ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

DK Shivakumar: ಪ್ರವಾಸೋದ್ಯಮಕ್ಕೆ ಪ್ರಾಮಾಣಿಕವಾಗಿ ಹೂಡಿಕೆ‌ ಮಾಡುವವರ ಅಗತ್ಯವಿದೆ: ಡಿ‌.ಕೆ.ಶಿವಕುಮಾರ್

ಇಡೀ ಜಗತ್ತು ಬೆಂಗಳೂರನ್ನು ಗಮನಿಸುತ್ತಿದೆ. ಬೆಂಗಳೂರಿನ ಮೂಲಕ ಭಾರತ ದರ್ಶನ ಮಾಡಲಾಗುತ್ತಿದೆ. ಸಿಲಿಕಾನ್ ಸಿಟಿಯಾಗಿ ಬೆಳೆದಿದೆ, ಶಿಕ್ಷಣ, ನವೋದ್ಯಮ ಮತ್ತು ವೈದ್ಯಕೀಯದ ಹಬ್ ಆಗಿ ಬೆಳೆದಿದೆ, ಬೆಳೆಯುತ್ತಿದೆ. ರಾಜ್ಯ ರಾಜಧಾನಿಗೆ ತನ್ನದೇ ಆದ ಇತಿಹಾಸವಿದೆ. ನಮ್ಮ ಪರಂಪರೆ ನಮ್ಮನ್ನು ಕಾಪಾಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯದ ಕೈಗಾರಿಕಾ ನೀತಿಯಲ್ಲಿ ಪ್ರವಾಸೋದ್ಯಮ ಸೇರ್ಪಡೆ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್.

Profile Siddalinga Swamy Feb 28, 2025 11:09 PM

ಬೆಂಗಳೂರು: ಕರ್ನಾಟಕ ವಿವಿಧ ಆಯಾಮಗಳನ್ನು ಹೊಂದಿರುವ ರಾಜ್ಯ. ಕರ್ನಾಟಕ ಇಡೀ ಭಾರತದಲ್ಲಿಯೇ ವೈವಿಧ್ಯಮಯ ಪ್ರವಾಸೋದ್ಯಮಕ್ಕೆ ತಕ್ಕನಾಗಿದೆ. ಈ ಕಾರಣಕ್ಕೆ ನಮ್ಮ ಕೈಗಾರಿಕಾ ನೀತಿಯಲ್ಲಿ ಪ್ರವಾಸೋದ್ಯಮವನ್ನು ಪ್ರಮುಖವಾಗಿ ಸೇರ್ಪಡೆ ಮಾಡಿದ್ದೇವೆ. ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಬೆಂಗಳೂರಿನಲ್ಲಿ ಶುಕ್ರವಾರ ರಾಷ್ಟ್ರೀಯ ಪ್ರವಾಸ ನಿರ್ವಹಣೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೈಸರ್ಗಿಕವಾಗಿಯೂ ನಮ್ಮ ರಾಜ್ಯ ವೈವಿಧ್ಯತೆಯಿಂದ ಕೂಡಿದೆ. ಬಂದರು, 350 ಕಿ.ಮೀ. ಉದ್ದದ ಸಮುದ್ರ ತೀರ, ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು, ಬಯಲು ಪ್ರದೇಶ, ನದಿಗಳು, ವಿವಿಧ ಭಾಷೆ, ಜನರು, ಪ್ರಾಣಿ ಸಂಕುಲ, ಪಾರಂಪರಿಕ ತಾಣಗಳು ಹೀಗೆ ಹಲವಾರು ಉದಾಹರಣೆಗಳು ಸಿಗುತ್ತವೆ ಎಂದರು.

ಇಡೀ ಜಗತ್ತು ಬೆಂಗಳೂರನ್ನು ಗಮನಿಸುತ್ತಿದೆ. ಬೆಂಗಳೂರಿನ ಮೂಲಕ ಭಾರತ ದರ್ಶನ ಮಾಡಲಾಗುತ್ತಿದೆ. ಸಿಲಿಕಾನ್ ಸಿಟಿಯಾಗಿ ಬೆಳೆದಿದೆ, ಶಿಕ್ಷಣ, ನವೋದ್ಯಮ ಮತ್ತು ವೈದ್ಯಕೀಯದ ಹಬ್ ಆಗಿ ಬೆಳೆದಿದೆ, ಬೆಳೆಯುತ್ತಿದೆ. ರಾಜ್ಯ ರಾಜಧಾನಿಗೆ ತನ್ನದೇ ಆದ ಇತಿಹಾಸವಿದೆ. ನಮ್ಮ ಪರಂಪರೆ ನಮ್ಮನ್ನು ಕಾಪಾಡುತ್ತಿದೆ ಎಂದು ತಿಳಿಸಿದರು.

ಎಂಜಿನಿಯರ್‌ಗಳು, ತಂತ್ರಜ್ಞಾನಿಗಳನ್ನು ನಮ್ಮ ಬೆಂಗಳೂರು ಇಡೀ ಪ್ರಪಂಚಕ್ಕೆ ಕೊಡುಗೆ ನೀಡುತ್ತಿದೆ. 1904ರಲ್ಲಿ ಇಡೀ ಏಷ್ಯಾದಲ್ಲಿಯೇ ಮೊದಲು ವಿದ್ಯುತ್ ದೀಪ ಬೆಳಗಿದ ಭೂಮಿ ನಮ್ಮದು. ಇಸ್ರೋ, ಐಐಎಸ್ಇ, ಅತ್ಯಮೂಲ್ಯ ಕೈಗಾರಿಕೆಗಳು ಸ್ಥಾಪನೆಯಾಗಿದ್ದು ಇಲ್ಲಿ. ನಮ್ಮ ಕರ್ನಾಟಕವನ್ನು ಕೇವಲ ರಾಜ್ಯವಾಗಿ ನೋಡಬಾರದು. ಸಾಂಸ್ಕೃತಿಕ ವೈವಿಧ್ಯತೆಯಿಂದ ಕೂಡಿದ ಶ್ರೀಮಂತ ಸಂಸ್ಕೃತಿಯ ಪ್ರದೇಶ ಎಂದು ಹೇಳಿದರು.

ಪ್ರಪಂಚದ ನಾನಾ ಭಾಗಗಳಿಂದ ಅತಿಥಿಗಳು ಕರ್ನಾಟಕದ ವೈಭವವನ್ನು ಕಣ್ತುಂಬಿಕೊಳ್ಳಲು ಬಂದಿದ್ದೀರಿ. ನೀವು ನಮ್ಮ ರಾಜ್ಯದ ಮುಂದಿನ ರಾಯಭಾರಿಗಳು ಎಂದರೆ ಅತಿಶಯೋಕ್ತಿಯಲ್ಲ ಎಂದರು.

ಪ್ರವಾಸೋದ್ಯಮಕ್ಕೆ ನಮಗೆ ಪ್ರಾಮಾಣಿಕವಾಗಿ ಹೂಡಿಕೆ‌ ಮಾಡುವ ಹೂಡಿಕೆದಾರರ ಅಗತ್ಯವಿದೆ. ನಮ್ಮ ಅಧಿಕಾರಿಯೊಬ್ಬರು ಹೇಳುತ್ತಿದ್ದರು. ಇಡೀ ಪ್ರಪಂಚದಲ್ಲಿ ಪ್ರವಾಸೋದ್ಯಮ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ಎರಡನೇ ಸ್ಥಾನದಲ್ಲಿದೆ. ಅನೇಕ ದೇಶಗಳು ಪ್ರವಾಸೋದ್ಯಮದಿಂದಲೇ ಬದುಕಿವೆ. ನಾನು ಸಹ ಪ್ರಪಂಚದ ನಾನಾ ಕಡೆ ಪ್ರವಾಸ ಮಾಡುತ್ತಾ ಇರುತ್ತೇನೆ. ಈ ಅನುಭವ ನನಗೂ ಆಗಿದೆ ಎಂದರು.

ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡುವವರು ಬೆಂಗಳೂರು ಹೊರಗೆ ಹೆಚ್ಚು ಗಮನಹರಿಸಿ. ನಿಮಗೆ ನಿಮ್ಮ ಮೊಬೈಲ್ ಮೂಲಕವೇ ಇಡೀ ಕರ್ನಾಟಕದ ಮಾಹಿತಿ ಸಿಗುತ್ತದೆ. ಆದ ಕಾರಣ ನೀವೆ ಪರೀಕ್ಷೆ ಮಾಡಿ, ನೀವೇ ನಮ್ಮ ಬಗ್ಗೆ ನಿರ್ಧಾರ ಮಾಡಬಹುದು. ಅವಕಾಶವನ್ನು ಬಳಸಿಕೊಳ್ಳಿ‌. ನೀವು ಬೆಳೆದರೆ ರಾಜ್ಯ ಬೆಳೆಯುತ್ತದೆ. ಆರ್ಥಿಕವಾಗಿ ನೀವು ಸಬಲರಾದರೆ ದೇಶ ಹಾಗೂ ರಾಜ್ಯ ಬಲವಾಗುತ್ತವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Book Release: ಬೆಂಗಳೂರಿನಲ್ಲಿ ಮಾ.2 ರಂದು ʼಬೆಟ್ಟದ ಹೂವುʼ ಕೃತಿ ಲೋಕಾರ್ಪಣೆ

ಪ್ರವಾಸೋದ್ಯಮ ಇಲಾಖೆ ಉತ್ತಮ ಅಧಿಕಾರಿಗಳನ್ನು ಹೊಂದಿದೆ. ಈ ಇಲಾಖೆಯ ಯುವ ಅಧಿಕಾರಿಗಳು ಜವಾಬ್ದಾರಿ ಹೊತ್ತುಕೊಂಡು ಕಾರ್ಯಕ್ರಮ ನಡೆಸಿದ್ದಾರೆ. ಸಚಿವರಾದ ಎಚ್.ಕೆ.ಪಾಟೀಲ್ ಅವರಿಗೆ ಚುನಾವಣಾ ಕಾರ್ಯ ನಿಮಿತ್ತ ನಿಮ್ಮ ಜತೆ ಕಾಲ ಕಳೆಯಲು ಸಾಧ್ಯವಾಗಿಲ್ಲ. ಆದರೆ ನಾವು ನಿಮ್ಮ ಜತೆ ಸದಾ ಇರುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.