Shubman Gill: ಭಾರತ ಏಕದಿನ ತಂಡಕ್ಕೆ ಶುಭ್‌ಮನ್ ಗಿಲ್ ನಾಯಕ!
Rohit Sharma OUT As ODI Captain: 2027ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಗಿಲ್ ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಅವರು ಮುಂದಿನ ಏಕದಿನ ವಿಶ್ವಕಪ್ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಮೆಗಾಕೂಟ ನಡೆಯಲಿದೆ.


ನವದೆಹಲಿ: ಟೆಸ್ಟ್ ತಂಡದ ನಾಯಕನಾಗಿರುವ ಶುಭ್‌ಮನ್ ಗಿಲ್(Shubman Gill), ಸದ್ಯದಲ್ಲೇ ಭಾರತ ಏಕದಿನ ತಂಡದ ನಾಯಕತ್ವವನ್ನೂ ವಹಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಗಳಿಂದ ನಿವೃತ್ತಿ ಪಡೆದಿರುವ ರೋಹಿತ್ ಶರ್ಮಾ(Rohit Sharma) ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ, ಈ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಗೂ ಮೊದಲೇ ಬಿಸಿಸಿಐ, ಗಿಲ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಲಿದೆ ಎಂದು ವರದಿಯಾಗಿದೆ.
2027ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಗಿಲ್ ಮುನ್ನಡೆಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ರೋಹಿತ್ ಶರ್ಮಾ ಅವರು ಮುಂದಿನ ಏಕದಿನ ವಿಶ್ವಕಪ್ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಮೆಗಾಕೂಟ ನಡೆಯಲಿದೆ.
ಇತ್ತೀಚೆಗೆ ಸುನೀಲ್ ಗವಾಸ್ಕರ್(Sunil Gavaskar) ಅವರು ರೋಹಿತ್ ಮತ್ತು ಕೊಹ್ಲಿ 2027 ರ ಏಕದಿನ ವಿಶ್ವಕಪ್ ಭಾರತದ ತಂಡದಲ್ಲಿ ಇರುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಜತೆಗೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದರು.
ಇಂಡಿಯಾ ಟುಡೇ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಗವಾಸ್ಕರ್, 50 ಓವರ್‌ಗಳ ಸ್ವರೂಪದಲ್ಲಿ ಕೊಹ್ಲಿ ಮತ್ತು ರೋಹಿತ್ ಅದ್ಭುತ ಪ್ರದರ್ಶನ ನೀಡಿದ್ದರೂ, ಅವರು ಇನ್ನೂ ಎರಡು ವರ್ಷಗಳ ದೂರದಲ್ಲಿರುವ ಏಕದಿನ ವಿಶ್ವಕಪ್ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು.
ಇದನ್ನೂ ಓದಿ IND vs ENG: 3 ವಿಕೆಟ್ ಕಳೆದುಕೊಂಡು ಭಾರತ ತಂಡಕ್ಕೆ ಕೆಎಲ್ ರಾಹುಲ್ ಆಸರೆ!
2027 ರ ಏಕದಿನ ವಿಶ್ವಕಪ್ ನಡೆಯುವ ಹೊತ್ತಿಗೆ ರೋಹಿತ್‌ಗೆ 40 ವರ್ಷ ವಯಸ್ಸಾಗಿದ್ದರೆ, ವಿರಾಟ್‌ಗೆ 38 ವರ್ಷ ವಯಸ್ಸಾಗಿರುತ್ತದೆ. ರೋಹಿತ್ ಅವರ ಫಿಟ್ನೆಸ್ ಮುಖ್ಯ ಕಾಳಜಿಯಾಗಿರುತ್ತದೆ. ಏಕೆಂದರೆ ಅವರು 2025 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫೀಲ್ಡಿಂಗ್ ಮಾಡಿಲ್ಲ. ಮತ್ತೊಂದೆಡೆ, ವಿರಾಟ್ ಅವರ ಸಾಮರ್ಥ್ಯ ಕಡಿಮೆಯಾಗುತ್ತಿರುವ ಲಕ್ಷಣಗಳನ್ನು ತೋರಿಸಿದ್ದಾರೆ. ಇದು ಅವರ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಅವರ ಇನ್ನಿಂಗ್ಸ್‌ನ ಆರಂಭಿಕ ಭಾಗಗಳಲ್ಲಿ ಅವರನ್ನು ತೊಂದರೆಗೆ ಸಿಲುಕಿಸಿದೆ. ಇನ್ನೊಂದೆಡೆ ಭಾರತ ಹೆಚ್ಚಾಗಿ ಟಿ20 ಸರಣಿಯನ್ನು ಆಡುತ್ತಿದೆ. ಕೊಹ್ಲಿ, ರೋಹಿತ್ ಈ ಮಾದರಿಯಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಉಭಯ ಆಟಗಾರರಿಗೆ ಬೆರಳೆಣಿಕೆಯ ಏಕದಿನ ಸರಣಿ ಆಡಲು ಸಿಗುತ್ತದೆ. ಆದ್ದರಿಂದ ಅವರು ಫಾರ್ಮ್ ಉಳಿಸಿಕೊಳ್ಳುವುದು ಕಷ್ಟ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು.