ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಅನ್ನ ಬಸಿಯಲು ಈರುಳ್ಳಿ ಚೀಲ ಬಳಸದಂತೆ ಸರ್ಕಾರ ನಿಷೇಧ ಹೇರಲಿ

ಆರೋಗ್ಯ ಸಚಿವರು ಇಡ್ಲಿ ತಯಾರಕರ ಮೇಲೆ ಪ್ಲಾಸ್ಟಿಕ್ ನಿಷೇಧದ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇದೇ ರೀತಿ ಅನೇಕ ಹೋಟೆಲ್‌ಗಳಲ್ಲಿ ಮತ್ತು ಊಟ-ಉಪಾಹಾರದ ಸಮಾರಂಭಗಳಲ್ಲಿ ಅನ್ನ ಬಸಿಯಲು ಪ್ಲಾಸ್ಟಿಕ್‌ನ ಈರುಳ್ಳಿ ಚೀಲಗಳನ್ನು ಬಳಸುತ್ತಾರೆ. ಇದೂ ಕೂಡ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು ಇದನ್ನೂ ನಿಷೇಧಿಸಬೇಕು.

ಅನ್ನ ಬಸಿಯಲು ಈರುಳ್ಳಿ ಚೀಲ ಬಳಸದಂತೆ ಸರ್ಕಾರ ನಿಷೇಧ ಹೇರಲಿ

Profile Siddalinga Swamy Feb 28, 2025 9:19 PM

- ಅರವಿಂದ ಸಿಗದಾಳ್, ಮೇಲುಕೊಪ್ಪ

ಬೆಂಗಳೂರು: ಕೆಲವು ಹೋಟೆಲ್ ಹಾಗೂ ಉಪಾಹಾರ ಕೇಂದ್ರಗಳಿಂದ ಸಂಗ್ರಹಿಸಲಾದ ಇಡ್ಲಿ ಮತ್ತಿತರ ತಿಂಡಿಗಳಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಇನ್ನು ಮುಂದೆ ರಾಜ್ಯದ ಹೋಟೆಲ್, ಉಪಾಹಾರ ಕೇಂದ್ರಗಳಲ್ಲಿ ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ (Dinesh Gundu Rao) ಘೋಷಿಸಿದ್ದಾರೆ. ಆರೋಗ್ಯ ಸಚಿವರು ಇಡ್ಲಿ ತಯಾರಕರ ಮೇಲೆ ಪ್ಲಾಸ್ಟಿಕ್ ನಿಷೇಧದ ಕ್ರಮ ಕೈಗೊಂಡಿರುವುದು ಶ್ಲಾಘನೀಯವಾದುದು. ಇದೇ ರೀತಿ ಇನ್ನೊಂದು ಸಮಸ್ಯೆ ಇದೆ. ಅನೇಕ ಹೋಟೆಲ್‌ಗಳಲ್ಲಿ ಮತ್ತು ಊಟ-ಉಪಾಹಾರದ ಸಮಾರಂಭಗಳಲ್ಲಿ ಅನ್ನ ಬಸಿಯಲು ಪ್ಲಾಸ್ಟಿಕ್‌ನ ಈರುಳ್ಳಿ ಚೀಲಗಳನ್ನು ಬಳಸುತ್ತಾರೆ. ಇದೂ ಕೂಡ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ.

ಅನ್ನ ಮಾಡಿ ತಿಳಿ ಬಸಿಯುವಾಗ, ಕುದಿಯುತ್ತಿರುವ ಬಿಸಿ ತಿಳಿ ಈರುಳ್ಳಿ ಚೀಲದ ಪ್ಲಾಸ್ಟಿಕ್ ಕಣಗಳೊಂದಿಗೆ ಹೊರಗಡೆ ಹೋಗಬಹುದು. ಆದರೆ ಬಸಿಯುವ ಪ್ರಕ್ರಿಯೆಯಲ್ಲಿ ಪ್ಲಾಸ್ಟಿಕ್ ಕಣಗಳು, ಬಸಿದ ಅನ್ನಕ್ಕೂ ಸೇರಿ ಉಳಿಯುತ್ತವೆ. ಈರುಳ್ಳಿ ಚೀಲದಲ್ಲಿನ ಪ್ಲಾಸ್ಟಿಕ್, ಶಾಖ ಮತ್ತಿತರ ಗುಣಗಳಿಗೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸಿ, ಅನ್ನಕ್ಕೆ ಸೇರಿಸುತ್ತದೆ. ಹೀಗೆ ಈರುಳ್ಳಿ ತುಂಬುವ ಪ್ಲಾಸ್ಟಿಕ್ ಚೀಲ ಬಳಸಿ ಬಸಿದ ಅನ್ನವನ್ನು ಊಟದ ಮನೆ, ಹೋಟಲ್, ಉಪಹಾರ ಗೃಹಗಳಲ್ಲಿ ಸಾರ್ವಜನಿಕರು ಸೇವಿಸಿದಾಗ, ಅದೂ ಕೂಡ ಕ್ಯಾನ್ಸರ್ ಕಾರಕವಾಗುತ್ತದೆ.

ಹೋಟಲ್‌, ಉಪಾಹಾರ ಗೃಹ, ಛತ್ರ, ಸಮಾರಂಭಗಳಲ್ಲಿ ಈ ಈರುಳ್ಳಿ ಚೀಲದ ಪ್ಲಾಸ್ಟಿಕ್ ನೆಟ್‌ಗಳನ್ನು ಬಳಸದಂತೆ ಹೋಟೆಲ್ ಓನರ್ ಅಥವಾ ಕಾರ್ಯಕ್ರಮದ ಆಯೋಜಕರು ಅಡಿಗೆಯವರಿಗೆ ಮಾಹಿತಿ ಕೊಟ್ಟು ಕ್ರಮ ಕೈಗೊಳ್ಳಬೇಕು. ಜತೆಗೆ ಸರ್ಕಾರವೂ ಈ ಬಗ್ಗೆ ಗಮನ ಹರಿಸಿ, ಅನ್ನ ಬಸಿಯಲು ಪ್ಲಾಸ್ಟಿಕ್‌ನ ಈರುಳ್ಳಿ ಚೀಲ ಬಳಸದಂತೆ ನಿಷೇಧ ಹೇರಬೇಕು.

ಹಾಗಾದರೆ, ಹೋಟೆಲ್, ಉಪಾಹಾರ ಗೃಹ, ಛತ್ರ ಮತ್ತು ಸಮಾರಂಭಗಳಲ್ಲಿ ಅನ್ನ ಬಸಿಯುವುದು ಹೇಗೆ? ಈ ಹಿಂದೆ ಪಾಣಿ ಪಂಜಿ ಎಂದು ಕರೆಯುವ ಅಥವಾ ಕೋರಾ ಬಟ್ಟೆ ಎಂದು ಕರೆಯುವ ತೆಳು ಹತ್ತಿ ಬಟ್ಟೆಯನ್ನು ಸ್ವಚ್ಛಗೊಳಿಸಿ ಅನ್ನ ಬಸಿಯಲು ಬಳಸಲಾಗುತ್ತಿತ್ತು (ಇಡ್ಲಿ ಮಾಡುವಾಗಲೂ ಇದೇ ಬಟ್ಟೆಯನ್ನು ಬಳಸಲಾಗುತ್ತಿತ್ತು). ಕೆಲವು ಕಡೆ, ಸ್ವಚ್ಛಗೊಳಿಸಿದ ತೆಳು ಗೋಣಿ ಚೀಲಗಳನ್ನು ಬಳಸಲಾಗುತ್ತಿತ್ತು. ಬಸಿದ ಅನ್ನದಲ್ಲಿ, ಅನ್ನದ ತಿಳಿಯನ್ನು ಪೂರ್ಣವಾಗಿ ತೆಗೆಯುವುದಕ್ಕೆ ಸುಲಭ ಎನ್ನುವ ಕಾರಣಕ್ಕೆ ಇತ್ತೀಚೆಗೆ ವಿಷಕಾರಕ ಈರುಳ್ಳಿ ಚೀಲದ ಪ್ಲಾಸ್ಟಿಕ್ ನೆಟ್ ಬಳಸುವ ಕೆಟ್ಟ ಪದ್ಧತಿ ಬಂದಿದೆ.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂನಿಂದ ಕಡಿಮೆ ವಿದ್ಯುತ್ ಬಳಸುವ ಬಿ.ಎಲ್.ಡಿ.ಸಿ. ಫ್ಯಾನ್‌ ಲೋಕಾರ್ಪಣೆ

ನೇರವಾಗಿ ಆಹಾರ ಪದಾರ್ಥಗಳನ್ನು ಸಂಪರ್ಕಿಸುವ, ಅದರಲ್ಲೂ ಹುಳಿ, ಸಿಹಿ, ಖಾರ, ಒಗರು, ಬಿಸಿ, ತಂಪು ಗುಣಗಳ ಆಹಾರ ಪದಾರ್ಥಗಳಿಂದ ಪ್ಲಾಸ್ಟಿಕ್‌ನ್ನು ದೂರ ಇಡುವುದು ಎಲ್ಲರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಸ್ವಚ್ಛಗೊಳಿಸಿದ ಪಾಣಿ ಪಂಜಿ, ಕೋರಾ ಬಟ್ಟೆ, ಗೋಣಿ ಚೀಲಗಳನ್ನೇ ಅನ್ನ ಬಸಿಯಲು ಬಳಸುವುದೇ ಸೂಕ್ತ ಮತ್ತು ಆರೋಗ್ಯಕರ.

ಈ ಬಗ್ಗೆ ಹೋಟಲ್, ಉಪಾಹಾರ ಗೃಹ ಮತ್ತು ಛತ್ರದ ಮಾಲೀಕರು, ಸಮಾರಂಭದ ಆಯೋಜಕರು, ಅಡಿಗೆಯವರು ಗಮನ ಹರಿಸಲಿ. ಪ್ಲಾಸ್ಟಿಕ್‌ನ ಈರುಳ್ಳಿ ಚೀಲ ಬಳಸದಂತೆ ಆರೋಗ್ಯ ಇಲಾಖೆ, ಸರ್ಕಾರಗಳು ನಿಷೇಧದ ನಿಯಮ ಜಾರಿ ಮಾಡಲಿ.