Shiva Rajkumar: ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ, ನಾಳೆ ಬೆಂಗಳೂರಿಗೆ ಬರುತ್ತೇನೆ ಎಂದ ನಟ
ಶಿವಣ್ಣನಿಗೆ ನಡೆಯುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಅಂತ ಶಿವಣ್ಣನ ಫ್ಯಾನ್ಸ್ ಹರಕೆ ಹೊತ್ತು ಪೂಜೆ ಸಲ್ಲಿಸಿದ್ದರು. ಇದಾಗಿ ಒಂದು ತಿಂಗಳ ಬಳಿಕ ಶಿವಣ್ಣ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಶಿವಣ್ಣನಿಗೆ ಅದ್ಧೂರಿ ಸ್ವಾಗತ ಕೋರುವುದಕ್ಕೆ ಅಭಿಮಾನಿ ಬಳಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಶಿವರಾಜ್ ಕುಮಾರ್

ಬೆಂಗಳೂರು: ಜನವರಿ 26 ಗಣರಾಜ್ಯೋತ್ಸವದ (Republic Day) ದಿನ ಬೆಂಗಳೂರಿಗೆ (Bangalore news) ಬರುವುದಾಗಿ ನಟ ಶಿವರಾಜಕುಮಾರ್ (Shiva Rajkumar) ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಖುಷಿ ವಿಷಯ ಹಂಚಿಕೊಂಡಿದ್ದಾರೆ. ಅಲ್ಲದೆ ಅದೇ ದಿನ ಜೀ ಕನ್ನಡ ವಾಹಿನಿಯಲ್ಲಿ ಭೈರತಿ ರಣಗಲ್ ಚಿತ್ರವೂ ಪ್ರಸಾರವಾಗಲಿದೆ. ಆ ಚಿತ್ರವನ್ನು ನೋಡಿ ಎಂದು ಹೇಳಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೇರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದು, ಇತ್ತೀಚೆಗೆ ಸರ್ಜರಿ ಕೂಡ ಸಕ್ಸಸ್ ಆಗಿತ್ತು. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಶಿವಣ್ಣ ನಾನು ಆರೋಗ್ಯವಾಗಿದ್ದೇನೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ ಎಂದಿದ್ದರು. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಬೆಂಗಳೂರಿಗೆ ಬರುವ ದಿನಾಂಕವನ್ನು ತಿಳಿಸಿದ್ದಾರೆ.
ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಶಿವಣ್ಣ ಅವರಿಗೆ ಇತ್ತೀಚೆಗೆ ಸರ್ಜರಿ ನಡೆದಿತ್ತು. ಬಳಿಕ ಅವರಿಗೆ ಎರಡು ಬಾರಿ ಮೆಡಿಕಲ್ ಚೆಕಪ್ ಆಗಿತ್ತು. ಇದೀಗ ಈ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಶಿವಣ್ಣ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾರೆ.
ಈ ನಡುವೆ ಮುತ್ತು ನಿವಾಸದಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತಕ್ಕೆ ಶಿವಸೇನಾ ಫ್ಯಾನ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿರುವ ಶಿವರಾಜ್‌ಕುಮಾರ್ ಅಲ್ಲಿರುವ ಕನ್ನಡಿಗರನ್ನು ಮೀಟ್ ಮಾಡುತ್ತ ಆಕ್ಟಿವ್ ಆಗಿದ್ದಾರೆ. ಕನಿಷ್ಠ ಒಂದು ತಿಂಗಳ ವಿಶ್ರಾಂತಿಗೆ ವೈದ್ಯರು ಅವರಿಗೆ ಸಲಹೆ ನೀಡಿದ್ದರು.
ಶಿವಣ್ಣನಿಗೆ ನಡೆಯುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಅಂತ ಶಿವಣ್ಣನ ಫ್ಯಾನ್ಸ್ ಹರಕೆ ಹೊತ್ತು ಪೂಜೆ ಸಲ್ಲಿಸಿದ್ದರು. ಇದಾಗಿ ಒಂದು ತಿಂಗಳ ಬಳಿಕ ಶಿವಣ್ಣ ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಶಿವಣ್ಣನಿಗೆ ಅದ್ಧೂರಿ ಸ್ವಾಗತ ಕೋರುವುದಕ್ಕೆ ಅಭಿಮಾನಿ ಬಳಗ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಖಿಲ ಕರ್ನಾಟಕ ಡಾ.ಶಿವರಾಜ್‌ಕುಮಾರ್ ಸೇನಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ ಜಂಟಿಯಾಗಿ ಸೇರಿ ಶಿವಣ್ಣನಿಗೆ ಸ್ವಾಗತ ಮಾಡಲು ಸಿದ್ಧತೆ ನಡೆಸಿದ್ದಾರೆ.
ಜನವರಿ 26ರಂದು ಏರ್‌ಪೋರ್ಟ್‌ನ ಟೋಲ್ ಬಳಿ ಬೆಳಿಗ್ಗೆ 9 ಗಂಟೆಗೆ ಹಾಗೂ ಶ್ರೀ ಮುತ್ತು ನಿವಾಸದಲ್ಲಿ ಬೆಳಿಗ್ಗೆ 10 ಗಂಟೆಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಮಹತ್ವದ ಸಂದರ್ಭದಲ್ಲಿ ಭಾಗವಹಿಸಲು ಹಾಗೂ ನಮ್ಮ ದೊರೆ ಮೇಲಿನ ನಿರಂತರ ಪ್ರೀತಿ ಮತ್ತು ಬೆಂಬಲವನ್ನು ತೋರಿಸಲು ಎಲ್ಲಾ ಅಭಿಮಾನಿಗಳು ಮತ್ತು ಸನ್ಮಾನ್ಯರನ್ನು ಆಹ್ವಾನಿಸುತ್ತೇವೆ. ಡಾ. ಶಿವರಾಜ್ ಕುಮಾರ್ ಅವರ ಈ ಜೀವನದ ಮುಂದಿನ ಅಧ್ಯಾಯದ ಭಾಗವಾಗಿ ಅವರಿಗೆ ಇನ್ನಷ್ಟು ಅಭಿಮಾನದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತ 2025ರ ಹೊಸ ವರ್ಷವನ್ನು ಕರುನಾಡ ಚಕ್ರವರ್ತಿಯ ಜೊತೆಗೂಡಿ ಆಚರಿಸೋಣ" ಎಂದು ಶಿವಸೇನಾ ಅಭಿಮಾನಿಗಳ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.