Game Changer OTT Release: ʼಗೇಮ್ ಚೇಂಜರ್ʼ ಒಟಿಟಿ ರಿಲೀಸ್ ಡೇಟ್ ಫಿಕ್ಸ್; ಬಾಕ್ಸ್ ಆಫೀಸ್‌ನಲ್ಲಿ ಸೋತ ರಾಮ್ ಚರಣ್ ಚಿತ್ರ ಇಲ್ಲಿ ಕಮಾಲ್ ಮಾಡುತ್ತಾ?
ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼಗೇಮ್ ಚೇಂಜರ್ʼ ಕಳೆದ ತಿಂಗಳು ತೆರೆ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದೆ. ರಾಮ್ ಚರಣ್ ಮತ್ತು ಎಸ್.ಶಂಕರ್ ಮೊದಲ ಬಾರಿ ಒಂದಾದ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಎಡವಿದ್ದು, ಇದೀಗ ಒಟಿಟಿ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಅಲ್ಲಿ ಸೋತ ಚಿತ್ರ ಇಲ್ಲಾದರೂ ಮ್ಯಾಜಿಕ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಹೈದರಾಬಾದ್: ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾದ ರಾಮ ಚರಣ್ (Ram Charan) - ಎಸ್.ಶಂಕರ್ (S.Shankar) ಕಾಂಬಿನೇಷನ್ ಬಹು ನಿರೀಕ್ಷಿತ ಚಿತ್ರ ʼಗೇಮ್ ಚೇಂಜರ್ʼ ಒಟಿಟಿ ರಿಲೀಸ್‌ಗೆ ಡೇಟ್ ನಿಗದಿಯಾಗಿದೆ (Game Changer OTT Release). ಸಂಕ್ರಾಂತಿ ಪ್ರಯುಕ್ತ 2025ರ ಜ. 10ರಂದು ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು. ದಕ್ಷಿಣ ಭಾರತದ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್.ಶಂಕರ್ ಮತ್ತು ಟಾಲಿವುಡ್ ಸ್ಟಾರ್ ರಾಮ್ ಚರಣ್ ಮೊದಲ ಬಾರಿ ಒಂದಾಗಿದ್ದ ಕಾರಣಕ್ಕೆ ಈ ಪಾಲಿಟಿಕಲ್ ಥ್ರಿಲ್ಲರ್ ಸಾಕಷ್ಟು ನಿರೀಕ್ಷೆ ಹೊತ್ತು ರಿಲೀಸ್ ಆಗಿತ್ತು. ಆದರೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟಿಟಿಯಲ್ಲಿ ಕಮಾಲ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಒಟಿಟಿ ರಿಲೀಸ್ ಯಾವಾಗ?
ರಾಮ್ ಚರಣ್-ಕಿಯಾರಾ ಅಡ್ವಾಣಿ-ಅಂಜಲಿ ನಟಿಸಿರುವ ʼಗೇಮ್ ಚೇಂಜರ್ʼ ಚಿತ್ರ ಫೆ. 7ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್ ಪ್ರೈಂ ವಿಡಿಯೊದಲ್ಲಿ ಇದು ಪ್ರಸಾರವಾಗಲಿದ್ದು, ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಇದು ತೆಲುಗಿನ ಜತೆಗೆ ತಮಿಳು ಮತ್ತು ಕನ್ನಡದಲ್ಲಿಯೂ ತೆರೆ ಕಾಣಲಿದೆ. ಸುಮಾರು 240 ದೇಶಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ರಾಮ್ ನಂದನ್ ಮತ್ತು ಅಪ್ಪಣ್ಣ ಎಂಬ ದ್ವಿಪಾತ್ರದಲ್ಲಿ ರಾಮ್ ಚರಣ್ ಕಾಣಿಸಿಕೊಂಡಿದ್ದಾರೆ. ಐಎಎಸ್ ಆಫೀಸರ್ ರಾಮ್ ನಂದನ್ ಭ್ರಷ್ಟಾಚಾರವನ್ನು ವಿರೋಧಿಸುವ ಕಥೆಯನ್ನು ಇದು ಒಳಗೊಂಡಿದೆ.
2022ರಲ್ಲಿ ಬಿಡುಗಡೆಯಾದ ಎಸ್.ಎಸ್.ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್ʼ ಚಿತ್ರದಲ್ಲಿ ರಾಮ್ ಚರಣ್ ಕೊನೆಯದಾಗಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ ಈ ಚಿತ್ರದ ಬಳಿಕ ರಾಮ್ ಚರಣ್ ನಾಯಕರಾಗಿ ಕಾಣಿಸಿಕೊಂಡಿದ್ದ ಯಾವ ಚಿತ್ರವೂ ತೆರೆಕಂಡಿರಲಿಲ್ಲ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಗರಿಗೆದರಿತ್ತು. ಆದರೆ ಅದೇ ಹಳೆ ಕಥೆ, ಸುಲಭವಾಗಿ ಊಹಿಸಬಹುದಾದ ತಿರುವು ಈ ಎಲ್ಲ ಕಾರಣಗಳಿಂದ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸೋತಿತ್ತು.
ಸುಮಾರು 450 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಇದುವರೆಗೆ ಕಲೆಕ್ಷನ್ ಮಾಡಿದ್ದು ಕೇವಲ 180 ಕೋಟಿ ರೂ. ಮನೋಜ್ಞ ಅಭಿನಯದಿಂದಲೇ ಗಮನ ಸೆಳೆದಿರುವ ಬಹು ಭಾಷಾ ನಟಿ ಅಂಜಲಿ ಮತ್ತು ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಜತೆ ಅಂಜಲಿ ತೆರೆ ಹಂಚಿಕೊಳ್ಳುತ್ತಿರುವುದು ಇದು ಮೊದಲ ಸಲವಾದರೆ, ʼವಿನಯ ವಿದೇಯ ರಾಮʼ ಸಿನಿಮಾದಲ್ಲಿ ರಾಮ್ ಚರಣ್ ಜತೆ ನಟಿಸಿದ್ದ ಕಿಯಾರಾ 2ನೇ ಬಾರಿ ಜೋಡಿಯಾಗಿದ್ದಾರೆ. ಕಿಯಾರಾ ಗ್ಲ್ಯಾಮರ್ ಪಾತ್ರದಲ್ಲಿ ಕಾಣಿಸಿಕೊಂಡರೆ ಅಂಜಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಎಸ್.ಜೆ. ಸೂರ್ಯ, ನಾಸರ್, ಸುನಿಲ್, ಪ್ರಕಾಶ್ ರಾಜ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Game Changer: ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ 'ಗೇಮ್ ಚೇಂಜರ್' ಕಮಾಲ್; ರಾಮ್ ಚರಣ್ ಚಿತ್ರ ಗಳಿಸಿದ್ದೆಷ್ಟು?
ಮತ್ತೆ ಎಡವಿದ ಶಂಕರ್
ಸತತ ಸೋಲಿಗೆ ತುತ್ತಾಗಿರುವ ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಸ್.ಶಂಕರ್ ʼಗೇಮ್ ಚೇಂಜರ್ʼ ಮೂಲಕ ಮತ್ತೊಮ್ಮೆ ಎಡವಿದ್ದಾರೆ. ಇತ್ತೀಚೆಗೆ ತೆರೆಕಂಡ ಬಹು ನಿರೀಕ್ಷಿತ, ಕಮಲ್ ಹಾಸನ್ ನಟನೆಯ ಎಸ್.ಶಂಕರ್ ನಿರ್ದೇಶನದ ʼಇಂಡಿಯನ್ 2ʼ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಕಳೆದ ವರ್ಷದ ಅತೀ ದೊಟ್ಟ ಫ್ಲಾಪ್ ಚಿತ್ರಗಳಲ್ಲಿ ʼಇಂಡಿಯನ್ 2ʼ ಕೂಡ ಇದೆ. ಅಲ್ಲದೆ 2018ರಲ್ಲಿ ರಿಲೀಸ್ ಆದ ʼ2.0ʼ ಸಿನಿಮಾ ಕೂಡ ಅಂದುಕೊಂಡಷ್ಟು ಕಮಾಲ್ ಮಾಡಿರಲಿಲ್ಲ.