Joe Root: ದ್ರಾವಿಡ್, ಸ್ಮಿತ್ ಟೆಸ್ಟ್ ಶತಕದ ದಾಖಲೆ ಮುರಿದ ರೂಟ್
ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ರೂಟ್ ಬಾರಿಸಿದ 8ನೇ ಟೆಸ್ಟ್ ಶತಕ ಇದಾಗಿದೆ. ಈ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ ದಾಖಲೆ ಅವರ ಹೆಸರಿನಲ್ಲಿಯೇ ಇತ್ತು. ಇದೀಗ ಮತ್ತೊಂದು ಶತಕವನ್ನು ಈ ಪಟ್ಟಿಗೆ ಸೇರಿಸಿದ್ದಾರೆ.


ಲಂಡನ್: ಜೋ ರೂಟ್ ಅವರು ತವರಿನ ನೆಚ್ಚಿನ ಕ್ರಿಕೆಟ್ ಸ್ಟೇಡಿಯಂ ಲಾರ್ಡ್ಸ್‌ನಲ್ಲಿ ದಾಖಲೆಯ 8ನೇ ಶತಕ ಸಿಡಿಸಿ ಸಂಭ್ರಮದಲ್ಲಿ ತೇಲಾಡಿದರು. ಇದೇ ವೇಳೆ ರಾಹುಲ್ ದ್ರಾವಿಡ್ ಮತ್ತು ಸ್ಟೀವನ್ ಸ್ಮಿತ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡರು. ಇದು ರೂಟ್ ಅವರ 37ನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮುನ್ನ ಅವರು ತಲಾ 36 ಶತಕ ಬಾರಿಸಿದ್ದ ದ್ರಾವಿಡ್ ಮತ್ತು ಸ್ಮಿತ್ ಜತೆ ಜಂಟಿ ದಾಖಲೆ ಹೊಂದಿದ್ದರು.
ಮೊದಲ ದಿನದಾಟದ ಅಂತ್ಯಕ್ಕೆ 99 ರನ್ ಗಳಿಸಿದ್ದ ರೂಟ್ ದ್ವಿತೀಯ ದಿನವಾದ ಶುಕ್ರವಾರ ಜಸ್‌ಪ್ರೀತ್ ಬುಮ್ರಾ ಅವರ ಮೊದಲ ಎಸೆತವನ್ನೇ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. ಪ್ರಸಕ್ತ ಕ್ರಿಕೆಟ್ ಆಟಗಾರರ ಪೈಕಿ ರೂಟ್ ಅತ್ಯಧಿಕ ಟೆಸ್ಟ್ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಸ್ವೀವನ್ ಸ್ಮಿತ್(36) ದ್ವಿತೀಯ ಸ್ಥಾನದಲ್ಲಿದ್ದಾರೆ. ರೂಟ್ ಇನ್ನೊಂದು ಶತಕ ಬಾರಿಸಿದರೆ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕರ(38) ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್(50) ಹೆಸರಿನಲ್ಲಿದೆ.
ಲಾರ್ಡ್ಸ್‌ನಲ್ಲಿ ಅತ್ಯಧಿಕ ಶತಕ
ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ರೂಟ್ ಬಾರಿಸಿದ 8ನೇ ಟೆಸ್ಟ್ ಶತಕ ಇದಾಗಿದೆ. ಈ ಮೈದಾನದಲ್ಲಿ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ ದಾಖಲೆ ಅವರ ಹೆಸರಿನಲ್ಲಿಯೇ ಇತ್ತು. ಇದೀಗ ಮತ್ತೊಂದು ಶತಕವನ್ನು ಈ ಪಟ್ಟಿಗೆ ಸೇರಿಸಿದ್ದಾರೆ. ಒಟ್ಟು 24 ಪಂದ್ಯ 42 ಇನಿಂಗ್ಸ್ ಆಡಿದ್ದಾರೆ. ಇಲ್ಲಿ ಅವರ ಗರಿಷ್ಠ ವೈಯಕ್ತಿಕ ಮೊತ್ತ 200* ರನ್ ಆಗಿದೆ. 8 ಅರ್ಧಶತಕ ಬಾರಿಸಿದ್ದಾರೆ. ಕೇವಲ ಒಂದು ಬಾರಿ ಶೂನ್ಯ ಸಂಕಟಕ್ಕೆ ಸಿಲುಕಿದ್ದಾರೆ. ರೂಟ್ ಬಳಿಕ ಲಾರ್ಡ್ಸ್‌ನಲ್ಲಿ ಮಾಜಿ ನಾಯಕರಾದ ಮೈಕಲ್ ವಾನ್ ಮತ್ತು ಗ್ರಹಾಂ ಗೂಚ್ ತಲಾ 6 ಟೆಸ್ಟ್ ಶತಕ ಬಾರಿಸಿದ್ದಾರೆ.
ಅತ್ಯಧಿಕ ಟೆಸ್ಟ್ ಶತಕ ಸಾಧಕರು
ಸಚಿನ್ ತೆಂಡೂಲ್ಕರ್-51 ಶತಕ
ಜಾಕ್ ಕ್ಯಾಲಿಸ್-45 ಶತಕ
ರಿಕಿ ಪಾಂಟಿಂಗ್-41 ಶತಕ
ಕುಮಾರ್ ಸಂಗಕ್ಕರ- 38 ಶತಕ
ಜೋ ರೂಟ್-37* ಶತಕ