Apple Cut Movie: ‘ಆ್ಯಪಲ್ ಕಟ್ʼ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನದ ʼಆ್ಯಪಲ್ ಕಟ್ʼ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ಟ್ರೈಲರ್ ಅನಾವರಣಗೊಳಿಸಿದರು. ಚಿತ್ರ ಮಾ. 7ರಂದು ಬಿಡುಗಡೆಯಾಗಲಿದೆ.


ಬೆಂಗಳೂರು: ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನದ ʼಆ್ಯಪಲ್ ಕಟ್ʼ ಚಿತ್ರದ (Apple Cut Movie) ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಟ್ರೈಲರ್ ಅನಾವರಣಗೊಳಿಸಿದರು. ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ದಾಸೇಗೌಡ ಉಪಸ್ಥಿತರಿದ್ದರು. ಟ್ರೈಲರ್ ಅನಾವರಣ ಮಾಡಿ ಮಾತನಾಡಿದ ನಟ ಗಣೇಶ್, ನಾನು ಸಾಮಾನ್ಯವಾಗಿ ನನ್ನ ಚಿತ್ರದ ಹೊರತು ಬೇರೆ ಸಮಾರಂಭಗಳಿಗೆ ಹೋಗುವುದು ಕಡಿಮೆ. ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ರಾಜಶೇಖರ್ ಅವರ ಪುತ್ರಿ ಈ ಚಿತ್ರದ ನಿರ್ದೇಶಕರು ಎಂದು ತಿಳಿದು ಸಂತೋಷವಾಯಿತು. ಆ ಕಾರಣಕ್ಕಾಗಿ ಹಾಗೂ ಸ್ನೇಹಿತರಾದ ದಾಸೇಗೌಡರ ಪ್ರೀತಿಯ ಆಹ್ವಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಟ್ರೈಲರ್ ನೋಡಿದಾಗ ವಿಭಿನ್ನ ಕಂಟೆಂಟ್‌ವುಳ್ಳ ಚಿತ್ರ ಎಂದು ತಿಳಿಯುತ್ತದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಿರ್ದೇಶಕಿ ಸಿಂಧು ಗೌಡ ಮಾತನಾಡಿ, ನಮ್ಮ ಅಪ್ಪನ ಕಾರ್ಯ ವೈಖರಿ ನೋಡಿ ನಿರ್ದೇಶನ ಕಲಿತ್ತಿದ್ದೇನೆ. ನಟಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನನಗೆ ನಿರ್ದೇಶಕಿಯಾಗಿ ಮೊದಲ ಚಿತ್ರ. ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇನೆ. ಕಥೆ ಮೆಚ್ಚಿಕೊಂಡು ನಿರ್ಮಾಣ ಮಾಡಿದ ಶಿಲ್ಪ ಪ್ರಸನ್ನ ಅವರಿಗೆ ಧನ್ಯವಾದ. ‘ಆ್ಯಪಲ್ ಕಟ್ʼ, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ. ನಮ್ಮ ಚಿತ್ರ ಮಾ. 7ರಂದು ಬಿಡುಗಡೆಯಾಗುತ್ತಿದೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮ ಹಾರೈಕೆ ಇರಲಿ ಎಂದರು.
ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೊದಲ ಬಾರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಮಾ. 7ರಂದು ರಿಲೀಸ್ ಮಾಡುತ್ತಿದ್ದೇವೆ. ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಗಣೇಶ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕಿ ಶಿಲ್ಪ ಪ್ರಸನ್ನ.
ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದ ನಾಯಕ ಸೂರ್ಯ ಗೌಡ, ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣೇಶ್ ಹಾಗೂ ದಾಸೇ ಗೌಡ ಅವರಿಗೆ ಧನ್ಯವಾದ ತಿಳಿಸಿದರು.
ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ ಎಂದು ನಾಯಕಿ ಅಶ್ವಿನಿ ಪೋಲೆಪಲ್ಲಿ ಹೇಳಿದರು.
ಈ ಸುದ್ದಿಯನ್ನೂ ಓದಿ | IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 650 ಹುದ್ದೆ; ಮಾ. 1ರಿಂದ ಅಪ್ಲೈ ಮಾಡಿ
ಚಿತ್ರದಲ್ಲಿ ನಟಿಸಿರುವ ಅಮೃತ ಹಾಗೂ ಮೀನಾಕ್ಷಿ ತಮ್ಮ ಪಾತ್ರದ ಕುರಿತು ಮಾತನಾಡಿದರು. ವೀರ ಸಮರ್ಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.