SSLC Exam Preparation Tips: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ಟಿಪ್ಸ್ ಫಾಲೋ ಮಾಡಿ
SSLC Exam Preparation Tips: ಮಾ. 21ರಿಂದ ಏ. 4ರ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿದ್ದಾರೆ. ಉತ್ತಮ ಅಂಕ ಗಳಿಸಲು ನಿಮ್ಮ ತಯಾರಿಯನ್ನು ಹೇಗೆ ಎನ್ನಷ್ಟು ಪರಿಣಾಮಕಾರಿಯನ್ನಾಗಿಸಬಹುದು ಎನ್ನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam) ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ. ಮುಂದೇನಾಗಬೇಕು ಎನ್ನುವ ವಿದ್ಯಾರ್ಥಿಯ ಗುರಿ, ಭವಿಷ್ಯವನ್ನು ನಿರ್ಧರಿಸುವುದರಿಂದ ಇದನ್ನು ಜೀವನದ ಪ್ರಮುಖ ತಿರುವು ಎಂದೇ ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯನ್ನು ವಿದ್ಯಾರ್ಥಿ ಹೇಗೆ ಎದುರಿಸುತ್ತಾನೆ ಎನ್ನುವುದರ ಮೇಲೆ ಆತನ ಭವಿಷ್ಯ ನಿರ್ಧಾರವಾಗುತ್ತದೆ. ಈಗಂತೂ ಎಷ್ಟು ಅಂಕ ಗಳಿಸಿದರೂ ಕಡಿಮೆಯೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಉತ್ತಮ ಅಂಕ ಗಳಿಕೆಯತ್ತ ಗಮನ ಹರಿಸುವುದು ಅನಿವಾರ್ಯ ಎನಿಸಿಕೊಂಡಿದೆ. ಈಗಾಗಲೇ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗಿದ್ದು, ಮಾ. 21ರಂದು ಆರಂಭವಾಗಲಿದೆ. ಹೀಗಾಗಿ ಇನ್ನುಳಿದ ಬೆರಳೆನಿಕೆಯ ದಿನಗಳನ್ನು ಸರಿಯಾಗಿ ಬಳಸಿಕೊಂಡರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು (SSLC Exam Preparation Tips). ಹೀಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಈ ದಿನಗಳಲ್ಲಿ ಏನು ಮಾಡಬೇಕು ಎನ್ನುವ ಸಲಹೆ ಇಲ್ಲಿದೆ.
ಸಮಯವನ್ನು ಸದುಪಯೋಗಪಡಿಸಿ
ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ಸಂಗತಿಗಳಲ್ಲಿ ಸಮಯವೂ ಒಂದು. ಇದು ಒಮ್ಮೆ ಕಳೆದು ಹೋದರೆ ಮರಳಿ ಕರೆತರಲು ಸಾಧ್ಯವಿಲ್ಲ. ಹೀಗಾಗಿ ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಬೇರೆಲ್ಲ ಸಂಗತಿಗಳನ್ನು ತಾತ್ಕಾಲಿಕವಾಗಿ ಮರೆತು ಅಧ್ಯಯನದತ್ತ ಸಂಪೂರ್ಣ ಗಮನ ಕೇಂದ್ರೀಕರಿಸಿ.
ಈ ಸುದ್ದಿಯನ್ನೂ ಓದಿ: Mid Day Meal: ರಾಜ್ಯದ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಬಿಸಿಯೂಟ: ಸರ್ಕಾರ ಆದೇಶ
ಪ್ರಮುಖ ವಿಷಯಗಳನ್ನು ನೋಟ್ ಮಾಡಿಟ್ಟುಕೊಳ್ಳಿ
ಈಗಾಗಲೇ ನಡೆದ ಮಾಡೆಲ್ ಪರೀಕ್ಷೆ, ಕ್ಲಾಸ್ ಟೆಸ್ಟ್‌ಗಳಿಂದ ಯಾವೆಲ್ಲ ಪ್ರಶ್ನೆ, ಹೇಗೆಲ್ಲ ಕೇಳುತ್ತಾರೆ ಎನ್ನುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಜತೆಗೆ ಶಿಕ್ಷಕರು ಪ್ರಮುಖ ಭಾಗಗಳನ್ನು ಸೂಚಿಸಿರಬಹುದು. ಅದರತ್ತ ಗಮನ ಹರಿಸಿ. ಜತೆಗೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಯನ್ನು ಅಧ್ಯಯನ ಮಾಡಿ.

ಟೈಮ್ ಟೇಬಲ್ ರೂಪಿಸಿ
ಬಾಕಿ ಉಳಿದಿರುವ ಕೆಲವೇ ಕೆಲವು ದಿನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಟೈಮ್ ಟೇಬಲ್ ತಯಾರಿಸಿ. ಪ್ರತಿ ವಿಷಯಕ್ಕೆ ಇಂತಿಷ್ಟು ಸಮಯ ಎನ್ನುವುದನ್ನು ನಿಗದಿಪಡಿಸಿ ಅದರಂತೆ ಅಧ್ಯಯನ ನಡೆಸಿ. ಕಠಿಣ ವಿಷಯಗಳಿಗೆ ಸ್ವಲ್ಪ ಹೆಚ್ಚಿನ ಸಮಯವನ್ನೂ ಸುಲಭ ವಿಷಯಗಳಿಗೆ ಕಡಿಮೆ ಸಮಯವನ್ನೂ ನಿಗದಿಪಡಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಈ ಟೈಮ್ ಟೇಬಲ್ ಅನ್ನು ಕಡೆಗಣಿಸಬೇಡಿ.
ಬ್ರೇಕ್ ಇರಲಿ
ನಿರಂತರವಾಗಿ ಓದುವುದರಿಂದ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಮಧ್ಯೆ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಳ್ಳಿ. ಇದಕ್ಕಾಗಿ ಪೊಮೊಡೊರೊ ತಂತ್ರಜ್ಞಾನ ಬಳಸಿ. ಅಂದರೆ 25-30 ನಿಮಿಷ ಓದಿ 5 ನಿಮಿಷ ಬ್ರೇಕ್ ತೆಗೆದುಕೊಳ್ಳಿ. ಬ್ರೇಕ್ ಸಮಯದಲ್ಲಿ ಮೊಬೈಲ್, ಟಿವಿ ನೋಡದೆ ಒಂದಷ್ಟು ವಾಕ್ ಮಾಡಿ. ಶುದ್ಧ ಗಾಳಿ ಸೇವಿಸಿ.

ಬರೆದು ಕಲಿಯಿರಿ
ಓದಿ ಮನನ ಮಾಡುವ ಜತೆಗೆ ಬರೆದು ಕಲಿಯಿರಿ. 2-3 ಗಂಟೆ ಓದಿ ಬಳಿಕ ಅದನ್ನು ಬರೆದು ಅಭ್ಯಾಸ ನಡೆಸಿ. ಎಲ್ಲ ವಿಷಯವನ್ನು ಬರೆದು ಕಲಿಯುವುದರಿಂದ ಪರಿಣಾಮಕಾರಿಯಾಗಿ ಅರ್ಥೈಸಬಹುದು. ಅದರಲ್ಲಿಯೂ ಗಣಿತ, ವಿಜ್ಞಾನ ವಿಷಯಗಳನ್ನು ಬರೆದೇ ಅಧ್ಯಯನ ಮಾಡಿ. ಪರೀಕ್ಷೆಗೆ ನಿಗದಿತ ಸಮಯ ಇರುವುದರಿಂದ ಕಾಲಮಿತಿಯೊಳಗೆ ಬರೆಯುವುದನ್ನು ಅಭ್ಯಾಸ ಮಾಡಿ.
ಬರೆಯುವ ಕೌಶಲ್ಯ ವೃದ್ಧಿಸಿ
ಉತ್ತರ ಗೊತ್ತಿದ್ದರೂ ಕೆಲವೊಮ್ಮೆ ಅದನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲುವಲ್ಲಿ ಸೋಲುತ್ತೇವೆ. ಇದರಿಂದ ಅಂಕ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ನೀಟಾಗಿ ಬರೆಯಿರಿ. ಬುಲೆಟ್ ಪಾಯಿಂಟ್, ಸಬ್ ಹೆಡ್ಡಿಂಗ್ ಬಳಸಿ. ಕೆಲವೊಂದು ಮುಖ್ಯ ಅಂಶಗಳಿಗೆ ಅಂಡರ್‌ಲೈನ್ ಹಾಕಿ. ಗಣಿತ ಪರೀಕ್ಷೆ ಬರೆಯುವಾಗ ಸ್ಟೆಪ್‌ನತ್ತ ಗಮನಹರಿಸಿ. ಸಮಾಜ ವಿಜ್ಞಾನ ಪರೀಕ್ಷೆಗಾಗಿ ಇಸವಿಗಳನ್ನು ಬಾಯಿಪಾಠ ಮಾಡಿ. ಇನ್ನು ವಿಜ್ಞಾನ ವಿಷಯಕ್ಕಾಗಿ ಡಯಾಗ್ರಾಮ್ ಅಭ್ಯಸ ಮಾಡಿ.
ಸಂಶಯ ನಿವಾರಿಸಿಕೊಳ್ಳಿ
ಈ ಹಂತದಲ್ಲಿ ಯಾವುದೇ ಸಂಶಯ ಬಂದರೂ ಶಿಕ್ಷಕರ ಬಳಿ ಕೇಳಿ ಪರಿಹರಿಸಿಕೊಳ್ಳಿ. ಇದಕ್ಕಾಗಿ ಆನ್‌ಲೈನ್ ಸಹಾಯವನ್ನೂ ಪಡೆದುಕೊಳ್ಳಬಹುದು.
ಆರೋಗ್ಯದ ಕಡೆಗೂ ಗಮನ ಹರಿಸಿ
ಈ ವೇಳೆ ಆರೋಗ್ಯದತ್ತಲೂ ಗಮನ ಹರಿಸಿ. ಕಠಿಣ ಅಬ್ಯಾಸ ನಡೆಸಿ ಪರೀಕ್ಷೆ ವೇಳೆ ಆರೋಗ್ಯ ಕೈಕೊಟ್ಟರೆ ನೀವು ಪಟ್ಟ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಹೀಗಾಗಿ ಆರೋಗ್ಯದತ್ತಲೂ ಗಮನ ಹರಿಸಿ. ದಿನ ನಿತ್ಯ ಕನಿಷ್ಠ 7 ಗಂಟೆ ನಿದ್ದೆ ಮಾಡಿ. ಜಂಕ್ ಫೂಡ್ ಬೇಡ್ವೇ ಬೇಡ. ಸಾಕಷ್ಟು ನೀರು ಕುಡಿಯಿರಿ.

ಗ್ರೂಪ್ ಸ್ಟಡಿ ಒಳ್ಳೆಯದು
ನಿಮ್ಮ ಸ್ನೇಹಿತರೊಂದಿಗೆ ಸೇರಿ ಗುಂಪಾಗಿ ಅಧ್ಯಯನ ನಡೆಸಿ. ಇದರಿಂದ ಸುಲಭವಾಗಿ ಸಂಶಯ ಪರಿಹರಿಸಿಕೊಳ್ಳಬಹುದು. ಹಾಗಂತ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದಿರೆಂದು ಕಾಡು ಹರಟೆಯಲ್ಲಿ ಸಮಯ ವ್ಯರ್ಥ ಮಾಡಬೇಡಿ. ಅದಕ್ಕಾಗಿಯೇ ಪರೀಕ್ಷೆ ಕಳೆದು ಭರ್ತಿ 2 ತಿಂಗಳು ರಜೆ ನಿಮಗಾಗಿಯೇ ಕಾದಿದೆ.
ಬೇರೆಯವರಿಗಲ್ಲ, ನಿಮಗಾಗಿ ಓದಿ
ಕೆಲವರು ಅಪ್ಪ-ಅಮ್ಮ, ಶಿಕ್ಷಕರು ಬಯ್ಯುತ್ತಾರೆ ಎನ್ನುವ ಕಾರಣಕ್ಕೆ ನೆಪ ಮಾತ್ರಕ್ಕೆ ಪುಸ್ತಕ ತೆರೆದು ಓದುವ ನಾಟಕವಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಉತ್ತಮ ಅಂಕ ಗಳಿಸುತ್ತೇನೆ ಎಂದು ದೃಢ ನಿರ್ಧಾರ ತಳೆದು ನಿಮಗಾಗಿಯೇ ಓದಿ. ಇದರಿಂದ ಏಕಾಗ್ರತೆ ಮೂಡುತ್ತದೆ.

ಪೋಷಕರಿಗಾಗಿ ಕೆಲವೊಂದು ಸಲಹೆ
ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವಲ್ಲಿ ಪೋಷಕರ ಪಾತ್ರವೂ ಮಹತ್ವದ್ದು. ಅವರಿಗಾಗಿ ಒಂದಷ್ಟು ಸಮಯ ಮೀಸಲಿಡಿ. ಅವರೇನು ಮಾಡಬೇಕು ಎನ್ನುವ ಸಲಹೆ ಇಲ್ಲಿದೆ:
ಪೌಷ್ಟಿಕಾಂಶಯುಕ್ತ ಆಹಾರ ನೀಡಿ: ಪರೀಕ್ಷೆ ಸಮಯದಲ್ಲಿ ಮಕ್ಕಳು ಮಾನಸಿಕವಾಗಿ ಒತ್ತಡ ಅನುಭವಿಸುವ ಕಾರಣ ಅವರಿಗೆ ಪೋಷಕಾಂಶಯುಕ್ತ ಆಹಾರ ಒದಗಿಸಬೇಕಾಗುತ್ತದೆ. ಹೆಚ್ಚು ಮಸಾಲೆಯುಕ್ತ, ಸಕ್ಕರೆಯಿಂದ ಕೂಡಿದ, ಜಂಕ್ ಆಹಾರಗಳನ್ನು ನೀಡಲೇಬೇಡಿ. ಹಸಿ ತರಕಾರಿ, ಸೊಪ್ಪು, ತರಕಾರಿ ಧಾರಾಳವಾಗಿ ನೀಡಿ. ಚಾ, ಕಾಫಿ ಬದಲು ತಾಜಾ ಹಣ್ಣಿನ ರಸ, ಕಷಾಯ, ಮಜ್ಜಿಗೆ ಇತ್ಯಾದಿ ನೀಡಿ.
ಮೊಬೈಲ್, ಟಿವಿ ಬಳಸಬೇಡಿ: ಮಕ್ಕಳ ಪರೀಕ್ಷೆ ವೇಳೆ ನೀವೂ ಟಿವಿ, ಮೊಬೈಲ್ ಬಳಸಬೇಡಿ. ನೀವು ಮೊಬೈಲ್ ಬಳಸುತ್ತಿದ್ದರೆ ಅವರ ಏಕಾಗ್ರತೆಗೆ ಬಂಗ ಬರುವ ಸಾಧ್ಯತೆ ಇದೆ. ಈ ವೇಳೆ ನೀವೂ ಯಾವುದಾದರೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ.
ನಿಂದಿಸಬೇಡಿ: 24 ಗಂಟೆಯೂ ಓದು ಎಂದು ಹೇಳಿ ಪದೇ ಪದೆ ಕಿರಿಕಿರಿ ಮಾಡಬೇಡಿ. ಅದರ ಬದಲು ಪಕ್ಕದಲ್ಲಿ ಕುಳಿತು ಪರೀಕ್ಷೆ ಯಾಕೆ ಮುಖ್ಯ, ಈ ಸ್ಪರ್ಧಾತ್ಮಕ ಯುಗದಲ್ಲಿ ಅಂಕ ಹೇಗೆ ಪ್ರಧಾನ ಪಾತ್ರ ವಹಿಸುತ್ತದೆ ಎನ್ನುವುದನ್ನು ವಿವರಿಸಿ. ಇದರಿಂದ ಅವರಿಗೆ ಉತ್ತಮ ಅಂಕ ಗಳಿಸಬೇಕೆಂಬ ಹುಮ್ಮಸು ಮೂಡುತ್ತದೆ. ಬಳಿಕ ಅವರೇ ಓದಲು ಅರಂಭಿಸುತ್ತಾರೆ.
ಪರೀಕ್ಷೆ ಹಾಲ್‌ನಲ್ಲಿ...
ಪ್ರಶ್ನೆ ಪತ್ರಿಕೆ ಅರ್ಥ ಮಾಡಿಕೊಳ್ಳಿ: ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ತಕ್ಷಣ ಪ್ರತಿ ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳಿ. ಇದಕ್ಕಾಗಿ ನಿಗದಿಪಡಿಸಿದ 15 ನಿಮಿಷವನ್ನು ಸದುಪಯೋಗಪಡಿಸಿಕೊಳ್ಳಿ. ಉತ್ತರ ಬರೆಯುವ ಮೊದಲು ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗಿದೆ, ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂದು ಪ್ಲಾನ್ ಮಾಡಿಕೊಳ್ಳಿ.
ಪ್ರಶ್ನೆಗಳನ್ನು ವಿಂಗಡಿಸಿ: ಪ್ರಶ್ನೆಗಳನ್ನು ಸುಲಭವಾಗಿ ಉತ್ತರಿಸಬಹುದಾದ ಮತ್ತು ಕಠಿಣ ಎಂಬ 2 ವಿಭಾಗವನ್ನಾಗಿ ವಿಂಗಡಿಸಿ. ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರ ನೀಡಿ, ನಂತರ ಕಠಿಣ ಪ್ರಶ್ನೆಗಳಿಗೆ ಅಲೋಚಿಸಿ ಉತ್ತರ ಬರೆಯಿರಿ. ಅಂಕ ನೋಡಿಕೊಂಡು ಉತ್ತರ ಬರೆಯಿರಿ. ಕಡಿಮೆ ಅಂಕಕ್ಕೆ ಗೊತ್ತಿದೆ ಎನ್ನುವ ಕಾರಣಕ್ಕೆ ದೀರ್ಘ ಉತ್ತರ ಬೇಡ.
ಸಮಯದ ಮೇಲೆ ಕಣ್ಣಿಡಿ: ಕೆಲವು ಬಾರಿ ಪರೀಕ್ಷೆ ಹಾಲ್‌ನಲ್ಲಿ ಉತ್ತರ ಬರೆಯುವ ವೇಳೆ ಸಮಯದ ಅರಿವೇ ಇರುವುದಿಲ್ಲ. ಕಠಿಣ ಪ್ರಶ್ನೆಗೆ ಉತ್ತರ ಬರೆಯವ ಧಾವಂತದಲ್ಲಿ ಸಮಯವನ್ನು ಗಮನಿಸುವುದಿಲ್ಲ. ಈ ತಪ್ಪುಗಳನ್ನು ಮಾಡದಿರಿ. ಆಗಾಗ ಸಮಯವನ್ನು ಗಮನಿಸಿಕೊಳ್ಳುವುದರಿಂದ ಕೊನೆಯ ಕ್ಷಣದಲ್ಲಿ ನಿಮ್ಮ ಮೇಲೆ ಒತ್ತಡ ಬೀಳುವುದಿಲ್ಲ. ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡುವ ಹಾಗೆ ಸಮಯ ಹೊಂದಾಣಿಕೆ ಮಾಡಿ. ಗೊತ್ತಿಲ್ಲದೆ ಪ್ರಶ್ನೆಗೆ ಚಿಂತಿಸುತ್ತ ಸಮಯ ವ್ಯರ್ಥ ಮಾಡಬೇಡಿ.
ಉತ್ತರವನ್ನು ಒಮ್ಮೆ ಪುನರ್ ಪರಿಶೀಲಿಸಿ: ನಿಗದಿತ ಸಮಯಕ್ಕಿಂತ ಮೊದಲೇ ಪರೀಕ್ಷೆ ಬರೆದು ಮುಗಿಸಿ. ಬಳಿಕ ಬರೆದ ಉತ್ತರವನ್ನು ಕೂಲಂಕುಷವಾಗಿ ಪರಿಶೀಲಿಸಿ. ಕಾಗುಣಿತ ತಪ್ಪಿದ್ದರೆ ಈ ವೇಳೆ ಸರಿಪಡಿಸಬಹುದು. ಎಲ್ಲ ಉತ್ತರಗಳಿಗೆ ಪ್ರಶ್ನೆ ಸಂಖ್ಯೆ ಸರಿಯಾಗಿ ಹಾಕಲಾಗಿದೆಯೇ, ರಿಜಿಸ್ಟರ್ ನಂಬರ್ ಬರೆಯಲಾಗಿದೆಯೇ ಎಂದು ಪರಿಶೀಲಿಸಿ.