ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cauvery Aarti: ವೈಭವದ ಆರತಿ ಮೂಲಕ ತಾಯಿ ಕಾವೇರಿಗೆ ನಮನ, ಗಂಗೆಯಂತೆ ಬೆಳಗಿದ ಸ್ಯಾಂಕಿ ಕೆರೆ

ರಾಜ್ಯ ಬೇಸಿಗೆ ಎದುರಿಸುತ್ತಿರುವ ಹೊತ್ತಿನಲ್ಲಿ, ಮಾ.22ರಂದು ವಿಶ್ವ ಜಲ ದಿನದ ಅಂಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಲ ಮಂಡಳಿ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಕಾವೇರಿ ಆರತಿ ಹಾಗೂ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಜಲಸಂರಕ್ಷಣೆಯ ಪ್ರತಿಜ್ಞಾವಿಧಿಯಲ್ಲಿ ಸಾವಿರಾರು ಜನರು ಭಾಗವಹಿಸಿ ಹೊಸ ದಾಖಲೆ ಬರೆಯಲಾಯಿತು.

ವೈಭವದ ಆರತಿ ಮೂಲಕ ತಾಯಿ ಕಾವೇರಿಗೆ ನಮನ, ಗಂಗೆಯಂತೆ ಬೆಳಗಿದ ಸ್ಯಾಂಕಿ ಕೆರೆ

ಕಾವೇರಿ ಆರತಿ

ಹರೀಶ್‌ ಕೇರ ಹರೀಶ್‌ ಕೇರ Mar 22, 2025 6:39 AM

ಬೆಂಗಳೂರು: ತೇಲುವ ವೇದಿಕೆ ಮೇಲೆ ತಾಯಿ ಗಂಗಮ್ಮ ದೇವಿಗೆ ನಮನ, ತಲಕಾವೇರಿಯಿಂದ ತಂದ ಕಾವೇರಿ ನೀರನ್ನು (Cauvery river) ಹಾಕಿ ಕಾವೇರಿ ಆರತಿ, ವರ್ಣರಂಜಿತ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಮಂತ್ರ ಘೋಷಗಳ ಭಕ್ತಿ ಭಾವದ ಜತೆಗೆ ಜಲ ಹಾಗೂ ಜಲ ಮೂಲಗಳ ಸಂರಕ್ಷಣೆಗಾಗಿ ಪ್ರತಿಜ್ಞಾ ಸ್ವೀಕಾರ... ಇವಿಷ್ಟೂ ಬೆಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಯಾಂಕಿ ಕೆರೆಯಲ್ಲಿ (Sankey Tank) ಶುಕ್ರವಾರ ನಡೆದ ಕಾವೇರಿ ಆರತಿ (Cauvery Aarti) ಕಾರ್ಯಕ್ರಮದ ಚಿತ್ರಣ.

ರಾಜ್ಯ ಬೇಸಿಗೆ ಎದುರಿಸುತ್ತಿರುವ ಹೊತ್ತಿನಲ್ಲಿ, ಮಾ.22ರಂದು ವಿಶ್ವ ಜಲ ದಿನದ ಅಂಗವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರು ಜಲ ಮಂಡಳಿ, ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಸಹಯೋಗದಲ್ಲಿ ಕಾವೇರಿ ಆರತಿ ಹಾಗೂ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು. ಜಲಸಂರಕ್ಷಣೆಯ ಪ್ರತಿಜ್ಞಾವಿಧಿಯಲ್ಲಿ ಸಾವಿರಾರು ಜನರು ಭಾಗವಹಿಸಿ ಹೊಸ ದಾಖಲೆ ಬರೆಯಲಾಯಿತು.

cauvery aarti 2 (1)

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ವಿಶ್ವ ಜಲ ದಿನ ಅಂಗವಾಗಿ ಇಂದಿನಿಂದ ಬೃಹತ್ ಪ್ರತಿಜ್ಞಾ ವಿಧಿ ಸ್ವೀಕಾರ ಅಭಿಯಾನಕ್ಕೆ ನಿಮ್ಮನ್ನು ಆಹ್ವಾನಿಸಿದ್ದೇನೆ. ಇಂದು ಪವಿತ್ರವಾದ ಕಾವೇರಿ ಆರತಿ ಮೂಲಕ ಚಾಲನೆ ನೀಡಲಾಗುತ್ತಿದೆ. ನೀವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮಗೆ ಸರ್ಕಾರದ ಪರವಾಗಿ ಹೃದಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಇಂದು ಬೆಳಗ್ಗೆ ತಲಕಾವೇರಿಗೆ ಹೋಗಿ ಕಾವೇರಿ ಪೂಜೆ ಮಾಡಿ, ಪವಿತ್ರ ಕಾವೇರಿ ಜಲವನ್ನು ತಂದು ಮಲ್ಲೇಶ್ವರದಲ್ಲಿರುವ ಸ್ಯಾಂಕಿ ಕೆರೆಗೆ ಅರ್ಪಿಸಿ ಪವಿತ್ರವಾದ ಕಾರ್ಯಕ್ರಮ ನಡೆಸಲಾಗಿದೆ.” ಎಂದು ತಿಳಿಸಿದರು.

“ನಮ್ಮ ದಿನನಿತ್ಯದ ಜೀವನ ಆರಂಭವಾಗುವುದೇ ನೀರಿನಿಂದ. ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನೀರಿನಿಂದಲೇ ನಾಗರೀಕತೆ, ನೀರಿನಿಂದಲೇ ಧರ್ಮ, ನೀರಿಲ್ಲದೆ ಪರಮಾತ್ಮನಿಲ್ಲ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಶಕ್ತಿ ದೇವತೆಗಳಾದ ಗಂಗಮ್ಮ, ಮಾರಮ್ಮ, ಕಾಡುಮಲ್ಲೇಶ್ವರ, ಲಕ್ಷ್ಮಿ ನರಸಿಂಹಸ್ವಾಮಿ, ದಕ್ಷಿಣಮುಖಿ ನಂದಿತೀರ್ಥ ದೇವಾಲಯಗಳಿವೆ. ಸ್ಥಳೀಯ ನಾಗರೀಕರು ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಸಹಕಾರ ನೀಡಿದ್ದಾರೆ. ಪ್ರಕೃತಿಯ ಜಲ ಮಾತೆಗೆ ನಮಿಸಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳುತ್ತಿರುತ್ತೇನೆ” ಎಂದರು.

cauvery aarti 3 (1)

ದಸರಾ ವೇಳೆಗೆ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ

"ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ ಪ್ರಾರಂಭ ಮಾಡಿದ್ದೇವೆ. ಕೆಆರ್ ಎಸ್ ಜಲಾಶಯದ ಬಳಿಯೂ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಅದಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ದಸರಾ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡುವ ಯೋಜನೆ ಇದೆ" ಎಂದು ಹೇಳಿದರು.

"ಬರಗಾಲ ಬಂದಾಗ, ಬಾವಿ ಬತ್ತಿದಾಗ ನಮಗೆ ನೀರಿನ ಮೌಲ್ಯ ಅರಿವಾಗುತ್ತದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಕಾವೇರಿ 5ನೇ ಹಂತದ ಯೋಜನೆ ಜಾರಿ ಮಾಡಲಾಗಿದೆ. ಆಮೂಲಕ 110 ಹಳ್ಳಿಗಳಿಗೆ ನೀರು ಒದಗಿಸಲಾಗಿದೆ. ಈ ವರ್ಷ ಎಷ್ಟೇ ಕಷ್ಟ ಬಂದರೂ ನೀರಿನ ಸಮಸ್ಯೆ ಎದುರಾಗಬಾರದು ಎಂದು ನಾವು ಸಂಕಲ್ಪ ಮಾಡಿದ್ದೇವೆ. ನೀರನ್ನು ಸಮರ್ಪಕವಾಗಿ ಬಳಸಿ, ನೀರಿನ ಸಂರಕ್ಷಣೆಗೆ ನೀವೆಲ್ಲರೂ ಪ್ರತಿಜ್ಞೆ ಮಾಡಬೇಕು" ಎಂದು ಕರೆ ನೀಡಿದರು.

"ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಗಂಗೆಗೆ ಆರತಿ ಮಾಡುವ ಕಾರ್ಯಕ್ರಮಕ್ಕೆ ನೀವೆಲ್ಲರೂ ಬಂದಿದ್ದೀರಿ. ನಾವು ನೀವು ಸೇರಿ ಈ ಜಲವನ್ನು ಸಂರಕ್ಷಣೆ ಮಾಡೋಣ" ಎಂದು ತಿಳಿಸಿದರು.

cauvery aarti 4 (1)

ಪ್ರತಿಜ್ಞಾವಿಧಿ:

“ದೈನಂದಿನ ಚಟುವಟಿಕೆಗಳಿಗಾಗಿ ಮಿತವಾಗಿ ನೀರನ್ನು ಬಳಸಿ, ನೀರನ್ನು ಉಳಿಸುತ್ತೇನೆ. ಮಳೆನೀರು ಕೊಯ್ಲು ವಿಧಾನ ಅನುಸರಿಸುವ ಮೂಲಕ ಅಂತರ್ಜಲ ಮರುಪೂರ್ಣಕ್ಕೆ ಸಹಕರಿಸುತ್ತೇನೆ. ಜಲ ಮೂಲಗಳನ್ನು ರಕ್ಷಿಸುವುದಾಗಿ ಮತ್ತು ಭವಿಷ್ಯದ ಪೀಳಿಗೆಗಾಗಿ ಅವುಗಳ ಸಂರಕ್ಷಣೆಯನ್ನು ಮಾಡುತ್ತೇನೆ. ನಾನು, ನನ್ನ ಕುಟುಂಬ, ಸಮುದಾಯದಲ್ಲಿ ನೀರು ಉಳಿಸುವ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸುಸ್ಥಿರ ಭವಿಷ್ಯದ ನಿರ್ಮಾಣಕ್ಕಾಗಿ ನನ್ನ ಜೀವನದಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಲ್ಳುವ ಪ್ರತಿಜ್ಞೆ ಮಾಡುತ್ತೇನೆ, ಜೈ ಹಿಂದ್, ಜೈ ಕಾವೇರಿ, ಜೈ ಕರ್ನಾಟಕ” ಎಂದು ಶಿವಕುಮಾರ್ ಅವರು ಸಾರ್ವಜನಿಕರಿಗೆ ವಿಶ್ವಜಲ ಪ್ರತಿಜ್ಞಾ ವಿಧಿ ಬೋಧಿಸಿದರು.

ಇದನ್ನೂ ಓದಿ: Cauvery Aarti: ಸ್ಯಾಂಕಿ ಕೆರೆಯಲ್ಲಿ ನಾಳೆ ಕಾವೇರಿ ಆರತಿ ನಿರ್ವಿಘ್ನ, ತಡೆ ನೀಡಲು ಹೈಕೋರ್ಟ್‌ ನಕಾರ