ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Namaz Break: ಶಾಸಕರ ನಮಾಜ್‌ ಬ್ರೇಕ್‌ ರದ್ದು; 90 ವರ್ಷದ ಸಂಪ್ರದಾಯಕ್ಕೆ ಫುಲ್‌ ಸ್ಟಾಪ್‌ ಹಾಕಿದ ಅಸ್ಸಾಂ ಸರ್ಕಾರ

ಅಸ್ಸಾಂ ಸರ್ಕಾರ ಒಂಬತ್ತು ದಶಕಗಳ ಸಂಪ್ರದಾಯ ಶಾಸಕ ನಮಾಜ್‌ ವಿರಾಮಕ್ಕೆ ಬ್ರೇಕ್‌ ಹಾಕಿದೆ. ಈ ಹಿಂದೆ ಅಧಿವೇಶನ ವೇಳೆ ಶುಕ್ರವಾರ ನಮಾಜ್‌ಗಾಗಿ ಎರಡು ಗಂಟೆಗಳ ಕಾಲ ವಿರಾಮ ನೀಡಲಾಗುತ್ತಿತ್ತು. ಆದರೆ ಇದೀಗ ಈ ಸಂಪ್ರದಾಯವನ್ನು ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಭಾರೀ ಆಕ್ರೋಶ ಭುಗಿಲೆದ್ದಿದೆ.

ನಮಾಜ್‌ ಬ್ರೇಕ್‌ ರದ್ದು; ಅಸ್ಸಾಂ ಸರ್ಕಾರದ ಮಹತ್ವದ ನಿರ್ಧಾರ

Profile Rakshita Karkera Feb 22, 2025 12:38 PM

ಗುವಾಹಟಿ: ಮುಸ್ಲಿಂ ಶಾಸಕರು ಶುಕ್ರವಾರದಂದು 'ನಮಾಜ್' ಮಾಡಲು ಅನುಕೂಲವಾಗುವಂತೆ ಎರಡು ಗಂಟೆಗಳ ವಿರಾಮ ನೀಡುವ 9 ದಶಕಗಳಷ್ಟು ಹಳೆಯ ಅಸ್ಸಾಂ ವಿಧಾನಸಭೆಯ ಸಂಪ್ರದಾಯ(Namaz Break)ಸರ್ಕಾರ ರದ್ದುಗೊಳಿಸಿದೆ. ಈ ಬಗ್ಗೆ ನಿರ್ಧಾರವನ್ನು ಕಳೆದ ಅಧಿವೇಶನದ ವೇಳೆಯೇ ತೆಗೆದುಕೊಳ್ಳಲಾಗಿತ್ತು. ಆದರೆ ಅದನ್ನು ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಪ್ರಸ್ತುತ ಬಜೆಟ್‌ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಈ ನಿರ್ಧಾರವನ್ನು ಜಾರಿಗೊಳಿಸಲಾಗಿದೆ.

ಏನಿದು ನಮಾಜ್‌ ಬ್ರೇಕ್‌?

ಅಸ್ಸಾಂ ವಿಧಾನಸಭೆ ಅಧಿವೇಶನದ ನಡೆಯುತ್ತಿದ್ದ ವೇಳೆ ಮುಸ್ಲಿಂ ಶಾಸಕರಿಗೆ ಶುಕ್ರವಾರದಂದು ನಮಾಜ್‌ಗಾಗಿ ಎರಡು ಗಂಟೆಗಳ ಕಾಲ ಬ್ರೇಕ್‌ ನೀಡಲಾಗುತ್ತಿತ್ತು. ಇದು ಬರೋಬ್ಬರಿ 90 ವರ್ಷಗಳಿಂದಲೂ ನಡೆದುಬಂದಿರುವ ಸಂಪ್ರದಾಯವಾಗಿತ್ತು. 1937ರಲ್ಲಿ ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ ಪರಿಚಯಿಸಿದ ಸಂಪ್ರದಾಯ ಇದಾಗಿತ್ತು. ಈ ಕ್ರಮಕ್ಕೆ ಬಿಜೆಪಿ ನಾಯಕರಿಂದ ಮೊದಲಿನಿಂದಲೂ ವಿರೋಧವಿತ್ತು.

ಶಾಸಕರ ವಿರೋಧ

ಇನ್ನು ನಮಾಜ್‌ ಬ್ರೇಕ್‌ ರದ್ದುಗೊಳಿಸಿರುವ ಕ್ರಮವನ್ನು ಮುಸ್ಲಿಂ ಶಾಸಕರು ವಿರೋಧಿಸಿದ್ದಾರೆ. ಎಐಯುಡಿಎಫ್ ಶಾಸಕ ರಫೀಕುಲ್ ಇಸ್ಲಾಂ ಪ್ರತಿಕ್ರಿಯಿಸಿ, ಇದು ಸಂಖ್ಯಾಬಲದ ಮೇಲೆ ಹೇರಲಾದ ನಿರ್ಧಾರ. ವಿಧಾನಸಭೆಯಲ್ಲಿ ಸುಮಾರು 30 ಮುಸ್ಲಿಂ ಶಾಸಕರಿದ್ದಾರೆ. ನಾವು ಈ ಕ್ರಮದ ವಿರುದ್ಧ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೆವು. ಆದರೆ ಅವರು (ಬಿಜೆಪಿ) ಸಂಖ್ಯಾಬಲವನ್ನು ಹೊಂದಿದ್ದಾರೆ ಮತ್ತು ಅದರ ಆಧಾರದ ಮೇಲೆ ಅದನ್ನು ಹೇರುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ, ಶುಕ್ರವಾರದಂದು ಮುಸ್ಲಿಂ ಶಾಸಕರು ಹತ್ತಿರದಲ್ಲೇ 'ನಮಾಜ್' ಮಾಡಲು ಅವಕಾಶ ಕಲ್ಪಿಸಬಹುದು. ಇಂದು, ನನ್ನ ಹಲವಾರು ಪಕ್ಷದ ಸಹೋದ್ಯೋಗಿಗಳು ಮತ್ತು ಎಐಯುಡಿಎಫ್ ಶಾಸಕರು 'ನಮಾಜ್' ಮಾಡಲು ಹೋದ ಕಾರಣ ಪ್ರಮುಖ ಚರ್ಚೆಯನ್ನು ತಪ್ಪಿಸಿಕೊಂಡರು. ಹೀಗಾಗಿ ಇನ್ಮುಂದೆ ಹತ್ತಿರದಲ್ಲೇ ಅದಕ್ಕಾಗಿ ಅವಕಾಶ ಕಲ್ಪಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Varanasi college: ಹನುಮಾನ್ ಚಾಲೀಸ– ನಮಾಝ್ ವಿವಾದ ಬೆನ್ನಲ್ಲೇ ವಾರಾಣಸಿ ಕಾಲೇಜಿಗೆ ಹೊರಗಡೆಯವರಿಗೆ ಪ್ರವೇಶ ನಿಷೇಧ

ಸುಮಾರು 90 ವರ್ಷಗಳಷ್ಟು ಹಳೆಯದಾದ ಈ ಪದ್ಧತಿಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಸ್ಪೀಕರ್ ನೇತೃತ್ವದ ಸದನದ ನಿಯಮಗಳ ಸಮಿತಿ ತೆಗೆದುಕೊಂಡಿತು. ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಅಸ್ಸಾಂ ವಿಧಾನಸಭೆಯು ಇತರ ದಿನದಂತೆಯೇ ಶುಕ್ರವಾರವೂ ತನ್ನ ಕಲಾಪಗಳನ್ನು ನಡೆಸಬೇಕು ಎಂದು ಸ್ಪೀಕರ್ ಬಿಸ್ವಜಿತ್ ಡೈಮರಿ ಪ್ರಸ್ತಾಪಿಸಿದ್ದರು, ಇದನ್ನು ನಿಯಮಗಳ ಸಮಿತಿಯ ಮುಂದೆ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇನ್ನು ಸ್ಪೀಕರ್‌ ನಡೆಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಈ ನಿರ್ಧಾರವನ್ನು ಸ್ವಾಗತಿಸಿದ್ದರು.