ಮುಂಬೈ: ಏಪ್ರಿಲ್ 23 ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿಗೆ ನೆನಪಿನಲ್ಲಿ ಉಳಿಯುವ ದಿನ.
2013ರ ಏಪ್ರಿಲ್ 23ರಂದು 263 ರನ್ಗಳಿಸಿದ್ದ ಆರ್ಸಿಬಿ, 2017ರಲ್ಲಿ 49 ರನ್ಗಳಿಗೆ ಆಲೌಟ್ ಆಗಿತ್ತು. ಇದೀಗ 2022ರ ಏ.23ರಂದು ಮತ್ತೊಮ್ಮೆ 68ಕ್ಕೆ ಆಲೌಟ್ ಆಗಿದೆ.
2013ರಲ್ಲಿ 263 ರನ್ಗಳ ಐಪಿಎಲ್ ಇತಿಹಾಸದ ಗರಿಷ್ಠ ರನ್ ಸಿಡಿಸಿದ ಬೆಂಗಳೂರು ತಂಡ, 4 ವರ್ಷಗಳ ನಂತರ 2017ರಲ್ಲಿ ಕೇವಲ 49 ರನ್ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಮಂತ ಲೀಗ್ನಲ್ಲಿ ಕಳಪೆ ಮೊತ್ತ ದಾಖಲಿಸಿದ ಕುಖ್ಯಾತಿಗೂ ಒಳಗಾಗಿತ್ತು.
2013ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ ಕಳೆದುಕೊಂಡು 263 ರನ್ಗಳಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಅಜೇಯ 175 ರನ್ಗಳಿಸಿದ್ದರು. ಈ ಪಂದ್ಯವನ್ನು ಆರ್ಸಿಬಿ 130 ರನ್ಗಳಿಂದ ಗೆದ್ದು ಬೀಗಿತ್ತು.
ಇದೇ ದಿನ 2017ರಲ್ಲಿ ಆರ್ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 132 ರನ್ಗಳನ್ನು ಬೆನ್ನಟ್ಟಲಾಗದೇ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ತಂಡದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಟಿರಲಿಲ್ಲ. ತಂಡದ ಗರಿಷ್ಠ ಮೊತ್ತವೆಂದರೆ ಕೇದರ್ ಜಾಧವ್ರ 9 ರನ್. ಕ್ರಿಸ್ ವೋಕ್ಸ್ 6ಕ್ಕೆ3, ಗ್ರ್ಯಾಂಡ್ಹೋಮ್ 4ಕ್ಕೆ3 ಮತ್ತು ನೇತನ್ ಕೌಲ್ಟರ್ ನೈಲ್ 21ಕ್ಕೆ3 ಮತ್ತು ಉಮೇಶ್ ಯಾದವ್ 15ಕ್ಕೆ1 ವಿಕೆಟ್ ಪಡೆದಿದ್ದರು.
ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 68 ರನ್ಗಳಿಗೆ ಆಲೌಟ್ ಆಗಿದೆ. ಅಂದು ನಾಯಕನಾಗಿದ್ದ ವಿರಾಟ್ ಕೊಹ್ಲಿ 2017ರಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇಂದು ಕೂಡ ಶೂನ್ಯಕ್ಕೆ ಔಟಾದರು.