ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸುರಂಗಮಾರ್ಗ ಯೋಜನೆಯ ಸಾಧಕ-ಬಾಧಕಗಳು

ಗೊರಗುಂಟೆಪಾಳ್ಯದಿಂದ ನೆಲಮಂಗಲದೆಡೆಗಿನ ಸಂಚಾರ ಸುಗಮವಾಗಲು ಕಿ.ಮೀ. ಉದ್ದದ - ಓವರ್ ನಿರ್ಮಾಣವಾಯಿತು. ಅಂಡರ್‌ಪಾಸ್‌ಗಳು, ಫ್ಲೈ-ಓವರ್‌ಗಳು ಎಲ್ಲೆಂದರಲ್ಲಿ ರೂಪುಗೊಂಡವು. ಬಹು ನಿರೀಕ್ಷಿತ ‘ನಮ್ಮ ಮೆಟ್ರೋ’ ರೈಲು ಯೋಜನೆಯೂ ಬಂತು. ಅದರ ವಿವಿಧ ಹಂತಗಳ ಕಾಮಗಾರಿಗಳು ಇನ್ನೂ ಕುಂಟುತ್ತಾ ಸಾಗುತ್ತಿವೆ.

ಸುರಂಗಮಾರ್ಗ ಯೋಜನೆಯ ಸಾಧಕ-ಬಾಧಕಗಳು

Profile Ashok Nayak Jul 5, 2025 4:59 PM

ಮಾರ್ಗದರ್ಶಿ

ರವೀ ಸಜಂಗದ್ದೆ

ಒಂದು ಕಾಲದಲ್ಲಿ (1990-2000), ಜಯನಗರದಿಂದ ದೀಪಾಂಜಲಿ ನಗರದವರೆಗೆ, ಯಶವಂತಪುರ ದಿಂದ ರಾಜಾಜಿ ನಗರದ ಮೂಲಕ ಬಸವೇಶ್ವರ ನಗರದವರೆಗೆ, ಇಂದಿರಾನಗರದಿಂದ ಬಸವನಗುಡಿ ಯವರೆಗಿನ ಭಾಗವಷ್ಟೇ ಬೆಂಗಳೂರು ನಗರ ಎನಿಸಿಕೊಂಡಿತ್ತು. 2000ನೇ ಇಸವಿಯ ನಂತರ, ಮಾಹಿತಿ ತಂತ್ರಜ್ಞಾನ (ಐಟಿ) ವಲಯವು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಹಲವು ಐಟಿ ಕಂಪನಿಗಳು ಕಾರ್ಯಾರಂಭ ಮಾಡಿದವು.

ಜತೆಗೆ ಐಟಿ ಸಂಬಂಧಿತ ಸೇವಾಕಂಪನಿಗಳು ಇಲ್ಲಿ ತಮ್ಮ ಶಾಖೆಗಳನ್ನು ತೆರೆದವು. ಭಾರತ ಅದಾಗಲೇ ಜಾಗತೀಕರಣದ ಬದಲಾವಣೆಗಳಿಗೆ ಒಗ್ಗಿಕೊಂಡಿತ್ತು. ಬೆಂಗಳೂರು ಕೂಡ ವ್ಯಾಪಕವಾಗಿ ಬೆಳೆಯುವ ಮುನ್ಸೂಚನೆಯನ್ನು ನೀಡಿದ್ದರಿಂದ, ಎಸ್.ಎಂ.ಕೃಷ್ಣ ನೇತೃತ್ವದ ಆಗಿನ ಸರಕಾರವು ‘ಬ್ರ್ಯಾಂಡ್ ಬೆಂಗಳೂರು’ ಎಂಬ ಪ್ರಸಿದ್ಧಿ ತರಿಸುವ ಸದುದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಿತು.

ಇದರ ಪರಿಣಾಮವಾಗಿ ‘ಪೆರಿಫೆರಲ್ ರಿಂಗ್‌ರಸ್ತೆ’ ಬಂತು, ‘ಹೊರವರ್ತುಲ ರಸ್ತೆ’ ರೂಪಿತವಾಯಿತು, ‘ನೈಸ್ ರಸ್ತೆ’ ಜನರ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟಿತು. ಐಟಿ ಕಾರಿಡಾರ್ ಎನಿಸಿರುವ ಇಲೆಕ್ಟ್ರಾನಿಕ್ ಸಿಟಿಗೆ ‘ಷಟ್ಪಥ ರಸ್ತೆ’ಯನ್ನು ಅಭಿವೃದ್ಧಿಪಡಿಸಲಾಯಿತು. ಅದೂ ಸಾಲದಾದಾಗ ‘ಎಲಿವೇಟೆಡ್ ಫ್ಲೈಓವರ್’ ಬಂತು.

ಇದನ್ನೂ ಓದಿ: Ravi Sajangadde Column: ರಷ್ಯಾ ಮೇಲೆ ಉಕ್ರೇನ್ ದಾಳಿ!

ಗೊರಗುಂಟೆಪಾಳ್ಯದಿಂದ ನೆಲಮಂಗಲದೆಡೆಗಿನ ಸಂಚಾರ ಸುಗಮವಾಗಲು ಕಿ.ಮೀ. ಉದ್ದದ - ಓವರ್ ನಿರ್ಮಾಣವಾಯಿತು. ಅಂಡರ್‌ಪಾಸ್‌ಗಳು, ಫ್ಲೈ-ಓವರ್‌ಗಳು ಎಲ್ಲೆಂದರಲ್ಲಿ ರೂಪು ಗೊಂಡವು. ಬಹು ನಿರೀಕ್ಷಿತ ‘ನಮ್ಮ ಮೆಟ್ರೋ’ ರೈಲು ಯೋಜನೆಯೂ ಬಂತು. ಅದರ ವಿವಿಧ ಹಂತಗಳ ಕಾಮಗಾರಿಗಳು ಇನ್ನೂ ಕುಂಟುತ್ತಾ ಸಾಗುತ್ತಿವೆ. ಆದರೆ, ಯಾರೂ ನಿರೀಕ್ಷಿಸದ ರೀತಿಯಲ್ಲಿ ಬೆಂಗಳೂರು ಬೆಳೆಯುತ್ತಿದ್ದರೂ, ಯೋಜಿತ ಮೂಲಸೌಕರ್ಯ ವ್ಯವಸ್ಥೆಯು ಯಾವುದೇ ಪಕ್ಷದ ಸರಕಾರದ ಅವಧಿ ಯಲ್ಲೂ ನಿರೀಕ್ಷಿತ ವೇಗ ಪಡೆಯಲೇ ಇಲ್ಲ ಎಂಬುದು ಕಹಿಸತ್ಯ. ಏಕೆಂದರೆ, ಟ್ರಾಫಿಕ್ ಸಮಸ್ಯೆ ದಿನೇದಿನೆ ವರ್ಧಿಸಿತು.

ಆಧುನಿಕ ತಂತ್ರಜ್ಞಾನವನ್ನು ಬಳಸಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸ ಲಾಯಿತಾದರೂ, ನಿತ್ಯ ಸವಾರರಿಗೆ ಇದರಿಂದ ಹೇಳಿಕೊಳ್ಳುವಂಥ ಪ್ರಯೋಜನವೇನೂ ಆಗಿಲ್ಲ. ಮಳೆ ಬಂದರಂತೂ ಬೆಂಗಳೂರು ವಾಸ ದೇವರಿಗೇ ಪ್ರೀತಿ! ‘ಎರಡು ಪ್ರದೇಶಗಳ ನಡುವಿನ ಅಂತರವನ್ನು ಸಮಯದ ಆಧಾರದಲ್ಲಿ ಅಳೆಯುವ’ ಕುಖ್ಯಾತಿಯನ್ನು ಈ ಟ್ರಾಫಿಕ್ ಸಮಸ್ಯೆಯು ಬೆಂಗಳೂರಿಗೆ ತಂದುಕೊಟ್ಟಿತು!

ಇವೆಲ್ಲದರ ನಡುವೆ, ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಹೊಸ ಪರಿಹಾರೋಪಾಯವಾಗಿ ಎರಡು ಸುರಂಗ ರಸ್ತೆಗಳನ್ನು ನಿರ್ಮಿಸಲು ಸರಕಾರ ಸಜ್ಜಾಗಿದೆ. ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗಿನ ಸುಮಾರು 17 ಕಿ.ಮೀ. ಉದ್ದದ ‘ಉತ್ತರ-ದಕ್ಷಿಣ ಸುರಂಗ’ ಮತ್ತು ಕೆ.ಆರ್.ಪುರಂನಿಂದ ನಾಯಂಡ ಹಳ್ಳಿವರೆಗಿನ 28 ಕಿ.ಮೀ. ಉದ್ದದ ‘ಪೂರ್ವ-ಪಶ್ಚಿಮ ಸುರಂಗ’ ಇದರಲ್ಲಿ ಸೇರಿವೆ.

ಒಟ್ಟು 4200 ಕೋಟಿ ರು.ನಷ್ಟು ವೆಚ್ಚದ ಬೃಹತ್ ಯೋಜನೆ ಇದಾಗಿದ್ದು, ಜಾಗತಿಕ ಟೆಂಡರ್ ಕರೆಯಲು ಸರಕಾರ ಸಿದ್ಧತೆ ನಡೆಸುತ್ತಿದೆ. ಈ ಯೋಜನೆಯ ಸಾಧಕ-ಬಾಧಕಗಳ ಕುರಿತು ಒಂದಿಷ್ಟು ಅವಲೋಕಿಸೋಣ. ಯೋಜನೆಯ ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗಮಾರ್ಗದ ನಿರ್ಮಾಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈಗಿನ ಯೋಜನಾ ವರದಿಯ ಪ್ರಕಾರ, ಈ ಯೋಜನೆಗೆ ೧೯,೦೦೦ ಕೋಟಿ ರು. ವೆಚ್ಚ ತಗುಲಲಿದೆ. ಈ ಹಿಂದಿನ ಇಂಥ ಯೋಜನೆಗಳ ಅಂಕಿ-ಅಂಶಗಳನ್ನು ನೋಡಿದಾಗ, ಈ ಯೋಜನೆ ಪೂರ್ಣಗೊಳ್ಳುವಾಗ ವೆಚ್ಚವು ಮೂಲ ಯೋಜನಾ ಮೊತ್ತಕ್ಕಿಂತ ಹಲವು ಪಟ್ಟು ಏರುವುದರಲ್ಲಿ ಸಂಶಯವೇ ಇಲ್ಲ.

ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಶುರುವಿನಲ್ಲಿ ಈ ಯೋಜನೆ ಶುರುವಾಗುವ ಮಾಹಿತಿಯಿದ್ದು, 2030ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಇದು ಲೋಕಾರ್ಪಣೆಯಾದ ಬಳಿಕ ಹೆಬ್ಬಾಳ- ಸಿಲ್ಕ್‌ಬೋರ್ಡ್ ಮಾರ್ಗದಲ್ಲಿ ಸಂಚರಿಸುವವರಿಗೆ ೪೫ ನಿಮಿಷಗಳಷ್ಟು ಅವಧಿ ಉಳಿಯಲಿದೆ ಎಂದು ಅಂದಾಜಿಸಲಾಗಿದೆ.

ಹಾಗಾದಲ್ಲಿ ಅದು ಸ್ವಾಗತಾರ್ಹವೇ, ಸ್ತುತ್ಯರ್ಹವೇ! ಈ ಯೋಜನೆಗೆ ವಿನಿಯೋಗವಾಗುವ ಹಣವನ್ನು ಟೋಲ್ ಸಂಗ್ರಹದ ಮೂಲಕ ಮರಳಿ ಪಡೆಯುವ ಗುರಿಯಿದೆಯಂತೆ. ಈ ಮೊತ್ತವು ಸವಾರಿಗರಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿರಲಿ, ತನ್ಮೂಲಕ ಈ ಮಾರ್ಗದಲ್ಲಿ ಹೆಚ್ಚೆಚ್ಚು ಜನರು ಸಂಚರಿಸುವಂತಾಗಲಿ ಎಂಬುದು ಸಹೃದಯಿಗಳ ಆಶಯ.

ಇನ್ನು, ಜನದಟ್ಟಣೆಯ ಬಡಾವಣೆಗಳು ಮತ್ತು ಗಗನಚುಂಬಿ ಕಟ್ಟಡಗಳು ಹೆಚ್ಚಿರುವ ಹೆಬ್ಬಾಳ, ಟಿನ್ ಫ್ಯಾಕ್ಟರಿ, ಮಹಾದೇವಪುರ, ಮಾರತ್‌ಹಳ್ಳಿ, ಸಿಲ್ಕ್ ಬೋರ್ಡ್ ಮುಂತಾದ ಪ್ರದೇಶಗಳಲ್ಲಿ ಹಾದು ಹೋಗುವ ಈ ಸುರಂಗಮಾರ್ಗದ ನಿರ್ಮಾಣ ಸವಾಲಿನ ಕೆಲಸವೇ. ಈ ಭಾಗದಲ್ಲಿ ಪ್ರತಿದಿನ ಸಂಚರಿಸುವ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಜನರ ನಿಭಾವಣೆ, ಕುಡಿಯುವ ನೀರಿನ ಪೈಪುಗಳು, ಒಳಚರಂಡಿ, ಕೇಬಲ್, ಗ್ಯಾಸ್‌ಲೈನ್ ಮುಂತಾದ ವ್ಯವಸ್ಥೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳು ವಿಕೆ ಇವೆಲ್ಲವೂ ಈ ಸವಾಲುಗಳಲ್ಲಿ ಸೇರಿವೆ.

ಜತೆಗೆ, ಸುರಂಗಮಾರ್ಗವನ್ನು ಕೊರೆಯುವಾಗ, ಮೇಲ್ಮೈಯಲ್ಲಿ ಇರುವ ಕಟ್ಟಡಗಳಿಗೆ ಹಾನಿಯಾಗ ದಂತೆ ಎಚ್ಚರ ವಹಿಸಬೇಕಿದೆ. ಲಭ್ಯ ಮಾಹಿತಿಗಳ ಪ್ರಕಾರ, ಈಗಿರುವ ಹೊರವರ್ತುಲ ರಸ್ತೆ ಹಾದು ಹೋಗುವ ೧೨೦ ಅಡಿಗಳಷ್ಟು ಕೆಳಗಿನಿಂದ ಸಮಾನಾಂತರವಾಗಿ ಈ ಸುರಂಗಮಾರ್ಗ ಹಾದು ಹೋಗಲಿದೆ. ಹಾಗಿದ್ದಲ್ಲಿ, ಮಳೆನೀರು ಸುರಂಗಮಾರ್ಗದೊಳಗೆ ನುಸುಳದಂತಾಗಲು ಎರಡೂ ಬದಿಯಲ್ಲಿ ಜಲನಿರೋಧಕ ಗೋಡೆಯನ್ನು ನಿರ್ಮಿಸಬೇಕಾದ ಗುರುತರ ಜವಾಬ್ದಾರಿಯೂ ಇಲ್ಲಿದೆ.

ಏಕೆಂದರೆ, ಬಹುತೇಕರಿಗೆ ಗೊತ್ತಿರುವಂತೆ ಮಹಾನಗರಿಯಲ್ಲಿ ಅರ್ಧಗಂಟೆ ಜೋರಾಗಿ ಮಳೆ ಬಂದರೆ, ಹೊರವರ್ತುಲ ರಸ್ತೆಯ ಎಲ್ಲೆಡೆ ನಾಲ್ಕೈದು ಅಡಿ ನೀರು ನಿಂತು ಇಡೀ ರಸ್ತೆಯೇ ಹೊಳೆಯಾಗಿಬಿಡುತ್ತದೆ. ಸುರಂಗಮಾರ್ಗದ ನಿರ್ಮಾತೃಗಳು ಈ ವಿಷಯವನ್ನು ಗಮನದಲ್ಲಿಟ್ಟು ಕೊಂಡಿದ್ದರೆ ಒಳಿತು.

ಬೆಟ್ಟ ಕೊರೆದು ಸುರಂಗಮಾರ್ಗ ನಿರ್ಮಿಸುವುದು ಬೇರೆ; ಹೆಚ್ಚು ಕಮ್ಮಿ ಸಮತಟ್ಟಾಗಿರುವ ಬೆಂಗಳೂರಿನ ಹೊರವರ್ತುಲ ರಸ್ತೆ ಪ್ರದೇಶದಲ್ಲಿ ಇಂಥ ಸಾಹಸಕ್ಕೆ ಮುಂದಾಗುವಾಗಿನ ಸವಾಲು ಗಳೇ ವಿಭಿನ್ನ. ಕರಾವಳಿ ಭಾಗದಲ್ಲಿ 120 ಅಡಿ ಆಳದಲ್ಲಿ ಅಲ್ಲಲ್ಲಿ ನೀರಿನ ಮೂಲಗಳಿವೆ; ಮಹಾ ನಗರಿಯ ಈ ಸುರಂಗಮಾರ್ಗ ಹಾದು ಹೋಗುವ ಹೆಬ್ಬಾಳ, ಟಿನ್ ಫ್ಯಾಕ್ಟರಿ, ಮಹಾದೇವಪುರ, ಸಿಲ್ಕ್ ಬೋರ್ಡ್ ಮುಂತಾದೆಡೆ ಕೆರೆಗಳಿದ್ದು, ಇವು ಕಾಮಗಾರಿಗೆ ಒಂದಷ್ಟು ಸವಾಲು ಒಡ್ಡಲಿವೆ.

ಜತೆಗೆ ಅಷ್ಟು ಆಳಕ್ಕೆ ಬೇಕಾದ ಆಮ್ಲಜನಕದ ನಿರಂತರ ಪೂರೈಕೆಯೂ ಸುಲಭದ ತುತ್ತಲ್ಲ! ಆ ವಿಷಯದಲ್ಲಿ ಸಣ್ಣ ವ್ಯತ್ಯಾಸ ಬಂದರೂ ಅದು ದುಬಾರಿಯಾಗಿ ಪರಿಣಮಿಸಲಿದೆ. ಲಭ್ಯ ಮಾಹಿತಿ ಯಂತೆ, ಬೆಂಗಳೂರಿನಲ್ಲಿ ಪ್ರತಿದಿನ ರಸ್ತೆಗಿಳಿಯುತ್ತಿರುವ ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದರಿ ಸುರಂಗಮಾರ್ಗವು ಜನರ ಉಪಯೋಗಕ್ಕೆ ಲಭ್ಯವಾಗುವ ಹೊತ್ತಿಗೆ, ಈ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಬಹುದು.

ಆದ್ದರಿಂದ, ಬೆಂಗಳೂರು ಒಂದನ್ನೇ ಗುರಿಯಾಗಿಟ್ಟುಕೊಳ್ಳುವ ಬದಲು, ರಾಜ್ಯದ ಇತರ ಪಟ್ಟಣ/ನಗರಗಳನ್ನೂ ಅಭಿವೃದ್ಧಿಪಡಿಸಿ, ಎಲ್ಲ ಹೊಸ ಉದ್ಯಮಗಳು/ಉತ್ಪಾದನಾ ಘಟಕಗಳು, ಕಚೇರಿಗಳು ಅಲ್ಲಿ ತೆರೆಯಲ್ಪಡುವಂತೆ ಉತ್ತೇಜಿಸುವ ದಿಸೆಯಲ್ಲಿ ಸರಕಾರ ಕಾರ್ಯಪ್ರವೃತ್ತವಾಗಬೇಕಾಗಿದೆ. ಹಾಗಾದಾಗ ಮಾತ್ರವೇ ಬೆಂಗಳೂರು ಮಹಾನಗರಿಯು ಒಂದಷ್ಟು ಸಮಸ್ಥಿತಿಯನ್ನು ಕಾಯ್ದು ಕೊಂಡು, ಎಲ್ಲಾ ಆಯಾಮಗಳಿಂದ ಉತ್ತಮ ನಗರವಾಗಿ ಉಳಿದೀತು.

ಇಲ್ಲವಾದಲ್ಲಿ, ‘ಈ ನಗರ, ಹೆಚ್ಚಿನ ಸಮಸ್ಯೆಗಳ ಆಗರ’ ಎಂಬ ಹಣೆಪಟ್ಟಿಯನ್ನು ಕಟ್ಟಿಸಿ ಕೊಳ್ಳಬೇಕಾದೀತು. ಅಂಥ ಪರಿಸ್ಥಿತಿಯಲ್ಲಿ ಸುರಂಗಮಾರ್ಗದಂಥ ಯೋಜನೆಗಳನ್ನು ಕೈಗೊಂಡರೂ, ಅದರಿಂದ ಸರಕಾರದ ಬೊಕ್ಕಸ ಖಾಲಿಯಾಗುತ್ತದೆ ಅಷ್ಟೇ. ಹೀಗಾಗಿ, ಆಳುಗರು ಅಭಿವೃದ್ಧಿಯ ವಿಷಯದಲ್ಲಿನ ಅಸಮಾನತೆಯನ್ನು ತೊಡೆದು ಎಲ್ಲ ಪ್ರದೇಶಗಳಿಗೂ ಆದ್ಯತೆ ನೀಡಿದಲ್ಲಿ ಹಾಗೂ ರಾಜಕೀಯ, ಸ್ವಹಿತಾಸಕ್ತಿ, ಸ್ವಜನ ಪಕ್ಷಪಾತ ನುಸುಳದಂತೆ ನೋಡಿಕೊಂಡಲ್ಲಿ ಒಳಿತು.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)