ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

HKU5-CoV-2 Virus: ಚೀನಾದ ವುಹಾನ್‌ನಲ್ಲಿ ಮತ್ತೊಂದು ಕೊರೊನಾ ವೈರಸ್‌ ಪತ್ತೆ

ಚೀನಾದ ವುಹಾನ್‌ನಲ್ಲಿ ಮತ್ತೊಂದು ಕೊರೊನಾ ವೈರಸ್‌ ಪತ್ತೆಯಾಗಿದೆ. ಬಾವಲಿಯಿಂದ ಮನುಷ್ಯನಿಗೆ ಹರಡಬಲ್ಲ ಹೊಸ ಕೊರೊನಾ ವೈರಸ್‌ಗೆ ವಿಜ್ಞಾನಿಗಳು HKU5-CoV-2 ಎಂದು ಹೆಸರಿಟ್ಟಿದ್ದಾರೆ. ಸದ್ಯ ಇದು ಮಾನವರಲ್ಲಿ ಪತ್ತೆಯಾಗಿಲ್ಲ. 2019-20ರಲ್ಲಿ ಚೀನಾದ ವುಹಾನ್ ಲ್ಯಾಬ್‌ನಿಂದ ಕೋವಿಡ್ 19 ವೈರಸ್ ಸ್ಫೋಟಗೊಂಡಿತ್ತು.

ಚೀನಾದಲ್ಲಿ ಮತ್ತೊಂದು ಕೊರೊನಾ ವೈರಸ್‌ ಪತ್ತೆ; ಬೆಚ್ಚಿಬಿದ್ದ ಜಗತ್ತು

ಸಾಂದರ್ಭಿಕ ಚಿತ್ರ.

Profile Ramesh B Feb 22, 2025 1:41 PM

ಬೀಜಿಂಗ್‌: 2020ರಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌ -19 ಕೊರೊನಾ ವೈರಸ್‌ ಹಾವಳಿಯನ್ನು ಜನರು ಇನ್ನು ಮರೆತಿಲ್ಲ. ಈ ಮಧ್ಯೆ ಚೀನಾದ ವುಹಾನ್‌ (Wuhan)ನಲ್ಲಿ ಮತ್ತೊಂದು ಕೊರೊನಾ ವೈರಸ್‌ ಪತ್ತೆಯಾಗಿದ್ದು, ಹಲವರ ನಿದ್ದೆಗೆಡಿಸಿದೆ. ಬಾವಲಿಯಿಂದ ಮನುಷ್ಯನಿಗೆ ಹರಡಬಲ್ಲ ಹೊಸ ಕೊರೊನಾ ವೈರಸ್‌ಗೆ ವಿಜ್ಞಾನಿಗಳು HKU5-CoV-2 ಎಂದು ಹೆಸರಿಟ್ಟಿದ್ದಾರೆ. ಸದ್ಯ ಈ ವೈರಸ್‌ ಮಾನವರಲ್ಲಿ ಪತ್ತೆಯಾಗಿಲ್ಲ. ಲ್ಯಾಬ್‌ನಲ್ಲಷ್ಟೇ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ವೈರೋಲಜಿಸ್ಟ್ ಶಿ ಝೆಂಗ್ಲಿ ಈ ವೈರಸ್ ಪತ್ತೆ ಹಚ್ಚಿದ್ದಾರೆ. ಗೌಂಗ್ಝು ಲ್ಯಾಬೋರಟರಿಯಲ್ಲಿ ಈ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನಾ ಅಧ್ಯಯನವನ್ನು ವುಹಾನ್‌ನ ವೈರೋಲಜಿ ಸಂಸ್ಥೆ ಪ್ರಕಟಿಸಿದೆ. ಇದೇ ವೈರೋಲಜಿ ಸಂಸ್ಥೆಯಿಂದ ಕೊರೊನಾ ವೈರಸ್‌ ಹರಡಿತ್ತು.

ಹೊಸದಾಗಿ ಪತ್ತೆಯಾಗಿರುವ HKU5-CoV-2 ವೈರಸ್‌ ಬಾವಲಿಯಿಂದ ಮನುಷ್ಯನ ದೇಹಕ್ಕೆ ಹರಡುತ್ತದೆ. ಈ ವೈರಸ್‌ SARS-CoV-2ನಂತೆ ಸುಲಭವಾಗಿ ಮಾನವನ ದೇಹಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಅದಾಗ್ಯೂ ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಇದು ಮಾನವ ಕುಲಕ್ಕೆ ಮಾರಕವಾಗಲಿದೆ ಎನ್ನುವುದನ್ನೂ ವಿಜ್ಞಾನಿಗಳು ಎಚ್ಚರಿಸಿದ್ದಾರೆ.



SARS-CoV-2ನಂತೆ ಹೊಸ ವೈರಸ್ ಫ್ಯೂರಿನ್ ಕ್ಲೀವೇಜ್ ಸೈಟ್ ಎಂದು ಕರೆಯಲ್ಪಡುವ ವೈಶಿಷ್ಟ್ಯವನ್ನು ಹೊಂದಿದೆ. ಇದು ಎಸಿಇ 2 ರಿಸೆಪ್ಟರ್ ಪ್ರೋಟೀನ್ ಮೂಲಕ ಜೀವಕೋಶಗಳನ್ನು ಪ್ರವೇಶಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ವೈರಸ್ ಬಾವಲಿಗಳಲ್ಲಿ ಹರಡಿದ್ದರೂ, ಇದು ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ಸಂಭಾವ್ಯ ಅಪಾಯದ ಬಗ್ಗೆ ಸಂಶೋಧಕರಿಗೆ ಇನ್ನೂ ಖಚಿತಪಡಿಸಿಲ್ಲ. ಕೊರೊನಾ ವೈರಸ್‌ ಸಾಮಾನ್ಯ ಶೀತದಿಂದ ತೀವ್ರವಾದ ಉಸಿರಾಟದ ಸಿಂಡ್ರೋಮ್ (SARS) ಮತ್ತು ಕೋವಿಡ್ -19ವರೆಗಿನ ರೋಗಗಳಿಗೆ ಕಾರಣವಾಗುವ ದೊಡ್ಡ ವೈರಸ್‌ ಕುಟುಂಬದ ಭಾಗವಾಗಿದೆ. ಅದಾಗ್ಯೂ ಪ್ರತಿ ಕೊರೊನಾ ವೈರಸ್‌ ಮಾನವರಿಗೆ ಹರಡುವುದಿಲ್ಲ.

ಲಕ್ಷಣಗಳೇನು?

ಜ್ವರ, ಕೆಮ್ಮು, ಆಯಾಸ, ಸೀನು, ಶೀತ, ಹಸಿವಾಗದಿರುವುದು, ಉಸಿರಾಟದ ತೊಂದರೆ, ಅತಿಸಾರ ಮತ್ತು ವಾಂತಿ ಕೊರೊನಾ ವೈರಸ್‌ನ ಸಾಮಾನ್ಯ ರೋಗ ಲಕ್ಷಣಗಳಾಗಿವೆ. ಹೊಸ ವೈರಸ್ ಮಾನವರಿಗೆ ಹರಡುವ ಬಗ್ಗೆ ಇನ್ನೂ ಖಚಿತವಾಗದಿದ್ದರೂ ಕೈಗಳನ್ನು ಚೆನ್ನಾಗಿ ತೊಳೆಯುವುದು, ಮಾಸ್ಕ್‌ ಧರಿಸುವುದು, ವೈದ್ಯಕೀಯ ಪರೀಕ್ಷೆಯಂತಹ ಮುನ್ನಚ್ಚರಿಕೆ ವಹಿಸಬೇಕು ಎಂದು ವಿಜ್ಞಾನಿಗಳು ಕರೆ ನೀಡಿದ್ದಾರೆ.

2019-20ರಲ್ಲಿ ಚೀನಾದ ವುಹಾನ್ ಲ್ಯಾಬ್‌ನಿಂದ ಕೋವಿಡ್ 19 ವೈರಸ್ ಸ್ಫೋಟಗೊಂಡಿತ್ತು. ಆರಂಭದಲ್ಲಿ ವುಹಾನ್ ನಗರದಲ್ಲಿ ಕಾಣಿಸಿಕೊಂಡ ವೈರಸ್‌ ಬಳಿಕ ಚೀನಾದಲ್ಲಿ ಹರಡಿ ಭಾರತಕ್ಕೂ ಕಾಲಿಟ್ಟಿತ್ತು. ಜತೆಗೆ ವಿಶ್ವಾದ್ಯಂತ ಹರಡಿ ಲಾಕ್‌ಡೌನ್‌ಗೆ ಕಾರಣವಾಗಿತ್ತು.

ಈ ಸುದ್ದಿಯನ್ನೂ ಓದಿ: Human Calculator: 'ಮಾನವ ಕಂಪ್ಯೂಟರ್' ಗೊತ್ತು, ಆದರೆ 'ಮಾನವ ಕ್ಯಾಲ್ಕುಲೇಟರ್' ಗೊತ್ತಾ ನಿಮ್ಗೆ? ಇವರೇ ನೋಡಿ ಅವರು

ಏನಿದು ಕೊರೊನಾ ವೈರಸ್?

ಕೊರಾನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇದು ಪ್ರಾಣಿಗಳಲ್ಲಿ ಕಾಣಿಸಿಕೊಂಡು ಮನುಷ್ಯನಿಗೂ ತಗುಲುತ್ತಿದೆ. ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ ವೈರಸ್‌ ಸೋಂಕಿನ ಸಾಮಾನ್ಯ ಲಕ್ಷಣ. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.