Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ, ಇಂದು ಕೇಂದ್ರ ತಂಡದಿಂದ ಮೂರು ಸ್ಥಳ ಪರಿಶೀಲನೆ
ಈ ತಂಡ ಇಂದು (ಏಪ್ರಿಲ್ 08) ಕನಕಪುರ ರಸ್ತೆಯ ಎರಡು ಮತ್ತು ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಬಳಿಕ ಬುಧವಾರ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿಯಲ್ಲಿ ಎರಡನೇ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ (Bengaluru Second Airport, Bengaluru 2nd Airport) ಸಂಭಾವ್ಯ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಈ ಜಾಗಗಳ ಪೂರ್ವಕಾರ್ಯ ಸಾಧ್ಯತಾ ಅಧ್ಯಯನಕ್ಕೆಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಬಹುಶಿಸ್ತೀಯ ತಂಡವು ಇಂದು ರಾಜ್ಯಕ್ಕೆ ಆಗಮಿಸಿ ಪರಿಶೀಲಿಸಲಿದೆ. ಇಂದು ಮತ್ತು ನಾಳೆ ಸ್ಥಳಗಳ ಪರಿಶೀಲನೆ ನಡೆಯಲಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಸ್ಥಳ ಗುರುತಿಸಲು ಬಂದಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ತಂಡಕ್ಕೆ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ಗೋಯಲ್ ಅವರು ಉದ್ದೇಶಿತ ಮೂರು ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು. ಈ ತಂಡ ಇಂದು (ಏಪ್ರಿಲ್ 08) ಕನಕಪುರ ರಸ್ತೆಯ ಎರಡು ಮತ್ತು ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಬಳಿಕ ಬುಧವಾರ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಲಿದೆ. ಕೇಂದ್ರ ತಂಡ ಮೊದಲು ನಾಳೆ ಬೆಳಿಗ್ಗೆ 10 ಗಂಟೆಗೆ ಕನಕಪುರ ರಸ್ತೆ ಕಡೆಯಿಂದ ಸ್ಥಳ ವೀಕ್ಷಣೆ ಆರಂಭಿಸಲಿದೆ. ನಂತರ ನೆಲಮಂಗಲ ಜಾಗಕ್ಕೆ ತೆರಳಲಿದೆ.
ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂತಿಮಪಡಿಸಿರುವ ತಾಣಗಳನ್ನು ಪರಿಶೀಲಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನಮ್ಮ ಇಲಾಖೆಯಿಂದ ಪತ್ರ ಬರೆಯಲಾಗಿತ್ತು. ಅದರಂತೆ ತಂಡವು ಬರುತ್ತಿದೆ. ತಂಡದ ಸೂಚನೆಯಂತೆ ನಾವು ಈ ತಾಣಗಳ ಕಂದಾಯ ನಕಾಶೆ, 10 ವರ್ಷಗಳ ಹವಾಮಾನ ವರದಿ, ಈ ಜಾಗಗಳ ಜಾಮಿತೀಯ ಲಕ್ಷಣಗಳನ್ನು ವಿವರಿಸುವ ಚಿತ್ರ, ಭಾರತೀಯ ಸರ್ವೇ ಇಲಾಖೆಯ ನಕಾಶೆ, ಉದ್ದೇಶಿತ ನಿಲ್ದಾಣದಲ್ಲಿನ ಕಾರ್ಯಾಚರಣೆ ಸ್ವರೂಪ (ವಿಎಫ್ಆರ್/ಐಎಫ್ಆರ್) ತಿಳಿಸುವ ವಿವರ ಮುಂತಾದವನ್ನು ಸಿದ್ಧಪಡಿಸಿಕೊಂಡಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಈಗ ಇರುವ ವಿಮಾನ ನಿಲ್ದಾಣದ ಮೇಲೆ ಅತೀವ ಒತ್ತಡವಿದೆ. ಇನ್ನೊಂದೆಡೆಯಲ್ಲಿ, 2033ಕ್ಕೆ ಸರಿಯಾಗಿ 150 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಹೊಂದುವಂತಿಲ್ಲ ಎನ್ನುವ ಷರತ್ತು ಕೊನೆಗೊಳ್ಳಲಿದೆ. ಇವೆಲ್ಲವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಬೆಂಗಳೂರಿನಲ್ಲಿ ಎರಡನೆಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಿನಿಂದಲೇ ಮುಂದಡಿ ಇಡಲಾಗುತ್ತಿದೆ. ಹೀಗೆಯೇ ಮುಂದುವರಿದರೆ 2033ರ ಹೊತ್ತಿಗೆ ಅದು ಬಳಕೆಗೆ ಸಿದ್ಧವಾಗಬಹುದು ಎಂದು ಸಚಿವ ಎಂ ಬಿ ಪಾಟೀಲ ಅವರು ಹೇಳಿದ್ದಾರೆ.
ಕಾಂಗ್ರೆಸ್ ನ ಕೆಲವು ಶಾಸಕರು ತುಮಕೂರಿನ ಶಿರಾ ಸಮೀಪ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಈ ಕಾರ್ಯ ಬೇಡಿಕೆ ಸಾಧುವಲ್ಲ. ಶಿರಾದಲ್ಲಿ ವಿಮಾನ ನಿಲ್ದಾಣ ಮಾಡಿದರೆ ಶಿವಮೊಗ್ಗ, ವಿಜಯಪುರದಲ್ಲಿ ಇರುವಂತೆ ಅದೇನಿದ್ದರೂ ಜಿಲ್ಲಾ ಮಟ್ಟದ್ದಾಗುತ್ತದೆ ಅಷ್ಟೆ. ಬೆಂಗಳೂರಿನ ಜನರಿಗೆ ಅನುಕೂಲ ಆಗಬೇಕಾದರೆ ಅದು ಬೆಂಗಳೂರಿಗೆ ಸನಿಹದಲ್ಲೇ ಇರಬೇಕು. ಆಗ ಮಾತ್ರ ಹೂಡಿಕೆದಾರ ಸಂಸ್ಥೆಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: Bengaluru 2nd Airport: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ, ಕೇಂದ್ರಕ್ಕೆ ರಾಜ್ಯ ಪ್ರಸ್ತಾವನೆ