Bus Fare hike: ಮಟನ್ ರೇಟ್ ಜಾಸ್ತಿಯಾದ್ರೂ ತಗೋತೀರ, ಟಿಕೆಟ್ ತಗೊಳೋಕೆ ಆಗಲ್ವಾ: ಸಚಿವ ಚಲುವರಾಯಸ್ವಾಮಿ ಪ್ರಶ್ನೆ
Bus Fare hike: ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಸಂಸ್ಥೆಗೆ ಮೂಲ ಸೌಕರ್ಯ ಕೊಡಬೇಕೆಂದರೆ ದರ ಏರಿಕೆ ಅನಿವಾರ್ಯ ಎಂದು ಟಿಕೆಟ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


ಬೆಂಗಳೂರು: ಶಕ್ತಿ ಯೋಜನೆಗೂ ಟಿಕೆಟ್ ದರ ಏರಿಕೆಗೂ (Bus Fare hike) ಸಂಬಂಧ ಇಲ್ಲ. ದರ ಪರಿಷ್ಕರಣೆ ಆಗಿ 10 ರಿಂದ 15 ವರ್ಷ ಆಗಿದೆ. ನೀವು ಡೀಸೆಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡುತ್ತೀರಿ. ಮಟನ್ 100 ರೂಪಾಯಿ ಇದ್ದದ್ದು, 500 ರೂಪಾಯಿ ಆದ್ರೂ ತಗೋತೀರ. ಬೇಳೆ, ಎಣ್ಣೆ ತಗೋತೀರ... ಹಾಗೆ ಸರ್ಕಾರ ಒಂದು ಸಂಸ್ಥೆಗೆ ಎಷ್ಟು ಅಂತ ಸಹಾಯಧನ ಕೊಡೋಕೆ ಆಗುತ್ತೆ? ಸರ್ಕಾರದ ತೀರ್ಮಾನಕ್ಕೆ ಈ ರೀತಿ ಮಾತನಾಡುವುದು ಸರಿನಾ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಂಧ್ರ, ಕೇರಳ, ತೆಲಂಗಾಣದಲ್ಲಿ ನಮಗಿಂತಲೂ ಹೆಚ್ಚಾಗಿ ಏರಿಕೆ ಮಾಡಿ ಮಾಡಿದ್ದಾರೆ. ಆದರೆ ನಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಅಲ್ಲದೇ 7ನೇ ವೇತನ ಆಯೋಗದಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡಲಾಗಿದೆ. ಹೀಗೆ ಮಾಡಿದಾಗ, ಸಂಸ್ಥೆ ಚೆನ್ನಾಗಿ ನಡೆಯಬೇಕೆಂದರೆ ಗ್ರಾಮೀಣ ಪ್ರದೇಶಕ್ಕೆ ಸೇವೆ ಒದಗಿಸಬೇಕು. ಸಂಸ್ಥೆಗೆ ಮೂಲ ಸೌಕರ್ಯ ಕೊಡಬೇಕೆಂದರೆ ದರ ಏರಿಕೆ ಅನಿವಾರ್ಯ. 2-3 ವರ್ಷಕ್ಕೊಮ್ಮೆ ಹೆಚ್ಚಳ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಇನ್ನು ಸಂಕ್ರಾಂತಿಗೆ ಸರ್ಕಾರ ಇರಲ್ಲ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರತಿ ಬಾರಿ ದೇವೇಗೌಡರು ಈ ಸರ್ಕಾರ ಇರಲ್ಲ ಅಂತಿದ್ದರು. ಅಪ್ಪನ ಚಾಳಿ ಮಗನಿಗೂ ಬಂದಿದೆ. ಸರ್ಕಾರವನ್ನು ಕುಮಾರಸ್ವಾಮಿ ನಿರ್ಧಾರ ಮಾಡ್ತಾರಾ? ಜನರು ತೀರ್ಮಾನ ಮಾಡೋದು. ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ನಮಗೆ ಜನರ ಸರ್ಟಿಫಿಕೇಟ್ ಅಷ್ಟೇ ಬೇಕು. ಮೂರು ಚುನಾವಣೆಗಳಲ್ಲಿ ಜನ ಏನು ತೀರ್ಪು ಕೊಟ್ರು? ನೀವೇ ಇದರ ಬಗ್ಗೆ ಹೇಳಿ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲಿ ಸಚಿವರ ಜತೆ ಸಿಎಂ ಡಿನ್ನರ್ ಮೀಟಿಂಗ್ ಬಗ್ಗೆ ಮಾತನಾಡಿ, ಎಲ್ಲರೂ ನಮಗೆ ಸ್ನೇಹಿತರೇ, ಹಾಗಾಗಿ ಏನು ಮಾತನಾಡಬೇಕೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | DySP suspended: ಠಾಣೆಯಲ್ಲಿ ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ್ದ ಮಧುಗಿರಿ ಡಿವೈಎಸ್‌ಪಿ ಸಸ್ಪೆಂಡ್
ಆರ್. ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಶೇ.47.8 ಏರಿಕೆಯಾಗಿತ್ತು ಬಸ್ ಟಿಕೆಟ್ ದರ!
ಬೆಂಗಳೂರು: ಹೊಸ ವರ್ಷದ ಮೊದಲ ಸಚಿವ ಸಂಪುಟದಲ್ಲೇ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು (Bus Fare Hike) ಶೇ. 15 ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ಸೇರಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ದರ ಏರಿಕೆಗಿಂತ ತಮ್ಮ ಅವಧಿಯಲ್ಲಿ ಕಡಿಮೆಯೇ ಇದೆ ಎಂದು ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಈ ಹಿಂದಿನ ಸರ್ಕಾರಗಳಲ್ಲಿ ಎಷ್ಟೆಟ್ಟು ಹೆಚ್ಚಳ ಮಾಡಲಾಗಿತ್ತು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶೇ.8.02 ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ನಂತರ 2008ರಿಂದ 2012ರವರೆಗೆ ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಒಟ್ಟು ಏಳು ಬಾರಿ ಶೇ.47.8ರಷ್ಟು ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿತ್ತು. ಅದೇ ರೀತಿ 2013ರಿಂದ 2015ರ ಅವಧಿಯಲ್ಲಿ (ಕಾಂಗ್ರೆಸ್ ಸರ್ಕಾರ) ಶೇ.18.46 ದರ ಹೆಚ್ಚಳವಾಗಿ, ನಂತರ ಶೇ.2ರಷ್ಟು ಕಡಿಮೆ ಮಾಡಲಾಗಿತ್ತು. ಇನ್ನು 2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ (ಬಿಎಂಟಿಸಿ ಹೊರತುಪಡಿಸಿ) ಶೇ. 12ರಷ್ಟು ಹೆಚ್ಚಿಸಲಾಗಿದೆ. ಈಗ ಹೆಚ್ಚಿಸಲು (ಕಾಂಗ್ರೆಸ್ ಸರ್ಕಾರ) ನಿರ್ಧರಿಸಿರುವ ದರ ಶೇ.15 ಆಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
