Viral News: ಕದ್ದ ಬೈಕ್ ಹಿಂದಿರುಗಿಸಲು 450 ಕಿ.ಮೀ ಪ್ರಯಾಣ; ಕ್ಷಮೆ ಕೋರಿ ಪತ್ರ...ಜೊತೆಗೆ 1500ರೂ ಪರಿಹಾರ!ಅಪರೂಪದ ಕಳ್ಳನ ಕಥೆ ಇದು
ತಮಿಳುನಾಡಿನ ವ್ಯಕ್ತಿಯೊಬ್ಬ ಬೈಕ್ ಕಳ್ಳತನ ಮಾಡಿದ್ದಲ್ಲದೇ ನಂತರ ಆ ಕದ್ದ ಬೈಕ್‍ನಲ್ಲಿ 450 ಕಿ.ಮೀ ಪ್ರಯಾಣಿಸಿ ಅದನ್ನು ಅದರ ಮಾಲೀಕನಿಗೆ ಹಿಂತಿರುಗಿದ್ದಾನೆ. ಹಾಗೇ ಅದರ ಜೊತೆಗೆ ಕ್ಷಮೆಯಾಚನೆಯ ಪತ್ರ ಹಾಗೂ ಪರಿಹಾರವಾಗಿ 1500ರೂ. ಹಣವನ್ನು ನೀಡಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News)ಆಗಿದೆ.

ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ಬೈಕ್ ಕಳ್ಳತನ ಮಾಡಿದ್ದಲ್ಲದೇ ನಂತರ ಆ ಕದ್ದ ಬೈಕ್‍ನಲ್ಲಿ ಬಂದು ಅದನ್ನು ಅದರ ಮಾಲೀಕನಿಗೆ ಹಿಂತಿರುಗಿ ಕ್ಷಮೆಯಾಚಿಸಿ ಪರಿಹಾರವಾಗಿ ಹಣವನ್ನು ನೀಡಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ಬೈಕ್ ಮಾಲೀಕ ವೀರಮಣಿ ಎಂಬುದಾಗಿ ಗುರುತಿಸಲಾಗಿದ್ದು, ಕಳ್ಳ ಅವನಿಗೆ ಕ್ಷಮೆಯಾಚನೆಯ ಪತ್ರ ಹಾಗೂ ಹಣ ನೀಡಿ ಬೈಕ್ ಅನ್ನು ಹಿಂದಿರುಗಿಸಿದ್ದಾನೆ ಎನ್ನಲಾಗಿದೆ. ಅನುಮತಿಯಿಲ್ಲದೆ ವೀರಮಣಿಯ ಬೈಕ್ ಅನ್ನು ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು ಎಂದು ಕಳ್ಳ ತನ್ನ ಪತ್ರದಲ್ಲಿ ತಿಳಿಸಿದ್ದಾನೆ. ಈ ನಡುವೆ ಬೈಕ್ ಕಾಣೆಯಾದ ಕಾರಣ, ಅದರ ಮಾಲೀಕ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಆದರೆ ಕೆಲವು ದಿನಗಳ ನಂತರ, ವೀರಮಣಿ ತನ್ನ ಬೈಕ್ ಮನೆಯ ಮುಂದೆಯೇ ಇರುವುದನ್ನು ನೋಡಿ ಶಾಕ್ ಆಗಿದ್ದಾನೆ. ಕಾಣೆಯಾದ ಬೈಕ್ ಹೇಗೆ ಮನೆ ಎದುರಿಗೆ ಬಂದಿತ್ತು ಎಂದು ಅವನು ಆಶ್ಚರ್ಯಪಟ್ಟಾಗ, ಕಳ್ಳನು ಅಲ್ಲಿ ಬರೆದಿಟ್ಟ ಪತ್ರ ಅವನ ಕೈಗೆ ಸಿಕ್ಕಿದೆಯಂತೆ.
ವರದಿಗಳ ಪ್ರಕಾರ, ಫೆಬ್ರವರಿ 24ರಂದು, ಮಾಲೀಕನಿಗೆ ಬೈಕ್ ಮತ್ತೆ ಸಿಕ್ಕಿದೆಯಂತೆ. ಅದರ ಜೊತೆ ಒಂದು ಕ್ಷಮೆಯಾಚನೆಯ ಪತ್ರ ಮತ್ತು ಪರಿಹಾರವಾಗಿ 1,500 ರೂಪಾಯಿ ಕೂಡ ಇದ್ದಿತ್ತಂತೆ.ಅದೂ ಅಲ್ಲದೇ ಕದ್ದ ಬೈಕ್ ಅನ್ನು ಅದರ ಮಾಲೀಕನಿಗೆ ಹಸ್ತಾಂತರಿಸಲು ಕಳ್ಳನು 450 ಕಿಲೋಮೀಟರ್ ಪ್ರಯಾಣಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಯಾವುದೋ ತುರ್ತು ಪರಿಸ್ಥಿತಿಯ ಕಾರಣ ವಾಹನದ ಅಗತ್ಯವಿದ್ದರಿಂದ ಈ ಕೃತ್ಯ ಎಸಗಿರುವುದಾಗಿ ಕಳ್ಳನು ಪತ್ರದಲ್ಲಿ ತಿಳಿಸಿದ್ದಾನೆ. ತನ್ನಿಂದ ಮಾಲೀಕನಿಗೆ ತೊಂದರೆಯಾದ ಕಾರಣ ಕಳ್ಳನು 1,500 ರೂ.ಗಳನ್ನು ಬೈಕಿನ ಪೆಟ್ರೋಲ್ ಟ್ಯಾಂಕ್ ನಲ್ಲಿ ಇಟ್ಟಿದ್ದಾನೆ ಮತ್ತು "ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಬೈಕ್ ನನಗೆ ಸಹಾಯ ಮಾಡಿತು. ನಾನು ನಿಮಗೆ ಋಣಿಯಾಗಿದ್ದೇನೆ. ದಯವಿಟ್ಟು ಈ ಹಣವನ್ನು ಸ್ವೀಕರಿಸಿ ನನ್ನನ್ನು ಕ್ಷಮಿಸಿ" ಎಂದು ಪತ್ರದಲ್ಲಿ ಬರೆದಿದ್ದಾನಂತೆ.
ಆದರೆ ಈ ಪ್ರಕರಣವನ್ನು ಮುಚ್ಚಲಾಗಿದೆಯೇ ಅಥವಾ ಕಳ್ಳನ ವಿರುದ್ಧ ನಂತರ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ಕಳ್ಳತನಕ್ಕೂ ಮುನ್ನ ಈ ಕಿಲಾಡಿ ಕಳ್ಳ ಮಾಡಿದ್ದೇನು ಗೊತ್ತಾ? ವಿಡಿಯೊ ನೋಡಿ
ಇತ್ತೀಚೆಗೆ ಕಳ್ಳನೊಬ್ಬ ದೇವರ ಬಳಿ ತನಗೆ ಸಹಾಯ ಮಾಡುವಂತೆ ಕೇಳಿದ ವಿಚಿತ್ರ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದ ರಾಜ್‍ಗಢ್‍ನಲ್ಲಿ ಪೆಟ್ರೋಲ್ ಪಂಪ್‍ಗೆ ನುಗ್ಗಿದ ಕಳ್ಳ ಹಣವನ್ನು ಕದಿಯುವಾಗ ಅಲ್ಲಿಯೇ ಮೂಲೆಯಲ್ಲಿರುವ ಸಣ್ಣ ದೇವರ ಪೀಠವನ್ನು ನೋಡಿದ್ದಾನೆ. ಆಗ ಅವನು ದೇವರ ಪೀಠದ ಬಳಿ ಹೋಗಿ ಮೊದಲು ತಲೆ ಬಾಗಿ ದೇವರಿಗೆ ನಮಸ್ಕರಿಸಿ ತನಗೆ ಸಹಾಯ ಮಾಡುವಂತೆ ಅಲ್ಲಿದ್ದ ದೇವರ ಪೋಟೊದ ಮುಂದೆ ಕೈ ಮುಗಿದು ಬೇಡಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.