Bhagappa Harijan Murder Case: ಬಾಗಪ್ಪ ಹರಿಜನ ಹತ್ಯೆ ಕೇಸ್; ನಾಲ್ವರು ಆರೋಪಿಗಳು 5 ದಿನ ಪೊಲೀಸ್ ಕಸ್ಟಡಿಗೆ
Bhagappa Harijan Murder Case: ವಿಜಯಪುರ ನಗರದ ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ಫೆ. 11ರ ರಾತ್ರಿ ನಡೆದ ಭೀಮಾತೀರದ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣದಲ್ಲಿ ವಿಜಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ವಿಜಯಪುರ: ಬಾಗಪ್ಪ ಹರಿಜನ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ಐವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ವಿಜಯಪುರದ 2ನೇ ಹೆಚ್ಚುವರಿ ನ್ಯಾಯಾಲಯ ಆದೇಶಿಸಿದೆ. ವಿಜಯಪುರದ ಗಾಂಧಿಚೌಕ್‌ನ ಪೊಲೀಸರು ಪಿಂಟ್ಯಾ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಪ್ರಕಾಶ್ ಅಲಿಯಾಸ್ ಪಿಂಟ್ಯಾ ಅಗರಖೇಡ್ (25), ರಾಹುಲ್ ತಳಕೇರಿ (20), ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಎಂಬುವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳನ್ನು ವಿಜಯಪುರದ 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಕೋರಿದ್ದರಿಂದ ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ʼಅಣ್ಣನ ಹೆಂಡತಿಯನ್ನು ಕಳಿಸುʼ ಎಂದ ಬಾಗಪ್ಪ ಹರಿಜನ ಫಿನಿಶ್!
ವಿಜಯಪುರ ನಗರದ ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ಫೆ. 11ರ ರಾತ್ರಿ ನಡೆದ ಭೀಮಾತೀರದ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣದಲ್ಲಿ ವಿಜಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಮೃತ ಬಾಗಪ್ಪ ಹರಿಜನ ಮೇಲೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ಸೇರಿದಂತೆ ಒಟ್ಟು 6 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಬಾಗಪ್ಪ ಮದಿನಾ ನಗರದ ತನ್ನ ಬಾಡಿಗೆ ಮನೆಯಲ್ಲಿ ಊಟ ಮಾಡಿ ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗುಂಡು ಹಾರಿಸಿ ಬಾಗಪ್ಪನ ಹತ್ಯೆಗೈದಿದ್ದರು.
ಇತ್ತೀಚೆಗೆ ರವಿ ಮೇಲಿನಕೇರಿ ಎಂಬವನನ್ನು ತುಳಸಿರಾಮ ಹರಿಜನ ಹಾಗೂ ಆತನ ಸಹಚರರಾದ ಅಲೇಕ್ಸ್ ಗೊಲ್ಲರ, ಶಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ, ರಾಜೇಸಾಬ ರುದ್ರವಾಡಿ ಇವರು ಸೇರಿಕೊಂಡು ಕೊಲೆ ಮಾಡಿ ಬಂಧನದಲ್ಲಿದ್ದರು. ಬಾಗಪ್ಪ ಹರಿಜನ ಹಾಗೂ ರವಿ ಮೇಲಿನಕೇರಿ ಇವರು ಸಂಬಂಧಿಕರಾಗಿದ್ದರು. ಇವರಿಬ್ಬರ ನಡುವೆ ಕೆಲವು ವರ್ಷಗಳಿಂದ ಹಣಕಾಸಿನ ವ್ಯವಹಾರವಿದ್ದು, ಇಬ್ಬರೂ ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
ರವಿ ಮೇಲಿನಕೇರಿ ಮೃತಪಟ್ಟ ನಂತರ ಬಾಗಪ್ಪ, ರವಿ ಮೇಲಿನಕೇರಿ ತಮ್ಮ ಪ್ರಕಾಶ ಮೇಲಿನಕೇರಿಗೆ ನಿಮ್ಮ ಅಣ್ಣ ನನ್ನ ಹೆಸರು ಹೇಳಿ ಮಾಡಿರುವ ಹಣ, ಆಸ್ತಿ ಮತ್ತು ವಾಹನ ನನಗೆ ಬಿಟ್ಟು ಕೊಡಬೇಕು. ಇಲ್ಲದಿದ್ದರೆ 10 ಕೋಟಿ ಹಣ ಕೊಡಬೇಕು. ಅದೂ ಆಗದಿದ್ದರೆ ನಿಮ್ಮ ಅಣ್ಣನ ಹೆಂಡತಿಯನ್ನು ನನ್ನ ಹತ್ತಿರ ಕಳುಹಿಸು ಎಂದು ಅಣ್ಣನ ಹೆಂಡತಿಯ ಕುರಿತಾಗಿ ಅವಾಚ್ಯ ಪದ ಬಳಕೆ ಮಾಡಿ ಮಾತನಾಡಿ ಬೆದರಿಕೆ ಹಾಕಿದ್ದ. ಅಲ್ಲದೇ ನಿಮ್ಮ ಅಣ್ಣನಿಗೆ ಹೊಡೆದಂತೆ ನಿನಗೂ ಹೊಡೆಯುತ್ತೇನೆ ಎಂದು ಒತ್ತಡ, ಬೆದರಿಕೆ ಹಾಕಿದ್ದ.
ಈ ಸುದ್ದಿಯನ್ನೂ ಓದಿ | Bhagappa Harijan Murder: ಕೋರ್ಟ್ ಆವರಣದಲ್ಲೇ ಮೂರು ಗುಂಡು ಬಿದ್ದರೂ ಬದುಕುಳಿದಿದ್ದ ಭೀಮಾ ತೀರದ ಬಾಗಪ್ಪ ಹರಿಜನ!
ಈ ಹಿನ್ನೆಲೆಯಲ್ಲಿ ಬಾಗಪ್ಪನನ್ನು ಮುಗಿಸಿ ಬಿಡಬೇಕು ಎಂದು ಪ್ರಕಾಶ ಮೇಲಿನಕೇರಿ ತನ್ನ ಸಂಬಂಧಿಕ ಹಾಗೂ ಸ್ನೇಹಿತರೊಂದಿಗೆ ಸಂಚು ರೂಪಿಸಿ ಫೆ.11ರ ರಾತ್ರಿ ಬಾಗಪ್ಪ ಹರಿಜನ ಮದಿನಾ ನಗರದ ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುವಾಗ ಆರೋಪಿಗಳು ಆಟೋ ಹಾಗೂ ಬೈಕ್‌ನಲ್ಲಿ ಬಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಕೊಲೆ ಮಾಡಿರುತ್ತಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಈ ವೇಳೆ ಅಡಿಷನಲ್ ಎಸ್ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.