ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

MIW vs DCW: ಮುಂಬೈಗೆ ಮತ್ತೆ ಸೋಲಿನ ಶಾಕ್‌ ನೀಡಿದ ಡೆಲ್ಲಿ

WPL 2025: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಮೆಗ್‌ ಲ್ಯಾನಿಂಗ್‌ ಸಾರಥ್ಯದ ಡೆಲ್ಲಿ ತಂಡ ಶುಕ್ರವಾರದ ಡಬ್ಲ್ಯುಪಿಎಲ್‌ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(MIW vs DCW,) ತಂಡಕ್ಕೆ 9 ವಿಕೆಟ್‌ ಅಂತರದ ಸೋಲಿಣಿಸಿದೆ. ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು.

ಮುಂಬೈಗೆ ಮತ್ತೆ ಸೋಲಿನ ಶಾಕ್‌ ನೀಡಿದ ಡೆಲ್ಲಿ

Profile Abhilash BC Feb 28, 2025 10:38 PM

ಬೆಂಗಳೂರು: ಸತತ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(MIW vs DCW,) ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತೆ ಸೋಲಿನ ರುಚಿ ತೋರಿಸಿದೆ. ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನ 13ನೇ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಮೆಗ್‌ ಲ್ಯಾನಿಂಗ್‌ ಪಡೆ ಮುಂಬೈಗೆ 9 ವಿಕೆಟ್‌ ಅಂತರದ ಸೋಲುಣಿಸಿತು. ಇದು ಈ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಮುಂಬೈಗೆ ಎದುರಾದ 2ನೇ ಸೋಲು. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಒಂದು ರನ್‌ ಅಂತರದ ರೋಚಕ ಗೆಲುವು ಸಾಧಿಸಿತ್ತು. ಒಟ್ಟು 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದ ಡೆಲ್ಲಿ 8 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ 9 ವಿಕೆಟ್‌ಗೆ 123 ರನ್‌ ಗಳಿಸಲಷ್ಟೇ ಶಕ್ತವಾಯಿತು. ಜವಾಬಿತ್ತ ಡೆಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ನಡೆಸಿ 14.3 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ ನಷ್ಟಕ್ಕೆ 124 ರನ್‌ ಪೇರಿಸಿ 9 ವಿಕೆಟ್‌ ಅಂತರದ ಗೆಲುವು ಸಾಧಿಸಿತು.



ಚೇಸಿಂಗ್‌ ವೇಳೆ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಶಫಾಲಿ ವರ್ಮಾ 28 ಎಸೆತಗಳಲ್ಲಿ 43(4 ಬೌಂಡರಿ ಮತ್ತು 3 ಸಿಕ್ಸರ್‌) ರನ್‌ ಬಾರಿಸಿದರು. ಇವರಿಗೆ ನಾಯಕಿ ಮೆಗ್‌ ಲ್ಯಾನಿಂಗ್‌ ಕೂಡ ಉತ್ತಮ ಸಾಥ್‌ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 85 ರನ್‌ ರಾಶಿ ಹಾಕಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ಶಫಾಲಿ ವಿಕೆಟ್‌ ಪತನದ ಬಳಿಕ ಬಿರುಸಿನ ಬ್ಯಾಟಿಂಗ್‌ ನಡೆಸಿದ ಲ್ಯಾನಿಂಗ್‌ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 49 ಎಸೆತ ಎದುರಿಸಿದ ಲ್ಯಾನಿಂಗ್‌ 60 ರನ್‌ ಬಾರಿಸಿದರು. ಜೆಮಿಮಾ ರಾಡ್ರಿಗಸ್‌ 19 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಮುಂಬೈ ತಂಡ 7 ಬೌಲರ್‌ಗಳನ್ನು ದಾಳಿಗಿಳಿಸಿದರೂ ಉರುಳಿಸಿದ್ದು ಕೇವಲ ಒಂದು ವಿಕೆಟ್‌ ಮಾತ್ರ. ಈ ಒಂದು ವಿಕೆಟ್‌ ಅಮನ್ಜೋತ್ ಕೌರ್ ಪಾಲಾಯಿತು.

ಇದನ್ನೂ ಓದಿ AFG vs AUS: ಮಳೆಯಿಂದ ಪಂದ್ಯ ರದ್ದು; ಸೆಮಿಫೈನಲ್‌ ಪ್ರವೇಶಿಸಿದ ಆಸೀಸ್‌

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಮುಂಬೈ ಪರ ಹೀಲಿ ಮ್ಯಾಥ್ಯೂಸ್‌ ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ತಲಾ 22 ರನ್‌ ಬಾರಿಸಿದರು. ಉಭಯ ಆಟಗಾರ್ತಿಯರ ಈ ಸಣ್ಣ ಬ್ಯಾಟಿಂಗ್‌ ಹೋರಾಟದಿಂದ ತಂಡ ನೂರರ ಗಡಿ ದಾಟಿತು. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ್ದ ಇಂಗ್ಲೆಂಡ್‌ನ ಆಲ್‌ರೌಂಡರ್‌ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಈ ಪಂದ್ಯದಲ್ಲಿ ವಿಫಲರಾದರು. ಡೆಲ್ಲಿ ಪರ ಜಿದ್ದಿಗೆ ಬಿದ್ದವರಂತೆ ಬೌಲಿಂಗ್‌ ದಾಳಿ ನಡೆಸಿದ ಸ್ಪಿನ್ನರ್‌ ಜೆಸ್ ಜೊನಾಸೆನ್ ಮತ್ತು ಮಿನ್ನು ಮಣಿ ತಲಾ ಮೂರು ವಿಕೆಟ್‌ ಕಿತ್ತು ಮುಂಬೈಗೆ ಆಘಾತವಿಕ್ಕಿದರು.