Cabinet Decisions: 31 ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ / ಕಾಲೇಜುಗಳು ಮತ್ತು ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ 12 ವಸತಿ ಶಾಲೆ /ವಿದ್ಯಾರ್ಥಿ ನಿಲಯಗಳ ಕಟ್ಟಡಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜ. 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.


ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ / ಕಾಲೇಜುಗಳು ಮತ್ತು ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದಡಿ 12 ವಸತಿ ಶಾಲೆ /ವಿದ್ಯಾರ್ಥಿ ನಿಲಯಗಳ ಕಟ್ಟಡಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ, ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಪರಿವರ್ತಿಸುವುದು ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಜ. 30ರಂದು ನಡೆದ ಸಚಿವ ಸಂಪುಟ ಸಭೆ (Cabinet Decisions)ಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರ ವಿವರ ಇಲ್ಲಿದೆ.
ಮೀನುಗಾರಿಕೆ ಹರಾಜಿನ ಬೆಲೆ ಹೆಚ್ಚಳ
ರಾಜ್ಯದ ಎಲ್ಲ ಏತ ನೀರಾವರಿ ಕೆರೆಗಳನ್ನು ಕಡ್ಡಾಯವಾಗಿ ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಹಾಗೂ ರಾಜ್ಯದ ಎಲ್ಲ ಏತ ನೀರಾವರಿ ಕೆರೆಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರಿ ಸವಾಲನ್ನು (Base Price) ಹಾಲಿ ಇರುವ 300 ರೂ.ಯಿಂದ (ಉಪಯುಕ್ತಾ ಜಲ ವಿಸ್ತೀರ್ಣಕ್ಕೆ) 1,500 ರೂ.ಗೆ (ಪ್ರತಿ ಹೆಕ್ಟರ್‌ಗೆ) ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು#CabinetDecisions pic.twitter.com/tRiGBD4FXO
— Siddaramaiah (@siddaramaiah) January 30, 2025
ಮಧುಗಿರಿ ಪುರಸಭೆಗೆ ಹಲವು ಹಳ್ಳಿಗಳ ಸೇರ್ಪಡೆ
ತುಮಕೂರು ಜಿಲ್ಲೆಯ ಮಧುಗಿರಿ ಪುರಸಭೆಯ ವ್ಯಾಪ್ತಿಯಲ್ಲಿ ಈಗ ಇರುವ ಪ್ರದೇಶಗಳ ಜತೆಗೆ ಮಧುಗಿರಿ ಕಂದಾಯ ಗ್ರಾಮ, ಹರಿಹರರೊಪ್ಪ ಭಾಗಶಃ ಕಂದಾಯ ಗ್ರಾಮ ಮತ್ತು ಪಾಲ್ಯದ ಹಳ್ಳಿಯ ಕೆಲವು ಸರ್ವೆ ನಂಬರ್‌ಗಳ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಮಧುಗಿರಿ ಪುರಸಭೆ ವ್ಯಾಪ್ತಿಯನ್ನು ವಿಸ್ತರಿಸಲು ಸಚಿವ ಸಂಪುಟ ಅನುಮೋದಿಸಿದೆ.
ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ ಪರಿವರ್ತನೆ
ಬೀದರ್ ನಗರಸಭೆಯೊಂದಿಗೆ ಅಷ್ಟೂರ ಗ್ರಾಮ ಪಂಚಾಯತ್‌ನ ಓಡವಾಡ, ತಾಜಲಾಪುರ, ಅಮಲಾಪುರ ಗ್ರಾಮ ಪಂಚಾಯತ್‌ನ ಅಮಲಾಪುರ, ಗೋರನಹಳ್ಳಿ, ಅಲಿಯಾಬಾದ ಗ್ರಾಮ ಪಂಚಾಯತ್‌ನ ಅಲಿಯಾಬಾದ, ಚೋಂಡಿ, ಚೌಳಿ, ಗಾದಗಿ ಗ್ರಾಮ ಪಂಚಾಯತ್‌ನ ಸಿಪ್ಪಲಗೇರಿ, ಶಾಮರಾಜಪುರ, ಕಬೀರವಾಡಾ, ಮಾಮನಕೇರಿ, ಕೋಳಾರ ಗ್ರಾಮ ಪಂಚಾಯತ್‌ನ ಕೋಳಾರ, ನಿಜಾಮಪುರ, ಹಜ್ಜರಗಿ, ಕಮಲಪುರ ಹಾಗೂ ಮರಖಲ ಗ್ರಾಮ ಪಂಚಾಯತ್‌ನ ಚಿಕ್ಕಪೇಟ್ ಗ್ರಾಮ ಸೇರಿ ಒಟ್ಟು 16 ಗ್ರಾಮಗಳನ್ನು ಸೇರ್ಪಡೆಗೊಳಿಸಿ ಬೀದರ್ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಅಥಣಿ ಜೋಡುಕೆರೆ ಅಭಿವೃದ್ಧಿ
ಬೆಳಗಾವಿ ಜಿಲ್ಲೆಯ ಅಥಣಿ ಪುರಸಭೆಯ ಮಾಲ್ಕಿಯ ಜೋಡುಕೆರೆ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಸಮ್ಮತಿಸಿದೆ. 10 ಎಕ್ರೆ 24 ಗುಂಟೆ ಪ್ರದೇಶವನ್ನು ಅತಿಕ್ರಮಣದಿಂದ ರಕ್ಷಿಸಿ ಜೋಡುಕೆರೆೆಯನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ತಾಣವಾಗಿಸಲು ಯೋಜನೆ ರೂಪಿಸಲಾಗಿದೆ.
ಸಾರ್ವಜನಿಕ ಉದ್ಯಮಗಳ ವಿಲೀನಕ್ಕೆ ಅನುಮೋದನೆ
ವಾಣಿಜ್ಯ ಚಟುವಟಿಕೆಗಳಿಗೆ ಸ್ಥಾಪಿಸಲಾದ ಮತ್ತು ದೀರ್ಘ ಕಾಲದವರೆಗೆ ನಿಷ್ಕ್ರಿಯವಾದ ಅಥವಾ ಪುನಶ್ಚೇತನಕ್ಕೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಕರ್ನಾಟಕ ಸರ್ಕಾರದ ಒಡೆತನದ ಕಂಪನಿಗಳನ್ನು ಮುಚ್ಚಲು ಅಥವಾ ಮತ್ತೊಂದು ಕಂಪೆನಿಯೊಂದಿಗೆ ವಿಲೀನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.
ರಾಜ್ಯದಲ್ಲಿ 125 ಸಾರ್ವಜನಿಕ ವಲಯದ ಉದ್ದಿಮೆಗಳಿದ್ದು, ಅವುಗಳಲ್ಲಿ
- 34 ಕಂಪನಿಗಳು ನಿಶ್ಚಿತವಾಗಿ ಲಾಭದಲ್ಲಿವೆ.
- 33 ವಾಣಿಜ್ಯ ಕಂಪನಿಗಳು ನಷ್ಟದಲ್ಲಿವೆ.
- 32 ಸಾಮಾಜಿಕ ವಲಯದ ಕಂಪೆನಿಗಳಾಗಿವೆ.
- 16 ಕಂಪನಿಗಳು ಷ್ಕ್ರಿಯವಾಗಿವೆ ಮತ್ತು ಸ್ಥಗಿತಗೊಂಡಿವೆ.
ಸರ್ಕಾರಿ ನೌಕರರಿಗೆ ಸಂಬಳ ಖಾತೆ ಆಧಾರಿತ, ಸಾಮಾಜಿಕ ಭದ್ರತೆ
ಕರ್ನಾಟಕ ಸರ್ಕಾರವು ಮಾದರಿ ಉದ್ಯೋಗದಾತರಾಗಿ, ಸರ್ಕಾರಿ ಮತ್ತು ಇತರ ಸರ್ಕಾರಿ ಅಂಗ (ಸ್ವಾಯತ್ತ) ಸಂಸ್ಥೆಗಳ ವಿವಿಧ ಉದ್ಯೋಗಿಗಳಿಗೆ (ಖಾಯಂ/ಗುತ್ತಿಗೆ/ಹೊರಗುತ್ತಿಗೆ ಇತ್ಯಾದಿ) ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು (ಪಿಎಫ್, ಕೆಜಿಐಡಿ, ಇಎಸ್‌ಐ, ವೈದ್ಯಕೀಯ ಮರುಪಾವತಿ ಇತ್ಯಾದಿ) ಪರಿಚಯಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿದೆ. ಅಲ್ಲದೆ ಸಾಮಾಜಿಕ ಭದ್ರತೆ ಇದ್ದಲ್ಲಿ ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಈಗಾಗಲೇ ಜಾರಿಯಲ್ಲಿರುವ ಸಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು ಸಚಿವ ಸಂಪುಟವು ಅನುಮೋದನೆ ನೀಡಿದೆ.
ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆಹೊರ ಬಂದರು ನಿರ್ಮಾಣ
ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರ ಬಂದರು ನಿರ್ಮಾಣ ಯೋಜನೆಯನ್ನು ಕೈಗೊಳ್ಳಲು ತಾತ್ವಿಕ ಅನುಮೋದನೆ ನೀಡಿ ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಕೃಷಿ ಮಾರುಕಟ್ಟೆಗಳ ಬಳಕೆದಾರರ ಶುಲ್ಕ ಮರುನಿಗದಿ
ರಾಜ್ಯದಲ್ಲಿನ ಕೃಷಿ ಮಾರುಕಟ್ಟೆ ಸಮಿತಿಗ ಶುಲ್ಕ/ಬಳಕೆದಾರರ ಶುಲ್ಕ ದರವನ್ನು ಮರು ನಿಗದಿಪಡಿಸಲು ಸಚಿವ ಸಂಪುಟ ಅನುಮೋದಿಸಿದೆ.
ಅತೀಕ್ ಮರುನೇಮಕ
ಎಲ್.ಕೆ. ಅತೀಕ್ ಭಾ.ಆ.ಸೇ. ಅವರನ್ನು ನಿವೃತ್ತಿ ನಂತರ ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮುಂದುವರಿಸಲು ಹೊರಡಿಸಿರುವ ಅಧಿಸೂಚನೆಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಅರಮನೆ ಸುಗ್ರೀವಾಜ್ಞೆ ಅನುಷ್ಠಾನಕ್ಕೆ ಕ್ರಮ
ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಹೊರಡಿಸಿರುವ ಅಧ್ಯಾದೇಶ 2025 ಅನ್ನುಅನುಷ್ಠಾನಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣೆ
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ 5,678-32 ಎಕ್ರೆ-ಗುಂಟೆ ಪ್ರದೇಶವನ್ನು ವನುಜೀವಿ (ಸಂರಕ್ಷಣಾ) ಅಧಿನಿಯಮ, 1972ರ ಕಲಂ36(ಎ) ಅನ್ವಯ ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಸುದ್ದಿಯನ್ನೂ ಓದಿ: Micro Finance: ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಮುಂದಾದ ರಾಜ್ಯ ಸರ್ಕಾರ
ವಿಶ್ವ ಬ್ಯಾಂಕ್ ನೆರವಿನ ವಿಪತ್ತು ನಿರೋಧಕ ಕಾರ್ಯಕ್ರಮ ಅನುಷ್ಠಾನ
ವಿಶ್ವ ಬ್ಯಾಂಕ್ ನೆರವಿನಿಂದ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮವನ್ನು 5,000 ಕೋಟಿ ರೂ. (ವಿಶ್ವಬ್ಯಾಂಕ್ ಸಾಲ 3,500 ಕೋಟಿ ರೂ. ರಾಜ್ಯ ಸರ್ಕಾರ – 1,500 ಕೋಟಿ ರೂ.) ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ಸಿಕ್ಕಿದೆ.