ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Commercial Tax: ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್‌ ಬಂದಿದ್ದೇಕೆ?; ಸ್ಪಷ್ಟನೆ ನೀಡಿದ ವಾಣಿಜ್ಯ ತೆರಿಗೆ ಇಲಾಖೆ

Commercial Tax: ಕೆಲ ವರ್ತಕರ ವಾರ್ಷಿಕ ವಹಿವಾಟು ಗಣನೀಯವಾಗಿ ಹೆಚ್ಚಾಗಿರುತ್ತದೆ. ಹೀಗಾಗಿ ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ. ಇನ್ನು ತೆರಿಗೆ ನೋಟಿಸ್‌ ಬಂದವರು ಏನು ಮಾಡಬೇಕು ಎಂಬುದರ ಕುರಿತು ಇಲಾಖೆ ಮಾಹಿತಿ ನೀಡಿದೆ.

ವ್ಯಾಪಾರಿಗಳಿಗೆ ನೋಟಿಸ್‌; ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ಏನು?

Profile Prabhakara R Jul 12, 2025 5:47 PM

ಬೆಂಗಳೂರು: ಸಣ್ಣಪುಟ್ಟ ವ್ಯಾಪಾರಿಗಳಿಗೆ ಲಕ್ಷಾಂತರ ರೂಪಾಯಿ ತೆರಿಗೆ (Commercial Tax) ಕಟ್ಟುವಂತೆ ನೋಟಿಸ್‌ ನೀಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಇಲಾಖೆ, ಕರ್ನಾಟಕದ ಹಲವು ಮಾಧ್ಯಮಗಳಲ್ಲಿ ಸಣ್ಣಪುಟ್ಟ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ನೀಡಿರುವ ನೋಟಿಸುಗಳ ಬಗ್ಗೆ ವರದಿಯಾಗಿದೆ. ಆದರೆ, ಕೆಲ ವರ್ತಕರ ವಾರ್ಷಿಕ ವಹಿವಾಟು ಗಣನೀಯವಾಗಿ ಹೆಚ್ಚಾಗಿರುತ್ತದೆ. ಹೀಗಾಗಿ ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.

2017ರ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯು(GST Act, 2017) ದೇಶಾದ್ಯಂತ ಜಾರಿಗೆ ಬಂದಿದೆ. ಈ ಕಾಯ್ದೆಯ ಕಲಂ 22 ರನ್ವಯ ಸರಕು ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೊರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಳನ್ನು ಮೀರಿದರೆ ಜಿ.ಎಸ್.ಟಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ.

commercial tax

ಈ ಸಮಗ್ರ ವಹಿವಾಟಿನಲ್ಲಿ (exempted & Taxable) ಸರಕು ಮತ್ತು ಸೇವೆಗಳು ಸೇರಿರುತ್ತದೆ. ಆದರೆ ತೆರಿಗೆ ಬಾಧ್ಯತೆಯು Taxable ಸರಕುಗಳು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ತೆರಿಗೆ ಬಾಧ್ಯತೆಯು ಮಾರಾಟ ಮಾಡಿದ ಸರಕುಗಳ ಪ್ರಕಾರ ನಿರ್ಧರಿಸಲ್ಪಡುತ್ತದೆ. (ಉದಾಹರಣೆಗೆ ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರಲ್ಲ. ಕುರುಕುಲು ತಿಂಡಿಗಳ ಮೇಲೆ 5% ತೆರಿಗೆ ಬಾಧ್ಯತೆ ಇರುತ್ತದೆ) ಎಂದು ಹೇಳಿದೆ.

ವಾಣಿಜ್ಯ ತೆರಿಗೆಗಳ ಇಲಾಖೆಯು ಏಕೀಕೃತ ಪಾವತಿ ವ್ಯವಸ್ಥೆ (ಯು.ಪಿ.ಐ) ಯ ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯು.ಪಿ.ಐ ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿದೆ. ವರ್ತಕರು ಮಾರಾಟದ ಹಣವನ್ನು (ಯು.ಪಿ.ಐ) ಮಾತ್ರವಲ್ಲದೇ ನಗದು ಮತ್ತು ಇತರ ವಿಧಾನಗಳಲ್ಲಿ ಕೂಡ ಪಡೆಯುತ್ತಾರೆ. ಹಾಗಾಗಿ, ಯು.ಪಿ.ಐ ಮೂಲಕ 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ. ಈ ಮಾಹಿತಿಯನ್ನು ಪರಿಶೀಲಿಸಿ, 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ - 2017 ರಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಈ ನೋಟಿಸ್‌ಗಳಿಗೆ, ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕು. ಇಂತಹ ವರ್ತಕರು ತಕ್ಷಣ ಜಿಎಸ್‌ಟಿ ಕಾಯ್ದೆಯಡಿ ನೋಂದಣಿ ಪಡೆಯಬೇಕಾಗಿರುತ್ತದೆ.

ಇನ್ನು ವಾರ್ಷಿಕ ವಹಿವಾಟು 1.5 ಕೋಟಿ ರೂ.ಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆಯನ್ನು (GST Composition Scheme) ಆಯ್ಕೆ ಮಾಡಿ, ಇನ್ನು ಮುಂದೆ 1% ತೆರಿಗೆ ಪಾವತಿಸಬಹುದು. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಮಾಹಿತಿಯನ್ನು ಇಲಾಖೆಯ ಜಾಲತಾಣ https://gst.kar.nic.in/ ದಲ್ಲಿ ಪಡೆಯಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Karnataka High Court: ಕೈಗಾರಿಕೆಗಳಿಂದ ತೆರಿಗೆ ಸಂಗ್ರಹಿಸಲು ಗ್ರಾಮ ಪಂಚಾಯತ್‌ಗಳಿಗೆ ಅಧಿಕಾರವಿಲ್ಲ: ಹೈಕೋರ್ಟ್‌