ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Dr.K.Sudhakar: ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ; ವಿಜಯೇಂದ್ರ ಅಹಂಕಾರಕ್ಕೆ ಧಿಕ್ಕಾರ ಎಂದ ಸಂಸದ ಸುಧಾಕರ್

Dr.K.Sudhakar: ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರಿಗೆ ಮಣೆ ಹಾಕಲಾಗಿದೆ. ರಿಯಲ್ ಎಸ್ಟೇಟ್‌ನಿಂದ ದುಡ್ಡು ತಂದು ಕೊಡುವವರಿಗೆ ಅವಕಾಶ ನೀಡಲಾಗುತ್ತಿದೆ. ವಿಜಯೇಂದ್ರ ಅವರನ್ನು ನೆಚ್ಚಿಕೊಂಡು, ಪಕ್ಷ ಸಮಾಧಿ ಮಾಡಲು ಹೊರಟಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಂಸದ ಡಾ.ಕೆ.ಸುಧಾಕರ್‌ ಅಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ; ವಿಜಯೇಂದ್ರ ಅಹಂಕಾರಕ್ಕೆ ಧಿಕ್ಕಾರ ಎಂದ ಸಂಸದ ಸುಧಾಕರ್

Profile Prabhakara R Jan 29, 2025 7:50 PM

ಚಿಕ್ಕಬಳ್ಳಾಪುರ: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಸೇರಿ ಹಲವರು ಟೀಕಿಸಿದ್ದರು. ಇದೀಗ ವಿಜಯೇಂದ್ರ ವಿರುದ್ಧ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ. ಸುಧಾಕರ್ (Dr.K.Sudhakar) ಅಸಮಾಧಾನ ಹೊರಹಾಕಿದ್ದು, ವಿಜಯೇಂದ್ರ ಅಹಂಕಾರ, ದರ್ಪ ಸಹಿಸಿ ಸಾಕಾಗಿದೆ. ಇನ್ನೇನಿದ್ದರೂ ಯುದ್ಧ ಮಾಡುವುದೊಂದೇ ಬಾಕಿ ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಾ.ಕೆ. ಸುಧಾಕರ್ ಅವರು, ಚುನಾವಣೆಯಲ್ಲಿ ನನ್ನನ್ನು ಸೋಲಿಸಿದವರಿಗೆ ಮಣೆ ಹಾಕಲಾಗಿದೆ. ರಿಯಲ್ ಎಸ್ಟೇಟ್‌ನಿಂದ ದುಡ್ಡು ತಂದು ಕೊಡುವವರಿಗೆ ಅವಕಾಶ ನೀಡಲಾಗುತ್ತಿದೆ. ವಿಜಯೇಂದ್ರ ಅವರನ್ನು ನೆಚ್ಚಿಕೊಂಡು, ಪಕ್ಷ ಸಮಾಧಿ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಪಕ್ಷದ ರಾಜ್ಯ ಉಸ್ತುವಾರಿ, ಕೇಂದ್ರ ನಾಯಕರ ಗಮನಕ್ಕೆ ತಂದಿರುವೆ ಎಂದು ತಿಳಿಸಿದ್ದಾರೆ.

ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಅವರನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಸೇರಿ 13 ಜಿಲ್ಲೆಗಳ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚಿಸಿಲ್ಲ ಎಂದು ಕಿಡಿಕಾರಿದ್ದಾರೆ.

ವಿಜಯೇಂದ್ರ ಧೋರಣೆ, ಅಹಂಕಾರಕ್ಕೆ ಧಿಕ್ಕಾರ. ವಿಜಯೇಂದ್ರರ ಧೋರಣೆ ಬದಲಿಸಿ ಇಲ್ಲವೇ ರಾಜ್ಯಾಧ್ಯಕ್ಷರನ್ನು ಬದಲಾಯಿಸಿರಿ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಗಮನಕ್ಕೆ ತಂದಿರುವೆ. ‌ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ನಾಯಕರಿಗೆ ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಬೇಕೆಂಬ ದುರುದ್ದೇಶದಿಂದ ಅಡ್ಡದಾರಿ ಹಿಡಿದು ತಮಗೆ ಬೇಕಾದವರನ್ನು ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ರಾಷ್ಟ್ರೀಯ ನಾಯಕರು ಈಗಲಾದರೂ ಮಧ್ಯೆ ಪ್ರವೇಶಿಸಿ ಸರಿ ಮಾಡದಿದ್ದರೆ ಪಕ್ಷ, ಕಾರ್ಯಕರ್ತರಿಗೆ ಭವಿಷ್ಯವಿಲ್ಲ. ತೀವ್ರ ನೊಂದ, ಬೇಸತ್ತ ನಾಯಕರೆಲ್ಲ ಸಭೆ ಸೇರಲಿದ್ದೇವೆ. ಬಿ.ಎಸ್.ಯಡಿಯೂರಪ್ಪ ಮಾತು ಕೂಡ ಕೇಳುವ ಸ್ಥಿತಿಯಲ್ಲಿಲ್ಲ ವಿಜಯೇಂದ್ರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Arvind Kejriwal: ದಮ್ಮಿದ್ದರೆ ಯಮುನಾ‌ ನದಿಯ ನೀರು ಕುಡಿಯಿರಿ: ಅಮಿತ್‌ ಶಾ ಮತ್ತು ರಾಹುಲ್‌ಗೆ ಕೇಜ್ರಿವಾಲ್‌ ಓಪನ್ ಚಾಲೆಂಜ್!

ಯಡಿಯೂರಪ್ಪ ಸೂಚನೆಯಂತೆ ನಾನು ಕೆಲಸ ಮಾಡಿದ್ದೇನೆ. ಅನೇಕ ಬಾರಿ ಯಡಿಯೂರಪ್ಪ ಅವರು ಹೊಗಳಿದ್ದಾರೆ. ಬಳಿಕ ಬಸವರಾಜ್ ಬೊಮ್ಮಾಯಿ‌ ಸಿಎಂ ಆದರು. ಅವರ ಜತೆಗೂ ಉತ್ತಮ ಕೆಲಸ ಮಾಡಿದ್ದೇನೆ. ನೆಲೆ ಇಲ್ಲದ ಕಡೆ ಹೋಗಿ ಆಘಾತ ಆಯ್ತು. ಮಹಾನ್ ನಾಯಕರೇ ಸೋಲಿಸಲು ಪ್ರಯತ್ನಿಸಿದರು. ಮಾರಾಟ ಆಗಿದ್ದೇವೆ ಅಂತ ಅಪಪ್ರಚಾರ ಆಯ್ತು.

ಬಿಜೆಪಿಯಲ್ಲಿ ವಂಶ ಪಾರುಪತ್ಯಕ್ಕೆ ಮಣೆ ಹಾಕಲ್ಲ ಎಂದು ಅಂದುಕೊಂಡಿದ್ದೆ. ನನಗೆ ಎಷ್ಟೇ ಅಪಮಾನ ಆಗಿದ್ದರೂ ನನ್ನ ಮೇಲೆ ಜನರ ವಿಶ್ವಾಸ ಇತ್ತು. ಒಂದು ಸೋಲು ಆಘಾತ ಆಗಿದ್ದು ನಿಜ. ಈಗ ಸಂಘಟನೆಯ ಪರ್ವ ನಡೆಯುತ್ತಿದೆ. ಆದರೆ, ನನ್ನ ಸ್ವಂತ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಹೇಗಿದೆ ಅಂದ್ರೆ. ಯಸ್ ಬಾಸ್ ಅನ್ನೋರು ಬೇಕು. ಜಿ ಹುಜೂರ್ ಅನ್ನೋರು ಬೇಕು. ಅಂತವರನ್ನು ನೇಮಕ ಮಾಡಿದ್ದಾರೆ. ಉಪಾಧ್ಯಕ್ಷ, ಜಿಲ್ಲಾಧ್ಯಕ್ಷರನ್ನಾಗಿ ನೇಮಕಮಾಡಿದ್ದಾರೆ. ಯಾವುದೇ ಚುನಾವಣೆ ಸಂವಿಧಾನದ ಮಾದರಿಯಲ್ಲಿ ಆಗಬೇಕು ಎಂದು ಆಗ್ರಹಿಸಿದರು.