ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Road Rage: ರಸ್ತೆಯಲ್ಲಿ ಕಾಂಗ್ರೆಸ್ ನಾಯಕಿಗೆ ಅಶ್ಲೀಲ ಸನ್ನೆ ಮಾಡಿದ ವ್ಯಕ್ತಿಯ ಬಂಧನ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮತ್ತು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್ ಅಕ್ಷತಾ ರವಿಕುಮಾರ್ ಅವರು ತಮಗೆ ಅಶ್ಲೀಲ ಸಿಂಬಲ್ ತೋರಿಸಿದ ವ್ಯಕ್ತಿಯ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ರಸ್ತೆಯಲ್ಲಿ ಕಾಂಗ್ರೆಸ್ ನಾಯಕಿಗೆ ಅಶ್ಲೀಲ ಸನ್ನೆ ಮಾಡಿದ ವ್ಯಕ್ತಿಯ ಬಂಧನ

ಹರೀಶ್‌ ಕೇರ ಹರೀಶ್‌ ಕೇರ Feb 28, 2025 6:53 AM

ಬೆಂಗಳೂರು: ವಾಹನ ಚಲಾಯಿಸುವಾಗ ಯುವ ಕಾಂಗ್ರೆಸ್ ನಾಯಕಿಯೊಬ್ಬರ (congress woman leader) ಕಡೆಗೆ ಅಶ್ಲೀಲ ಸನ್ನೆ (Road rage, Abusive gesture) ಮಾಡಿದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯನ್ನು (detained) ಬಂಧಿಸಲಾಗಿದೆ. ಮೈಸೂರು-ಬೆಂಗಳೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ವಿಜಯನಗರ ನಿವಾಸಿ ಹರ್ಷ ಎಚ್ ಬಿ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮತ್ತು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಪ್ಯಾನೆಲಿಸ್ಟ್ ಅಕ್ಷತಾ ರವಿಕುಮಾರ್ ಅವರು ತಮಗೆ ಅಶ್ಲೀಲ ಸಿಂಬಲ್ ತೋರಿಸಿದ ವ್ಯಕ್ತಿಯ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಪೊಲೀಸ್ ಇಲಾಖೆಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ಆಧರಿಸಿ ದೂರು ದಾಖಲಿಸಿಕೊಂಡಿದ್ದ ಚಾಮರಾಜಪೇಟೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ʼಬೆಂಗಳೂರಿನಲ್ಲಿ ಮಹಿಳಾ ಚಾಲಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ... ನನ್ನನ್ನು ನಿಂದಿಸಿದ ನಂತರ, ಆ ವ್ಯಕ್ತಿ ಸಂಚಾರ ನಿಯಮ ಉಲ್ಲಂಘಿಸಿ ಯು-ಟರ್ನ್ ಇಲ್ಲದ ಸ್ಥಳದಲ್ಲಿ ಅಕ್ರಮವಾಗಿ ಯು-ಟರ್ನ್ ತೆಗೆದುಕೊಂಡು ಸಿಗ್ನಲ್ ಜಂಪ್ ಮಾಡಿದರು. ಇದು 26/02/2025 ರಂದು ಸಂಜೆ 4 ಗಂಟೆಗೆ ಮೈಸೂರು-ಬೆಂಗಳೂರು ರಸ್ತೆಯ ಗೋಪಾಲನ್ ಮಾಲ್ ಬಳಿ ಈ ನಡೆದಿದೆ. ನಾವು ಇದನ್ನು ನಿರ್ಲಕ್ಷಿಸಬೇಕೇ?ʼ ಎಂದು ಅಕ್ಷತಾ ಅವರು 'X' ನಲ್ಲಿ ಪೋಸ್ಟ್ ಮಾಡಿದ್ದರು.

ತನಿಖೆಯಲ್ಲಿ ಪೊಲೀಸರ ಪ್ರಕಾರ, ಹಾರ್ನ್ ಮಾಡಿದ ವಿಚಾರಕ್ಕೆ ಮಾತಿನ ಚಕಮಕಿ ನಡೆಯಿತು. ಅವರು ಕೃತ್ಯದ ವಿಡಿಯೋವನ್ನು ಸಹ ರೆಕಾರ್ಡ್ ಮಾಡಿದ್ದಾರೆ. ಘಟನೆಯ ಸಮಯದಲ್ಲಿ ಆ ವ್ಯಕ್ತಿ ತನ್ನ ಕುಟುಂಬದೊಂದಿಗೆ ಇದ್ದರು. "ಈ ಘಟನೆಯು ತಪ್ಪು ತಿಳುವಳಿಕೆಯಿಂದ ಉಂಟಾಗಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 79 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ನಂತರ ಆರೋಪಿಯನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕಿ ಅಕ್ಷತಾ ರವಿಕುಮಾರ್ ಅವರು, ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಗೋಪಾಲನ್ ಮಾಲ್ ಬಳಿ ಘಟನೆ ನಡೆದಿದೆ. ಹಿಂದೆಯಿಂದ ಬಂದು ಹಾರ್ನ್ ಮಾಡಿದರು. ಆಗ ನನಗೆ ಜಾಗ ಬಿಡಲು ಸಾಧ್ಯವಾಗಿಲ್ಲ. ಏಕಾಏಕಿ ಬಯ್ಯೋದಕ್ಕೆ ಪ್ರಾರಂಭ ಮಾಡಿದರು. ನಾನು ಮತ್ತೆ ಪ್ರಶ್ನೇ ಮಾಡಿದ್ದಕ್ಕೆ ಅಶ್ಲೀಲವಾಗಿ ಬೆರಳು ತೋರಿಸಿದರು. ಆ ಕಾರಣಕ್ಕೆ ನಾನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದೆ ಮತ್ತು ಆತನ ವಿರುದ್ಧ ದೂರು ನೀಡಿದ್ದೇನೆ. ಆ ವ್ಯಕ್ತಿ ಯಾರೆಂದು ಅಥವಾ ಏಕೆ ಹಾಗೆ ಮಾಡಿದನೆಂದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Koppal News: ಪಿಡಿಒ ಮೇಲೆ ದರ್ಪ ಮೆರೆದ ಗ್ರಾಪಂ ಸದಸ್ಯೆ; ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ