ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Dr Murali Mohan Chuntaru Column: ವೈದ್ಯ ಸಾಹಿತ್ಯ ಯಾಕೆ ಅನಿವಾರ್ಯ ?

ಅಲೋಪತಿ ವೈದ್ಯಪದ್ಧತಿಯು ನಿಂತ ನೀರಾಗಿರದೆ, ಹೊಸತನಕ್ಕೆ ನಿರಂತರವಾಗಿ ತೆರೆದು ಕೊಳ್ಳುವ ಪದ್ಧತಿಯಾಗಿದೆ. 60-70ರ ದಶಕದಲ್ಲಿ ಇದ್ದಂಥ ರೋಗಗಳು ಈಗ ದುರ್ಬೀನು ಹಾಕಿ ಹುಡುಕಿದರೂ ಸಿಗಲಿಕ್ಕಿಲ್ಲ. ಆದರೆ, ಜಗತ್ತು ದಿನಗಳೆದಂತೆ ಕಿರಿ ದಾಗುತ್ತಿದ್ದು, ಎಲ್ಲೋ ಹುಟ್ಟಿದ ವೈರಾಣುವು ದಿನ ಬೆಳಗಾಗುವುದರಲ್ಲಿ ಮತ್ತಾ ವುದೋ ದೇಶದ ಇನ್ನಾವುದೋ ಮೂಲೆಯನ್ನು ತಲುಪಲು ಸಾಧ್ಯವಿದೆ.

ವೈದ್ಯ ಸಾಹಿತ್ಯ ಯಾಕೆ ಅನಿವಾರ್ಯ ?

Profile Ashok Nayak Feb 22, 2025 8:39 AM

ಆರೋಗ್ಯ ಭಾಗ್ಯ

ಡಾ.ಮುರಲೀ ಮೋಹನ್‌ ಚೂಂತಾರು

ಅಲೋಪತಿ ವೈದ್ಯಪದ್ಧತಿಯು ನಿಂತ ನೀರಾಗಿರದೆ, ಹೊಸತನಕ್ಕೆ ನಿರಂತರವಾಗಿ ತೆರೆದು ಕೊಳ್ಳುವ ಪದ್ಧತಿಯಾಗಿದೆ. 60-70ರ ದಶಕದಲ್ಲಿ ಇದ್ದಂಥ ರೋಗಗಳು ಈಗ ದುರ್ಬೀನು ಹಾಕಿ ಹುಡುಕಿದರೂ ಸಿಗಲಿಕ್ಕಿಲ್ಲ. ಆದರೆ, ಜಗತ್ತು ದಿನಗಳೆದಂತೆ ಕಿರಿ ದಾಗುತ್ತಿದ್ದು, ಎಲ್ಲೋ ಹುಟ್ಟಿದ ವೈರಾಣುವು ದಿನ ಬೆಳಗಾಗುವುದರಲ್ಲಿ ಮತ್ತಾ ವುದೋ ದೇಶದ ಇನ್ನಾವುದೋ ಮೂಲೆಯನ್ನು ತಲುಪಲು ಸಾಧ್ಯವಿದೆ.

ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದರಂತೆ ಹೊಸ ರೋಗಗಳು ಮತ್ತು ಹೊಸ ರೋಗಾಣು ಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಬಗೆಗಿನ ಅಗತ್ಯಕ್ಕಿಂತ ಹೆಚ್ಚು ಮಾಹಿತಿಯು ಕಂಪ್ಯೂ ಟರ್ ಅಥವಾ ಮೊಬೈಲ್ ಫೋನುಗಳ ನೆರವಿನಿಂದ, ಗೂಗಲ್ ಮುಖೇನ ಅಂತರ್ಜಾಲದಲ್ಲಿ ಜನರಿಗೆ ಸಿಗುತ್ತಿದೆ. ಇದು ಮಾಹಿತಿ ಮಾತ್ರ. ಆದರೆ ಜನರು ಈ ಮಾಹಿತಿಗಳನ್ನು ಸತ್ಯವೆಂದು ನಂಬಿ ಕೈಕಾಲು ಬಡಿದುಕೊಳ್ಳಲು ಆರಂಭಿಸುತ್ತಾರೆ. ಗೂಗಲ್ ಮೂಲಕ ಸಿಗುವ ಎಲ್ಲ ಮಾಹಿತಿಗಳೂ ಸತ್ಯವಲ್ಲ; ಅವುಗಳಲ್ಲಿ ಹೆಚ್ಚಿನವು ವೈಭವೀಕರಿಸಲ್ಪಟ್ಟು, ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಿ, ಕೆಲವೊಮ್ಮೆ ತಿರುಚಲ್ಪಟ್ಟು, ಕೊನೆಗೆ ಸತ್ಯಕ್ಕಿಂತ ಜಾಸ್ತಿ ಸುಳ್ಳೇ ವಿಜೃಂಭಿಸುವಂತಾಗುವ ಸ್ಥಿತಿಯನ್ನು ಅದು ತಲುಪಿರುತ್ತದೆ.

ಇದನ್ನೂ ಓದಿ: Dr Murali Mohan Chuntaru Column: ದಂತ ವೈದ್ಯ ಲೋಕದ ಸಾರಥಿ ಡಾ.ಅಹ್ಮದ್

ಈ ಹಿಂದೆ, ಅಂದರೆ ಸುಮಾರು 2 ದಶಕಗಳ ಹಿಂದೆ, ಜನರಿಗೆ ರೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಏನೇ ರೋಗ ಬಂದರೂ ರೋಗಿಗಳು ವೈದ್ಯರ ಬಳಿ ಬರಲೇಬೇಕಿತ್ತು. ವೈದ್ಯರಿಂದ ಮಾತ್ರವೇ ರೋಗದ ಬಗೆಗಿನ ಮಾಹಿತಿ ದೊರೆತು ಔಷಧಿ ಪಡೆದು ನಿರಾಳ ರಾಗುತ್ತಿದ್ದರು. ಆದರೆ ಈಗ ಎಲ್ಲ ಮಾಹಿತಿಗಳು ಬೇಡ ಬೇಡವೆಂದರೂ ಜನರಿಗೆ ಸಿಗುತ್ತಿವೆ. ಈ ಕಾರಣದಿಂದ ಈಗಿನ ಕಾಲಘಟ್ಟದಲ್ಲಿ ಜನರಿಗೆ ಏನಾದರೂ ಅಸೌಖ್ಯ ಕಾಡಿದಾಗ, ತಾವೇ ‘ಗೂಗಲ್’ ಮಾಡಿ ರೋಗದ ಲಕ್ಷಣಗಳನ್ನು ತಿಳಿದು, ತಾವೇ ರೋಗನಿರ್ಣಯ ಮಾಡಿ, ಸ್ವತಃ ಔಷಧಿ ತೆಗೆದುಕೊಳ್ಳುವ ಹಂತಕ್ಕೆ ಜನರು ತಲುಪಿದ್ದಾರೆ.

ಒಂದೆರಡು ದಿನ ನೋವು ನಿವಾರಕ ಔಷಧಿ, ಜ್ವರದ ಔಷಧಿ ಮತ್ತು ಒಂದೆರಡು ಬಗೆಯ ಆಂಟಿಬಯೋಟಿಕ್ ಔಷಧಿಯನ್ನು ತಾವೇ -ರ್ಮಸಿಯಿಂದ ಪಡೆದು, ಸ್ವಯಂವೈದ್ಯ ಮಾಡಿ ಕೊಂಡ ನಂತರ, ರೋಗ ಕಡಿಮೆಯಾಗದಿದ್ದಲ್ಲಿ ಮಾತ್ರವೇ ವೈದ್ಯರ ಬಳಿಗೆ ಹೋಗುವ ತೀರ್ಮಾನ ಮಾಡುವವರೆಗಿನ ಸ್ವೇಚ್ಛೆ ಮತ್ತು ದುಸ್ಸಾಹಸ ಪ್ರವೃತ್ತಿಯು ನಮ್ಮ ಜನರಿಗೆ ಈಗ ಬಂದಿರುವುದು ನಿಜವಾಗಿಯೂ ಅಪಾಯಕಾರಿ ಬೆಳವಣಿಗೆ. ಈ ಹಿಂದೆ ಬೆರಳೆಣಿಕೆಯ ವೈದ್ಯರಿದ್ದರೂ ಜನರು ಕಾದುಕುಳಿತು ವೈದ್ಯರಿಂದಲೇ ಔಷಧಿ ಪಡೆಯುತ್ತಿದ್ದರು.

ಈಗ ಕೈಗೊಂದು ಕಾಲಿಗೊಂದು ವೈದ್ಯರಿದ್ದರೂ, ತಮ್ಮ ಅರೆಬರೆ ಜ್ಞಾನ ಮತ್ತು ‘ಗೂಗಲ್ ಡಾಕ್ಟರ್’ ನೆರವಿನಿಂದ ಸ್ವಯಂವೈದ್ಯ ಮಾಡಿಕೊಂಡು, ಕೊನೆಗೆ ರೋಗ ಉಲ್ಬಣಿಸಿ ಕೈ ಮೀರಿದಾಗ ಮಾತ್ರವೇ ವೈದ್ಯರಲ್ಲಿಗೆ ತೆರಳುತ್ತಾರೆ ನಮ್ಮ ಕೆಲವಷ್ಟು ಜನ. ಹೀಗೆ ವೈದ್ಯರಲ್ಲಿಗೆ ಒಯ್ದ ರೋಗಿಯು ಒಂದೊಮ್ಮೆ ಗುಣಮುಖನಾಗದಿದ್ದಲ್ಲಿ, ವೈದ್ಯರನ್ನೇ ಹೊಣೆಗಾರ ರನ್ನಾಗಿಸಿ, ಒಮ್ಮೊಮ್ಮೆ ಅವರಿಗೆ ನಾಲ್ಕು ಬಿಗಿದು, ಅವರನ್ನೇ ರೋಗಿಯನ್ನಾಗಿಸುವ ಹಂತಕ್ಕೆ ಕೆಲ ಜನರು ಬೆಳೆದು ನಿಂತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಈ ಎಲ್ಲಾ ಹಿನ್ನೆಲೆಯನ್ನು ಗಮನಿಸಿದಾಗ, ವೈದ್ಯಸಾಹಿತ್ಯಕ್ಕೆ ಮತ್ತು ಅದನ್ನು ಪ್ರತಿಪಾದಿಸುವ ವೈದ್ಯರಿಗೆ ಇನ್ನಷ್ಟು ಹೊಣೆಗಾರಿಕೆ ಇರಬೇಕಾದ್ದು ಅರಿವಾಗುತ್ತದೆ.

ರೋಗಕ್ಕೆ ಚಿಕಿತ್ಸೆ ನೀಡುವುದು ವೈದ್ಯರ ಪ್ರಾಥಮಿಕ ಕರ್ತವ್ಯ. ಇದರ ಜತೆಗೆ, ರೋಗವನ್ನು ತಡೆಗಟ್ಟುವ ಬಗ್ಗೆ, ಅದು ಬಾರದಂತೆ ಜೀವನಶೈಲಿಯನ್ನು ಕಾಪಿಟ್ಟುಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕಾದ್ದು, ರೋಗ ಬಂದರೂ ಅದರ ಜತೆಗೆ ಬದುಕುವುದರ ಬಗ್ಗೆ ತಿಳಿ ಹೇಳುವುದು ಅತ್ಯಗತ್ಯ. ಉದಾಹರಣೆಗೆ, ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ರೋಗಗಳಲ್ಲಿ ಸಿಂಹಪಾಲು ಸಲ್ಲುವುದು ಹೃದಯಾಘಾತದ ಸಮಸ್ಯೆಗೆ.

ಹೆಚ್ಚಿನ ಹೃದಯಾಘಾತಗಳನ್ನು ತಡೆಗಟ್ಟಲು ಸಾಧ್ಯವಿದೆ ಹಾಗೂ ನಮ್ಮ ಆಹಾರಪದ್ಧತಿ, ಜೀವನಶೈಲಿ ಹಾಗೂ ಒತ್ತಡರಹಿತ ಕೆಲಸದ ವಾತಾವರಣಗಳಿಂದ ಹೃದಯಾಘಾತವನ್ನು ತಪ್ಪಿಸಲು ಸಾಧ್ಯವಿದೆ ಎಂಬುದನ್ನು ರೋಗಿಗಳಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದ ಎಲ್ಲಾ ಸ್ತರದ ಜನರಿಗೆ ಇದನ್ನು ತಲಪುವಂತೆ ಮಾಡುವುದು ವೈದ್ಯರ ಸಾಮಾ ಜಿಕ ಹೊಣೆಗಾರಿಕೆ ಆಗಿರುತ್ತದೆ. ವೈದ್ಯಕೀಯ ಸಾಹಿತ್ಯದಿಂದ ಮಾತ್ರವೇ ಇದು ಕೈಗೂಡ ಬಲ್ಲದು. ಪತ್ರಿಕೆಗಳು, ದೃಶ್ಯಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಲ್ಲಿ ರೋಗದ ಬಗ್ಗೆ ಅರಿವು ಮತ್ತು ಎಚ್ಚರಿಕೆ ಮೂಡಿಸುವ ಕೆಲಸವು ನಿರಂತರ ಸಾಗುತ್ತಿರಬೇಕು.

ರೋಗದ ಬಗೆಗಿನ ಸರಿಯಾದ ಮಾಹಿತಿಗಳು, ಅಂಕಿ-ಅಂಶಗಳು ಮತ್ತಿತರ ವಿಚಾರಗಳನ್ನು ವಿವರಿಸಬೇಕು, ಆದರೆ ಚಿಕಿತ್ಸೆ ಬಗೆಗಿನ ಯಾವುದೇ ವಿಚಾರವನ್ನು ಹಂಚಿಕೊಳ್ಳಬಾರದು. ರೋಗನಿರ್ಣಯ, ಗುರುತಿಸುವಿಕೆ, ತಡೆಗಟ್ಟುವ ಹಾಗೂ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಬಗೆ ಇತ್ಯಾದಿಗಳನ್ನು ವೈದ್ಯಸಾಹಿತ್ಯದ ಮೂಲಕ ಜನರಿಗೆ ತಲುಪಿಸಬೇಕು. ತನ್ಮೂಲಕ ಜನರಿಗೆ ತಪ್ಪು ಮಾಹಿತಿ ತಲುಪದಂತೆ ನೋಡಿಕೊಳ್ಳಬೇಕು.

ಜನರ ಅಪನಂಬಿಕೆ ಮತ್ತು ಮೌಢ್ಯಗಳನ್ನು ತೊಡೆದುಹಾಕಬೇಕು. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಅತಿಹೆಚ್ಚಿನ ಸಾಮಾಜಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿ ಇರುತ್ತದೆ. ವೈದ್ಯ ಸಾಹಿತ್ಯದಿಂದ ಏನು ಲಾಭವಿದೆ? ಹತ್ತು ಹಲವು ರೋಗಗಳ ಬಗೆಗಿನ ಸರಿಯಾದ ಮಾಹಿತಿ ಯನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ನೀಡಿ, ರೋಗದ ಬಗೆಗೆ ಜನರಲ್ಲಿರುವ ಅನಗತ್ಯ ಭಯವನ್ನು ತಪ್ಪಿಸಬಹುದು.

ಕೆಲವರು ರೋಗಗಳ ಬಗೆಗೆ ತಪ್ಪಭಿಪ್ರಾಯ/ಮೂಢನಂಬಿಕೆಯನ್ನು ಹೊಂದಿರುತ್ತಾರೆ; ಪರಿಣತ ವೈದ್ಯರು ಸರಿಯಾದ ಮಾರ್ಗದರ್ಶನ ನೀಡಿ ಇದನ್ನು ತೊಡೆದು ಹಾಕುವಲ್ಲಿ ವೈದ್ಯಸಾಹಿತ್ಯವು ನೆರವಾಗುತ್ತದೆ. ಸ್ವಯಂವೈದ್ಯದಿಂದ/ಸ್ವಯಂ ಮದ್ದುಗಾರಿಕೆಯಿಂದ ಉಂಟಾಗುವ ತೊಂದರೆಗಳ ಮತ್ತು ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ತುರ್ತು ಅಗತ್ಯವಿದೆ.

ಸೈಬರ್ ಕಾಂಡ್ರಿಯಾ, ಅಂತರ್ಜಾಲದ ಔಷಧಗಾರಿಕೆ ಮುಂತಾದ ಗೀಳುಗಳನ್ನು ಬುಡ ಸಮೇತ ಕಿತ್ತುಹಾಕಲು ವೈದ್ಯಸಾಹಿತ್ಯ ಅತ್ಯವಶ್ಯಕ. ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಅಹಾರ ಪದ್ಧತಿಯಿಂದಾಗಿ ಬರುವ, ಜೀವನಶೈಲಿ ಸಂಬಂಧಿತ ಹಾಗೂ ತಡೆಗಟ್ಟಬಹುದಾದ ರೋಗಗಳನ್ನು (ಮಧುಮೇಹ, ಅಽಕ ರಕ್ತದೊತ್ತಡ, ಹೃದಯಾಘಾತ, ಖಿನ್ನತೆ ಇತ್ಯಾದಿ) ಬಾರದಂತೆ ತಡೆಯುವಲ್ಲಿ ವೈದ್ಯಸಾಹಿತ್ಯ ಮುಖ್ಯ ಭೂಮಿಕೆ ವಹಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯಸಾಹಿತ್ಯದ ಮೂಲಕ ವೈದ್ಯರು ಜನಜಾಗೃತಿ ಮೂಡಿಸುವ ಅವಶ್ಯಕತೆಯಿದೆ.

ವೈದ್ಯಸಾಹಿತ್ಯವನ್ನು ಪ್ರತಿಪಾದಿಸುವ ವೈದ್ಯರು ನಿರಂತರವಾಗಿ ಅಧ್ಯಯನಶೀಲ ರಾಗಿರಬೇಕಾಗುತ್ತದೆ. ಹೊಸ ರೋಗ ಮತ್ತು ರೋಗಾಣುಗಳು ಹುಟ್ಟಿದಂತೆ, ಹೊಸ ಔಷಧಿ ಮತ್ತು ಆವಿಷ್ಕಾರಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಅವರು ಜನರಿಗೆ ತಿಳಿಹೇಳ ಬೇಕಾ ಗುತ್ತದೆ. ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಹೊಸ ಹೊಸ ರೋಗಗಳು ಅಪ್ಪಳಿಸಿದಾಗ, ಗೂಗಲ್ ಮುಖಾಂತರ ಅವುಗಳ ಕುರಿತಾದ ಅನಗತ್ಯ/ಅಪೂರ್ಣ/ತಪ್ಪಾದ ಮಾಹಿತಿ ಪಡೆಯುವ ಕೆಲಜನರು ವಿನಾಕಾರಣ ಒತ್ತಡಕ್ಕೆ ಸಿಲುಕುತ್ತಾರೆ. ಆದ್ದರಿಂದ ಇಂಥ ಸಂದರ್ಭಗಳಲ್ಲಿ ವೈದ್ಯಸಾಹಿತ್ಯದ ನೆರವಿನಿಂದ ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಮೂಲಕ ವೈದ್ಯರು ಅನಗತ್ಯ ಗೊಂದಲವನ್ನು ತಪ್ಪಿಸಲು ಸಾಧ್ಯವಿದೆ.

ಕೊನೆಯ ಮಾತು: ಅಲೋಪತಿ ವೈದ್ಯಪದ್ಧತಿಯು ನಿಂತ ನೀರಾಗಿರದೆ, ಹೊಸತನಕ್ಕೆ ನಿರಂತರವಾಗಿ ತೆರೆದುಕೊಳ್ಳುವ ಪದ್ಧತಿಯಾಗಿದೆ. 60-70ರ ದಶಕದಲ್ಲಿ ಇದ್ದಂಥ ರೋಗ ಗಳು ಈಗ ದುರ್ಬೀನು ಹಾಕಿ ಹುಡುಕಿದರೂ ಸಿಗಲಿಕ್ಕಿಲ್ಲ. ಆದರೆ, ಜಗತ್ತು ದಿನಗಳೆದಂತೆ ಕಿರಿದಾಗುತ್ತಿದ್ದು, ಎಲ್ಲೋ ಹುಟ್ಟಿದ ವೈರಾಣುವು ದಿನ ಬೆಳಗಾಗುವುದರಲ್ಲಿ ಮತ್ತಾವುದೋ ದೇಶದ ಇನ್ನಾವುದೋ ಮೂಲೆಯನ್ನು ತಲುಪಲು ಸಾಧ್ಯವಿದೆ. ಈ ಕಾರಣದಿಂದ, ವಿರಳಾತಿ ವಿರಳ ವೈರಾಣು ರೋಗ ದಿಂದ ಮೊದಲ್ಗೊಂಡು ಅತಿಸಾಮಾನ್ಯ ಸಮಸ್ಯೆಗಳವರೆಗೆ ವೈದ್ಯರಿಗೆ ಮತ್ತು ಜನರಿಗೆ ಸರಿಯಾದ ಮಾಹಿತಿ ಇರಬೇಕಾಗುತ್ತದೆ.

ಇದನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ‘ವೈದ್ಯ ಸಾಹಿತ್ಯ’ ಅತ್ಯಗತ್ಯ. ಹೀಗಾಗಿ ವೈದ್ಯರು ಕಾಲಾನುಕಾಲಕ್ಕೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು, ತಮ್ಮ ವಿಚಾರಧಾರೆ ಯನ್ನೂ ಮತ್ತು ರೋಗಗಳ ಬಗೆಗಿನ ಮಾಹಿತಿಯನ್ನೂ ಜನರಿಗೆ ತಲುಪಿಸುವ ಕೆಲಸವನ್ನು ಮಾಡ ಬೇಕು. ‘ನಾವೇನಿದ್ದರೂ ಔಷಧಿ ನೀಡಿ ರೋಗವನ್ನು ಗುಣಪಡಿಸುವ ಕೆಲಸದಲ್ಲಿ ವ್ಯಸ್ತ ರಾದವರು’ ಎಂಬ ಚಿಂತನೆಯನ್ನು ವೈದ್ಯರು ಬದಿಗಿಟ್ಟು, ಇಡೀ ಸಮಾಜದ ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ರೋಗದ ಚಿಕಿತ್ಸೆಯ ಜತೆಜತೆಗೆ ರೋಗವನ್ನು ತಡೆಗಟ್ಟುವ/ತೊಡೆದುಹಾಕುವ ಬಗೆಗಿನ ಮಾಹಿತಿಯನ್ನು ವೈದ್ಯಸಾಹಿತ್ಯದ ಮೂಲಕ ನೀಡಬೇಕು.

ರೋಗಿಗೆ ನೀಡುವ ಚುಚ್ಚುಮದ್ದಿನ ಜತೆಗೆ, ಸಮಾಜಕ್ಕೆ ಹೀಗೆ ನಿರಂತರವಾಗಿ ಚುಚ್ಚುಮದ್ದು ನೀಡುವ ಔದಾರ್ಯವನ್ನು ವೈದ್ಯಸಾಹಿತ್ಯದ ಮೂಲಕ ವೈದ್ಯರು ಮಾಡಿದಲ್ಲಿ, ಆರೋಗ್ಯ ವಂತ ಸಮಾಜದ ನಿರ್ಮಾಣ ಸಾಧ್ಯವಿದೆ.

(ಲೇಖಕರು ವೈದ್ಯರು)