Viral Video: ಪ್ಲಾಟ್‍ಫಾರ್ಮ್‍ನಲ್ಲಿ ನಿಂತು ರೈಲಿನೊಳಗಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಬಿಹಾರದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವ್ಯಕ್ತಿಯ ಕೃತ್ಯದ ಬಗ್ಗೆ ನೆಟ್ಟಿಗರಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಂತರ ಪೊಲೀಸರು ಆತನಿಗೆ ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ.


ಪಾಟ್ನಾ: ನಡುರಸ್ತೆಯಲ್ಲಿ ಬೈಕ್ ಮೇಲೆ ಸ್ಟಂಟ್ ಮಾಡುವುದು, ರೈಲ್ವೆ ಹಳಿಗಳ ಮೇಲೆ ಸ್ಟಂಟ್ ಮಾಡುವುದು ಇವೆಲ್ಲವೂ ಇತ್ತೀಚಿನ ರೀಲ್ಸ್ ಶೋಕಿಗಳು! ಸೋಶಿಯಲ್ ಮೀಡಿಯಾದ ಕ್ರೇಜ್‌ನಿಂದಾಗಿ ಇಂದಿನ ಯುವಜನಾಂಗ ರೀಲ್ಸ್‌ನ ಗೀಳಿಗೆ ಬಿದ್ದು ಏನೇನೋ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಹಾರದ ಅನುಗ್ರಹ ನಾರಾಯಣ್ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಆತ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ನಿಂತು, ರೈಲು ಮುಂದೆ ಚಲಿಸುತ್ತಿದ್ದಂತೆ ಬೋಗಿಯೊಳಗೆ ಕುಳಿತಿದ್ದ ವ್ಯಕ್ತಿಯ ಕಪಾಳಕ್ಕೆ ಹೊಡೆದಿದ್ದಾನೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವ್ಯಕ್ತಿಯ ಕೃತ್ಯದ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೊ ವೈರಲ್ ಆದ ನಂತರ ರಿತೇಶ್ ಕುಮಾರ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದ ಕಾರಣ ರೈಲ್ವೆ ಪೊಲೀಸ್ ಪಡೆ ಆತನನ್ನು ಬಂಧಿಸಿದೆ. ಅಲ್ಲದೇ ಆತ ರೀಲ್ಸ್‌ಗಾಗಿ ಈ ಕೆಲಸ ಮಾಡಿದ್ದು ಎಂಬುದಾಗಿ ತಿಳಿಸಿದ್ದಾನೆ. ಅಂತಹ ರೀಲ್ ಅನ್ನು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಆತನಿಗೆ ಪೊಲೀಸರು ಹೇಳಿದ್ದಾರೆ. ಕೊನೆಗೆ ಆತ ತಪ್ಪು ಒಪ್ಪಿಕೊಂಡು ಈ ಘಟನೆಯ ಬಗ್ಗೆ ಕ್ಷಮೆಯಾಚಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊದಲ್ಲಿ, ಕುಮಾರ್ ಹೆಚ್ಚಿನ ಫಾಲೋವರ್ಸ್‌ಗಾಗಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಈ ರೀತಿ ರೀಲ್ ಅನ್ನು ಚಿತ್ರೀಕರಿಸಿರುವುದಾಗಿ ಹೇಳಿದ್ದಾನೆ.
Just to gain attention and gain followers, a YouTuber made reel of slapping passengers on Train.
— Megh Updates 🚨™ (@MeghUpdates) February 28, 2025
RPF and Police swungs into action and arrests him, duly serviced!pic.twitter.com/adpeC3yZZV
ರಿತೇಶ್ ಕುಮಾರ್ ಸ್ನೇಹಿತ ರಜಪೂತ್ ಎಂಬಾತ ಕೂಡ ಚಲಿಸುತ್ತಿರುವ ಪ್ಯಾಸೆಂಜರ್ ರೈಲಿನ ಕಿಟಕಿಯ ಬಳಿ ಬಂದು ಯಾವುದೇ ಕಾರಣವಿಲ್ಲದೆ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುವ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತಂತೆ.
ಈ ಸುದ್ದಿಯನ್ನೂ ಓದಿ: ರೀಲ್ಸ್ ಗೀಳು ತಂದ ಆಪತ್ತು; ರೈಲು ಡಿಕ್ಕಿಯಾಗಿ ಮೂವರು ಯುವಕರ ಸಾವು
ರೀಲ್ಸ್ ಮಾಡುವಾಗ ರೈಲು ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ. ಯಶವಂತಪುರ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ರೈಲ್ವೆ ಹಳಿ ಬಳಿ ಬಂದು ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ರೈಲು ಡಿಕ್ಕಿ ಹೊಡೆದ ರಭಸಕ್ಕೆ ಹಳಿಗಳ ಮೇಲೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸತ್ಯ ಸಾಯಿ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಹಳಿ ಮೇಲಿದ್ದ ಮೃತದೇಹಗಳನ್ನ ಕಂಡು ಸ್ಥಳಿಯರಿಂದ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.