S.L. Bhyrappa: ನಮ್ಮ ಭೈರಪ್ಪ ನಮ್ಮ ಹೆಮ್ಮೆ; ಫೆ. 23ಕ್ಕೆ ಎಸ್.ಎಲ್.ಭೈರಪ್ಪಗೆ ಹುಟ್ಟೂರ ಅಭಿನಂದನೆ
S.L. Bhyrappa: ಫೆ.23ರಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಹುಟ್ಟೂರಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಹಾಸನ: ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ (S.L. Bhyrappa) ಅವರಿಗೆ ಫೆಬ್ರವರಿ 23ರಂದು ಅವರ ಹುಟ್ಟೂರಾದ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರದಲ್ಲಿ ಅಭಿನಂದನಾಪೂರ್ವಕ ಕೃತಜ್ಞತೆ ಸಲ್ಲಿಸಲು ಊರಿಗೆ ಊರೇ ಸಿದ್ಧವಾಗುತ್ತಿದೆ. ಭೈರಪ್ಪ ಅವರು, ಅವರ ಊರು ಸೇರಿದಂತೆ ಸುತ್ತಲ 20 ಹಳ್ಳಿಗಳಿಗೆ ನೀರು ಹರಿಸುವಂತೆ ಮಾಡಿ ಪ್ರಾತಃಸ್ಮರಣೀಯರಾಗಿದ್ದಾರೆ. ಸರಕಾರದ ಜತೆ ನಿರಂತರ ಸಂಪರ್ಕ ಸಾಧಿಸಿ ಈ ನೀರಾವರಿ ಯೋಜನೆಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಹುಟ್ಟೂರಿಗೋಸ್ಕರ ಮಿಡಿಯುವ ಇವರ ಹೃದಯಕ್ಕೆ ಸ್ಪಂದಿಸುವುದು ಊರ ಜನರ ಕರ್ತವ್ಯವೆಂದು ತಿಳಿದು ಅವರಿಗೊಂದು ಯೋಗ್ಯರೀತಿಯಲ್ಲಿ ಸನ್ಮಾನಿಸಬೇಕೆಂದು ಊರವರ ಸಂಕಲ್ಪವಾಗಿದೆ. ಹೀಗಾಗಿ ಫೆಬ್ರವರಿ 23ರಂದು ರಂದು 'ನಮ್ಮ ಭೈರಪ್ಪ ನಮ್ಮ ಹೆಮ್ಮೆ' ಹೆಸರಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಚನ್ನರಾಯಪಟ್ಟಣದ ಪತ್ರಕರ್ತರ ಸಂಘದದಲ್ಲಿ ಫೆಬ್ರವರಿ 2 ರಂದು ಭೈರಪ್ಪ ಅವರ ಬಂಧುಗಳಾದ ಕೃಷ್ಣಪ್ರಸಾದ್ ಅವರ ಸಂಚಾಲಕತ್ವದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಊರಿನ ಜನತೆ, ಪತ್ರಕರ್ತರ ಸಮ್ಮುಖದಲ್ಲಿ ʼನಮ್ಮ ಭೈರಪ್ಪ ನಮ್ಮ ಹೆಮ್ಮೆʼ ಎನ್ನುವ ಲಾಂಛನ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿಯಲ್ಲಿ ರಂಗಪ್ಪ ಅವರು ಮಾತನಾಡಿ, ಭೈರಪ್ಪನವರಿಗೆ ಸರಸ್ವತಿ ಸಮ್ಮಾನ್ ಬಂದಾಗ ಊರಲ್ಲಿ ನಡೆದ ಕಾರ್ಯಕ್ರಮವನ್ನು ನೆನಪಿಸಿಕೊಂಡು, ಮುಂದೆ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದ ಸಿದ್ಧತೆ, ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ನಂತರ ಶಾಸಕ ಸಿ.ಎನ್ ಬಾಲಕೃಷ್ಣ ಅವರು ಮಾತನಾಡಿ, ಒಬ್ಬ ರಾಜಕಾರಣಿಯಾಗಿ ತನ್ನೂರಿನ ಮೇರು ಶಿಖರ ಪ್ರಾಯರಾದ ಭೈರಪ್ಪನವರ ಮೇಲೆ ಅಭಿಮಾನ, ಪ್ರೀತಿ ಇಟ್ಟುಕೊಂಡು ಭೈರಪ್ಪನವರು ಊರಿಗೆ ಮಾಡಿದ ಉಪಕಾರಕ್ಕೆ ನಾವು ಅವರನ್ನು ಯೋಗ್ಯ ರೀತಿಯಲ್ಲಿ ನಡೆಸಿಕೊಳ್ಳಬೇಕು ಅನ್ನುವ ಅವರ ಕಕ್ಕುಲಾತಿ ನಿಜಕ್ಕೂ ಶ್ಲಾಘನೀಯ ಎಂದರು.
ಈ ವೇಳೆ ಸಂತೇಶಿವರ, ಚನ್ನರಾಯಪಟ್ಟಣ ಮಾತ್ರವಲ್ಲದೇ ತಿಪಟೂರಿನಿಂದ ಭೈರಪ್ಪನವರ ಅಭಿಮಾನಿಗಳು ಬಂದಿದ್ದರು. ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದೊಂದು ಸುದ್ದಿಗೋಷ್ಠಿ ಮಾತ್ರ ಆಗಿರದೆ ಕಾರ್ಯಕರ್ತರ ಬೈಠಕ್ ನಂತಿತ್ತು. ಎಲ್ಲರಲ್ಲೂ ನಮ್ಮ ಭೈರಪ್ಪ ನಮ್ಮ ಹೆಮ್ಮೆ ಎಂಬ ಭಾವವೇ ಆವರಿಸಿತ್ತು.
ಈ ಸುದ್ದಿಯನ್ನೂ ಓದಿ | Ganesh Bhatta Column: ರಥಸಪ್ತಮಿ: ಸೂರ್ಯನ ಮಹತ್ವವನ್ನು ಸಾರುವ ಪರ್ವ
ಕಾರ್ಯಕ್ರಮದ ಬಗ್ಗೆ ರಶ್ಮಿ ಗೋಖಲೆ ಮಾತನಾಡಿ, ಭೈರಪ್ಪನವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಲಾಯಿತು. ಅವರು ಬಹಳ ಸಂತೋಷಪಟ್ಟು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಭೈರಪ್ಪನವರ ಧ್ವನಿ ಕೇಳಿದ ಎಲ್ಲರೂ ಪುಳಕಿತರಾದರು. ಕಾರ್ಯಕ್ರಮ ಬಹಳ ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ನಡೆದು ಮುಂದಿನ ಕಾರ್ಯಯೋಜನೆಗಳ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇದೆ. ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಸರಸ್ವತಿ ಸಮ್ಮಾನ್‌ರಿಗೆ ಅವರ ಊರಿನಲ್ಲಿ ಸಮ್ಮಾನ ನಡೆಯಬೇಕು. ಅಭಿಮಾನಿಗಳೆಲ್ಲರಿಗೂ ಅಂದು ಅಲ್ಲಿ ಸೇರುವ ಅಪೂರ್ವ ಅವಕಾಶ. ಹಳ್ಳಿಯ ಸೊಗಡಿನೊಂದಿಗೆ ಅರ್ಥಪೂರ್ಣ ಕಾರ್ಯಕ್ರಮ ಇದಾಗಬೇಕು ಎಂದು ಎಲ್ಲರ ನಿರೀಕ್ಷೆಯಾಗಿದೆ. ಫೆಬ್ರವರಿ 23 ರಂದು ಸಂತೇಶಿವರ ತಳಿರು ತೋರಣ, ರಂಗೋಲಿ, ಹೂವುಗಳಿಂದ ಸಿಂಗರಿಸಿಕೊಂಡು ಭೈರಪ್ಪನವರ ಅಭಿಮಾನಿಗಳನ್ನು ಸ್ವಾಗತಿಸಿ ಸತ್ಕರಿಸಲು ಸಜ್ಜುಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.