Museum: 2 ಶತಮಾನಗಳ ಹಿಂದಿನ ಪಾರಂಪರಿಕ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ ಮಹಿಳೆ
ಪಾರಂಪರಿಕ ವಸ್ತುಗಳನ್ನ, ಜನ ಜೀವನ, ಸಂಪ್ರದಾಯಗಳನ್ನು ಮುಂದಿನ ಜನಾಂಗಕ್ಕೆ ರಕ್ಷಿಸಿಡುವುದು ನಮ್ಮೆಲ್ಲರ ಜವಾಬ್ದಾರಿ. ಇದೀಗ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರು ತನ್ನ ಪೂರ್ವಜರ ಮನೆಯನ್ನು ಒಂದು ಅದ್ಭುತ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

ಈ ಮನೆಗಿದೆ 200 ವರ್ಷಗಳ ಇತಿಹಾಸ – ಈ ಮನೆ ಇದೀಗ ಮ್ಯೂಸಿಯಂ.

ಇಟಾನಗರ: ವೇಗವಾಗಿ ಬೆಳೆಯುತ್ತಿರುವ ಇಂದಿನ ಜಗತ್ತಿನಲ್ಲಿ ಆಧುನಿಕತೆ ಮತ್ತು ತಂತ್ರಜ್ಞಾನದ ಭರಾಟೆಯ ನಡುವೆ ಸಂಪ್ರದಾಯಗಳು ಕೆಲಮೊಮ್ಮೆ ಮೂಲೆಗುಂಪಾಗಿಬಿಡುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಅಪವಾದವೆಂಬಂತೆ ಅರುಣಾಚಲ ಪ್ರದೇಶದ ಮಹಿಳೆಯೊಬ್ಬರು ತನ್ನ ಪರಂಪರೆಯ ಇತಿಹಾಸ ಮತ್ತು ಸಾಧನೆಗಳು ಕೇವಲ ಪುಸ್ತಕಗಳಲ್ಲಿ ಉಳಿಯಬಾರದು ಮತ್ತು ಮ್ಯೂಸಿಯಂ (Museum)ಗಳ ಗ್ಲಾಸ್‌ನೊಳಗೆ ಬಂಧಿಯಾಗಿರಬಾರದು ಎಂದು ನಿರ್ಧರಿಸಿರುವ ಆಕೆ ಈ ಇತಿಹಾಸ ಮನೆಯ ಪ್ರತೀ ಗೋಡೆಗಳ ಮೇಲೂ ರಾರಾಜಿಸಬೇಕೆಂದು ಬಯಸಿ ಆ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಿ ಯಶಸ್ವಿಯಾದ ಸುದ್ದಿಯೊಂದು ಇಲ್ಲಿದೆ. ಪಶ್ಚಿಮ ಅರುಣಾಚಲ ಪ್ರದೇಶದ ಮೊಂಪ ಸಮುದಾಯಕ್ಕೆ ಸೇರಿದ 24 ವರ್ಷದ ಲೈಕೆ ಚಾಮು ಎಂಬ ಮಹಿಳೆಯೇ ತನ್ನ ಪೂರ್ವಜರ ಭವ್ಯ ಪರಂಪರೆಯನ್ನು ಕಾಪಾಡಲು ಪಣತೊಟ್ಟಿರುವ ಮಹಿಳೆ.
ಲೈಕೆ ಚಾಮು 200 ವರ್ಷಗಳ ಪುರಾತನವಾದ ತನ್ನ ಪೂರ್ವಜರ ಮನೆಯನ್ನು ಒಂದು ಜೀವಂತ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಈ ವಸ್ತು ಸಂಗ್ರಹಾಲಯದಲ್ಲಿ ಅಪರೂಪದ ವಸ್ತುಗಳ ಸಂಗ್ರಹ ಮಾತ್ರವಲ್ಲದೇ, ಈ ವಸ್ತುಸಂಗ್ರಹಾಲಯವೇ ಒಂದು ಇತಿಹಾಸದ ತುಣುಕಿನಂತೆ ಗೋಚರವಾಗುತ್ತದೆ. ಈ ಕಟ್ಟಡವನ್ನು ಪುರಾತನ ಮೊಂಪ ತಂತ್ರಜ್ಞಾನವನ್ನು ಬಳಸಿ ಮಣ್ಣು ಹಾಗೂ ಕಲ್ಲುಗಳಿಂದ ನಿರ್ಮಿಸಲಾಗಿದೆ.
ʼʼಇದು ನಮ್ಮ ಸಂಸ್ಕೃತಿ ಗುರುತನ್ನು ಜಿವಂತವಾಗಿರಿಸುವ ಒಂದು ಪ್ರಯತ್ನʼʼ ಎಂದು ಚಾಮು ಪ್ರತಿಕ್ರಿಯಿಸಿದ್ದಾರೆ. ಮೊಂಪ ಸಮುದಾಯದ ವಿಶಿಷ್ಟ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಡಬ್ಲ್ಯು.ಡಬ್ಲ್ಯು.ಎಫ್. ರೂಪಿಸಿದೆ. ಆದರೆ ಈ ಪಾರಂಪರಿಕ ಮನೆಯನ್ನು ಒಂದು ಜಿವಂತ ಮ್ಯೂಸಿಯಂ ಆಗಿ ಪರಿವರ್ತಿಸಲು ಚಾಮು ಶ್ರಮಿಸಿದ್ದಾರೆ.
ಈ ಮನೆಯ ಎಲ್ಲ ರಚನೆಗಳನ್ನು ಜಾಗರೂಕತೆಯಿಂದ ಜೋಡಿಸುವಲ್ಲಿ, ವಸ್ತುಗಳನ್ನು ಸಂರಕ್ಷಿಸುವಲ್ಲಿ ಮತ್ತು ಇದು ಅಂತಿಮವಾಗಿ ಇಲ್ಲಿಗೆ ಭೇಟಿ ನೀಡುವವರಿಗೆ ಎಲ್ಲ ಮಾಹಿತಿಗಳು ಸರಿಯಾಗಿ ಸಿಗುವಲ್ಲಿ ಚಾಮು ಅವರ ವಿಶೇಷ ಪರಿಶ್ರಮ ಅಡಗಿದೆ.
ಇದನ್ನೂ ಓದಿ: Reliance: ವಿರಳ ಕಾಯಿಲೆಗಳ ಪತ್ತೆಗೆ ವೈದ್ಯರಿಗೆ ನೆರವಾಗಲು ಪೋರ್ಟಲ್ ಆರಂಭಿಸಿದ ಸ್ಟ್ರಾಂಡ್ ಲೈಫ್ ಸೈನ್ಸಸ್
‘ʼನನಗೆ, ಇದು ಕೇವಲ ಒಂದು ಪ್ರಾಜೆಕ್ಟ್ ಅಲ್ಲ, ಅದಕ್ಕಿಂತಲೂ ಹೆಚ್ಚು. ಇದು ನನ್ನ ಕುಟುಂಬದ ಪರಂಪರೆಯ ವಿಷಯವಾಗಿದೆʼʼ ಎಂದು ಅವರು ಹೇಳಿದ್ದಾರೆ. ಆಧುನೀಕರಣ ತೀವ್ರವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಜೀವನ ಶೈಲಿ ವೇಗವಾಗಿ ಬದಲಾಗುತ್ತಿದೆ. ಇಂತಹ ಸಂಕೀರ್ಣ ಕಾಲ ಘಟ್ಟದಲ್ಲಿ ಚಾಮು ಅವರು ಈ ಜ್ಞಾನ ಮತ್ತು ಎಲ್ಲ ವಿಚಾರಗಳನ್ನು ಅವುಗಳು ನಶಿಸಿ ಹೊಗುವ ಮುಂಚೆಯೇ ರಕ್ಷಿಸಿಡುವ ನಿರ್ಧಾರ ಕೈಗೊಂಡಿದ್ದಾರೆ.
ʼʼಕೇವಲ ನಿರ್ಜೀವ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸುವುದಕ್ಕಿಂತ, ವಸ್ತು ಸಂಗ್ರಹಾಲಯವನ್ನೇ ಒಂದು ಜೀವಂತ ನಿದರ್ಶನವನ್ನಾಗಿ ಮಾಡಲಾಗಿದೆ. ಇಲ್ಲಿಗೆ ಭೇಟಿ ನೀಡುವ ವೀಕ್ಷಕರು ಕೇವಲ ಐತಿಹಾಸಿಕ ವಸ್ತುಗಳನ್ನಷ್ಟೇ ನೋಡುವುದಲ್ಲ. ಬದಲಾಗಿ ಶತಮಾನಗಳ ಹಿಂದೆ ಮೊಂಪಾ ಜನರು ಹೇಗೆ ಬದುಕಿದ್ದರು ಎಂಬುದನ್ನು ಅವರು ತಮ್ಮ ಅನುಭವಕ್ಕೆ ತಂದುಕೊಳ್ಳಲಿದ್ದಾರೆʼʼ ಎಂಬುದು ಚಾಮು ಅವರ ಭರವಸೆಯ ನುಡಿ.
ಹಲವು ತಿಂಗಳ ಶ್ರಮದ ಬಳಿಕ ಈ ವಸ್ತುಸಂಗ್ರಹಾಲಯ ಕಳೆದ ವರ್ಷದ ಅ. 5ರಂದು ಅಧಿಕೃತವಾಗಿ ವೀಕ್ಷಕರ ಭೇಟಿಗೆ ತೆರೆದುಕೊಂಡಿದೆ.