ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: ರಮ್ಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಪದ್ಮಾವತಿ ಸಜ್ಜು

ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ಗೆ ಕಂನ್ಯಾಕ್‌ ಮಾಡಲು ವೇದಿಕೆ ಸಿದ್ಧವಾಗಿದೆ. ಹೌದು ಅವರು ಶೀಘ್ರದಲ್ಲೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಯೋಗರಾಜ್‌ ಭಟ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದು, ಯುಗಾದಿ ವೇಳೆಗೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಮ್ಯಾ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್; ಯುಗಾದಿಗೆ ಹೊಸ ಚಿತ್ರ ಅನೌನ್ಸ್‌

Profile Ramesh B Mar 6, 2025 9:30 PM

ಬೆಂಗಳೂರು: ಸ್ಯಾಂಡಲ್‌ವುಡ್‌ ಪ್ರೇಕ್ಷಕರು ಮತ್ತು ರಮ್ಯಾ (Actress Ramya) ಅಭಿಮಾನಿಗಳ ಬಹು ದಿನಗಳ ಕನಸು ನನಸಾಗುವ ದಿನ ಬಂದೇ ಬಿಟ್ಟಿದೆ. ಮತ್ತೆ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಬೇಡಿಕೆಗೆ ಮೋಹಕ ತಾರೆ ಕೊನೆಗೂ ಅಸ್ತು ಎಂದಿದ್ದಾರೆ. ಹೌದು, ರಮ್ಯಾ ಶೀಘ್ರಲ್ಲೇ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡಲಿದ್ದಾರೆ. ದಶಕಗಳ ಕಾಲ ಸ್ಯಾಂಡಲ್‌ವುಡ್‌ ಆಳಿದ್ದ ರಮ್ಯಾ ಬಳಿಕ ರಾಜಕೀಯಕ್ಕೆ ತೆರಳಿ ಅಲ್ಲಿಂದಲೂ ನೇಪಥ್ಯಕ್ಕೆ ಸರಿದಿದ್ದರು. ಇಷ್ಟಾದರೂ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. 2023ರಲ್ಲಿ ಆ್ಯಪಲ್‌ಬಾಕ್ಸ್ ಪ್ರೊಡಕ್ಷನ್‌ ಹೌಸ್‌ ಮೂಲಕ ಚಿತ್ರ ನಿರ್ಮಾಣಕ್ಕೆ ಇಳಿದಿದ್ದ ಅವರು ಇದೀಗ ನಾಯಕಿಯಾಗಿ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಯುಗಾದಿ ಹಬ್ಬದ ವೇಳೆಗೆ ಚಿತ್ರ ಅಧಿಕೃತವಾಗಿ ಘೋಷಣೆಯಾಗಲಿದೆ.

ಯೋಗರಾಜ್‌ ಭಟ್‌ ನಿರ್ದೇಶನ

ʼಮುಂಗಾರು ಮಳೆʼ, ʼಗಾಳಿಪಟʼ ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದ ಯೋಗರಾಜ್‌ ಭಟ್‌ ಅವರು ರಮ್ಯಾ ಕಂಬ್ಯಾಕ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಸ್ಯಾಂಡಲ್‌ವುಡ್‌ನ ಇಬ್ಬರು ದಿಗ್ಗಜರು ಒಂದಾಗುತ್ತಿರುವುದರಿಂದ ಘೋಷಣೆಗೆ ಮುನ್ನವೇ ಈ ಸಿನಿಮಾ ನಿರೀಕ್ಷೆ ಹುಟ್ಟು ಹಾಕಿದೆ. ʼಮುಂಗಾರು ಮಳೆʼ ಚಿತ್ರ ನಿರ್ಮಿಸಿದ್ದ ಇ.ಕೃಷ್ಣ ಅವರ ಎ.ಕೆ.ಎಂಟರ್‌ಟೈನ್‌ಮೆಂಟ್‌ ಮತ್ತು ರಮ್ಯಾ ಅವರ ಆ್ಯಪಲ್‌ಬಾಕ್ಸ್ ಪ್ರೊಡಕ್ಷನ್‌ ಹೌಸ್‌ ಮೂಲಕ ಈ ಚಿತ್ರ ತಯಾರಾಗಲಿದೆ.

ಎ.ಕೆ.ಎಂಟರ್‌ಟೈನ್‌ಮೆಂಟ್‌ ನಿರ್ಮಾಣದಲ್ಲಿ ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿಬಂದಿರುವ ʼಮನದ ಕಡಲುʼ ಸಿನಿಮಾ ಮಾ. 28ರಂದು ತೆರೆಕಾಣಲಿದೆ. ಅದಾದ ಬಳಿಕ ಯುಗಾದಿ ಹಬ್ಬದ ವೇಳೆ ರಮ್ಯಾ-ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ಚಿತ್ರ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Mookuthi Amman 2: ತಮಿಳಿಗೆ ಕಾಲಿಟ್ಟ ದುನಿಯಾ ವಿಜಯ್‌; ನಯನತಾರಾ ಚಿತ್ರದಲ್ಲಿ ಮುಖ್ಯ ಪಾತ್ರ

2ನೇ ಬಾರಿ ಒಂದಾಗುತ್ತಿರುವ ರಮ್ಯಾ-ಭಟ್‌

ಹಾಗೇ ನೋಡಿದರೆ ಯೋಗರಾಜ್‌ ಭಟ್‌ ಮತ್ತು ರಮ್ಯಾ ಈ ಹಿಂದೆ ಜತೆಯಾಗಿ ಕೆಲಸ ಮಾಡಿದ್ದಾರೆ. 2004ರಲ್ಲಿ ತೆರೆಕಂಡ, ಯೋಗರಾಜ್‌ ಭಟ್‌ ನಿರ್ದೇಶನದ ʼರಂಗ ಎಸ್‌.ಎಸ್‌.ಎಸ್‌.ಸಿ.ʼ ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ರಮ್ಯಾ ನಟಿಸಿದ್ದರು. ಇವರಿಬ್ಬರ ಜೋಡಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಈ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಮೊದಲ ಚಿತ್ರದಲ್ಲೇ ಗಮನ ಸೆಳೆದ ಸುದೀಪ್‌-ರಮ್ಯಾ ಆ ಬಳಿಕ ಹಲವು ಚಿತ್ರಗಳಲ್ಲಿ ಜತೆಯಾಗಿ ಅಭಿನಯಿಸಿ ಸ್ಯಾಂಡಲ್‌ವುಡ್‌ನ ಹಿಟ್‌ ಜೋಡಿ ಎನಿಸಿಕೊಂಡಿದೆ. ಹೊಸ ಚಿತ್ರದಲ್ಲಿ ರಮ್ಯಾಗೆ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲವೂ ಮೂಡಿದೆ.

2016ರಲ್ಲಿ ಬಿಡುಗಡೆಯಾದ ʼನಾಗರಹಾವುʼ ಚಿತ್ರವೇ ಕೊನೆ. ಅದಾದ ಬಳಿಕ ರಮ್ಯಾ ನಾಯಕಿಯಾಗಿ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. 2023ರಲ್ಲಿ ರಿಲೀಸ್‌ ಆದ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಚಿತ್ರದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2023ರಲ್ಲಿ ತೆರೆಕಂಡ ರಾಜ್‌ ಬಿ.ಶೆಟ್ಟಿ ಅವರ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಅದಾದ ಬಳಿಕ ನಿರ್ಮಾಣದ ಜವಾಬ್ದಾರಿ ಮಾತ್ರ ತೆಗೆದುಕೊಂಡ ಅವರು ಸಿರಿ ರವಿಕುಮಾರ್‌ಗೆ ನಾಯಕಿ ಪಟ್ಟ ಕಟ್ಟಿದ್ದರು. ಕಳೆದ ವರ್ಷ ಸೆಟ್ಟೇರಿದ ʼಉತ್ತರಕಾಂಡʼ ಸಿನಿಮಾವನ್ನು ಆರಂಭದಲ್ಲಿ ಒಪ್ಪಿಕೊಂಡಿದ್ದರೂ ಬಳಿಕ ರಮ್ಯಾ ಅದರಿಂದ ಹೊರ ಬಂದಿದ್ದರು. ಹೀಗಾಗಿ ಹೊಸ ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ಜತೆ ಕಿರಿಕ್‌

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ಜತೆಗಿನ ಕಿರಿಕ್ ಬಗ್ಗೆ ಗುರುವಾರ ಮಾತನಾಡಿದ ರಮ್ಯಾ, ʼ‘ಒಪ್ಪಂದದ ಪ್ರಕಾರ ಅವರು ನಡೆದುಕೊಂಡಿಲ್ಲ. ಈ ರೀತಿ ಯಾರಿಗೂ ಆಗಬಾರದು. ನನಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಸ್ಟಾರ್​ ಆಗಿ ನಾನು ಹೊಸಬರ ಜತೆ ಹಣ ತೆಗೆದುಕೊಳ್ಳದೇ ಸಿನಿಮಾ ಮಾಡಿದ್ದೇನೆ. ಆದರೆ ಅವರು ಹೇಳಿದ್ದೇ ಬೇರೆ, ಮಾಡಿದ್ದೇ ಬೇರೆ. ಅದರಿಂದ ನನಗೆ ತುಂಬಾ ನಿರಾಸೆ ಆಗಿದೆʼʼ ಎಂದಿದ್ದಾರೆ. ರಮ್ಯಾ ಚಿತ್ರತಂಡದ ವಿರುದ್ದ ಕೋರ್ಟ್‌ ಮಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.