ ನಡುವೆ ಸತ್ತು ಹೋಗಿದ್ದಾಳೆ ಎಂದು ತಿಥಿ ಕಾರ್ಯವನ್ನು ಮುಗಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ಆಗುಂಬೆಯ ಹೊಸಗದ್ದೆ
ಗ್ರಾಮದ ಪ್ರಭಾ ದಿಢೀರನೇ ತಮಿಳುನಾಡಿನ ತಿರಪ್ಪುತ್ತೂರು ಪೊಲೀಸರ ಮುಂದೆ ಶರಣಾಗತಿಯಾದಾಗ ಆಶ್ಚರ್ಯ ಪಟ್ಟವರೇ ಹೆಚ್ಚು. ಇದರೊಂದಿಗೆ ನಕ್ಸಲ್ ಮುಂಚೂಣಿಯ ಹೋರಾಟ ನಿಂತು ಹೋಗಿದೆ ಎಂಬ ಮಾತುಗಳು ಪೊಲೀಸರ ವಲಯದಲ್ಲಿ ಕೇಳಿ ಬರುತ್ತಿದೆ.
ಸಮಿತಿ ರಚಿಸಲಾಗಿತ್ತು: ೨೦೧೭ರಲ್ಲಿ ದಿ.ಗೌರಿ ಲಂಕೇಶ ಅವರ ನೇತೃತ್ವದಲ್ಲಿ ನಕ್ಸಲ್ ಚಳವಳಿಯ ಭೂಗತ ಕಾರ್ಯಕರ್ತರು ಪೊಲೀಸರ ಮುಂದೆ ಶರಣಾಗಲು ಅವಕಾಶ ಮಾಡಿಕೊಡುವ ಸಮಿತಿಯು ಸಕ್ರಿಯವಾಗಿ ಕೆಲಸ ಮಾಡಿದ್ದರ ಫಲವಾಗಿ ಶಿವು, ಕನ್ಯಾಕುಮಾರಿ ಹಾಗೂ ಸುಮ ಚಿಕ್ಕಮಗಳೂರು ಪೊಲೀಸರ ಮುಂದೆ ಶರಣಾದ ನಂತರದಲ್ಲಿ ಪರಿಸ್ಥಿತಿ ದಿನೇದಿನೆ ಭಿನ್ನವಾಗುತ್ತಾ ಬಂತು. ಆದರೂ, ರಾಜ್ಯ ಸರಕಾರ ನಕ್ಸಲ್ ನಿಗ್ರಹ ದಳವನ್ನು ರದ್ದು ಮಾಡದೇ ಸಂಪೂರ್ಣ ನಕ್ಸಲ್ ಚಟುವಟಿಕೆಯನ್ನು ಮಟ್ಟ ಹಾಕುವ ನಿರ್ಧಾರದಿಂದ ನಕ್ಸಲ್ ನಾಯಕ ಸಾಕೇತ್ ರಾಜನ್ ಮೃತಪಟ್ಟ ನಂತರ ಅದನ್ನು ಮುನ್ನೆಡಿಸಿದ ಬಿ.ಜಿ. ಕೃಷ್ಣಮೂರ್ತಿ, ಲತಾ, ಹೊಸಗದ್ದೆ ಪ್ರಭಾ, ವಿಕ್ರಂಗೌಡ ಹಾಗೂ ಅಗಡಿ ಪ್ರದೀಪ ಅವರು ೨೦೧೯ರ ಈಚೆಗೆ ಕೇರಳದ ವಯನಾಡ್ನತ್ತ
ವಲಸೆಯಾಗಿದ್ದಾರೆ ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಅಲ್ಲಿಂದ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ಕೇರಳದ ಕಾಡಿನತ್ತ ಸ್ಥಳಾಂತರ ಮಾಡಲಾಗಿದೆ ಎಂಬ ಅಂಶವೂ ಪೊಲೀಸರ
ಕಡತಗಳಲ್ಲಿ ವ್ಯಕ್ತವಾಗಿತ್ತು.
ಕೃಷ್ಣಮೂರ್ತಿ ಬಂಧನವೇ ಅಂತಿಮ: ಕೇರಳದ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ನಕ್ಸಲ್ ನಾಯಕ ಬಿ.ಜಿ.ಕೃಷ್ಣ ಮೂರ್ತಿ ಹಾಗೂ ಮತ್ತೊಬ್ಬ ನಾಯಕಿ ಸಾವಿತ್ರಿ ಅಲಿಯಾಸ್ ಲತಾ ಅಲ್ಲಿನ ಪೊಲೀಸರ ಮುಂದೆ ಶರಣಾಗತಿಯಾದ ಅನಂತರದಲ್ಲಿ ನಕ್ಸಲ್ ಚಳವಳಿಯು ಇತಿಹಾಸಕ್ಕೆ ಸೇರಿ ಹೋಯಿತು ಎಂಬರ್ಥದ ಮಾತುಗಳು ಕೇಳಿ ಬಂದಿದ್ದವು.
ಆದರೆ, ಕೃಷ್ಣಮೂರ್ತಿಯ ಪತ್ನಿ ಹೊಸಗದ್ದೆ ಪ್ರಭಾ ಸತ್ತು ಹೋಗಿದ್ದಾಳೆ ಎಂಬ ಮಾಹಿತಿ ಇದ್ದರಿಂದ ಆಕೆಯನ್ನು ಹುಡುಕುವ ಪ್ರಯತ್ನ ಯಾರೂ
ಮಾಡಿರಲಿಲ್ಲ. ಆದರೆ, ಕೃಷ್ಣಮೂರ್ತಿ ಶರಣಾಗತಿಯ ಅನಂತರದಲ್ಲಿ ಪ್ರಭಾ ಬದುಕಿದ್ದಾಳೆ ಎಂಬ ಅಂಶ ಪತ್ತೆಯಾಯಿತು. ಮತ್ತು ಆಕೆಯ ಇರುವಿಕೆ ಯನ್ನು ಪತ್ತೆ ಮಾಡಲು ತಮಿಳುನಾಡು ಹಾಗೂ ಕೇರಳ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ಕೃಷ್ಣಮೂರ್ತಿ ಹಾಗೂ ಲತಾ ಶರಣಾಗತಿಯ ಸಂದರ್ಭದಲ್ಲಿ ಪ್ರಭಾ ಶರಣಾಗತಿಯ ವಿಚಾರವೂ ಪ್ರಸ್ತಾಪವಾಗಿತ್ತಾದರೂ, ಅದು ಸಾಧ್ಯವಾಗಿರಲಿಲ್ಲ.
ಆದ್ದರಿಂದ ಪ್ರಭಾ ತಮಿಳುನಾಡಿನ ಕಡೆಗೆ ವಲಸೆ ಹೋಗಿದ್ದಳು ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿಯ ಮೂಲವೇ ಪೊಲೀಸರು ತಮಿಳುನಾಡಿನಲ್ಲಿ ಆಕೆ ಶರಣಾಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಕ್ಸಲ್ ಚಳವಳಿ: ಆಗುಂಬೆ ಬಳಿಯ ಹೊಸಗದ್ದೆಯ ಪ್ರಭಾ, ಕರ್ನಾಟಕ ವಿಮೋಚನ ರಂಗದ ಸಕ್ರಿಯ ಕಾರ್ಯಕರ್ತೆಯಾಗಿ ಅನಂತರದಲ್ಲಿ ಕುದುರೆ ಮುಖ ಸಂತ್ರಸ್ತರ ಚಳವಳಿಯಲ್ಲಿ ಭಾಗವಹಿಸುತ್ತಾ ನಕ್ಸಲ್ ಚಳವಳಿಗೆ ಧುಮುಕಿದವರು. ಅಲ್ಲಿಂದ ಈಚೆಗೆ ತನ್ನ ಮನೆ ಹಾಗೂ ಕುಟುಂಬದ ಸಂಪರ್ಕ ವನ್ನು ಸಂಪೂರ್ಣವಾಗಿ ಕಡಿದುಕೊಂಡು ಪ್ರಭಾ ದಶಕಗಳ ಕಾಲ ಅವ್ಯವಸ್ಥೆಯ ವಿರುದ್ಧ ಹೋರಾಟಗಳನ್ನು ಮಾಡಿ ಕುಖ್ಯಾತಿಗೆ ಒಳಾಗಿದ್ದೂ ಇದೆ.
ಆದರೆ, ೨೦೧೭ ರ ಅನಂತರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಕ್ಸಲ್ ಚಟುವಟಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಆಗದೆ ಮುಖ್ಯ ವಾಹಿನಿಗೆ
ಬರಲೂ ಆಗದೆ ಕಾಡಿನೊಳಗೆ ಕಣ್ಮರೆಯಾಗಿದ್ದ ತಂಡದಲ್ಲಿ ಆಕೆಯೂ ಇದ್ದರು.
ನೂರಾರು ಪ್ರಕರಣಗಳು: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ, ಹೊಸಗದ್ದೆ ಪ್ರಭಾ, ವಿಕ್ರಂಗೌಡ, ಲತಾ ಸೇರಿದಂತೆ ಅವರ ಎಲ್ಲ ತಂಡದ ಸದಸ್ಯರ
ಮೇಲೆ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ನೂರಾರು ಪ್ರಕರಣಗಳು ವಿಚಾ ರಣೆಗೆ ಬಾಕಿ ಇವೆ. ಇದರ ನಡುವೆ, ಕೇರಳ ಹಾಗೂ ತಮಿಳುನಾಡಿನಲ್ಲೂ ಪ್ರಕರಣಗಳು ಇರುವುದರಿಂದ ಅವರು ವಿಚಾರಣೆ ಮುಗಿದ ಅನಂತರದಲ್ಲಿ
ರಾಜ್ಯದ ಪೊಲೀಸರಿಗೆ ಹಸ್ತಾಂತರ ಮಾಡಬೇಕಾಗಿದೆ.
ಹೊಸಗದ್ದೆ ಪ್ರಭಾ ಮೇಲೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಒಟ್ಟು ೪೪ ಪ್ರಕರಣಗಳು ದಾಖಲಾಗಿವೆ. ಆಕೆಯನ್ನು ವಶಕ್ಕೆ ಪಡೆದ ಅನಂತರದಲ್ಲಿ ಮೂರು ಜಿಲ್ಲೆಯ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕಾಗಿದೆ ಎಂದು ಮೂಲಗಳು ಹೇಳಿವೆ. ಹಾಗೆಯೇ ಬಿ.ಜಿ.ಕೃಷ್ಣಮೂರ್ತಿ ಹಾಗೂ ಲತಾ ಅವರ ಮೇಲೆಯೂ ಇರುವ ಪ್ರಕರಣಗಳ ವಿಚಾರಣೆ ನಡೆಯಬೇಕಾಗಿದೆ. ಆದರೆ, ಇದೆಲ್ಲವೂ ವಿಳಂಬವಾಗಲಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಒಪ್ಪಿ ಕೊಳ್ಳುತ್ತಾರೆ.
***
ಅನಾರೋಗ್ಯವೇ ಕಾರಣ
ಹೊಸಗದ್ದೆ ಪ್ರಭಾ ಹಾಗೂ ಆಕೆಯ ಪತಿ ಬಿ.ಜಿ.ಕೃಷ್ಣಮೂರ್ತಿ ಶರಣಾಗಲು ಅವರಿಬ್ಬರಿಗೆ ಕಾಡುತ್ತಿದ್ದ ಅನಾರೋಗ್ಯವೇ ಕಾರಣ ಎಂದು ಹೇಳಲಾಗಿದೆ. ಪ್ರಭಾ ತೀವ್ರತರವಾದ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಆಕೆ ಅದನ್ನು ಗುಣಪಡಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ಮಾಡಬೇಕಾಗಿ ಬಂದಿದ್ದರಿಂದ ಜೊತೆಗೆ ನಕ್ಸಲ್ ಚಳವಳಿಯಲ್ಲಿ ಹೊಸ ಸದಸ್ಯರ ಸೇರ್ಪಡೆ ಸಾಧ್ಯವಾ ಗದೇ ಇರುವುದರಿಂದ ಹೋರಾಟವನ್ನು ಮುಂದುವರಿಸುವ ಇಚ್ಚೆ ಮಾಡದೇ
ಶರಣಾಗತಿಯ ವಿಚಾರಕ್ಕೆ ಅವಕಾಶ ಮಾಡಿ ಕೊಟ್ಟರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.