ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

RCBW vs MIW: ಮುಂಬೈ ಎದುರು ಕೊನೆಯವರೆಗೂ ಹೋರಾಡಿ ಸೋತ ಆರ್‌ಸಿಬಿ!

RCBW vs MIW: 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಸೋಲು ಅನುಭವಿಸಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಕಂಡಿದ್ದ ಆರ್‌ಸಿಬಿ ವನಿತೆಯರು, ಶುಕ್ರವಾರ ತವರು ಅಂಗಣದಲ್ಲಿ ಮುಂಬೈ ಎದುರು ಕೊನೆಯ ಓವರ್‌ವರೆಗೂ ಹೋರಾಟ ನಡೆಸಿ 4 ವಿಕೆಟ್‌ ಸೋಲು ಅನುಭವಿಸಿದೆ.

WPL 2025: ಕೊನೆಯ ಓವರ್‌ವರೆಗೂ ಹೋರಾಡಿ ಸೋತ ಆರ್‌ಸಿಬಿ ವನಿತೆಯರು!

ಮುಂಬೈ ಇಂಡಿಯನ್ಸ್‌ ಎದುರು ಆರ್‌ಸಿಬಿ ವನಿತೆಯರು 4 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದಾರೆ.

Profile Ramesh Kote Feb 21, 2025 11:12 PM

ಬೆಂಗಳೂರು: ಆರಂಭಿಕ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, ತನ್ನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (MI) ಎದುರು 4 ವಿಕೆಟ್‌ಗಳಿಂದ ಸೋಲು ಅನುಭವಿಸಿದೆ. ಆ ಮೂಲಕ ಹ್ಯಾಟ್ರಿಕ್‌ ಗೆಲುವಿನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲವಾಯಿತು.

ಶುಕ್ರವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನೀಡಿದ್ದ 168 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್‌ ತಂಡದ ಗೆಲುವಿನ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ನ್ಯಾಟ್‌ ಸೀವರ್‌ ಬ್ರಂಟ್‌ (42 ರನ್‌) ಹಾಗೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (50 ರನ್‌) ಅವರ ಬ್ಯಾಟಿಂಗ್‌ ಬಲದ ಹೊರತಾಗಿಯೂ ಆರ್‌ಸಿಬಿ ಬೌಲರ್‌ಗಳು ಮುಂಬೈ ತಂಡವನ್ನು ಸುಲಭವಾಗಿ ಗೆಲ್ಲಲು ಬಿಡಲಿಲ್ಲ.

WPL 2025: ನ್ಯಾಟ್‌ ಸಿವರ್‌ ಬ್ರಂಟ್‌ ಆಲ್‌ರೌಂಡ್‌ ಆಟದ ಬಲದಿಂದ ಗೆದ್ದ ಮುಂಬೈ ಇಂಡಿಯನ್ಸ್‌!

ಹರ್ಮನ್‌ಪ್ರೀತ್‌ ಕೌರ್‌ ತಂಡವನ್ನು ಗೆಲುವಿನ ಸನಿಹ ಬಂದು ವಿಕೆಟ್‌ ಒಪ್ಪಿಸಿದ್ದರು. ಕೊನೆಯ ಎರಡು ಓವರ್‌ಗಳಲ್ಲಿ ಮುಂಬೈಗೆ 22 ರನ್‌ಗಳ ಅಗತ್ಯವಿತ್ತು. ಆದರೆ, 19ನೇ ಓವರ್‌ ಮೊದಲನೇ ಹಾಗೂ ಕೊನೆಯ ಎಸೆತದಲ್ಲಿ ಅಮನ್‌ಜೋತ್‌ ಕೌರ್‌ ಎರಡು ಸಿಕ್ಸರ್‌ ಬಾರಿಸಿ ಪಂದ್ಯದ ದಿಕ್ಕನ್ನು ಬದಲಿಸಿದರು. ಆ ಮೂಲಕ ಮುಂಬೈ 19ನೇ ಓವರ್‌ನಲ್ಲಿ 16 ರನ್‌ಗಳನ್ನುಕಲೆ ಹಾಕಿತು. ಕೊನೆಯಲ್ಲಿ 6 ರನ್‌ ಅಗತ್ಯವಿದ್ದಾಗ ಕಮಲಿನಿ ಬೌಂಡರಿ ಸಹಿತ 7 ರನ್‌ ಗಳಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್‌ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ 6 ವಿಕೆಟ್‌ ನಷ್ಟಕ್ಕೆ 170 ರನ್‌ ಕಲೆ ಹಾಕಿ ಗೆಲುವಿನ ದಡ ಸೇರಿತು.



ಸೀವರ್‌ ಬ್ರಂಟ್‌ 42 ರನ್‌ ಹಾಗೂ ಹರ್ಮನ್‌ಪ್ರೀತ್‌ ಕೌರ್‌ 50 ರನ್‌ ಗಳಿಸಿದ ಹೊರತಾಗಿಯೂ ಕೊನೆಯ ಹಂತದ ಒತ್ತಡದಲ್ಲಿ ಬ್ಯಾಟ್‌ ಮಾಡಿ, 27 ಎಸೆತಗಳಲ್ಲಿ 34 ರನ್‌ಗಳು ಹಾಗೂ ಬೌಲಿಂಗ್‌ನಲ್ಲಿ ನಿರ್ಣಾಯಕ 3 ವಿಕೆಟ್‌ ಕಿತ್ತು ಮುಂಬೈ ತಂಡವನ್ನು ಗೆಲ್ಲಿಸಿದ ಅಮನ್‌ಜೋತ್‌ ಕೌರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



167 ರನ್‌ ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ಮೂಡಿಬರಲಿಲ್ಲ. ಎಲಿಸ್‌ ಪೆರಿ (81) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಆಟಗಾರ್ತಿಯಿಂದ ದೊಡ್ಡ ಮೊತ್ತ ಮೂಡಿ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ, 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 7 ವಿಕೆಟ್‌ ನಷ್ಟಕ್ಕೆ 167 ರನ್‌ಗಳನ್ನು ಕಲೆ ಹಾಕಿತು. ಇದರೊಂದಿಗೆ ಎದುರಾಳಿ ಮುಂಬೈ ಇಂಡಿಯನ್ಸ್‌ಗೆ 168 ರನ್‌ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.



ಎಲಿಸ್‌ ಪೆರಿ ಸ್ಪೋಟಕ ಬ್ಯಾಟಿಂಗ್‌

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ್ದ ನಾಯಕಿ ಸ್ಮೃತಿ ಮಂಧಾನಾ, 13 ಎಸೆತಗಳಲ್ಲಿ 26 ರನ್‌ ಹಾಗೂ ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್‌ 28 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಎಲಿಸ್‌ ಪೆರಿ ಸ್ಪೋಟಕ ಬ್ಯಾಟ್‌ ಮಾಡಿದರು. ಒಂದು ತುದಿಯಲ್ಲಿ ನಿರಂತರವಾಗಿ ವಿಕೆಟ್‌ ಉರುಳಿದರೂ ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಎಲಿಸ್‌ ಪೆರಿ, 43 ಎಸೆತಗಳಲ್ಲಿ 81 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಆರ್‌ಸಿಬಿ 160ರ ಗಡಿ ದಾಟಲು ಸಾಧ್ಯವಾಗಿತ್ತು.

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 167-7 (ಎಲಿಸ್‌ ಪೆರಿ 81, ರಿಚಾ ಘೋಷ್‌ 28, ಸ್ಮೃತಿ ಮಂಧಾನಾ 26; ಅಮನ್‌ಜೋತ್‌ ಕೌರ್‌ 22 ಕ್ಕೆ 3)

ಮುಂಬೈ ಇಂಡಿಯನ್ಸ್‌: 19.5 ಓವರ್‌ಗಳಲ್ಲಿ 170-6 (ಹರ್ಮನ್‌ಪ್ರೀತ್‌ ಕೌರ್‌ 50, ನ್ಯಾಟ್‌ ಸೀವರ್‌ ಬ್ರಂಟ್‌ 42, ಅಮನ್‌ಜೋತ್‌ ಕೌರ್‌ 34*; (ಜಾರ್ಜಿಯಾ ವೇರ್‌ಹ್ಯಾಮ್ 21 ಕ್ಕೆ 3, ಕಿಮ್‌ ಗರ್ಥ್‌ 30 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಅಮನ್‌ಜೋತ್‌ ಕೌರ್‌