Saturday, 20th April 2024

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿ ಕೊಠಡಿ

ಉಡುಪಿ: ಜಿಲ್ಲೆಯ ಕುಂದಾಪುರದ ಸರಕಾರಿ ಪಿಯು ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಸೋಮವಾರ ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ಪ್ರತ್ಯೇಕ ತರಗತಿ ಕೊಠಡಿಗಳಲ್ಲಿ ಕೂರಿಸಲಾಗಿದೆ.

ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಪ್ರತ್ಯೇಕ ತರಗತಿಯಲ್ಲಿ ಕೂರಿಸಲು ಕುಂದಾಪುರ ಸರಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧರಿಸಿತ್ತು. ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾಲೇಜು ಆಡಳಿತ ಸಮಿತಿಗಳು ಸಮವಸ್ತ್ರವನ್ನು ಸೂಚಿಸದಿದ್ದಲ್ಲಿ, ವಿದ್ಯಾರ್ಥಿಗಳು ಸಮಾನತೆ ಮತ್ತು ಏಕತೆಯ ಕಲ್ಪನೆಯೊಂದಿಗೆ ಉತ್ತಮವಾದ ಮತ್ತು ಸಾಮಾಜಿಕ ಸುವ್ಯವಸ್ಥೆಗೆ ಧಕ್ಕೆಯಾಗದ ಉಡುಪುಗಳನ್ನು ಧರಿಸ ಬೇಕೆಂದು ಆದೇಶಿಸಲಾಗಿದೆ.

ಕಳೆದ ಕೆಲವು ದಿನಗಳಲ್ಲಿ, ಕರಾವಳಿ ಕರ್ನಾಟಕದಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಪ್ರವೇಶ ನೀಡದಿರುವ ಹಲವಾರು ನಿದರ್ಶನಗಳಿವೆ ಮತ್ತು ಕೇಸರಿ ಶಾಲು ಹಾಕಿಕೊಂಡು ಬರುವ ಹಿಂದೂ ವಿದ್ಯಾರ್ಥಿಗಳನ್ನು ತರಗತಿಗಳಿಂದ ನಿರ್ಬಂಧಿಸಲಾಗಿದೆ.

ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಜನವರಿಯಲ್ಲಿ ಆರಂಭವಾದ ವಸ್ತ್ರ ಸಂಹಿತೆ ಉಲ್ಲಂಘಿಸಿ ತಲೆಗೆ ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾದ ಆರು ವಿದ್ಯಾರ್ಥಿನಿಯರನ್ನು ಹೊರಗೆ ಕಳುಹಿಸಿರುವ ವಿಚಾರದಿಂದ ಆರಂಭಗೊಂಡ ವಿವಾದ ಉಡುಪಿ ನಗರ ಹಾಗೂ ಸಮೀಪದ ಕುಂದಾಪುರ, ಬೈಂದೂರು ಕಾಲೇಜುಗಳಿಗೂ ವ್ಯಾಪಿಸಿದೆ.

error: Content is protected !!