ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಂಜಾನ್‌ ಉಪವಾಸ ಆರಂಭಿಸಲು ಕಾಯುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿ ಮೇಲೆ ಗುಂಡಿನ ದಾಳಿ; ಶಾಕಿಂಗ್‌ ವಿಡಿಯೊ ನೋಡಿ

ಉತ್ತರ ಪ್ರದೇಶದ ಅಲಿಗಢದಲ್ಲಿ ಶುಕ್ರವಾರ 'ಸೆಹ್ರಿʼ (ಮುಸ್ಲಿಮರು ರಂಜಾನ್ ಉಪವಾಸಕ್ಕೆ ಮುನ್ನ ಸೇವಿಸುವ ಬೆಳಗಿನ ಊಟ) ಸೇವಿಸಲು ಮನೆಯ ಬಳಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಬೈಕಿನಲ್ಲಿ ಬಂದ ನಾಲ್ವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್‌ ಆಗಿದೆ.

ರಂಜಾನ್‌ ಉಪವಾಸ ಆರಂಭಿಸಲು ಕಾಯುತ್ತಿದ್ದ ವ್ಯಕ್ತಿಯ ಕೊಲೆ

Profile Sushmitha Jain Mar 15, 2025 3:22 PM

ಲಖನೌ: ಉತ್ತರ ಪ್ರದೇಶದ ಅಲಿಗಢದಲ್ಲಿ ಶುಕ್ರವಾರ 'ಸೆಹ್ರಿ' (Sehri) (ಮುಸ್ಲಿಮರು ರಂಜಾನ್ ಉಪವಾಸಕ್ಕೆ ಮುನ್ನ ಸೇವಿಸುವ ಬೆಳಗಿನ ಊಟ) ಸೇವಿಸಲು ಮನೆಯ ಬಳಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಬೈಕಿನಲ್ಲಿ ಬಂದ ನಾಲ್ವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ದಾಳಿಕೋರರಲ್ಲಿ ಒಬ್ಬ ಆ ವ್ಯಕ್ತಿಯ ಮೇಲೆ ಹಲವು ಬಾರಿ ಗುಂಡು ಹಾರಿಸಿದ್ದಾನೆ. ಈ ವೇಳೆ ಆ ವ್ಯಕ್ತಿ ಕುಸಿದು ನೆಲದ ಮೇಲೆ ಬಿದ್ದಿದ್ದು, ಇದಾದ ಬೆನ್ನಲ್ಲೇ ಇನ್ನೊಬ್ಬ ಬೈಕ್‌ನಿಂದ ಇಳಿದು ಮತ್ತೆ ಮೂರು ಗುಂಡುಗಳನ್ನು ಹಾರಿಸಿ ಅವನು ಸತ್ತಿದ್ದಾನೆ ಎಂದು ಖಚಿತಪಡಿಸಿಕೊಂಡಿದ್ದಾನೆ.

ಅಲಿಗಢದ ರೋರಾವರ್‌ನಲ್ಲಿರುವ ತೆಲಿಪಾಡಾದ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಘಟನೆ ಸೆರೆಯಾಗಿದೆ. ಮೃತನನ್ನು ಹ್ಯಾರಿಸ್ ಅಲಿಯಾಸ್ ಕಟ್ಟಾ ಎಂದು ಗುರುತಿಸಲಾಗಿದ್ದು, ಈತ ಬೆಳಗಿನ ಜಾವ 3.15ರ ಸುಮಾರಿಗೆ ತನ್ನ ಮನೆಯ ಬಳಿಯ ರಸ್ತೆಯಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಂತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹ್ಯಾರಿಸ್ ತನ್ನ ಕಡೆಗೇ ಬರುತ್ತಿದ್ದ ಎರಡು ಬೈಕ್‌ಗಳನ್ನು ಆಸಕ್ತಿಯಿಂದ ನೋಡುತ್ತಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದು.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಹತ್ಯೆಯ ದೃಶ್ಯ ಇಲ್ಲಿದೆ



ಬೈಕ್‌ನ ಹಿಂಬದಿ ಸವಾರನು ತನ್ನ ಬಳಿ ಬಂದು ಗನ್‌ ತೆಗೆಯಲು ಯತ್ನಿಸುವಾಗ ಹ್ಯಾರಿಸ್ ತಿರುಗಿ ಓಡಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಬೈಕ್ ಚಲಿಸುತ್ತಿರುವಾಗಲೇ ಒಂದು ಗುಂಡು ಹಾರಿಸಲ್ಪಟ್ಟಿದೆ. ನಂತರ ಹಿಂಬದಿ ಸವಾರ ಹ್ಯಾರಿಸ್ ಮೇಲೆ ಸತತವಾಗಿ ಎರಡು ಬಾರಿ ಗುಂಡು ಹಾರಿಸಿದ್ದಾನೆ.

ಈ ಸುದ್ದಿಯನ್ನೂ ಓದಿ: Amritsar Temple : ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಸ್ಫೋಟ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಅಷ್ಟರಲ್ಲಿಯೇ ಇನ್ನೊಂದು ಬೈಕ್‌ನ ಹಿಂಬದಿ ಸವಾರ ಇಳಿದು ಕುಸಿದು ಬಿದ್ದಿದ್ದ ಹ್ಯಾರಿಸ್ ಕಡೆಗೆ ನಡೆದಕೊಂಡು ಬಂದು ಮತ್ತೆ ಆತನ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾನೆ.

ಹಳೆಯ ದ್ವೇಷದ ಕಾರಣಕ್ಕೆ ಹ್ಯಾರಿಸ್‌ ಮೇಲೆ ದಾಳಿ ನಡೆದಿರಬಹುದು ಎಂದು ಪೊಲೀಸ್‌ ಅಧಿಕಾರಿಗಳು ಶಂಕಿಸಿದ್ದಾರೆ. ಈ ಪ್ರಕರಣದಲ್ಲಿ ಸಾಧ್ಯವಿರುವ ಇತರ ಅಂಶಗಳನ್ನೂ ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಪಾಠಕ್ ಮಾತನಾಡಿ, "ನಮಗೆ ಮುಂಜಾನೆ 3.30ರ ಸುಮಾರಿಗೆ ಗುಂಡಿನ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿತು. ಹ್ಯಾರಿಸ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದರು. ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.

ಮೃತನ ಸಂಬಂಧಿ ಶೋಯೆಬ್ ಮಾತನಾಡಿ, "ನಾವು ಬೆಳಗಿನ ಜಾವ 3 ಗಂಟೆ ಸುಮಾರಿಗೆ 'ಸೆಹ್ರಿ'ಗಾಗಿ ಇಲ್ಲಿಗೆ ಬಂದಿದ್ದೇವೆ. ಆಗ ಹ್ಯಾರಿಸ್ ಮೇಲೆ ಗುಂಡು ಹಾರಿಸಲಾಯಿತು. ಆತನಿಗೆ ಯಾರೊಂದಿಗೂ ಯಾವುದೇ ದ್ವೇಷವಿರಲಿಲ್ಲ. ಈ ಜನರು (ಗುಂಡು ಹಾರಿಸಿದವರು) ಕ್ರಿಮಿನಲ್‌ಗಳು" ಎಂದು ಅವರು ಹೇಳಿದ್ದಾರೆ.