Self Harming: ಕೇಂದ್ರ ಅಬಕಾರಿ ಅಧಿಕಾರಿ ಕುಟುಂಬ ಆತ್ಮಹತ್ಯೆ; ಸಾವಿಗೆ ಕಾರಣವಾಯ್ತಾ ಆ ಪ್ರಕರಣ?
ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿಯ ಹೆಚ್ಚುವರಿ ಆಯುಕ್ತ ಮನೀಶ್ ವಿಜಯ್, ಅವರ ತಾಯಿ ಮತ್ತು ಸಹೋದರಿ ಕೇರಳದ ಕೊಚ್ಚಿಯ ಕಾಕನಾಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮನೀಶ್ ವಿಜಯ್ ಮತ್ತು ಕುಟುಂಬ.

ತಿರುವನಂತಪುರಂ: ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿಯ ಹೆಚ್ಚುವರಿ ಆಯುಕ್ತ ಮನೀಶ್ ವಿಜಯ್ (Manish Vijay), ಅವರ ತಾಯಿ ಮತ್ತು ಸಹೋದರಿ ಕೇರಳದ ಕೊಚ್ಚಿಯ ಕಾಕನಾಡ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ (Self Harming). 4 ದಿನಗಳ ರಜೆಯ ನಂತರ ಕೆಲಸಕ್ಕೆ ಮರಳದ ಕಾರಣ ಮನೀಶ್ ವಿಜಯ್ ಅವರ ಸಹೋದ್ಯೋಗಿಗಳು ಮನೆಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಹೋದ್ಯೋಗಿಗಳು ಮನೀಶ್ ವಿಜಯ್ ಮನೆಯನ್ನು ತಲುಪಿದಾಗ ದಟ್ಟ ವಾಸನೆ ಹರಿಡಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಮನೀಶ್ ಮತ್ತು ಅವರ ಸಹೋದರಿ ಶಾಲಿನಿ ಅವರ ಮೃತದೇಹ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ತಾಯಿ ಶಕುಂತಲಾ ಹಾಸಿಗೆಯ ಮೇಲೆ ಶವವಾಗಿ ಕಂಡು ಬಂದಿದ್ದಾರೆ. ಶಕುಂತಲಾ ಅವರ ದೇಹಕ್ಕೆ ಬಿಳಿ ಬಟ್ಟೆಯಲ್ಲಿ ಹೊದಿಸಿ, ಹೂವುಗಳನ್ನು ಪಕ್ಕದಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಹುಶಃ ಮೊದಲು ಇವರು ಮೃತಪಟ್ಟಿರಬೇಕು. ನಂತರ ಒಡಹುಟ್ಟಿದವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಮೂಡಿದೆ.
ಶವಗಳು ಕೊಳೆಯಲು ಪ್ರಾರಂಭಿಸಿವೆ ಎಂದು ಕೊಚ್ಚಿ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಎನ್‌ಡಿಟಿವಿಗೆ ತಿಳಿಸಿದ್ದಾರೆ. "ವಿಧಿ ವಿಜ್ಞಾನ ಪರೀಕ್ಷೆಯ ನಂತರವೇ ಇವರು ಯಾವಾಗ ನಿಧನರಾದರು ಎನ್ನುವುದನ್ನು ತಿಳಿಸಲು ಸಾಧ್ಯವಾಗುತ್ತದೆʼʼ ಎಂದು ಮಾಹಿತಿ ನೀಡಿದ್ದಾರೆ.
ಡೈರಿ ಪತ್ತೆ
ಪೊಲೀಸರು ಕೋಣೆಯೊಂದರಲ್ಲಿದ್ದ ಡೈರಿಯನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅವರ ಸಹೋದರ, ವಿದೇಶದಲ್ಲಿ ವಾಸಿಸುವ ಸಹೋದರಿಗೆ ಸಾವಿನ ಬಗ್ಗೆ ತಿಳಿಸಬೇಕು ಎಂದು ಬರೆಯಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಜಾರ್ಖಂಡ್ ಮೂಲದ ಕುಟುಂಬ
ಜಾರ್ಖಂಡ್ ಮೂಲದ ಈ ಕುಟುಂಬ ಎರ್ನಾಕುಲಂ ಜಿಲ್ಲೆಯ ಕಾಕನಾಡ್ ಕಸ್ಟಮ್ಸ್ ಕ್ವಾರ್ಟರ್ಸ್‌ನಲ್ಲಿ ವಾಸವಾಗಿತ್ತು. ಒಂದೂವರೆ ವರ್ಷದ ಹಿಂದೆ ಕೊಚ್ಚಿಗೆ ವರ್ಗಾವಣೆಯಾಗುವ ಮುನ್ನ ಮನೀಶ್ ಕೋಝಿಕೋಡ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ನಲ್ಲಿ ಕೆಲಸ ಮಾಡಿದ್ದರು. ಅವರ ತಾಯಿ ಮತ್ತು ಸಹೋದರಿ ಕೆಲವು ತಿಂಗಳ ಹಿಂದಿನಿಂದ ಅವರೊಂದಿಗೆ ವಾಸಿಸಲು ಆರಂಭಿಸಿದ್ದರು. ಪೊಲೀಸರ ಪ್ರಕಾರ ಶಾಲಿನಿ ಜಾರ್ಖಂಡ್‌ನಲ್ಲಿ ಕಾನೂನು ಪ್ರಕರಣವನ್ನು ಎದುರಿಸುತ್ತಿದ್ದರು. ಇದಕ್ಕಾಗಿ ಮನೀಶ್ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡಿದ್ದರು.
ಈ ಸುದ್ದಿಯನ್ನೂ ಓದಿ: Assault Case: ರಾಜ್ಯದಲ್ಲಿ ರಾಕ್ಷಸೀ ಕೃತ್ಯ; ಮಹಿಳೆಯನ್ನು ಕಿಡ್ನ್ಯಾಪ್ ಮಾಡಿ, ಕಣ್ಣು ಗುಡ್ಡೆ ಕಿತ್ತು ಚಿತ್ರಹಿಂಸೆ!
ತನಿಖೆ ಎದುರಿಸುತ್ತಿರುವ ಶಾಲಿನಿ
ಶಾಲಿನಿ 2006ರ ಜಾರ್ಖಂಡ್ ಲೋಕಸೇವಾ ಆಯೋಗ (JPSC) ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದರು. ಅದಾದ ಬಳಿಕ ಅವರನ್ನು ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಿಸಲಾಯಿತು. ಆದಾಗ್ಯೂ ನಂತರ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಯಿತು. 2024ರಲ್ಲಿ ಈ ಪ್ರಕರಣ ಕೈಗೆತ್ತಿಕೊಂಡಿರುವ ಸಿಬಿಐ ನಡೆಸುತ್ತಿದೆ.
ಅವರ ಸಹೋದರಿ ವಿದೇಶದಿಂದ ಬಂದ ನಂತರ ಶವಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಾದ ಬಳಿಕವೇ ಸಾವಿನ ನಿಖರ ಕಾರಣ ತಿಳಿದು ಬರಲಿದೆ.