ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Illegal Travel Agents: ಅಕ್ರಮ ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಕಠಿಣ ಕ್ರಮ- 40 ಪರವಾನಗಿ ರದ್ದು

ಅಕ್ರಮ ವಲಸೆಯನ್ನು ತಪ್ಪಿಸಲು ಪಂಜಾಬ್‌ ಪೊಲೀಸರು ಮಹತ್ವದ ನಿರ್ಧಾರ ಕೈಗೊಂಡಿದ್ದು, ಪಂಜಾಬ್‌ನ 40 ಟ್ರಾವೆಲ್ ಏಜೆಂಟ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಕೆಲವು ಐಇಎಲ್‌ಟಿಎಸ್ ಕೇಂದ್ರಗಳ ಪರವಾನಗಿಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಟ್ರಾವೆಲ್ ಏಜೆಂಟ್‌ಗಳು ಮತ್ತು ವಲಸೆ ಸಲಹೆಗಾರರ ​​ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳಿಗೆ ಸೂಚನೆ ನೀಡಲಾಗಿದೆ.

ಪಂಜಾಬ್‌ನಲ್ಲಿ 40 ಅಕ್ರಮ ಟ್ರಾವೆಲ್ ಏಜೆಂಟ್‌ಗಳ ಪರವಾನಗಿ ರದ್ದು

ಸಾಂದರ್ಭಿಕ ಚಿತ್ರ

Profile Vishakha Bhat Feb 25, 2025 11:30 AM

ಚಂಡೀಗಢ: ಅಮೆರಿಕಕ್ಕೆ (America) ಅಕ್ರಮವಾಗಿ ವಲಸೆ ಬಂದ ಭಾರತೀಯರನ್ನು ಗಡಿಪಾರು ಮಾಡುತ್ತಿರುವ ಬೆನ್ನಲ್ಲೇ ಪಂಜಾಬ್‌ ಪೊಲೀಸರು (Punjab) ಮಹತ್ವದ ಕ್ರಮವೊಂದನ್ನು ಕೈಗೊಂಡಿದ್ದಾರೆ. ಪಂಜಾಬ್‌ನ 40 ಟ್ರಾವೆಲ್ ಏಜೆಂಟ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಕೆಲವು ಐಇಎಲ್‌ಟಿಎಸ್ ಕೇಂದ್ರಗಳ ಪರವಾನಗಿಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅಮೃತಸರ ಪೊಲೀಸರು ನಗರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಟ್ರಾವೆಲ್ ಏಜೆಂಟ್‌ಗಳ (Illegal Travel Agents) ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಭಾರತೀಯರನ್ನು ಅಕ್ರಮವಾಗಿ ವಿದೇಶಗಳಿಗೆ ಕಳುಹಿಸುವ ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಪೊಲೀಸರು ನಿರಂತರವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಸದ್ಯ 40 ಟ್ರಾವೆಲ್ ಏಜೆಂಟ್‌ಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದ್ದು, ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಮೆರಿಕದಿಂದ ಗಡೀಪಾರು ಮಾಡಲ್ಪಡುತ್ತಿರುವ ಭಾರತೀಯರಲ್ಲಿ ಹೆಚ್ಚಿನವರು ಪಂಜಾಬ್‌ನ ಜನರಾಗಿದ್ದಾರೆ ಫೆಬ್ರವರಿ 5, ಫೆಬ್ರವರಿ 15 ಮತ್ತು ಫೆಬ್ರವರಿ 16 ರಂದು ಮೂರು ವಿಮಾನಗಳು ಬಂದವು, ಅದರಲ್ಲಿ 333 ಭಾರತೀಯರನ್ನು ಕಳುಹಿಸಲಾಗಿದೆ. ಅದರಲ್ಲಿ ಶೇಕಡಾ 37.8 ರಷ್ಟು ಪಂಜಾಬ್‌ನವರು ಎಂದು ಮೂಲಗಳು ತಿಳಿಸಿವೆ.

ಟ್ರಾವೆಲ್ ಏಜೆಂಟ್‌ಗಳು ಮತ್ತು ವಲಸೆ ಸಲಹೆಗಾರರ ​​ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳಿಗೆ (SDMಗಳು) ಸೂಚನೆ ನೀಡಲಾಗಿದೆ. ಟ್ರಾವೆಲ್ ಏಜೆಂಟ್‌ಗಳ ವಿರುದ್ಧ ಯಾವುದೇ ದೂರುಗಳು ಬಂದರೆ ತಕ್ಷಣ ಜಿಲ್ಲಾಧಿಕಾರಿ ಕಚೇರಿಗೆ ತಿಳಿಸಲು ಜಿಲ್ಲಾ ಪೊಲೀಸರಿಗೆ ಸೂಚಿಸಲಾಗಿದೆ. ಅಕ್ರಮ ಟ್ರಾವೆಲ್ ಏಜೆಂಟ್‌ಗಳನ್ನು ಹತ್ತಿಕ್ಕಲು ವಿಶೇಷ ತನಿಖಾ ತಂಡ (SIT)ವನ್ನು ರಚಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಪ್ರವೀಣ್ ಸಿನ್ಹಾ ನೇತೃತ್ವದ ತಂಡ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಪಂಜಾಬ್‌ನಿಂದ ಅಕ್ರಮ ವಲಸೆ ಪ್ರಕರಣಗಳು ವ್ಯಾಪಕವಾಗಿ ವರದಿಯಾಗಿದ್ದು, ಉತ್ತಮ ಜೀವನಕ್ಕಾಗಿ ಹಾತೊರೆಯುವ ಜನರಿಗೆ ವಿದೇಶಗಳಿಗೆ ಪ್ರಯಾಣಿಸಲು ವೀಸಾ ನೀಡುವ ಭರವಸೆ ನೀಡಿ ದೊಡ್ಡ ಮೊತ್ತದ ಹಣಕ್ಕೆ ಬದಲಾಗಿ ನಕಲಿ ವೀಸಾಗಳ ಮೇಲೆ ಕರೆದೊಯ್ಯಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಪಂಜಾಬ್‌ನಲ್ಲಿ ಟ್ರಾವೆಲ್ ಏಜೆಂಟ್‌ಗಳ ವಿರುದ್ಧ 3,200 ಕ್ಕೂ ಹೆಚ್ಚು ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಹಲವಾರು ಬಂಧನಗಳು ನಡೆದಿವೆ. ಅವರಲ್ಲಿ ಪಂಜಾಬಿ ಗಾಯಕ ಫತೇಜಿತ್ ಸಿಂಗ್ ಕೂಡ ಒಬ್ಬರು, ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದರು.

ಈ ಸುದ್ದಿಯನ್ನೂ ಓದಿ: Illegal immigrants: ಭಾರತೀಯರು ಸೇರಿದಂತೆ 300 ಅಕ್ರಮ ವಲಸಿಗರು ಪನಾಮದಲ್ಲಿ ಟ್ರ್ಯಾಪ್‌! ರಕ್ಷಣೆಗಾಗಿ ಕೂಗುತ್ತಿರುವ ವಿಡಿಯೊ ವೈರಲ್‌

ಅಮೆರಿಕದಲ್ಲಿ ಟ್ರಂಪ್‌ ಆಡಳಿತ ಪ್ರಾರಂಭವಾಗುತ್ತಿದ್ದಂತೆ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಟ್ರಂಪ್‌ ವಲಸೆ ನೀತಿಗಳನ್ನು ಜಾರಿಗೊಳಿಸಲು ಮಿಲಿಟರಿಯನ್ನು ಬಳಸುತ್ತಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಗೆ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ವಲಸಿಗರನ್ನು ಮಿಲಿಟರಿ ನೆಲೆಗಳಲ್ಲಿ ಇರಿಸಲಾಗುತ್ತದೆ. ಭಾರತದಿಂದ ಬಂದ ಸರಿಸುಮಾರು 725,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.