Monday, 13th May 2024

ಬಲಿಪ ಪ್ರಸಾದ ಭಾಗವತರ ನಿಧನ ದಿಗ್ಬ್ರಮೆಯುಂಟು ಮಾಡಿದೆ: ಸಚಿವ ಸುನೀಲ್ ಕುಮಾರ್

ಮಂಗಳೂರು: ತೆಂಕುತಿಟ್ಟು ಯಕ್ಷ ಪರಂಪರೆಯ ಪ್ರಸಿದ್ಧ ಭಾಗವತ ಬಲಿಪ ಪ್ರಸಾದ ಭಾಗವತರ ಅಕಾಲಿಕ ನಿಧನ ದಿಗ್ಬ್ರಮೆಯುಂಟು ಮಾಡಿದ್ದು, ಯಕ್ಷರಂಗಭೂಮಿಗೆ ಇದು ತುಂಬಲಾರದ ನಷ್ಟ ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.

ತೆಂಕಿನ ಸರ್ವಶ್ರೇಷ್ಠ ಭಾಗವತರಾದ ಬಲಿಪ ನಾರಾಯಣ ಭಾಗವತರ ಪುತ್ರರಾಗಿ ಬಲಿಪ ಶೈಲಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದ ಪ್ರಸಾದ ಭಾಗವತರ ಸಿರಿಕಂಠ ನಮಗಿನ್ನು ದೊರಕದು ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಟೀಲು ದುರ್ಗಾಪರಮೇಶ್ವರಿ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಸಾದ ಭಾಗವತರು ಏರು ಶೃತಿಯ ಪರಂಪರೆಯ ಗಾಯನಕ್ಕೆ ಹೆಸರುವಾಸಿ ಯಾಗಿದ್ದರು.

ದೇವಿ ಮಹಾತ್ಮೆ, ಕಟೀಲು ಕ್ಷೇತ್ರ ಮಹಾತ್ಮೆ ಸೇರಿದಂತೆ ಪೌರಾಣಿಕ ಆಖ್ಯಾನಗಳ ಪ್ರಯೋಗಕ್ಕೆ ಹೊಸ ರೂಪ ನೀಡಿದ್ದರು. ಅವರ ಅಗಲಿಕೆಯಿಂದ ಯಕ್ಷರಂಗಕ್ಕೆ ಅಪಾರ ನಷ್ಟವುಂಟಾಗಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಮೃತರ ಕುಟುಂಬಕ್ಕೆ ಯಕ್ಷಮಾತೆ ಹಾಗೂ ಕಟೀಲು ದುರ್ಗಾಪರಮೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

 

error: Content is protected !!