IPL 2025: ಬದಲಿ ಆಟಗಾರರ ಸೇರ್ಪಡೆ ನಿಯಮದಲ್ಲಿ ಪರಿಷ್ಕರಣೆ ತಂದ ಬಿಸಿಸಿಐ
ಬದಲಿ ಆಟಗಾರ ಟೂರ್ನಿಯ ನಡುವೆ ಸೇರ್ಪಡೆಗೊಂಡರೂ, ಆತನನ್ನು ಶೇ. 100 ಲಭ್ಯತೆ ಎಂದೇ ಪರಿಗಣಿಸಿ, ಹರಾಜಿಗೆ ನೋಂದಾಯಿಸಿದ್ದ ಮೂಲಬೆಲೆಯನ್ನೇ ಆತನಿಗೆ ಸಂಭಾವನೆಯಾಗಿ ನೀಡಬೇಕು ಎಂದೂ ತಿಳಿಸಲಾಗಿದೆ. ಈ ಸಲ ಬದಲಿ ಆಟಗಾರನನ್ನಾಗಿ ಸೇರಿಸಿಕೊಂಡ ಆಟಗಾರನನ್ನು 2026 ಮತ್ತು 2027ರ ಆವೃತ್ತಿಗೂ ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.


ಮುಂಬಯಿ: ಐಪಿಎಲ್ 18ನೇ ಆವೃತ್ತಿಯ(IPL 2025) ಪಂದ್ಯಾವಳಿಗಳು ಆರಂಭವಾಗಲು ನಾಲ್ಕು ದಿನ ಬಾಕಿ ಇರುವಾಗಲೇ ಗಾಯ ಮತ್ತಿತರ ಕಾರಣಗಳಿಂದಾಗಿ ಅಲಭ್ಯರಾಗುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ(replacement rules in IPL 2025) ನಿಯಮಾವಳಿಯಲ್ಲಿ ಬಿಸಿಸಿಐ ಕೆಲ ಪ್ರಮುಖ ಪರಿಷ್ಕರಣೆಗಳನ್ನು ಮಾಡಿದೆ. ಹೊಸ ನಿಯದ ಪ್ರಕಾರ ತಂಡಗಳು ಇನ್ನು ಯಾರನ್ನು ಬೇಕಾದರೂ ಬದಲಿ ಆಟಗಾರನಾಗಿ ತಂಡ ಸೇರ್ಪಡೆಗೊಳಿಸುವಂತಿಲ್ಲ. ಗಾಯ ಅಥವಾ ಬೇರಾವುದೇ ಕಾರಣದಿಂದ ಟೂರ್ನಿಯಿಂದ ಹೊರಬಿದ್ದ ಆಟಗಾರ ಪಡೆಯುವ ಸಂಭಾವನೆಗಿಂತ ಅಧಿಕ ಮೊತ್ತಕ್ಕೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುವಂತಿಲ್ಲ ಎಂದೂ ಬಿಸಿಸಿಐ ಈ ಬಾರಿ ನಿಯಮ ಪರಿಷ್ಕರಣೆ ಮಾಡಿದೆ.
ಐಪಿಎಲ್‌ನಲ್ಲಿ ಈ ಮುನ್ನ ಟೂರ್ನಿ ಆರಂಭಗೊಂಡ ನಂತರ ಪ್ರತಿ ತಂಡ ಆರಂಭಿಕ 7 ಲೀಗ್ ಪಂದ್ಯಗಳನ್ನು ಆಡುವವರೆಗೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿತ್ತು. ಅದನ್ನು ಈ ಬಾರಿ 12ನೇ ಲೀಗ್ ಪಂದ್ಯದವರೆಗೂ ವಿಸ್ತರಿಸಲಾಗಿದೆ. ಇದರಿಂದ ಆಟಗಾರನೊಬ್ಬ 12ನೇ ಲೀಗ್ ಪಂದ್ಯದ ವೇಳೆ ಗಾಯಗೊಂಡರೂ ಆತನ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಲಭಿಸಲಿದೆ.
ಹೊಸ ನಿಯಮ ಏನು ಹೇಳುತ್ತೆ?
ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿರುವ ಆಟಗಾರರನ್ನು ಮಾತ್ರ ಬದಲಿ ಆಟಗಾರರನ್ನಾಗಿ ತಂಡಗಳು ಸೇರ್ಪಡೆಗೊಳಿಸಲು ಅವಕಾಶವಿದೆ. ಈ ನಿಯಮದಿಂದ ಅನ್‌ಸೋಲ್ಡ್ ಆದ ಆಟಗಾರರಿಗೆ ಮತ್ತೊಂದು ಅವಕಾಶ ಸಿಗಲಿದೆ. ಹರಾಜಿನಲ್ಲಿ ಸೇಲಾಗದ ಆಟಗಾರ ನಂತರ ಐಪಿಎಲ್ ವೇಳೆ ನೆಟ್ ಬೌಲರ್ ಆಗಿದ್ದರೆ, ಆತನನ್ನು ಬದಲಿ ಆಟಗಾರನನ್ನಾಗಿ ಸೇರಿಸಿಕೊಳ್ಳುವಾಗ, ಆತನನ್ನು ನೆಟ್ ಬೌಲರ್ ಆಗಿ ಬಳಸಿಕೊಳ್ಳುತ್ತಿರುವ ತಂಡ ಆಕ್ಷೇಪವೆತ್ತಲು ಅಥವಾ ಆತನನ್ನು ಬಿಟ್ಟುಕೊಡಲು ನಿರಾಕರಿಸುವಂತಿಲ್ಲ ಎಂದೂ ಹೊಸ ನಿಯಮಾವಳಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ IPL 2025: ʻರಜತ್ ಪಾಟಿದಾರ್‌ಗೆ ಬೆಂಬಲ ನೀಡಿʼ-ಆರ್‌ಸಿಬಿ ಫ್ಯಾನ್ಸ್‌ಗೆ ವಿರಾಟ್ ಕೊಹ್ಲಿ ಮನವಿ!
ಬದಲಿ ಆಟಗಾರ ಹರಾಜಿಗೆ ನೋಂದಾಯಿಸಿದ್ದ ಮೂಲಬೆಲೆಯನ್ನೇ ಆತನಿಗೆ ಸಂಭಾವನೆಯಾಗಿ ನೀಡಬೇಕು ಎಂದೂ ತಿಳಿಸಲಾಗಿದೆ. ಈ ಸಲ ಬದಲಿ ಆಟಗಾರನನ್ನಾಗಿ ಸೇರಿಸಿಕೊಂಡ ಆಟಗಾರನನ್ನು 2026 ಮತ್ತು 2027ರ ಆವೃತ್ತಿಗೂ ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಆಗ ತಂಡವೊಂದರ ಗರಿಷ್ಠ ಆಟಗಾರರ ಸಂಖ್ಯೆ 25ರೊಳಗೆ ಇರಲೇಬೇಕಾಗುತ್ತದೆ. ಬದಲಿ ಆಟಗಾನನ್ನು 26ನೇ ಆಟಗಾರನನ್ನಾಗಿ ಉಳಿಸಿಕೊಳ್ಳಲು ಅವಕಾಶವಿರುವುದಿಲ್ಲ.
ಬದಲಿ ಆಟಗಾರನ ಸೇರ್ಪಡೆ ಸುಲಭವಲ್ಲ
ಆಟಗಾರನೊಬ್ಬ ಗಾಯಗೊಂಡು ಆತ ಪ್ಲೇ ಆಫ್ ಸಹಿತ ಟೂರ್ನಿಯ ಉಳಿದ ಎಲ್ಲ ಪಂದ್ಯಗಳಿಗೆ ಲಭ್ಯನಾಗುವುದಿಲ್ಲ ಎಂದು ಬಿಸಿಸಿಐ ನಾಮನಿರ್ದೇಶಿತ ವೈದ್ಯರು ಖಚಿತಪಡಿಸಿದರೆ ಮಾತ್ರ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.