ಬೇರೆ ರಾಜ್ಯಗಳಲ್ಲಿ ಖರೀದಿಸುವವರಿಗೆ 5 ರಿಂದ 30 ಸಾವಿರ ಸಬ್ಸಿಡಿ
ವಿಶೇಷ ವರದಿ: ಬಾಲಕೃಷ್ಣ ಎನ್. ಬೆಂಗಳೂರು
ಇಂಧನ ದರ ಏರಿಕೆ, ಮಾಲಿನ್ಯ ಮತ್ತಿತರ ಕಾರಣಗಳಿಂದಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಬಳಕೆ ಹೆಚ್ಚಿಸಲು ಎಲ್ಲಾ ರಾಜ್ಯಗಳು ಪೈಪೋಟಿಗೆ ಬಿದ್ದಿವೆ. ನಮ್ಮ ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ವಾಹನ ಉತ್ಪಾದನಾ ಕಂಪನಿಗಳು, ಚಾರ್ಜಿಂಗ್
ಕೇಂದ್ರಗಳ ಸ್ಥಾಪನೆಗೆ ಸಬ್ಸಿಡಿ ನೀಡುತ್ತಿದೆ. ಆದರೆ, ಆ ವಾಹನಗಳನ್ನು ಬಳಸುವ ಗ್ರಾಹಕ ರಿಗೆ ಮಾತ್ರ ಯಾವುದೇ ರಿಯಾಯಿತಿ ಇಲ್ಲ.
ಹೌದು, ಇವಿ ಕ್ಷೇತ್ರದಲ್ಲಿ ಉತ್ಪಾದನೆ, ಸಂಶೋಧನೆ, ಅಭಿವೃದ್ಧಿಗೆ ಮಾತ್ರ ಗಮನ ಹರಿಸಿ ರುವ ಸರಕಾರ, ಗ್ರಾಹಕರನ್ನು ಗಂಭೀರ ವಾಗಿ ಪರಿಗಣಿಸಿಯೇ ಇಲ್ಲ. ಗ್ರಾಹಕರಿಗೆ ಸಬ್ಸಿಡಿ ನೀಡುವ ಬಗ್ಗೆ ಸಾರಿಗೆ ಇಲಾಖೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇಲಾಖೆ ಅಧಿಕಾರಿ ಗಳನ್ನು ಪ್ರಶ್ನಿಸಿದರೆ, ಇದು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂದು ಹೇಳುತ್ತಾರೆ.
ಇವಿ ಉತ್ಪಾದನೆ ಸೇರಿದಂತೆ ಅದನ್ನು ಮಾರುಕಟ್ಟೆಗೆ ತಲುಪಿಸುವವರೆಗಿನ ಜವಾಬ್ದಾರಿ ಕೈಗಾರಿಕಾ ಇಲಾಖೆಯದ್ದು. ವಾಹನ ನೋಂದಣಿ ಸೇರಿದಂತೆ ಗ್ರಾಹಕರಿಗೆ ಸಂಬಂಧಿಸಿದ ವಿಚಾರ ಸಾರಿಗೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೈಗಾರಿಕಾ ಇಲಾಖೆಯಲ್ಲಿ ಹಲವು ರೀತಿಯ ಸಬ್ಸಿಡಿಗಳಿದ್ದರೂ ಸಾರಿಗೆ ಇಲಾಖೆ ಯಾವುದೇ ನೆರವು ನೀಡುತ್ತಿಲ್ಲ.
ಇತ್ತೀಚಿಗೆ ಪರಿಷ್ಕೃತ ಇವಿ ನೀತಿ ಪ್ರಕಟಿಸಿದ್ದ ರಾಜ್ಯ ಸರಕಾರ, ಇವಿಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಲಾಗುವುದು. ಇವಿಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ ಎಂದು ಹೇಳಿದೆ. ಇದರ ಹೊರತಾಗಿ ಗ್ರಾಹಕರಿಗೆ ಸಬ್ಸಿಡಿ ನೀಡುತ್ತಿಲ್ಲ. ಸದ್ಯ ಕೇಂದ್ರದಿಂದ ಮಾತ್ರ 10 ಸಾವಿರ ರು. ಸಬ್ಸಿಡಿ ಸಿಗುತ್ತಿದೆ. ಈ ಮಧ್ಯೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಗುಜರಾತ್ 20 ಸಾವಿರ ರು.ವರೆಗೆ, ದೆಹಲಿಯಲ್ಲಿ 30 ಸಾವಿರ ರು., ಮಹಾರಾಷ್ಟ್ರ ದಲ್ಲಿ 25 ಸಾವಿರ ರು., ಗುಜರಾತ್, ಮೇಘಾಲಯ, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ 20 ಸಾವಿರ ರು., ರಾಜಸ್ತಾನದಲ್ಲಿ 10 ಸಾವಿರ ರು. ಒಡಿಶಾ 5 ಸಾವಿರ ರು. ಸಬ್ಸಿಡಿ ಘೋಷಿಸಿದೆ.
ಇದೆಲ್ಲದರ ಮಧ್ಯೆ ಇವಿ ವಾಹನ ಮಾರಾಟದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಶೇ. 31ರಷ್ಟು ಪ್ರಗತಿ ಸಾಧಿಸುವ ಮೂಲಕ ಕರ್ನಾಟಕ ಮುಂಚೂಣಿಯಲ್ಲಿದೆ. ಒಂದೊಮ್ಮೆ ಇವಿ ಖರೀದಿಸುವ ಗ್ರಾಹಕರಿಗೆ ಸಬ್ಸಿಡಿ ನೀಡಿದರೆ ಈ ಪ್ರಮಾಣ ಮತ್ತಷ್ಟು ಹೆಚ್ಚಬಹುದು ಎನ್ನುತ್ತಾರೆ ಅಧಿಕಾರಿಗಳು.
ಇವಿ ಪರಿವರ್ತನೆಗೆ ಸಬ್ಸಿಡಿ?: ಇವಿ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳ ಲಾಭ ತಮ್ಮ ರಾಜ್ಯಕ್ಕೆ ಆಗಬೇಕೆಂಬ ನಿಟ್ಟಿನಲ್ಲಿ
ತಮಿಳುನಾಡು, ಗುಜರಾತ್, ಆಂಧ್ರ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳು ಕರ್ನಾಟಕದೊಂದಿಗೆ ಪೈಪೋಟಿಗಿಳಿದಿವೆ. ಇವಿ ಉತ್ಪಾದನಾ ಕಂಪನಿಗಳಿಗೆ ರಾಜ್ಯಕ್ಕಿಂತ ಹೆಚ್ಚು ಸೌಲಭ್ಯಗಳನ್ನು ನೀಡುವ ಭರವಸೆ ನೀಡುತ್ತಿವೆ. ಆದರೂ ರಾಜ್ಯದಲ್ಲಿ ಇವಿ ಕ್ಷೇತ್ರದಲ್ಲಿ ಹೂಡಿಕೆ ಮೇಲೆ ಅಂತಹ ಪರಿಣಾಮವೇನೂ ಆಗಿಲ್ಲ. ಈ ಮಧ್ಯೆ, ಇವಿ ಉತ್ಪಾದನೆ ಜತೆಗೆ ಪೆಟ್ರೋಲ್ ವಾಹನಗಳನ್ನು
ಇವಿ ಆಗಿ ಪರಿವರ್ತಿಸುವ ಸಂಸ್ಥೆಗಳಿಗೂ ಸಬ್ಸಿಡಿ ನೀಡುವ ಬಗ್ಗೆ ಕೈಗಾರಿಕಾ ಇಲಾಖೆ ಚಿಂತನೆ ನಡೆಸಿದೆ.
ಸರಕಾರ ನಿರ್ಧರಿಸಬೇಕು: ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸಬ್ಸಿಡಿ ನೀಡುವುದು ಹಣಕಾಸಿಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಸರಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಇದುವರೆಗೆ ಅಂತಹ ಯಾವುದೇ ನಿರ್ಧಾರ ಆಗಿಲ್ಲ. ಗ್ರಾಹಕರಿಗೆ ಸಬ್ಸಿಡಿ ನೀಡುವ ಬಗ್ಗೆ ಚರ್ಚೆ ನಡೆದಿಲ್ಲ. ಸರಕಾರ ನಿರ್ಧಾರ ಕೈಗೊಳ್ಳುವವರೆಗೆ ಸಾರಿಗೆ ಇಲಾಖೆ ಏನೂ
ಮಾಡಲು ಸಾಧ್ಯವಿಲ್ಲ ಎಂದು ಇಲಾಖೆ ಹಿರಿಯ ಅಧಿಕಾರಿ ‘ವಿಶ್ವವಾಣಿ’ಗೆ ತಿಳಿಸಿದ್ದಾರೆ.
ಉತ್ಪಾದಕರಿಗೆ ಭರ್ಜರಿ ಸಬ್ಸಿಡಿ
ಕರ್ನಾಟಕದಲ್ಲಿ ಇವಿ ವಲಯದ ಹೂಡಿಕೆದಾರರಿಗೆ ಶೇ. 15ರಷ್ಟು ಕ್ಯಾಪಿಟಲ್ ಸಬ್ಸಿಡಿ, ಐದು ವರ್ಷ ಉತ್ಪಾದನಾ ಪ್ರೋತ್ಸಾಹಕ ಸಬ್ಸಿಡಿ, ಶೇ. 100 ಸ್ಟಾಂಪ್ ಡ್ಯೂಟಿ ವಿನಾಯಿತಿ, ಶೇ. 0.1ರಷ್ಟು ಮಾತ್ರ ನೋಂದಣಿ ಶುಲ್ಕ, ಇಟಿಪಿ (ಪ್ಲಾಂಟ್) ವೆಚ್ಚದ ಮೇಲೆ ಶೇ.50ರಷ್ಟು ಸಬ್ಸಿಡಿ, ಕೌಶಲಾಭಿವೃದ್ಧಿ ಸಬ್ಸಿಡಿ ಶೇ. ೫೦ರಷ್ಟು ಸ್ಟೈಫಂಡ್ ಕೊಡುವುದಾಗಿ ಸರಕಾರ ಪ್ರಕಟಿಸಿದೆ. ಉತ್ಪಾದಕರಿಗೆ
ರಿಯಾಯಿತಿ ನೀಡಿದರೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಇವಿ ಲಭ್ಯವಾಗುತ್ತದೆ ಎಂಬುದು ಸರಕಾರದ ಲೆಕ್ಕಾಚಾರ. ಆದರೆ,
ಇದು ವರೆಗೂ ಇವಿ ಗ್ರಾಹಕರಿಗೆ ಯಾವುದೇ ಲಾಭ ಸಿಕ್ಕಿಲ್ಲ.
ಗ್ರಾಹಕರಿಗೆ ಆಗುವ ಲಾಭಗಳೇನು?
ಇವಿ ವಾಹನ ಖರೀದಿ ಹೆಚ್ಚಳ, ಪೆಟ್ರೋಲ್ ಅವಲಂಬನೆ ಕಡಿಮೆ
ಮಾಲಿನ್ಯದ ಮೇಲಿನ ಪರಿಣಾಮ ತಗ್ಗಲಿದೆ
ಇವಿ ಕ್ಷೇತ್ರಕ್ಕೂ ಪರೋಕ್ಷ ಉತ್ತೇಜನ